ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಶುಭಾಶಯ

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹೊಸ ವರ್ಷಕೆ ಹಬ್ಬವ ಮಾಡಲು
ಹರುಷದಿ ಬಂದವು ಪ್ರಾಣಿಗಳು
ನದಿಯ ದಡದಲಿ ಕಾಡಿನ ಬನದಲಿ
ಹಾರುತ ಇಳಿದವು ಹಕ್ಕಿಗಳು

ದಿನ ದಿನ ಕೂಡಿಸಿ ಇಟ್ಟ ಜೇನನು
ತಟ್ಟನೆ ತಂದಿತು ಕರಡಿಯಣ್ಣ
ಸಕ್ಕರೆ ಮಾತಿನ ಅಕ್ಕರೆ ಅರಗಿಣಿ
ಪಕ್ಕಕೆ ಇಟ್ಟಿತು  ಮಾವನ್ನ

ಮಲ್ಲಿಗೆ ಸಂಪಿಗೆ ಹೂಗಳ ಹೊತ್ತು
ಹಾರುತ ಬಂದಿತು ಚಿಟ್ಟಿ ಅಕ್ಕ
ನವಣಿ ಸಜ್ಜಿ ರಾಗಿ ಕಡಲೆ
ಕೊಟ್ಟು ನಕ್ಕಿತು ಗುಬ್ಬಕ್ಕ

ಟೊಂಗೆ ಜಿಗಿಯುತ ಬಾಲ ಬಡಿಯುತ
ನೇರಳೆ ತಂದಿತು ಮಂಗಣ್ಣ
ಮರಿಗಳ ಮಾಡಲು ಇಟ್ಟ ಮೊಟ್ಟೆ
ಕೋಳಿ ಕೊಟ್ಟಿತು ಕೇಳಣ್ಣ

ಹರಿಯುವ ನೀರಲಿ ತೇಲುತ ನಿಂತೆ
ನೀಡಿತು ಮೀನು ಕಮಲವನು
ಬಡ ಬಡ ಓಡಿ ನೆಲವನು ಕೆದರಿ
ತಂದಿತು ಗಜ್ಜರಿ ಮೊಲ ತಾನು

ಕಬ್ಬಿನ ಗಳಗಳ  ಹೊತ್ತ ಹೊರೆಯನು
ಬಾಗಿ ಇಳಿಸಿತು ಮರಿಯಾನೆ
ಹಸುರಿನ ಹುಲ್ಲನು ಮೇಯುತ ನಿಂತ
ಹಸುವು ಕೊಟ್ಟಿತು ಹಾಲನ್ನು
ಅಬ್ಬರವಿಲ್ಲದೆ ಗದ್ದಲವಿಲ್ಲದೆ
ನಿಂತು ಹೇಳಿತು  ಹುಲಿ ತಾನು
ಹುಲಿಯ ವೇಷಕೆ ಬಾಡಿಗೆ ಪಡೆಯದೆ
ಹೆಜ್ಜೆ ಹಾಕುವೆ ಸಾಕೇನು?

ಎತ್ತು ಕತ್ತೆ ಎಮ್ಮೆ ಕಡವೆ
ಕೂಡಿ ತಂದವು ಬಾಳೆ ಗೊನೆ
ಬೆಳವಲ ಹಣ್ಣು ಬಾರಿ ರುಚಿಯು
ತಿನ್ನಿರಿ ಎಂದಿತು ಕರಿ ಗೂಬೆ
ಠಕ್ಕ ನರಿಯು ತಂಟೆ ಮಾಡದೆ
ಕಿತ್ತು ತಂದಿತು ಸಿಹಿ ದ್ರಾಕ್ಷಿ
ಅನ್ನದ ಕಾಳನು ಬಳ ಬಳ ಉದುರಿಸಿ
ಬಳಗವ ಕರೆಯಿತು ಹಿರಿ ಕಾಗಿ

ಒಲವಿನ ರಾಗದಿ ಕೋಗಿಲೆ ಗಾಯನ
ಕೇಳುತ ಉಂಡವು ಖುಶಿಯಿಂದ
ತೊಡೆಯ ಮೇಲೆ ಮೊಲವನು ಕೂಡಿಸಿ
ಮುತ್ತು ಕೊಟ್ಟಿತು ಹುಲಿಯೊಂದ.
ಸಾಧು ಸಾಕು ಕಾಡಿನ ಪ್ರಾಣಿ
ಭೇದವೆ ಇಲ್ಲದೆ ಆಡಿದವು
ಒಬ್ಬರಿಗೊಬ್ಬರು ಕೂಡಿಸಿ ಉಣಿಸಿ
ಹೊಸ ವರುಷದ ಹಬ್ಬ ಮಾಡಿದವು

ಮೃಗಗಳ ಎದೆಯಲಿ ಸವಿ ಸವಿ ಮಾತು
ಹೂವಿನ ಕಿರುನಗು ತುಟಿಯಲಿ
ಜೇನಿನ ಹುಟ್ಟನು ಕೈಯಲಿ ಹಿಡಿದು
ತಂದಿವೆ ಶುಭಾಶಯ ನಾಡಿನಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT