ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ, ವೈಕುಂಠ ಏಕಾದಶಿ: ನಗರದ ವಿವಿಧೆಡೆ ಸಂಚಾರ ದಟ್ಟಣೆ

Last Updated 29 ಡಿಸೆಂಬರ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನ ವಿರೋಧಿಸಿ ನಡೆದ ಪ್ರತಿಭಟನೆ ಸಲುವಾಗಿ ಹಾಗೂ ವೈಕುಂಠ ಏಕಾದಶಿ ಪ್ರಯುಕ್ತ ಕೆಲವು ಕಡೆ ಶುಕ್ರವಾರ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದರಿಂದ ನಗರದ ವಿವಿಧೆಡೆ ಸಂಚಾರ ದಟ್ಟಣೆ ಉಂಟಾಯಿತು.

ಪ್ರಮುಖ ರಸ್ತೆಗಳಲ್ಲಿ ಹಾಗೂ ಕೆಲ ಒಳ ರಸ್ತೆಗಳಲ್ಲೂ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ದು ಕಂಡುಬಂತು.

ನ್ಯಾ. ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಗೆ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಇದರಿಂದಾಗಿ ಶೇಷಾದ್ರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು 4 ಗಂಟೆ ನಿರ್ಬಂಧಿಸಲಾಯಿತು.

ವಾಹನಗಳನ್ನು ಬದಲಿ ಮಾರ್ಗದಲ್ಲಿ ಕಳುಹಿಸಲಾಯಿತು. ಹಾಗಾಗಿ, ಯಶವಂತಪುರ, ಮಾಗಡಿ ರಸ್ತೆ, ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಮೆಜೆಸ್ಟಿಕ್‌ನತ್ತ ಹೊರಟಿದ್ದ ವಾಹನಗಳು ದಟ್ಟಣೆಯಲ್ಲಿ ಸಿಲುಕಿದವು. ವಾಹನಗಳ ಸಾಲು ಕ್ರಮೇಣ ಹೆಚ್ಚಾಗಿ ರೇಸ್‌ಕೋರ್ಸ್‌ ರಸ್ತೆ, ಚಾಲುಕ್ಯ ವೃತ್ತ, ಅರಮನೆ ರಸ್ತೆ, ರಾಜಭವನ ರಸ್ತೆ, ನೃಪತುಂಗ ರಸ್ತೆ, ಕಾರ್ಪೊರೇಷನ್‌ ವೃತ್ತ, ಲಾಲ್‌ಬಾಗ್‌ ಉದ್ಯಾನ, ಶಾಂತಿನಗರ, ರಿಚ್ಮಂಡ್‌ ವೃತ್ತ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಹನಗಳ ಸಂಚಾರವೂ ಸ್ಥಗಿತವಾಗಿತ್ತು.

ಶೇಷಾದ್ರಿ ಮೇಲ್ಸೇತುವೆ ಹಾಗೂ ಆನಂದರಾವ್‌ ವೃತ್ತದಲ್ಲಿ ಸಂಚಾರ ಬಂದ್‌ ಆಗಿದ್ದರಿಂದ ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಕೆ.ಜಿ.ರಸ್ತೆ, ಮಿನರ್ವಾ ವೃತ್ತ ಹಾಗೂ ಸುತ್ತಮುತ್ತಲೂ ದಟ್ಟಣೆ ಕಂಡುಬಂತು. ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಿಂದ ಓಕಳಿಪುರದ ರೈಲು ಕೆಳಸೇತುವೆವರೆಗೂ ವಾಹನಗಳು ನಿಂತುಕೊಂಡಿದ್ದವು.

ಬಸ್ಸಿನಲ್ಲಿ ಕುಳಿತು ಸುಸ್ತಾದ ಕೆಲ ಪ್ರಯಾಣಿಕರು, ಕೆಳಗೆ ಇಳಿದು ನಡೆದುಕೊಂಡೇ ತಮ್ಮ ತಮ್ಮ ಸ್ಥಳಕ್ಕೆ ಹೋದರು. 

ಕಾಮಗಾರಿ ಸ್ಥಳದಲ್ಲೂ ಅಡ್ಡಿ: ಮೈಸೂರು ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿದೆ. ಅಲ್ಲಿ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಅಷ್ಟಾದರೂ ಶುಕ್ರವಾರ ಈ ರಸ್ತೆಯಲ್ಲಿ ದಟ್ಟಣೆ ಕಂಡುಬಂತು.

ಮೈಸೂರು ರಸ್ತೆ, ಹೊಸಕೆರೆಹಳ್ಳಿಯಿಂದ ಮೆಜೆಸ್ಟಿಕ್‌ನತ್ತ ಹೊರಟಿದ್ದ ವಾಹನಗಳ ಸಂಚಾರ ಕೆಲ ಹೊತ್ತು ಬಂದ್‌ ಆಗಿತ್ತು. ಸೀಮಿತ ರಸ್ತೆಯಲ್ಲಿ ವಾಹನಗಳು ಸಂಚರಿಸಿದ್ದರಿಂದ ದಟ್ಟಣೆ ಉಂಟಾಗಿ ಒಂದು ಕಿ.ಮೀ ಕ್ರಮಿಸಲು 25 ನಿಮಿಷ ಬೇಕಾಯಿತು. ಮೈಸೂರು ಬ್ಯಾಂಕ್‌ ವೃತ್ತದ ಸುತ್ತಮುತ್ತ ದಟ್ಟಣೆ ಉಂಟಾಗಿದ್ದರಿಂದ, ಚಿಕ್ಕಪೇಟೆ ಹಾಗೂ ಕೆ.ಆರ್‌. ಮಾರುಕಟ್ಟೆ ಬಳಿ ಪೊಲೀಸರು ಏಕಾಏಕಿ ಮಾರ್ಗ ಬದಲಾವಣೆ ಮಾಡಲಾಯಿತು.

ರೈಲ್ವೆ ಗುಡ್‌ಶೆಡ್‌ ರಸ್ತೆಯ ಮೂಲಕ ವಾಹನಗಳು, ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿದವು. ಅಲ್ಲಿಂದ ಕೆಲವು ವಾಹನಗಳನ್ನು ಶೇಷಾದ್ರಿಪುರದ ಮೂಲಕ ಮಲ್ಲೇಶ್ವರದತ್ತ ಕಳುಹಿಸಲಾಯಿತು. ಇದರಿಂದಾಗಿ ಚಾಲಕರು, ನಿಗದಿತ ಸ್ಥಳಕ್ಕೆ ಹೋಗಲು ಅನಾವಶ್ಯಕವಾಗಿ ಸುತ್ತುವಂತಾಯಿತು.

’ಹೊಸಕೆರೆಹಳ್ಳಿ ವೃತ್ತದಿಂದ ಮೈಸೂರು ರಸ್ತೆಯ ಮೂಲಕ ಶಿವಾನಂದ ವೃತ್ತಕ್ಕೆ ಹೊರಟಿದ್ದೆ. ಸಾಮಾನ್ಯ ದಿನಗಳಲ್ಲಿ ಅರ್ಧ ಗಂಟೆಯಲ್ಲೇ ಅಲ್ಲಿಗೆ ಹೋಗಬಹುದು. ಆದರೆ, ಶುಕ್ರವಾರ ಮೂರೂವರೆ ಗಂಟೆ ಬೇಕಾಯಿತು’ ಎಂದು ನಾರಾಯಣಸ್ವಾಮಿ ಹೇಳಿದರು.

‘ದಟ್ಟಣೆಯಲ್ಲೇ ನಿಧಾನವಾಗಿ ಕಾರು ಚಲಾಯಿಸಿಕೊಂಡು ಹೋದೆ. ಕೆಲವೆಡೆ ಪೊಲೀಸರು, ಮಾರ್ಗ ಬದಲಾಯಿಸಿ ಬೇರೆ ರಸ್ತೆಗೆ ಕಳುಸಿದರು. ಸುತ್ತಿಬಳಸಿ ಸಂಚರಿಸಬೇಕಾಯಿತು. ಸಮಯದ ಜೊತೆ ಇಂಧನವೂ ವ್ಯರ್ಥವಾಯಿತು’ ಎಂದರು.

ಏಕಾದಶಿ ಮೆರವಣಿಗಾಗಿ ಸಂಚಾರ ಬಂದ್‌: ವೈಕುಂಠ ಏಕಾದಶಿ ಪ್ರಯುಕ್ತ ರಾಜಾಜಿನಗರ, ಹಲಸೂರು, ಬಸವನಗುಡಿ, ಮಲ್ಲೇಶ್ವರ, ಕೋರಮಂಗಲ, ಮಡಿವಾಳ ಹಾಗೂ ಹಲವು ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ಸಾಗುತ್ತಿದ್ದ ರಸ್ತೆಗಳಲ್ಲಿ ಕೆಲ ಹೊತ್ತು ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಅಲ್ಲಿಯೂ ದಟ್ಟಣೆ ಉಂಟಾಯಿತು.

ಹಲಸೂರು ಬಳಿಯ ರಾಮಯ್ಯ ಜಂಕ್ಷನ್ ಕಡೆಯಿಂದ ಆದರ್ಶ ಜಂಕ್ಷನ್ ರಸ್ತೆವರೆಗೆ, ರಾಜಾಜಿನಗರದ ರಾಮಮಂದಿರ ಮೈದಾನ ರಸ್ತೆ ಹಾಗೂ ಶಿವಾಜಿನಗರದ ಜ್ಯೋತಿ ಕೆಫೆ ಬಳಿಯ ರಸ್ತೆಯಲ್ಲೂ ನಡೆದ ಮೆರವಣಿಗೆ ವೇಳೆ ಹೆಚ್ಚಿನ ದಟ್ಟಣೆ ಕಂಡುಬಂತು.

ಕೋರಮಂಗಲ ವಾಟರ್‌ ಟ್ಯಾಂಕ್‌ ಜಂಕ್ಷನ್‌ನಲ್ಲಿ ಬಿಎಂಟಿಸಿ ಬಸ್‌ ಕೆಟ್ಟು ನಿಂತಿತ್ತು. ಶಿವಾಜಿನಗರದ ಡಿಕನ್ಶನ್‌ ರಸ್ತೆಯ ಮಧ್ಯದಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಎರಡೂ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT