ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಕುಂಠ ಏಕಾದಶಿ: ಶ್ರೀನಿವಾಸನ ದರ್ಶನ ಪಡೆದ ಭಕ್ತರು

Last Updated 30 ಡಿಸೆಂಬರ್ 2017, 5:44 IST
ಅಕ್ಷರ ಗಾತ್ರ

ರಾಯಚೂರು: ವೈಕುಂಠ ಏಕಾದಶಿ ದಿನದಂದು ಶುಕ್ರವಾರ, ವೈಕುಂಠ ವಾಸಿ ಶ್ರೀನಿವಾಸನ ದರ್ಶನ ಪಡೆದು ಜನರು ಪುನೀತರಾದರು. ಆಶಾಪುರ ಮಾರ್ಗದ ರಾಜಾಮಾತಾ ದೇವಸ್ಥಾನ, ನಗರೇಶ್ವರ ದೇವಸ್ಥಾನ ಹಾಗೂ ನವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ದಂಡು ನೆರೆದಿತ್ತು. ವಿಶೇಷ ಪುಷ್ಪಗಳಿಂದ ದೇವಸ್ಥಾನ ಮತ್ತು ವೆಂಕಟೇಶ್ವರ ದೇವರನ್ನು ಅಲಂಕರಿಸಲಾಗಿತ್ತು.

ನವೋದಯ ಶಿಕ್ಷಣ ಸಂಸ್ಥೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರ ಶ್ರೀದೇವಿ, ಭೂದೇವಿಯವರ ಉತ್ಸವ ಮೂರ್ತಿಗಳ ಪೂಜಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ರೆಡ್ಡಿ, ಸ್ವಾತಿ ರೆಡ್ಡಿ ಹಾಗೂ ಕುಟುಂಬದ ಸದಸ್ಯರು ಪೂಜಾ ಕಾರ್ಯವನ್ನು ನೆರವೇರಿಸಿದರು.

ಉತ್ತರಾಭಿಮುಖ ದ್ವಾರದ ಮೂಲಕ ದೇವಸ್ಥಾನ ಪ್ರವೇಶಿಸಿ, ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವೆಂಕಟೇಶ್ವರ ದರ್ಶನಕ್ಕಾಗಿ ಉತ್ತರಾಭಿಮುಖವಾಗಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ವಿವಿಧ ಬಣ್ಣ-ಬಣ್ಣಗಳ ಹೂವಿನಿಂದ ಅಲಂಕರಿಸಿದ ಮಂಟಪ ನಿರ್ಮಿಸಲಾಗಿತ್ತು.

ವೈದ್ಯಕೀಯ ಕಾಲೇಜಿನ ರೆಜಿಸ್ಟ್ರಾರ್‌ ಟಿ.ಶ್ರೀನಿವಾಸ್‌, ಸಿಬ್ಬಂದಿ ವಿಜಯಕುಮಾರ, ಮೋಹನ್ ರೆಡ್ಡಿ, ದೊಡ್ಡಯ್ಯ ಇದ್ದರು. ರಾಜಮಾತಾ ದೇವಸ್ಥಾನ ಆವರಣವು ಭಕ್ತರಿಂದ ತುಂಬಿತ್ತು. ವಿಶೇಷವಾಗಿ ಅಲಂಕರಿಸಿದ್ದ ಶ್ರೀ ವೆಂಕಟೇಶ್ವರ ಮತ್ತು ಶ್ರೀದೇವಿಯನ್ನು ನೋಡಿ ಭಕ್ತರು ಧನ್ಯತೆ ಅನುಭವಿಸಿದರು. ವೈಕುಂಠ ಏಕಾದಶಿ ದಿನದಂದು ವೈಕುಂಠದ ಬಾಗಿಲು ತೆರೆದಿರುತ್ತದೆ. ಹೀಗಾಗಿ ಈ ದಿನ ಶ್ರೀನಿವಾಸನು ಭಕ್ತರಿಗೆ ನೇರವಾಗಿ ದರ್ಶನ ಕರುಣಿಸುತ್ತಾನೆ ಎನ್ನುವ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT