ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗ(ಗೆ)ಟ್ಟಿದ ವರ್ಷ!

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮನಿ ಕೀ ಬಾತ್: ಕಳೆಗಟ್ಟಿದರೂ ಕಳೆಗೆಟ್ಟಿದರೂ ಕಳೆದು ಹೋದ ವರ್ಷವನ್ನು ಮರೆಯುವುದುಂಟೇ? 2016 ಎಂದಾಗ ನಮಗೆ ಈಗಲೂ ನೆನಪಾಗುವುದು ಆ ಮನಿ ಕೀ ಬಾತ್. ಅದು ನೋಟು ಅಮಾನ್ಯೀಕರಣದ ದಿನಗಳು. ಈಗ 2017ರಲ್ಲೂ ಅಷ್ಟೇ. ಮತ್ತೆ ಮೋದಿಜೀಯ ‘ಮನಿ ಕೀ ಬಾತ್’ನ ಮುಂದುವರಿದ ಭಾಗ! ಅಂದರೆ ಗೊತ್ತಾಯಿತಲ್ಲ, ಜಿಎಸ್‌ಟಿ ಪರ್ವ.

ಜುಲೈ ಒಂದು, ಮಧ್ಯರಾತ್ರಿ ಆ ‘ಚಾಟಿ’ ಬೀಸಿದಾಗ ವ್ಯಾಪಾರಿಗಳಿಗೆ ‘ನಾವು ಪ್ರಧಾನಿಯ ಮಿತ್ರೋಂವ್‌ಗಳಲ್ಲ! ಪರಮವೈರಿಗಳು’ ಎಂದೆನಿಸದೇ ಇರಲಿಲ್ಲ. ‘ಟೀ ಯನ್ನೂ ಜಿಎಸ್‌ಟಿಗೆ ಸೇರಿಸಿ ಚಾಯ್‌ವಾಲಾ ನಮಗೆ ಹೀಗೆ ಮೋಸ ಮಾಡುವುದೇ’ ಎಂದು ಜನ ದೂರತೊಡಗಿದಾಗ ಅದರಿಂದ ಕೊನೆಗೂ ಮುಕ್ತಿ ಸಿಕ್ಕಿತು ಅನ್ನಿ.

ಹಾಗೆಂದು ದೇಶದ ‘ಮನಿ ಕೀ ಬಾತ್’ ಅಲ್ಲಿಗೇ ಮುಗಿಯುವುದಿಲ್ಲ. ನಮ್ಮ ರಾಜ್ಯದ ‘ಗೋವಿಂದ ಡೈರಿ’ಯಲ್ಲಿ ಹಣ ಹರಿದದ್ದು, ಪ್ಯಾಕೆಟ್ ಪ್ಯಾಕೆಟ್ ಕಪ್ಪ (ಇದು ಒಂದು ಜಾತಿಯ ಕಪ್ಪು ಹಣ) ದೆಹಲಿಯ ಕೆಲವು ಮನೆಗಳಿಗೆ ತಲುಪಿದ್ದು ‘ಬ್ರೇಕ್‌ಲೆಸ್ ನ್ಯೂಸ್’ ಆಯಿತು. ರಾಜ್ಯದ ಜನತೆ ಅತ್ಯಂತ ಕಾತರದಿಂದ ನೋಡುತ್ತಿದ್ದ, ಕೇಳುತ್ತಿದ್ದ ಮತ್ತು ಓದುತ್ತಿದ್ದ ‘ಮನಿ ಕೀ ಬಾತ್’ ಎಂದರೆ ಡಿಕೆಶಿ ಅವರ ಮೇಲೆ ನಡೆದ ಐಟಿ ದಾಳಿ ಪ್ರಸಂಗ. ನಂತರ ‘ಕಾಫಿ ಡೇ’ ಮೇಲೂ ಬಲೆ ಬಿದ್ದಾಗ, ಸಿದ್ರಾಮಣ್ಣರಿಗೆ ‘ಮಾವ ಬಿಜೆಪಿ ಸೇರಿದರೂ ಅಳಿಯನ ಸಂಕಟ ತಪ್ಪಲಿಲ್ಲ’ ಎಂಬ ಹೊಸಗಾದೆ ಹೊಳೆದಿರಬಹುದು!

ಯುದ್ಧ ಸಮಾಚಾರ: 2017ರಲ್ಲಿ ಈ ಕರುನಾಡಿನಲ್ಲಿ ಯುದ್ಧಗಳದ್ದೇ ಸುದ್ದಿ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ತನ್ನ ಸೇನಾನಾಯಕ ಈಶ್ವರಪ್ಪ ಮುಂದಾಳತ್ವದಲ್ಲಿ ಮೋದಿ ಬ್ರಿಗೇಡ್‌ನ ಯಡಿಯೂರಪ್ಪ ಮೇಲೆ ‘ಇದು ಅಣ್ಣ ತಮ್ಮಂದಿರ ಜಗಳ’ ಎಂದು ಹೇಳಿಕೊಂಡೇ ಹಲವು ಬಾರಿ ಯುದ್ಧ ಸಾರಿತ್ತು.

ವರ್ಷಂಪ್ರತಿಯಂತೆ ಈ ಬಾರಿಯೂ ಬಿಜೆಪಿ ಇತಿಹಾಸ ಪಂಡಿತರು ಮತ್ತು ಟಿಪ್ಪು ಕಾಂಗ್ರೆಸ್‌ಗಳೊಳಗೆ ನಾಲ್ಕನೆಯ ಮಹಾ ಯುದ್ಧ ನಡೆಯಿತು. ಪ್ರತ್ಯೇಕ ಧರ್ಮ ಉಸ್ತುವಾರಿ ಸಚಿವರು ‘ಧರ್ಮಯುದ್ಧ’ಕ್ಕೆ ಕಹಳೆ ಊದಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಎಐಎಡಿಎಂಕೆ ಆ ಬಣ ಈ ಬಣ ಎಂದು ಕದನ ಕುತೂಹಲ ತಾರಕಕ್ಕೇರಿತು. ‘ಯುದ್ಧಕ್ಕೆ ಸಿದ್ಧರಾಗಿ!’ ಎಂದು ರಜನಿಕಾಂತ್ ಘೋಷಿಸಿಯೇಬಿಟ್ಟರು. ಆದರೆ ವರ್ಷಪೂರ್ತಿಯಾದರೂ ಅವರು ರಾಜಕೀಯ ಯುದ್ಧಕ್ಕೆ ಇಳಿದಿಲ್ಲ. ಈಗ ಅಭಿಮಾನಿಗಳಿಗೆ ನಿರಾಶೆ ಆಗಬಾರದೆಂದು ಡಿಸೆಂಬರ್ 31ರಂದು ‘ಯುದ್ಧದ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತೇನೆ’ ಅಂದಿದ್ದಾರೆ.

ಬ್ರ್ಯಾಂಡೆಡ್ ರಾಜಕೀಯ: ಉತ್ತರ ಪ್ರದೇಶದಲ್ಲಿ ‘ಯೋಗಿ ಬ್ರ್ಯಾಂಡ್’ ಬಾಬಾರ ‘ಪತಂಜಲಿ’ಯಂತೆ ಮಿಂಚುತ್ತಿದೆ. ಗುಜರಾತ್‌ನಲ್ಲಿ ಈಚೆಗೆ ಇದ್ದಕ್ಕಿದ್ದಂತೆ ಆಸ್ತಿಕರಾಗಿರುವ ರಾಹುಲ್, 27 ದೇವಾಲಯಗಳಿಗೆ ದರ್ಶನ ನೀಡಿ ‘ಟೆಂಪಲ್ ರನ್’ ಬ್ರ್ಯಾಂಡ್‌ ರಾಜಕೀಯ ಮಾಡುತಿದ್ದಾರೆ. ಅತ್ತ ಕಮಲ್ ಹಾಸನ್ ಸದ್ಯಕ್ಕೆ ಆಪ್ ಮೂಲಕ ‘ವಿಷಲ್’ (ಸಿಳ್ಳೆ) ಬ್ರ್ಯಾಂಡ್ ರಾಜಕೀಯದಲ್ಲಿ ನಿರತರಾಗಿದ್ದಾರೆ.

ನಮ್ಮಲ್ಲಿ ಗೊತ್ತಲ್ಲ… ‘ಉಪ್ಪಿ’ ಬ್ರ್ಯಾಂಡ್ ರಾಜಕೀಯ... ಐ ಮೀನ್, ‘ಉಪ್ಪಿ’ ಬ್ರ್ಯಾಂಡ್ ಪ್ರಜಾಕೀಯ ತೆರೆ ಕಾಣಲಿದೆ.

ಉಪ್ಪಿ ಊರಿಗೆ ಹತ್ತಿರವೇ ಇರುವ ಉಡುಪಿಯಲ್ಲಿ ‘ಮಠ’ ಬ್ರ್ಯಾಂಡ್ ರಾಜಕೀಯ! ಸಾಹಿತ್ಯ ಸಮ್ಮೇಳನದಲ್ಲಿ ‘ಚಂಪಾ’ ಬ್ರ್ಯಾಂಡ್ ರಾಜಕೀಯ ಸುದ್ದಿಯಾದದ್ದು ಎಲ್ಲರಿಗೂ ಗೊತ್ತು. ಹಾರ್ದಿಕ್ ಎಂಬ ಹುಡುಗನ ‘ರಿಸರ್ವೇಶನ್’ ಬ್ರ್ಯಾಂಡ್ ರಾಜಕೀಯವಂತೂ ಮೊನ್ನೆ ಗುಜರಾತ್ ಚುನಾವಣೆಯಲ್ಲಿ ಸಿಕ್ಕಾಪಟ್ಟೆ ‘ಹಸ್ತ’ಕ್ಷೇಪ ಮಾಡಿದೆ.

ಇನ್ನು... ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದೇ ಗಡದ್ದಾಗಿ ರಾಜಕೀಯ ಭಾಷಣ ಮಾಡುತ್ತಿರುವ ಪ್ರಕಾಶ್ ರೈ ಅವರು ಯಾವುದೋ ಪಕ್ಷದ ‘ಬ್ರ್ಯಾಂಡ್ ಅಂಬಾಸಿಡರ್’ ಇರಬಹುದೇ? (ಜಸ್ಟ್ ಆಸ್ಕಿಂಗ್)

ಕಾರಾಗೃಹ-ಚಾರ: ಈ ವರ್ಷ ಕೆಲವು ಪ್ರಮುಖರ ಗ್ರಹಚಾರ ಬದಲಾಗಿದೆ.

ತಮಿಳುನಾಡಿನ ಸೀಯಮ್ಮು ಆಗಲು ಹೊರಟ ಶಶಿಕಲಾ ಕರುನಾಡಿನ ಜೈಲಲ್ಲಿರಬೇಕಾಯಿತು. ಪಳನಿ-ಪನ್ನೀರ್‌ಗಳು ಒಂದಾಗಿರದಿದ್ದರೆ, ಜೈಲಿನಿಂದಲೇ ತಮಿಳುನಾಡು ಸರ್ಕಾರವನ್ನು ಮುನ್ನಡೆಸಿದ ಒಂದು ಮಹಾ ದಾಖಲೆ ಇತಿಹಾಸದ ಪುಟಕ್ಕೆ ಸೇರುತ್ತಿತ್ತು!

ಜೈಲು ಸೇರಿ ದೊಡ್ಡ ಸುದ್ದಿಯಾದ ಇನ್ನೊಬ್ಬರು, ದೆವ್ವಮಾನವ-ಡೇರಾ ಬಾಬಾ.ಈ ರಾಮ್ ರಹೀಮನನ್ನು ಇಷ್ಟು ವರ್ಷ ಆರಾಮವಾಗಿರಲು ಬಿಟ್ಟ ಭಾರತಕ್ಕೆ ದೊಡ್ದ ಸೆಲ್ಯೂಟ್!

ವರ್ಷದ ಕೊನೆಗೆ ಒಂಬತ್ತನೇ ಬಾರಿಗೆ ಲಾಲು ಜೀ, ನೆಲ್ಸನ್ ಮಂಡೆಲಾ ಅವರನ್ನು ನೆನೆದುಕೊಂಡು ಬಲಗಾಲಿಟ್ಟು ಖಾರ-‘ಗೃಹ ಪ್ರವೇಶ’ ಮಾಡಿದ್ದಾರೆ.

ಅಂದಹಾಗೆ ಇಂಗ್ಲೆಂಡ್‌ನಲ್ಲಿರುವ ‘ಕಿಕ್ ದೊರೆ’ ಭಾರತದ ಜೈಲಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 9000 ಕೋಟಿ ರೂಪಾಯಿಯಷ್ಟು ವಂಚನೆ ಮಾಡಿದ ಒಬ್ಬ ವ್ಯಕ್ತಿಗೆ ಅದೇ ‘ಲೆವಲ್’ನ ಸೆಲ್ ನಿರ್ಮಿಸಬೇಕು ಎಂಬುದು ಅವರ ಇಂಗಿತವಿರಬಹುದು. ಇದನ್ನು ಅರ್ಥ ಮಾಡಿಕೊಂಡು ಜೇಟ್ಲಿ ಸಾಹೇಬ್ರು ಅದಕ್ಕೆ ತಕ್ಕ ವ್ಯವಸ್ಥೆ ಮಾಡಿ 2018ರಲ್ಲಾದರೂ ದೊರೆಯನ್ನು ಕರೆತರುತ್ತಾರೋ ನೋಡಬೇಕು! ಇನ್ನು ನಮ್ಮ ಯಡಿಯೂರಪ್ಪನವರ ಸಂಕಟ ನೋಡಿ! ಅವರೇನೋ ಈಗ ಜೈಲಲ್ಲಿ ಇಲ್ಲ. ಆದರೆ ಈ ವರ್ಷ ಅವರು ‘ಜೈಲಿಗೆ ಹೋದವರು’ ಎಂಬುದನ್ನು ಕನ್ನಡದ ಜನತೆ ಪದೇ ಪದೇ ನೆನಪಿಸಿಕೊಳ್ಳುವಂತಾಯಿತು. ಇದಕ್ಕೆ ಸಿದ್ರಾಮಣ್ಣರು ಕಾರಣ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ ತಾನೇ!

2017ರಲ್ಲಿ ಕುಖ್ಯಾತಿ ಪಡೆದ ಮಾತುಗಳನ್ನು ಇಲ್ಲಿ ಕೊಡಲಾಗಿದೆ. ಅದನ್ನು ಯಾರು, ಯಾರಿಗೆ, ಯಾವಾಗ ಮತ್ತು ಯಾಕೆ ಹೇಳಿದರು ಎಂದು ಊಹಿಸುವುದನ್ನು ನಿಮಗೆ ಬಿಟ್ಟಿದ್ದೇವೆ.

‘ಯಡಿಯೂರಪ್ಪ ಬರೀ ಸುಳ್ಳೇ ಹೇಳುತ್ತಾರೆ’

‘ಈ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡುತ್ತೇನೆ’

‘ಈಶ್ವರಪ್ಪ ಮೈಯಲ್ಲಿ ಹರಿಯುವುದು ಪಿಶಾಚಿಗಳ ರಕ್ತ’

‘ನನ್ನ ಟ್ವೀಟ್ ಮಾಡೋದು ನನ್ನ ನಾಯಿ’

(ಯಾವುದಕ್ಕೂ ಉತ್ತರ ಗೊತ್ತಿಲ್ಲದವರಿಗೆ ‘ವರ್ಷದ ಶತಮೂರ್ಖ’ ಪ್ರಶಸ್ತಿ ಕೊಟ್ಟು ಗೌರವಿಸಲಾಗುವುದು)

ಹಾಂ! ಅಂದಹಾಗೆ ಈ ವರ್ಷ ನಾವು ಮರೆಯಲೇಬಾರದ ಕೆಲವು ಸಂಗತಿಗಳಿವೆ.

ವರ್ಷದ ಕಾಣೆಯಾದ ವ್ಯಕ್ತಿ: ಕೇಜ್ರಿವಾಲ್‌ (ನಗರಪಾಲಿಕೆ ಚುನಾವಣೆಯಲ್ಲಿ ಹೊಡೆತ ತಿಂದ ಮೇಲೆ)

ವರ್ಷದ ಅತ್ಯಂತ ಬೆಲೆ ಏರಿಕೆ: ದೀಪಿಕಾ ಪಡುಕೋಣೆಯ ಮೂಗು ಮತ್ತು ರುಂಡ (‘ಪದ್ಮಾವತಿ’ ಚಿತ್ರದ ನಂತರ ದೀಪಿಕಾಳ ರುಂಡ ಅಥವಾ ಬರೀ ಮೂಗಿಗೇ ಆಕೆಯ ಫುಲ್ ವ್ಯಾಲ್ಯೂಗಿಂತ ನಾಲ್ಕೈದು ಪಾಲು ಬೆಲೆ ಹೆಚ್ಚಿದೆ!)

‘ವರ್ಷದ ತಿಳಿಗೇಡಿ ರಾಜಕಾರಣಿ’ ಪ್ರಶಸ್ತಿಗೆ ಅನೇಕರು ಅರ್ಹರಾಗಿರುವುದರಿಂದ ಯಾರಿಗೂ ಬೇಸರ ಉಂಟುಮಾಡಲು ಇಚ್ಛಿಸದೆ ಈ ಬಾರಿಯ ಪ್ರಶಸ್ತಿ ಆಯ್ಕೆಯನ್ನು ತಡೆಹಿಡಿಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT