ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳತು ಹೊಸತುಗಳ ನಡುವೆ...

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹೊಸತು ಬೆರಗಿನ ಮೂಲ. ಸಂಭ್ರಮಕ್ಕೊಂದು ನೆಪ. ಜೊತೆಜೊತೆಗೆ ವಿದಾಯದ ವಿಷಾದವನ್ನೂ ಮೈಗೆ ಅಂಟಿಸಿಕೊಂಡಿರುವ ಸಂಗತಿ. ಮತ್ತೊಂದು ವರ್ಷವನ್ನು ಬರಮಾಡಿಕೊಳ್ಳಲು ಒಂದಿಷ್ಟು ನಿರೀಕ್ಷೆಗಳೊಂದಿಗೆ ತುದಿಗಾಲಲ್ಲಿ ನಿಂತಿರುವಾಗಲೇ, ಇನ್ನೇನು ಭೂತಕಾಲದ ಬಾಯಿಗೆ ಬೀಳಲಿರುವ ಈ ವರ್ಷದ ಸಕಲೆಂಟು ನೆನಪುಗಳೂ ಮನಸ್ಸನ್ನು ಆವರಿಸಿ ನೋವು-ನಲಿವಿನ ಯಾತ್ರೆಗೆ ಅಣಿಗೊಳಿಸದೇ ಇರಲಾರವು. ಇದುವರೆಗಿನ ಪಯಣವನ್ನು ಮೆಲುಕು ಹಾಕುತ್ತಲೇ, ಮನಸ್ಸು ಮುಂದೆ ಸವೆಸಬೇಕಿರುವ ಹಾದಿಯ ಕುರಿತು ನೀಲಿನಕ್ಷೆಯೊಂದನ್ನು ತಯಾರಿಸಿಟ್ಟುಕೊಂಡು ಬಿಡುತ್ತದೆ.

ಈ ಮಧ್ಯೆ ಹೊಸ ವರ್ಷವನ್ನು ಸ್ವಾಗತಿಸುವುದು ಹೇಗೆ ಎಂಬ ಕುರಿತು ನೂರೆಂಟು ಆಲೋಚನೆಗಳು ಮೂಡಿ, ಕೊನೆಗೂ ವರ್ಕ್‌ಔಟ್ ಆಗಬಹುದಾದ ಒಂದನ್ನು ಆರಿಸಿಕೊಳ್ಳುವ ಕಸರತ್ತೂ ನಡೆದೇ ತೀರುತ್ತದೆ. ಹೊಸತನ್ನು ಬರಮಾಡಿಕೊಳ್ಳಲು ಎಷ್ಟೆಲ್ಲ ದಾರಿಗಳುಂಟು? ಆದರೆ ಎಲ್ಲವೂ ಕೈಗೆಟುಕಬಲ್ಲವೇ?

ಕಳೆದ ಹದಿನೈದಿಪ್ಪತ್ತು ದಿನಗಳಿಂದ ನಮ್ಮನ್ನು ಆವರಿಸಿದ್ದ ಸನ್ನಿ ನೈಟ್ಸ್ ಕುರಿತಾದ ಚರ್ಚೆಯನ್ನೇ ಮುಂದಿಟ್ಟುಕೊಂಡು ನೋಡುವುದಾದರೆ, ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆ ಕುರಿತ ಚರ್ಚೆಯ ಬಹುಪಾಲನ್ನು ಈ ಸಮೂಹ ಸನ್ನಿಯೇ ಆವರಿಸಿಕೊಂಡದ್ದನ್ನು ಯಾರೂ ಅಲ್ಲಗಳೆಯಲಾಗದು. ಹಾಸನದಂತಹ ಊರಲ್ಲಿನ ಪುಂಡರಿಗೂ ಸನ್ನಿ ನೈಟ್ಸ್ ಬಗೆಗೆ ಇದ್ದ ಕುತೂಹಲ ಕಡಿಮೆಯೇನಲ್ಲ. ನನ್ನ ಗೆಳೆಯರಿಬ್ಬರು, ಅದು ಕೈಗೆಟುಕಲಾರದೆಂಬ ಅರಿವಿದ್ದರೂ, ಮಾತಿಗಾದರೂ ‘ಈ ಸಲ ನಮ್ದು ನ್ಯೂ ಇಯರ್ ಸೆಲೆಬ್ರೇಷನ್ನು ಸನ್ನಿ ಜೊತೆ. ನಿನ್ ಪ್ಲ್ಯಾನು ಏನಪ್ಪ’ ಅಂತ ಕೇಳುವಷ್ಟರ ಮಟ್ಟಿಗೆ ನಮ್ಮೆಲ್ಲರ ಸಂಭ್ರಮಾಚರಣೆಗಳ ನಡುವೆ ಸನ್ನಿಗೇ ಸಿಂಹಪಾಲು ದೊರೆತಿತ್ತು. ಇದೇ ವೇಳೆ ಸನ್ನಿ ಲಿಯೋನ್ ಕಾರ್ಯಕ್ರಮದ ಸುತ್ತ ಎದ್ದ ವಿವಾದ, ಹಿರಿಯ ಪತ್ರಕರ್ತ ಅಜಿತ್ ಪಿಳ್ಳೈ ಅವರ ‘ಇದು ಯಾವ ಸೀಮೆಯ ಚರಿತ್ರೆ?’(ಅನುವಾದ: ಸತೀಶ್ ಜಿ ಟಿ) ಪುಸ್ತಕದಲ್ಲಿನ ಬರಹವೊಂದನ್ನು ಮತ್ತೆ ಓದಲು ಪುಸಲಾಯಿಸಿತು. ಮೂವತ್ತು ವರ್ಷಗಳ ಹಿಂದೆ ಮುಂಬೈನಲ್ಲಿ ಹೊಸ ವರ್ಷಾಚರಣೆ ಸಂಭ್ರಮವನ್ನು ಸಿಲ್ಕ್ ಸ್ಮಿತಾ ನೃತ್ಯದೊಂದಿಗೆ ಉದ್ದೀಪಿಸಿಕೊಳ್ಳಲು ಆಯೋಜಿಸಲಾಗಿದ್ದ ಕಾರ್ಯಕ್ರಮದ ವರದಿಗೆಂದು ಒಲ್ಲದ ಮನಸ್ಸಿನಿಂದ, ತನ್ನ ನ್ಯೂ ಇಯರ್ ಪ್ಲ್ಯಾನನ್ನು ಹಾಳುಗೆಡವಿದ ಸಂಪಾದಕರಿಗೆ ಶಪಿಸುತ್ತಲೇ ಅಜಿತ್ ಪಿಳ್ಳೈ ತೆರಳುತ್ತಾರೆ.

ಸಿಲ್ಕ್ ಸ್ಮಿತಾ ಮತ್ತು ಸನ್ನಿ ಲಿಯೋನ್ ಕಾರ್ಯಕ್ರಮಗಳ ನಡುವೆ ಮೂರು ದಶಕಗಳ ಅಗಾಧ ಕಾಲಾವಧಿಯ ಅಂತರವಿದ್ದರೂ, ನಾವು ಅದೆಷ್ಟೇ ಆಧುನಿಕರಾದೆವು ಎಂದುಕೊಂಡರೂ ನಮ್ಮೊಳಗೆ ಇನ್ನೂ ಆಳವಾಗಿಯೇ ಬೇರೂರಿರುವ ಪೂರ್ವಗ್ರಹಗಳು, ಸಂಕುಚಿತ ಮನಸ್ಥಿತಿಗೆ ಇದು ಕನ್ನಡಿ ಹಿಡಿಯುವುದಂತೂ ಹೌದು.

ಕಳೆದ ವರ್ಷ ಬ್ರಿಗೇಡ್ ರೋಡಿನಲ್ಲಿ ಹೊಸ ವರ್ಷಾಚರಣೆ ವೇಳೆ ನಡೆದ ಘಟನೆಗಳು ಸಂಭ್ರಮಾಚರಣೆಯ ನೆಪದಲ್ಲಿ ತಾವು ಏನನ್ನಾದರೂ ಮಾಡಬಹುದೆಂದು ಭಾವಿಸುವ ರೋಗಗ್ರಸ್ಥ ಮನಸ್ಥಿತಿಯ ದರ್ಶನ ಮಾಡಿಸಿದ್ದಂತೂ ಹೌದು. ಮಧ್ಯರಾತ್ರಿ ವೇಳೆಯಲ್ಲಿ ರಸ್ತೆಗಿಳಿದು ಮೋಜು ಮಸ್ತಿಯಲ್ಲಿ ತೊಡಗುವ ಯುವತಿಯರು, ಸುಲಭಕ್ಕೆ ಸಿಗುವವರು ಎನ್ನುವ ಸಂಕುಚಿತ ಮನಸ್ಥಿತಿ ಹೊಂದಿರುವ ಯುವಕರು ಎಸಗುವ ದುಷ್ಕೃತ್ಯಗಳನ್ನು ಬಲಿಪಶುವಿನ ವರ್ತನೆಯಲ್ಲೇ ತಪ್ಪು ಅರಸುವ ಮೂಲಕ ಸಮರ್ಥಿಸಿಕೊಂಡದ್ದೂ ಆಯಿತು. ಅದು ಇಂದಿಗೂ ಹಾಗೇ ಮುಂದುವರೆದಿದೆ.

ಸಂಭ್ರಮವೆಂಬುದು ಸ್ವೇಚ್ಛೆಯಾಗಿ, ಕುಡಿದ ಅಮಲಿನಲ್ಲಿ ತಾವು ಮಾಡುವುದೆಲ್ಲವೂ ಸರಿ ಎನ್ನುವ ದಾರ್ಷ್ಟ್ಯ ಪ್ರದರ್ಶಿಸುವುದನ್ನು ವಿವೇಕವುಳ್ಳ ಯಾರೂ ಸಮರ್ಥಿಸಲಾರರು. ಇತರರಿಗೆ ಕಿರಿಕಿರಿಯನ್ನುಂಟು ಮಾಡದ, ಯಾರ ನೆಮ್ಮದಿಗೂ ಭಂಗ ತಾರದ ಸಂಭ್ರಮಾಚರಣೆಯ ನೆಲೆಗಳನ್ನು ನಾವು ಕಂಡುಕೊಳ್ಳಬೇಕಲ್ಲವೆ?

ನಮ್ಮದೇ ಬದುಕನ್ನು ಹಿಂತಿರುಗಿ ನೋಡಿದರೂ, ಹೊಸ ವರ್ಷಾಚರಣೆಯ ಸಂಭ್ರಮದ ನೆಲೆಗಳು ಹೇಗೆಲ್ಲ ಪಲ್ಲಟಗೊಳ್ಳುತ್ತ ಹೋದವು ಎಂಬ ಕುರಿತು ಸ್ಪಷ್ಟ ಚಿತ್ರಣವೊಂದು ದಕ್ಕುತ್ತದೆ. ಶಾಲಾ ದಿನಗಳಲ್ಲಿ ಕ್ಲಾಸಿನ ಪ್ರತಿ ವಿದ್ಯಾರ್ಥಿಯಿಂದಲೂ ಐದೋ ಹತ್ತೋ ರೂಪಾಯಿ ಸಂಗ್ರಹಿಸಿ ಒಟ್ಟುಗೂಡುವ ಹಣದಲ್ಲಿ ಕೇಕ್ ತಂದು ಕ್ಲಾಸ್ ಟೀಚರ್‌ಗೆ ಮೊದಲು ಕತ್ತರಿಸಲು ಹೇಳಿ ಆನಂತರ ಎಲ್ಲರೂ ಹಂಚಿಕೊಂಡು ತಿಂದದ್ದು ಕೂಡ ಆ ಕಾಲಕ್ಕೆ ನಮ್ಮ ಪಾಲಿಗೆ ಬಹುದೊಡ್ಡ ಸಂಭ್ರಮಾಚರಣೆಯಾಗಿಯೇ ತೋರುತ್ತಿತ್ತು. ಅದೂ ಅಲ್ಲದೆ, ನಮ್ ಕ್ಲಾಸಲ್ಲಿ ಕತ್ತರಿಸಿದ್ದೇ ದೊಡ್ಡ ಕೇಕು ಅಂತ್ಹೇಳಿಕೊಂಡು ಬೀಗುವುದೂ ಇತ್ತು.

ಏಳೆಂಟು ವರ್ಷಗಳ ಹಿಂದಿನ ನ್ಯೂ ಇಯರ್ ಸಂಭ್ರಮಾಚರಣೆ ನಾನಾ ಕಾರಣಗಳಿಗಾಗಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆಗಷ್ಟೇ ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಒಂದಷ್ಟು ಸ್ನೇಹಿತರು ವೀಕೆಂಡಿನಲ್ಲಿ ಬಂದಿದ್ದ ಹೊಸ ವರ್ಷವನ್ನು ಹಾಸನದಲ್ಲಿಯೇ ಎಲ್ಲರೂ ಒಂದೆಡೆ ಸೇರಿ ಬರಮಾಡಿಕೊಳ್ಳುವ ಪ್ಲ್ಯಾನ್ ಮಾಡಿ, ತರಾತುರಿಯಲ್ಲಿ ತಿಂಡಿ ತೀರ್ಥಗಳನ್ನು ಪಾರ್ಸೆಲ್ ಕಟ್ಟಿಸಿಕೊಂಡು ಊರ ಹೊರವಲಯದಲ್ಲಿರುವ ಯಾವುದಾದರೂ ಹೊಲ ಬದಿಯ ಖಾಲಿ ಜಾಗದಲ್ಲಿ ಆಚರಿಸೋಣ, ಸಖತ್ತಾಗಿರುತ್ತೆ. ಅದೇ ಚೀಪ್ ಅಂಡ್ ಬೆಸ್ಟು ಅಂತ ಹೊಟ್ಟೆಪಾಡಿಗೆ ಅದಾಗಷ್ಟೇ ಒಂದು ಉದ್ಯೋಗ ದಕ್ಕಿಸಿಕೊಂಡಿದ್ದ ಅವರೆಲ್ಲ ತೀರ್ಮಾನಿಸಿದ್ದರು. ಇನ್ನೂ ವಿದ್ಯಾರ್ಥಿಯಾಗಿಯೇ ಮುಂದುವರೆದಿದ್ದ ನಾನೂ ಅವರ ನಿರ್ಧಾರಕ್ಕೆ ಸಮ್ಮತಿಸಿದ್ದೆ. ಎಲ್ಲವೂ ಅಂದುಕೊಂಡಂತೆ ನೆರವೇರಿತು. ತೀರ್ಥದೊಂದಿಗೆ ತಿಂಡಿ ಸೇವನೆ, ಜೊತೆಗೆ ತೋಚಿದಂತೆ ಮಾಡುವ ತೂರಾಟದ ಡಾನ್ಸು ಎಲ್ಲವನ್ನೂ ಮಾಡಿ ಸುಸ್ತಾಗಿ ಇನ್ನೇನು ಮನೆ ದಾರಿ ಹಿಡಿಯಲು ಹೊರಟ ವೇಳೆಗೆ ಸರಿಯಾಗಿ ಬಂದ ಜೀಪಿನಿಂದ ಇಳಿದ ಪೊಲೀಸರು ಸರಿಯಾಗಿಯೇ ಬೆಂಡೆತ್ತಿದ್ದರು. ತೀರ್ಥದ ಪವರ್‌ನ ಪ್ರಭಾವದಿಂದಲೋ ಏನೋ, ನಾವೇನ್ ಅಪರಾಧ ಮಾಡಿದೀವಿ ಅಂತ ಪ್ರಶ್ನಿಸುವ ಧೈರ್ಯ ತೋರಿದ ಸ್ನೇಹಿತನೊಬ್ಬನಿಗೆ ಸ್ವತಃ ಎಸ್.ಐ. ಸಾಯಿಕುಮಾರ್ ಸ್ಟೈಲ್‌ನಲ್ಲಿ ಕಪಾಳಕ್ಕೆ ಬಾರಿಸಿದ್ದರು. ಆನಂತರ ನಾವ್ಯಾರೂ ತುಟಿ ಪಿಟಕ್ ಅನ್ನದೇ ಪೊಲೀಸರು ಕೊಟ್ಟಷ್ಟು ಇಸ್ಕೊಂಡು, ತರಾತುರಿಯಲ್ಲಿ ಗಾಡಿ ಸ್ಟಾರ್ಟ್ ಮಾಡಿ ಮಧ್ಯರಾತ್ರಿ ಒಂದರ ಹೊತ್ತಿಗೆ ಮನೆ ಸೇರಿಕೊಂಡಿದ್ದೆವು.

ಅಂದೇ ನಿರ್ಧರಿಸಿ ಬಿಟ್ಟಿದ್ದೆ, ಇದೇ ಕೊನೆ; ಮುಂದೆ ಯಾವತ್ತೂ ಹೀಗೆ ಚೀಪ್ ಅಂಡ್ ಬೆಸ್ಟು ಅನ್ನೋ ಕಾರಣಕ್ಕೆ ಕಂಡವರ ಹೊಲ-ಗದ್ದೆಗಳಲ್ಲಿ ತೀರ್ಥ ಸೇವಿಸಿ ಸಂಭ್ರಮಿಸುವ ಧೈರ್ಯ ತೋರಬಾರದೆಂದು! ಅದಾದ ಮೇಲೆ ಒಟ್ಟಿಗೆ ಎಂಜಿನಿಯರಿಂಗ್ ಓದು ಮುಗಿಸಿದ ನಾವ್ಯಾರೂ ಮತ್ತೆ ಜೊತೆಯಾಗಿ ನ್ಯೂ ಇಯರ್ ಆಚರಿಸುವ ಉಸಾಬರಿಗೆ ಹೋಗಲೇ ಇಲ್ಲ.

ವರ್ಷಪೂರ್ತಿ ಮದ್ಯಪಾನ ವಿರೋಧಿಯ ಗೆಟಪ್‌ನಲ್ಲಿರುವ ಕೆಲವರು ಸ್ವತಃ ಮದ್ಯ ಸೇವಿಸಿ ಸಂಭ್ರಮಿಸುವ ಅಪರೂಪದ ಬೆಳವಣಿಗೆಗೂ ಈ ಹೊಸ ವರ್ಷದ ಸಂಭ್ರಮಾಚರಣೆಗಳು ಸಾಕ್ಷಿಯಾಗುವುದುಂಟು. ಆಗಾಗ ಮದ್ಯ ಸೇವಿಸಿ ಟೈಟ್ ಆಗುವ ತನ್ನ ಪ್ರೇಮಿಗೆ ಸಿಕ್ಕಾಪಟ್ಟೆ ಚಾರ್ಜ್ ಮಾಡುವ ಗೆಳತಿ ಒಬ್ಬಳು, ಹೀಗೆ ಎರಡು ವರ್ಷಗಳ ಹಿಂದೆ ನ್ಯೂ ಇಯರ್ ಪಾರ್ಟಿಯೊಂದರಲ್ಲಿ ಸ್ವತಃ ಬಿಯರ್ ಕುಡಿದು ಡಾನ್ಸ್ ಮಾಡಿದ್ದೂ ಅಲ್ಲದೇ, ಆ ನೆನಪನ್ನೇ ಮೂರ್ನಾಲ್ಕು ತಿಂಗಳು ಮೆಲುಕು ಹಾಕುತ್ತಿದ್ದಳು. ‘ನೀನಾದ್ರೆ ಕುಡೀಬಹ್ದು, ನಿನ್ ಲವರ್ ಮಾತ್ರ ಕುಡಿಯೋ ಹಾಗಿಲ್ವಾ’ ಅಂತ ಕೆಣಕಿದರೆ, ‘ನಾನೇನು ನಿಮ್ಮ ಹಾಗೆ ಒಂದು ಟ್ಯಾಂಕ್ ಕುಡಿತೀನಾ? ಏನೋ ನ್ಯೂ ಇಯರ್ ಅಂತ ಒಂದು ಗ್ಲಾಸ್ ಬಿಯರ್ ಕುಡ್ದಿದ್ಕೆ ನನ್ನನ್ನ ಕುಡ್ಕಿ ಮಾಡ್ತೀರಾ?’ ಅಂತ ಇಂದಿಗೂ ರೇಗುವುದುಂಟು.

ಎಂ.ಟೆಕ್. ಓದಿನ ವೇಳೆ ಸಹಪಾಠಿಯಾಗಿದ್ದ ಕೇರಳದ ಗೆಳೆಯ, ನ್ಯೂ ಇಯರ್ ಸಂಭ್ರಮಾಚರಣೆಗೆ ಗೋವಾಗೆ ಹೋಗೋಣವೆಂದು ಒಂದೆರಡು ಬಾರಿ ಪುಸಲಾಯಿಸಿದ್ದನಾದರೂ, ಅದ್ಯಾವುದೂ ವರ್ಕ್‌ಔಟ್ ಆಗಲೇ ಇಲ್ಲ. ಹೀಗೆ ಗೋವಾ ನ್ಯೂ ಇಯರ್ ಪ್ಲ್ಯಾನು ಫ್ಲಾಪ್ ಆದ ಮೇಲೆ ಬೆಂಗಳೂರಿನ ಎಂ.ಜಿ. ರೋಡಿಗೆ ಆತುಕೊಂಡಿರುವ ರೆಸ್ಟೋರೆಂಟ್ ಒಂದರಲ್ಲಿ ಮಾಡಿದ ಪಾರ್ಟಿ, ಅದು ಕಟ್ಟಿಕೊಟ್ಟ ಭಿನ್ನ ಅನುಭವಗಳಿಂದಾಗಿ ಇಂದಿಗೂ ನೆನಪಿನಲ್ಲಿ ಉಳಿದಿದೆ. ಹಣವುಳ್ಳವರ ಕೈಗೆಟುಕುವ ಈ ಬಹುಮಹಡಿಯ ಅಮಲಿನ ದಂತಗೋಪುರದ ಮೇಲಿನಿಂದ ಬಿದ್ದು ಒಂದಿಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಕಟ್ಟಡದ ನಡುವಿನ ಜಾಗಕ್ಕೆ ಬಲೆ ಹಾಕಿದ್ದರು. ಅಮಲೇರಿಸಿಕೊಂಡು ಬಿದ್ದು ಸಾಯಲು ಹೊರಟವರಿಗೆ, ಹಿಂದೆ ನಾವೆಲ್ಲ ಸರ್ಕಸ್ಸುಗಳಲ್ಲಿ ನೋಡುತ್ತಿದ್ದ ಹಾಗೆ ಮೇಲಿನಿಂದ ಬಲೆಯ ಮೇಲೆ ಬಿದ್ದು ಏಳುವ ಅನುಭವವಷ್ಟೆ ದಕ್ಕುವಂತೆ ಮಾಡಿದ್ದರು.

ಪ್ರತಿಯೊಬ್ಬರಿಗೂ ಅವರದೇ ಆದ ಸಂಭ್ರಮದ ನೆಲೆ ಮತ್ತು ನೆಪಗಳಿವೆ. ಕೆಲವರಿಗೆ ಕಾಫಿ-ಟೀ ಹೀರುವುದರಲ್ಲೇ ಸಂಭ್ರಮ ದಕ್ಕಿದರೆ, ಮತ್ತೆ ಕೆಲವರ ಖುಷಿ ಅಮಲಿನ ಮಹಲನ್ನು ಏರುತ್ತ ಹೋದಂತೆಲ್ಲ ದುಪ್ಪಟ್ಟಾಗುತ್ತದೆ. ಮಹಾನಗರಗಳಿಂದ ದೂರವೇ ಉಳಿದವರಿಗೆ, ಗಗನಚುಂಬಿ ಕಟ್ಟಡಗಳು, ಜಗಮಗಿಸುವ ಪಬ್ಬು-ರೆಸ್ಟೋರೆಂಟ್‌ಗಳು, ಎಂ.ಜಿ.ರೋಡು- ಬ್ರಿಗೇಡ್ ರೋಡುಗಳಲ್ಲಿನ ಸಂಭ್ರಮಾಚರಣೆಯ ಕುರಿತು ಕುತೂಹಲ; ಮತ್ತೆ ಅದರಲ್ಲಿ ತಾವೂ ಭಾಗಿಯಾಗಬೇಕೆಂಬ ಹಂಬಲ ಮನೆ ಮಾಡಿದರೆ, ಅದೇ ಮಹಾನಗರದಲ್ಲಿ ಬದುಕು ಕಟ್ಟಿಕೊಂಡು ಸಾಕಷ್ಟು ವೀಕೆಂಡ್ ಪಾರ್ಟಿಗಳನ್ನು ಮಾಡಿ ನೋಡಿ ಇಷ್ಟೇನಾ ಲೈಫು ಅಂತಂದುಕೊಳ್ಳುವವರಿಗೆ, ದೂರದ ಮಲೆನಾಡು ಮಡಿಲಿನ  ಹೋಮ್ ಸ್ಟೇ ಒಂದರಲ್ಲಿ ಹರಿಯುವ ನದಿಯ ಎದುರು ಹಾಗೆ ಸುಮ್ಮನೆ ಕುಳಿತುಕೊಂಡು ದಿನದೂಡುವುದೇ ಮಹಾಸಂಭ್ರಮವಾಗಿ ತೋರಲೂಬಹುದು.

ಮೊನ್ನೆಯಷ್ಟೆ ಕ್ರಿಸ್‌ಮಸ್ ಮತ್ತು ನ್ಯೂ ಇಯರ್ ಆಚರಿಸಬಾರದೆಂದು ಫರ್ಮಾನು ಹೊರಡಿಸುವ ಸಂಕುಚಿತ ಮನೋಭಾವದ ವ್ಯಕ್ತಿಗಳ ವಾಟ್ಸ್ ಆ್ಯಪ್ ಪೋಸ್ಟ್‌ ಒಂದನ್ನು ತೋರಿಸಿದ ನಮ್ಮ ಜಿಮ್‌ನ ಫಿಟ್‌ನೆಸ್ ಟ್ರೇನರ್, ‘ಹಾಗಾದ್ರೆ ನಾವೆಲ್ಲ ಈ ದೇಶ ಬಿಟ್ಟು ಅಮೇರಿಕಕ್ಕೆ ಹೋಗಬೇಕಾ?’ ಅಂತ ಬೇಸರ ತೋಡಿಕೊಂಡರು. ನಮಗೆ ಸರಿ ಕಾಣದಿದ್ದರೆ ನಾವು ಆಚರಿಸದಿದ್ದರೆ ಆಯಿತು. ಇನ್ನೊಬ್ಬರ ಮೇಲೆ ನಮ್ಮ ಒಲವು-ನಿಲುವನ್ನು ಬಲವಂತವಾಗಿ ಹೇರುವ ಹಕ್ಕು ನಮಗಿದೆಯೇ?

ಹೊಸ ವರ್ಷಕ್ಕೆ ಕ್ಯಾಲೆಂಡರ್ ಬದಲಿಸುವಷ್ಟೇ ಸಲೀಸಾಗಿ ನಮ್ಮ ಮನದ ಗೋಡೆಯನ್ನು ಆವರಿಸಿಕೊಂಡಿರುವ ಸಂಕುಚಿತತೆಯನ್ನೂ ಕಿತ್ತೊಗೆಯುವಂತಾದರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT