ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುನುಗುನುಗೋ ಹಾಡು; ಗುನುಗಿ ನೋಡು

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೊಂಬೆ ಹೇಳುತೈತೆ…’

ಇದೊಂದು ಸೊಲ್ಲೆತ್ತಿದರೆ ಸಾಕು; ‘ಮತ್ತೆ ಹೇಳುತೈತೆ’ ಎಂದು ನೀವೇ ರಾಗವಾಗಿ ಮತ್ತೆ ಮತ್ತೆ ಹೇಳುತ್ತೀರಿ. ಈ ಹಾಡಿನ ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ ಬಿಡಿ. ಏಕೆಂದರೆ ಸಹೃದಯಿ ಕನ್ನಡಿಗನೆದೆಯಲ್ಲಿ ಇದು ಮಾಡಿರುವ ಮೋಡಿ ಅಂಥದ್ದು. ಹಾಡಿನ, ‘ಹಿರಿಯರೆ ಇರಲಿ ಕಿರಿಯರೆ ಬರಲಿ ಭೇದವೆ ತೋರದು’ ಸಾಲಿನಿಂತೆ ಹಿರಿ-ಕಿರಿಯನೆಂಬ ಭೇದವಿಲ್ಲದೆ ವರ್ಷವಿಡೀ ಎಲ್ಲರ ಬಾಯಲ್ಲೂ ನಲಿದಾಡಿದೆ.

ಸಂತೋಷ್ ಆನಂದರಾಮ್ ಬರೆದ ಈ ಹಾಡು ಸಿನಿ ರಸಿಕರಿಗೆ ‘ಆತ್ಮೀಯ’ವೆನ್ನಿಸಲು ರಾಜಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’ ಚಿತ್ರದ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡನ್ನು ನೆನಪಿಸಿದ್ದೂ ಒಂದು ಕಾರಣವಿರಬಹುದು. ವಿಜಯ್ ಪ್ರಕಾಶ್ ಮೋಹಕ ಕಂಠದ ಮೋಡಿಯೂ ಅದರ ಸ್ಕೋರನ್ನು ಹೆಚ್ಚಿಸಿದ್ದರಲ್ಲಿ ಅನುಮಾನವಿಲ್ಲ. ಒಟ್ಟಿನಲ್ಲಿ 2017ನೇ ಸಾಲಿನಲ್ಲಿ ಜನ ಹೆಚ್ಚು ಗುನುಗಿದ ಹಾಡು ಇದು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

2017ರಲ್ಲಿ ಜನರು ಮತ್ತೆ ಮತ್ತೆ ಗುನುಗಿಗೊಳ್ಳುವಂತೆ ಜಾದೂ ಮಾಡಿದ ಕನ್ನಡ ಹಾಡುಗಳು ಯಾವೆಲ್ಲ ಇರಬಹುದು ಎಂದು ಮೆಲುಕು ಹಾಕುವ ಹೊತ್ತಿಗೆ ಮೊದಲು ನೆನಪಾದದ್ದು ‘ರಾಜಕುಮಾರ’ನ ಈ ಹಾಡು. ಅಂದಹಾಗೆ ಈ ವರ್ಷಕ್ಕೆ ವಿದಾಯ ಹೇಳುವ ಹೊತ್ತಿನಲ್ಲಿ ನೆನಪಾದ ಇನ್ನೂ ಒಂದಷ್ಟು ಹಾಡುಗಳಿವೆ…

‘ರಾಜಕುಮಾರ’ ಸಿನಿಮಾದ ‘ಅಪ್ಪು ಡ್ಯಾನ್ಸ್ ಡ್ಯಾನ್ಸ್’ ಹಾಡು ಮಕ್ಕಳಿಗೆ ಹೆಚ್ಚು ಪ್ರಿಯವಾಯಿತು. ಏಕೆಂದರೆ ‘ಅಪ್ಪು’ ಈ ಹಾಡಿನಲ್ಲಿ ಮಕ್ಕಳು ಎದ್ದು ಕುಣಿಯಲು ಪ್ರೇರೇಪಿಸುವಂತೆ ಸ್ಟೆಪ್ಸ್ ಹಾಕಿದ್ದಾರೆ.

ವರ್ಷಾರಂಭದಲ್ಲಿ ತೆರೆಕಂಡ ‘ಚೌಕ’ ಚಿತ್ರದ ‘ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು’ ಹಾಡೇನು ಕಡಿಮೆ? ಯೋಗರಾಜ್ ಭಟ್ ಎಂದಿನಂತೆ ಆಡು ಮಾತಿನಲ್ಲೇ ಹಾಡು ಬರೆದರು. ಅದರಲ್ಲಿ ಅನಾಯಾಸವಾಗಿ ಒಂಚೂರು ಅಧ್ಯಾತ್ಮವೂ ಇಣುಕಿದ್ದು ಸುಳ್ಳಲ್ಲ. ವಿ. ಹರಿಕೃಷ್ಣ, ವಿಜಯ್ ಪ್ರಕಾಶ್ ಜೋಡಿ ಮತ್ತೊಮ್ಮೆ ಮೋಡಿ ಮಾಡಿತು.

ಇದೇ ಸಿನಿಮಾದ ಅರ್ಜುನ್ ಜನ್ಯ ಸಂಯೋಜನೆಯ ‘ಅಪ್ಪಾ, ಐ ಲವ್ ಯೂ ಪಾ’ ಹಾಡು ಕೇಳುಗರನ್ನು ಭಾವಲೋಕದ ತೆಕ್ಕೆಗೆ ಎಳೆದೊಯ್ದಿತು. ಈ ರೀತಿಯ ಮಾಧುರ್ಯ ಸುಧೆಯನ್ನೂ ಹರಿಸಬಲ್ಲೆ ಎಂದು
ಜನ್ಯ ಸಾಬೀತು ಮಾಡಿದದರು. ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಅಕ್ಷರದ ಮೂಲಕ ಜೀವ ತುಂಬಿದರೆ ಅನುರಾಧಾ ಭಟ್ ಗಾಯನದ ನೀರೆರೆದರು.

ಭಟ್ಟರದ್ದೇ ನಿರ್ದೇಶನದ ‘ಮುಗುಳುನಗೆ’ ಸಿನಿಮಾಕ್ಕೆ ಅವರೇ ಬರೆದ ‘ಹೊಡಿ ಒಂಬತ್ತ್ ಹೊಡಿ ಒಂಬತ್ತ್’ ಹಾಡು ಆ ಕ್ಷಣಕ್ಕೆ ರಸಗವಳವೇ ಆಗಿಬಿಟ್ಟಿತ್ತು. ‘ಎಣ್ಣೆ’ ಹಾಡಿನ ಸ್ಪೆಷಲಿಸ್ಟ್ ವಿಜಯ್ ಪ್ರಕಾಶ್ ಮಾದಕವಾಗಿ ಹಾಡಿದರೆ ಮತ್ತಿನ್ನೇನಾಗಬೇಕು! ಭಟ್ಟರ ಬೋಧನೆಗೆ ಹರಿಕೃಷ್ಣ ಬ್ಯಾಂಡು ಬಜಾಯಿಸಿದರು.

ಇನ್ನು ಬೋಳು ಮಕ್ಕಳ ಗೋಳು ತೋಡಿಕೊಳ್ಳುವ ಪರಿಯೆಂತು? ಅದಕ್ಕೂ ಒಂದು ಕರುಣಾಜನಕವಾದ ಶೋಕಗೀತೆಯಿದೆ. ಅಪಾರ ಅಪಹಾಸ್ಯಕ್ಕೆ ಗುರಿಯಾಗಿರುವ ಬೋಳು ತಲೆಗಳು ತಮ್ಮ ಮನದಾಳದ ವೇದನೆಯನ್ನು ಹಾಡಾಗಿ ಹಂಚಿಕೊಂಡಿದ್ದಾರೆ. ‘ಕೇಳಿ ನೋಡ್ರಿ ಸ್ವಲ್ಪ ಕಿವಿಗೊಡ್ರಿ’ ಎಂದು ತಮ್ಮ ಗೋಳಿನ ಬಗೆಗೆ ಗಮನ ಸೆಳೆಯುತ್ತಾರೆ ಬೊಕ್ಕ ತಲೆಯವರು. ವಿಶೇಷ ಕಥಾ ಹಂದರ ಹೊಂದಿರುವ ‘ಒಂದು ಮೊಟ್ಟೆಯ ಕಥೆ’ಯ ಈ ಹಾಡು ಬೋಳು ಮಂಡೆಯವರ ರಾಷ್ಟ್ರಗೀತೆ ಎನ್ನಲಡ್ಡಿಯಿಲ್ಲ. ಗೀತ ರಚನೆಕಾರರು ವಿಶ್ವಜಿತ್ ರಾವ್, ಕೀರ್ತನ್ ಭಂಡಾರಿ. ರಾಗ ಸಂಯೋಜನೆ ಮಿಧುನ್ ಮುಕುಂದನ್.

‘ಹೆಬ್ಬುಲಿ’ ಚಿತ್ರದಲ್ಲಿ ಸುದೀಪ್ ಕೇಶ ವಿನ್ಯಾಸದಂತೆಯೇ ಶೀರ್ಷಿಕೆ ಗೀತೆ ‘ಹುಲಿ ಹುಲಿ ಹೆಬ್ಬುಲಿ’ ಕೂಡ ಚಿತ್ರದ ಬಗ್ಗೆ ನಿರೀಕ್ಷೆ ಕೆರಳಿಸುವಲ್ಲಿ ಸಫಲವಾಗಿತ್ತು. ಸುದೀಪ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ ಹಾಡಿದು.

ಅಬ್ಬರಿಸಿ ಬೊಬ್ಬಿರಿಯುವ ಹಾಡುಗಳ ಮಧ್ಯೆ ತಣ್ಣಗೆ ಬಂದು ತನ್ನ ಸೀಟು ಗಿಟ್ಟಿಸಿಕೊಂಡಿತು ‘ಚಕ್ರವರ್ತಿ’ಯ ‘ಒಂದು ಮಳೆಬಿಲ್ಲು ಒಂದು ಮಳೆಮೋಡ…’. ಅರ್ಮಾನ್ ಮಲಿಕ್, ಶ್ರೇಯಾ ಘೋಷಾಲ್ ಕಂಠಸಿರಿ ಕೇಳುಗರ ಕಿವಿಗೆ ತಂಪೆರೆಯಿತು. ಇದು ಕೂಡ ಅರ್ಜುನನ ಬತ್ತಳಿಕೆಯ ಪ್ರಯೋಗವೇ.

ಕಿರುತೆರೆಯಲ್ಲಿ ಮನೆಮಾತಾಗಿದ್ದ ‘ಪುಟ್ಟಗೌರಿ’ ಬೆಳ್ಳಿತೆರೆಯಲ್ಲೂ ವಿಜೃಂಭಿಸಿದಳು. ನಿರ್ದೇಶಕ ಚೇತನ್ ಕುಮಾರ್ ತಮ್ಮ ‘ಭರ್ಜರಿ’ ಚಿತ್ರಕ್ಕೆ ‘ಪುಟ್ಟಗೌರಿ’ ಹಾಡನ್ನು ಇಂಧನವಾಗಿ ಬಳಸಿದರು. ಇದು ಚಿತ್ರಕ್ಕೆ ಎಷ್ಟು ಮೈಲೇಜ್ ಕೊಟ್ಟಿದೆ ಎಂಬುದಕ್ಕಿಂತ ಪಿಕ್‌ಅಪ್‌ ನೀಡಲಂತೂ ಮೋಸ ಮಾಡಲಿಲ್ಲ. ಸೀರೆ ಉಟ್ಟು ಟೆಂಪ್ರೇಚರ್ ಏರಿಸಿದ್ದ ‘ರನ್ನ’ನ ರಾಣಿ ರಚಿತಾ ರಾಮ್ ಇಲ್ಲಿ ನೀಟಾಗಿ ಪಾಟಿಯಾಲ ಪ್ಯಾಂಟ್, ಎದೆ ಬಿಗಿದಪ್ಪುವ ಟಾಪ್, ಕಪ್ಪು ಕನ್ನಡಕ ತೊಟ್ಟು ಮುದ್ದು ಮುದ್ದಾಗಿ ಕಾಣಿಸಿದರು.

ಹೀಗೆ ಕಿವಿಯಲ್ಲಿ ಗುಂಯ್‌ಗುಡುವ  ಕೆಲವೇ ಹಾಡುಗಳು ಇಲ್ಲಿವೆ. ಈ ಪಟ್ಟಿಯಲ್ಲಿ ಇಲ್ಲದ
ಹಾಡುಗಳೂ ನಿಮ್ಮ ನೆನಪಿನ ಗೋಡೆಯ ಮೇಲೆ ಅಚ್ಚಾಗಿರಬಹುದು. ಅವುಗಳನ್ನು ಹಾಗೇ ಒಮ್ಮೆ ಗುನುಗಿಬಿಡಿ.

ಓಹ್, ಲಾಸ್ಟ್ ಬಟ್ ನಾಟ್ ದಿ ಲೀಸ್ಟ್; ಮತ್ತೊಂದು ಹಾಡನ್ನು ಪ್ರಸ್ತಾಪಿಸಲೇ ಬೇಕು. ಅದು ಮೊನ್ನೆಯಷ್ಟೇ ತೆರೆ ಕಂಡ ‘ಅಂಜನಿಪುತ್ರ’ದ್ದು.

ನೋಡಿ, ಶುರುವಿನಲ್ಲೂ ಪುನೀತ್; ಮತ್ತೆ ಕೊನೆಯಲ್ಲೂ. ಕಳೆದ ವರ್ಷ ಈ ‘ದೊಡ್ಮನೆ ಹುಡ್ಗ’ನಿಗೆ ರಾಧಿಕಾ ಪಂಡಿತ್ ಉತ್ತರ ಕರ್ನಾಟಕ ಭಾಷೆಯಲ್ಲಿ ‘ಯಾಕ್ಕ ಹುಡ್ಗ ಮೈಯಾಗ ಹ್ಯಾಂಗೈತಿ’ ಎಂದು ಕೆಣಕಿದ್ದರು. ಈ ಬಾರಿ ಚೆಂದುಳ್ಳಿ ಚೆಲುವೆ ರಶ್ಮಿಕಾ ಮಂದಣ್ಣ ಜೊತೆ ‘ಚಂದ ಚಂದ ಚಂದ ನನ್ನ ಹೆಂಡ್ತಿ’ ಎಂದು ಕುಂದಾಪುರ ಕನ್ನಡದಲ್ಲಿ ಪುನೀತ್ ಡುಯೆಟ್ ಹಾಡಿದ್ದಾರೆ ಮಾರ್ರೆ... ಕೈಲಾಶ್ ಖೇರ್, ಅನುರಾಧಾ ಭಟ್ ಹಾಡಿರುವ ಈ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT