ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಜಗ್ಗಲಿ ಸಮುದಾಯ

Last Updated 30 ಡಿಸೆಂಬರ್ 2017, 8:32 IST
ಅಕ್ಷರ ಗಾತ್ರ

ತಿಮ್ಮಯ್ಯ .ಜೆ

ಪರಶುರಾಂಪುರ: ಸಮೀಪದ ಪಿ.ಗೌರೀಪುರ ಗೇಟ್ ಬಳಿಯ ಜಗ್ಗಲಿ ಜನಾಂಗದ ಸಮುದಾಯಕ್ಕೆ ನಾಲ್ಕು ತಲೆಮಾರುಗಳಿಂದ ಕನಿಷ್ಠ ಮೂಲಸೌಲಭ್ಯಗಳೂ ಸಿಕ್ಕಿಲ್ಲ.
ಜಾತಿ ಪ್ರಮಾಣಪತ್ರವೂ ಇಲ್ಲದಿರುವುದರಿಂದ ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ.

ಜಗ್ಗಲಿ ಜನಾಂಗದವರು ಪಿ.ಗೌರೀಪುರದಲ್ಲಿ 45 ವರ್ಷಗಳಿಂದ ವಾಸವಾಗಿದ್ದಾರೆ. 450ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದು, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್‌ ಕಾರ್ಡ್ ಇವೆ. ಆದರೆ, ಜಾತಿ ಪ್ರಮಾಣಪತ್ರ ಮಾತ್ರ ಸಿಕ್ಕಿಲ್ಲ ಎಂಬ ಕೊರಗು ಇಲ್ಲಿನ ನಿವಾಸಿಗಳದ್ದಾಗಿದೆ.

‘ನಾವು ನೆಲ ಗುಡಿಸಲುಗಳಲ್ಲಿ ವಾಸಿಸುತ್ತಿದ್ದೇವೆ. ಕೆಲ ಗುಡಿಸಲುಗಳಲ್ಲಿ ಹುತ್ತ ನಿರ್ಮಾಣಗೊಂಡಿದೆ. ವಿಷ ಜಂತುಗಳು ಬಂದಾವು ಎಂಬ ಆತಂಕದ ನಡುವೆಯೇ ಬದುಕುತ್ತಿದ್ದೇವೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

‘ನಾವು ಮೂಲತಃ ಅಲೆಮಾರಿ ಜನಾಂಗವವರಾಗಿದ್ದೇವೆ. ಅಲೆಮಾರಿ ಜನಾಂಗದ ಜಾತಿ ಪ್ರಮಾಣ ಪತ್ರ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಿ’ ಎಂದು ಮನವಿ ಮಾಡಿದ್ದಾರೆ.

‘ಪಿ.ಗೌರೀಪುರ ಗೇಟ್ ಬಳಿ ಎರಡು ವರ್ಷಗಳ ಹಿಂದೆ 46 ಕುಟುಂಬಗಳಿಗೆ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ. 20 ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಆಶ್ರಯ ಮನೆಯನ್ನೂ ನೀಡಿಲ್ಲ. ಜಾತಿ ಪ್ರಮಾಣಪತ್ರ ಇಲ್ಲದಿರುವ ವಿಷಯವನ್ನು ಮುಂದಿಟ್ಟುಕೊಂಡು ಗ್ರಾಮ ಪಂಚಾಯ್ತಿ ನಮಗೆ ಆಶ್ರಯ ಮನೆಗಳನ್ನು ನೀಡುತ್ತಿಲ್ಲ’ ಎಂದು ಸ್ಥಳೀಯ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ಜಗ್ಗಲಿ ಜನಾಂಗಕ್ಕೆ ಸೇರಿದ 70 ಮಕ್ಕಳಿದ್ದಾರೆ. ಅವರಿಗಾಗಿ ಒಂದು ಅಂಗನವಾಡಿ ಕೇಂದ್ರ, ಶಾಲೆಯನ್ನು ತೆರೆದಿಲ್ಲ. ಹೀಗಾಗಿ ಮಕ್ಕಳು ವಿದ್ಯಾಭ್ಯಾಸಕ್ಕೆ ದೂರದ ಗೌರೀಪುರಕ್ಕೆ ಹೋಗುವ ಅನಿವಾರ್ಯತೆ ಇದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಜಗ್ಗಲಿ ಜನಾಂಗವು ಅಲೆಮಾರಿ ಅಥವಾ ಅರೆ ಅಲೆಮಾರಿ ಜನಾಂಗದಲ್ಲಿ ಬರುತ್ತಿಲ್ಲ. ಕಂದಾಯ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿ, ಮಕ್ಕಳ ಶಾಲಾ ದಾಖಲಾತಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಚಳ್ಳಕೆರೆ ತಹಶೀಲ್ದಾರ್ ಟಿ.ಸಿ ಕಾಂತರಾಜ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT