ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚರ್ಚೆ ರದ್ದು: ದೌರ್ಬಲ್ಯ, ಅಸಹಾಯಕತೆಯ ಪ್ರತೀಕ’

Last Updated 30 ಡಿಸೆಂಬರ್ 2017, 8:46 IST
ಅಕ್ಷರ ಗಾತ್ರ

ಗದಗ: ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಡಿ. 30ರಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿ ನಿಗದಿಯಾಗಿದ್ದ ಸತ್ಯ ದರ್ಶನ ಚರ್ಚೆ ದಿಢೀರ್‌ ರದ್ದಾಗಿರುವುದು ತೀವ್ರ ನೋವುಂಟು ಮಾಡಿದೆ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ಅವರು ಈ ಚರ್ಚೆಗೆ ಅನುಮತಿ ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದರೆ, ಮೂವರು ಸಚಿವರು, ಹೆಸರಾಂತ ಮಠಾಧೀಶರು ಸೇರಿ ಲಿಂಗಾಯತ ಪ್ರತ್ಯೇಕತಾವಾದಿಗಳ ಗೌರವ ಕಾಪಾಡಲಿಕ್ಕಾದರೂ ಈ ಸಭೆ ನಡೆಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ನಾವು ಆರು ಜನರು ಈ ಸಭೆಗೆ ಬರುವುದಾಗಿ ಒಪ್ಪಿಕೊಂಡಿದ್ದೆವು. ತಕ್ಕ ಉತ್ತರ ಕೊಡಲು ಸಿದ್ಧರಾಗಿದ್ದೆವು. ಆದರೆ, ಪೊಲೀಸ್‌ ಇಲಾಖೆಯಿಂದ ಈ ಸಭೆಗೆ ಪರವಾನಗಿ ಪಡೆಯಲು ಸಾಧ್ಯವಾಗಿಲ್ಲ ಎಂದರೆ ಅದು ಅವರ ದೌರ್ಬಲ್ಯ ಮತ್ತು ಅಸಹಾಯಕತೆಯನ್ನು ಸೂಚಿಸುತ್ತದೆ’ ಎಂದು ಪರೋಕ್ಷವಾಗಿ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ಸಚಿವ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ ಮತ್ತು ಬಸವರಾಜ ಹೊರಟ್ಟಿ ಅವರನ್ನು ಟೀಕಿಸಿದರು.

‘ಈ ವಿಷಯದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಮುಂದೆ ಬಿಟ್ಟು ಉಳಿದವರು ಮೋಜು ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಹೊರಟ್ಟಿ ಅವರ ತೇಜೋವಧೆ ಮಾಡುತ್ತಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನೊಮ್ಮೆ ದಿನಾಂಕ ನಿಗದಿಪಡಿಸಿ, ಪರವಾನಗಿ ಪಡೆದುಕೊಂಡು ಚರ್ಚೆ ಆಯೋಜಿಸಿದರೆ ಭಾಗವಹಿಸಲು ಸಿದ್ಧ ಎಂದು ಪ್ರತಿಕ್ರಿಯಿಸಿದರು.

‘ಹೊರಟ್ಟಿ ಅವರು ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಸಾಕಷ್ಟು ಸೇವೆಯನ್ನು ಒದಗಿಸಿದ್ದಾರೆ. ಈ ಚರ್ಚೆಗೆ ವೇದಿಕೆ ಕಲ್ಪಿಸಲು ಸ್ಥಳ ಪರಿಶೀಲನೆ ಹೋದಾಗ ಮಠದ ಸ್ವಾಮೀಜಿ ಆಗಲಿ, ಮಠದ ಆಡಳಿತಾಧಿಕಾರಿ ಆಗಲಿ ಯಾವುದೇ ಸೂಚನೆ ನೀಡದೆ ಮೌನವಾಗಿದ್ದು ಅವರು ಸೇರಿ ಪೊಲೀಸ್ ಇಲಾಖೆಯೂ ಒಪ್ಪಿಗೆ ನೀಡದಿರುವುದು ಅವರ ಸೇವೆಗೆ ಮಾಡಿದ ದ್ರೋಹ ಎನ್ನಬೇಕು’ ಎಂದರು.

ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಾಲಕೇರಿ ಅನ್ನದಾನೀಶ್ವರ ಮಠದ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT