ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜನ ಜಾತ್ರೆ: ವಿದ್ಯುಕ್ತ ಚಾಲನೆ ಇಂದು

Last Updated 30 ಡಿಸೆಂಬರ್ 2017, 9:29 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಗವಿಮಠ ಜಾತ್ರೆಗೆ ಇಂದು ಸಂಜೆ ಬಸವಪಟ ಏರಿಸುವ ಮೂಲಕ ಅಧಿಕೃತ ಚಾಲನೆ ದೊರೆಯಲಿದೆ. ಅದಕ್ಕೂ ಮುನ್ನ ಬೆಳಿಗ್ಗೆ 8.30ಕ್ಕೆ ನಗರದ ಬನ್ನಿಕಟ್ಟೆ ಗೌರಿಶಂಕರ ದೇವಸ್ಥಾನದ ಬಳಿಯಿಂದ ನಮ್ಮ ನಡೆ ಒತ್ತಡ ರಹಿತ ಬದುಕಿನ ಕಡೆ ಘೋಷವಾಕ್ಯದ ಅಡಿ ಜಾಥಾ ನಡೆಯಲಿದೆ. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.

ವಿವಿಧ ಶಾಲಾ ವಿದ್ಯಾರ್ಥಿಗಳು, ಅಧಿಕಾರಿಗಳು ಸೇರಿದಂತೆ ಸುಮಾರು 10 ಸಾವಿರದಷ್ಟು ಮಂದಿ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಒತ್ತಡ ರಹಿತ ಬದುಕಿಗಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.30ಕ್ಕೆ ಮಠದ ಆವರಣದಲ್ಲಿ ಹೊಸಪೇಟೆಯ ಪುಣ್ಯಕೋಟಿ ಪ್ರತಿಷ್ಠಾನದ ಮಾನಸಿಕ ರೋಗ ತಜ್ಞ ಡಾ.ಅಜಯಕುಮಾರ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಸಂವಾದ ಇರುತ್ತದೆ ಎಂದು ಮಠದ ಮಾಧ್ಯಮ ಸಮಿತಿ ತಿಳಿಸಿದೆ.

ಶುಕ್ರವಾರ ಮಠದ ಆವರಣದಲ್ಲಿ ಜಾತ್ರೆಯ ಅಂತಿಮ ಹಂತದ ಸಿದ್ಧತೆಗಳು ಮುಂದುವರಿದಿದ್ದವು. ಭಕ್ತರ ಆಗಮನವೂ ಹೆಚ್ಚು ಇತ್ತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಮಠದ ಆವರಣದಲ್ಲಿ ಭಕ್ತರನ್ನು ಸ್ವಾಗತಿಸುತ್ತಿದ್ದರು. ದವಸ ಧಾನ್ಯ, ರೊಟ್ಟಿ ತಂದ ಭಕ್ತರು ಸ್ವಾಮೀಜಿ ಆಶೀರ್ವಾದ ಪಡೆದರು.

ತೆಪ್ಪೋತ್ಸವದ ಸಿದ್ಧತೆ: ಹೈದರಾಬಾದ್‌ - ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಗವಿಮಠದಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ. ಎರಡು ತೆಪ್ಪಗಳನ್ನು ಬಿದಿರಿನ ಕೋಲುಗಳ ಮೂಲಕ ಜೋಡಿಸಿ ಅದರ ಮೇಲೆ ಫ್ಲೈವುಡ್‌ ಹಲಗೆ ಹಾಸಿ ಪೂರ್ಣ ಪ್ರಮಾಣದ ತೇಲು ಮಂಟಪ ನಿರ್ಮಿಸಲಾಗುತ್ತದೆ. ಡಿ. 28ರಿಂದ ಇದರ ಪರೀಕ್ಷೆ ನಡೆದಿದೆ. ಇಂದು ಎರಡೂ ತೆಪ್ಪಗಳನ್ನು ಜೋಡಿಸಿ ಕೆರೆಯಲ್ಲಿ ಹುಟ್ಟು ಹಾಕಿಸಿ ಸಂಚರಿಸಲಾಯಿತು.

ತೆಪ್ಪ ಇಡೀ ಕೆರೆಯಲ್ಲಿ ಒಂದು ಸುತ್ತು ಹಾಕಲು ಸುಮಾರು 20 ನಿಮಿಷ ಬೇಕು. ಈ ರೀತಿ ಮೂರು ಸುತ್ತು ಹಾಕಲಾಗುತ್ತದೆ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ದಾಸೋಹಕ್ಕೆ 16 ಕ್ವಿಂಟಲ್ ತುಪ್ಪ: ಕೊಪ್ಪಳದ ಭಕ್ತರಾದ ಶಾರದಮ್ಮ ಶೆಟ್ಟರ್, ನಾಗರಾಜ ಮೂಡಸಿರವಾರ, ಯಲ್ಲಪ್ಪ ನಡುಗಡ್ಡಿ, ಶ್ರೀನಿವಾಸ ಕಟ್ಟಿಮನಿ ಹಾಗೂ ಮಂಜುನಾಥ ಶಹಾಪುರ ಅವರು ಸೇರಿ 16 ಕ್ವಿಂಟಲ್ ತುಪ್ಪವನ್ನು ಜಾತ್ರೆಯ ಮಹಾದಾಸೋಹಕ್ಕೆ ಅರ್ಪಿಸಿದ್ದಾರೆ.

ಭಾನಾಪುರದ ಗವಿಸಿದ್ಧೇಶ್ವರ ಶಿಲ್ಪಕಲಾ ಕೇಂದ್ರದ ಯಲ್ಲಪ್ಪ ಬಡಿಗೇರ ದಂಪತಿ 1 ಕ್ವಿಂಟಲ್‌ ತುಪ್ಪ ದಾನ ನೀಡಿದ್ದಾರೆ. ಇವರು ಬಹು ದಿನಗಳಿಂದ ಶ್ರೀಗವಿಮಠದ ಶಿಲ್ಪಕಲಾ ಕೇಂದ್ರದಲ್ಲಿ ರಥವನ್ನು ತಯಾರಿಸುವ ಶಿಲ್ಪಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಸಾವಿರಾರು ರೊಟ್ಟಿ, ತರಕಾರಿ ಧಾನ್ಯಗಳು ಮಠಕ್ಕೆ ಸಮರ್ಪಣೆಯಾಗಿವೆ ಎಂದು ಮಠದ ವಕ್ತಾರರು ತಿಳಿಸಿದ್ದಾರೆ.

ಸಂಚಾರ ವ್ಯವಸ್ಥೆ ಬದಲಾವಣೆ: ಜ. 3 ಮತ್ತು 4ರಂದು  ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೆ ಜಾತ್ರೆಗೆ ಬರುವ ವಾಹನಗಳನ್ನು ಹೊರತುಪಡಿಸಿ ಹೊಸಪೇಟೆ, ಗಂಗಾವತಿ, ಗಿಣಿಗೇರಿ ಕಡೆಯಿಂದ ಬರುವ ವಾಹನಗಳು ಅಭಯ್‌ ಸಾಲ್ವೆಂಟ್‌ ಕಂಪೆನಿ ಬಳಿಯ ಹೊಸ ಹೆದ್ದಾರಿ ಬೈಪಾಸ್‌ ರಸ್ತೆಯಲ್ಲಿ  ( ನಿರ್ಮಾಣ ಹಂತದಲ್ಲಿರುವ ರಸ್ತೆ) ಸಾಗಿ ದದೇಗಲ್‌ ಮೂಲಕ ಗದಗ ಕಡೆಗೆ ಹೋಗಬಹುದು.

ಗದಗ ಕಡೆಯಿಂದ ಹೊಸಪೇಟೆ ಕಡೆಗೆ ಹೋಗುವ ವಾಹನಗಳು ದದೇಗಲ್‌ ಮೂಲಕ ಹಾದು ಹೋಗುವ ಹೊಸ ಹೆದ್ದಾರಿ ಬೈಪಾಸ್‌ ಮೂಲಕ ಸಾಗಿ ಅಭಯ್‌ ಸಾಲ್ವೆಂಟ್‌ ಸಮೀಪ ರಾಷ್ಟ್ರೀಯ ಹೆದ್ದಾರಿ - 63ನ್ನು ತಲುಪಿ ಮುಂದೆ ಸಾಗಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವ ಪಟ ಆರೋಹಣ ಇಂದು

ಬಸವಪಟದಲ್ಲಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರ, ಗಿಡ-ಮರ -ಬಳ್ಳಿ ಮುಂತಾದ ಪ್ರಕೃತಿಯ ಚಿತ್ರ ಬರೆದಿರಲಾಗುತ್ತದೆ. ಪಟಕ್ಕೆ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಅದನ್ನು ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ 5 ಸುತ್ತ ಪ್ರದಕ್ಷಿಣೆ ಹಾಕಲಾಗುತ್ತದೆ. ನಂತರ ಅದನ್ನು ಧ್ವಜಸ್ತಂಭದಲ್ಲಿ ಏರಿಸಲಾಗುತ್ತದೆ.

ನಾಡಿನಲ್ಲಿ ವರ್ಷ ಪೂರ್ತಿಯಾಗಿ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯಕ್ಕಾಗಿ ಬಸವ ಪಟ ಆರೋಹಣ ಕಾರ್ಯಕ್ರಮವು ಜರುಗುತ್ತದೆ ಎಂದು ಮಾಧ್ಯಮ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT