ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳೆವೋಡು

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪೇಟೆಗೆ ಹೋದ ಅಣ್ಣ, ಅಪ್ಪಯ್ಯ ಇನ್ನೂ ಬಂದಿರಲಿಲ್ಲೆ.

ಮೊನ್ನೆ ದೇವಕಾರ್ಯ ಇತ್ತು ಹೇಳಿ ಬಂದವಳಿಗೆ ಈವತ್ತು ಹೋಗಕಬೇಕಿತ್ತು ಮನಿಗೆ. ‘ಅಮ್ಮ, ಅಣ್ಣ, ಇನ್ನೂ ಬರಲಿಲ್ಲೆ. ಆನು ಇವರಿಗೆ ಫೋನ್ ಮಾಡಿ ಬರ್ಲಿಕ್ ಹೇಳಲಾ?’ ಅಂದಾಗ,  ಅಮ್ಮ ‘ನಿಂಗೆಂತ ಮಳ್ಳನೆ, ಅಮಾವಾಸ್ಯೆ ಆಗಿ ಅದೆಂತಾ ಹೋಗ್ತಿ, ಹೋಗ್ತಿ ಹೇಳಿ, ಜಿದ್ ಮಾಡ್ತಾ ಇದ್ದೆ ನೀನು? ನಾಳೆ ಬೆಳಗ್ಗೆ ತಿಂಡಿ ತಿಂದ್ಕಂಡು ಹೋಗಲಕ್ಕು’  ಅಂತು. ಅಷ್ಟ್ ಹೊತ್ತಿಗೆ ‘ಅಮ್ಮಾರೇ.. ಅಮ್ಮಾರೇ...’ ಹೇಳಿ ಯಾರೋ ಕರದಿದ್ದ ಕೇಳಿ ಹೊರಗೆಬಂದವಳಿಗೆ ಕಂಡಿದ್ದು ಒಬ್ಬ ತೊನ್ನು ಹಿಡಿದ ಕೃಶಕಾಯದ ಮುದುಕ. ಕೈಲಿದ್ದ ಹಳೇ ಜೋಳಿಗೆಯಂತಹ ಚೀಲವನ್ನು ಕೆಳಗಿಟ್ಟು ಉಸ್ಸಪ್ಪಾ ಎನ್ನುತ್ತಾ ಹೆಡಿಗೆಯ (ಜಗುಲಿ ಮತ್ತೆ ಅಂಗಳದ ನಡುವೆ ಇರುವ ಜಾಗ) ಮೇಲೆ ಕುಂತಕಂಡ.

ಒಳಗ ಹೋಗಿ ಒಂದ್ ಬಟ್ಟಲಲ್ಲಿ ಸ್ವಲ್ಪ ಅಕ್ಕಿ ತಗಬಂದು ಭಿಕ್ಷೆ ಹಾಕೋಣ ಹೇಳಿ ‘ಎಲ್ಲಪ್ಪಾ, ನಿನ್ನ ಚೀಲ?’ ಅಂದೆ. ಅವ ಒಂದ್ ನಿಮಿಷ ಏನೋ ಗುರ್ತ ಹಿಡಿಯುವವರ ಹಾಂಗೇ ನನ್ನ ಮುಖ ನೋಡಿದ. ಅವನ ಕಣ್ಣಂಚಲ್ಲಿ ನೀರು. ಯಂಗೆ ಎಂತಕ್ಕೋ ಕಸಿವಿಸಿ ಆತು. ‘ಪಾಪ, ಈ ಭಿಕ್ಷುಕಂಗೆ ಯೆಂತಾ ತ್ರಾಸೋ ಏನೋ ಅಂದ್ಕೊತಿದ್ದಾಗ ‘ನಾ ಭಿಕ್ಷೆ ಕೇಳೂಕ್ ಬಂದಿಲ್ರಾ’ ಅಂತ ನೋವಿನ ಸ್ವರದಲ್ಲಿ ಅಂದ. ನಂಗೆ ಎಂತಕ್ಕೋ ಒಂಥರಾ ಆತು.

ಭಿಕ್ಷೆ ಹಾಕಲು ಮುಂದ್ ಹೋದ್ ಕೈ ಅಚಾನಕ್ಕಾಗಿ ಹಿಂದ್ ಬಂತು. ಅವನ ಮಾತಿಗೆ ಎಂತಾ ಪ್ರತಿಕ್ರಿಯೆ ಹೇಳವು ಅಂತ ಗೊತ್ತಾಗದೇ sorry ಹೇಳ ಶಬ್ದ ಎಂಗ್ ಗೊತ್ತಿಲ್ಲಗದ್ ಹಾಂಗೇ ನನ್ ಬಾಯಿಂದ ಬಂತು. ಹಾಂಗೇ ಬಟ್ಟಲು ತಗಂಡು ಒಳಗೆ ಹೋದೆ. ಹೌದು ಮದ್ವೆ ಆಗಿ ನಂಗೂ ಹತ್ ವರ್ಷ ಅಗೋತು. ಯಾವ ಆಳನ ಎಂತದ ಅಂದ್ ಕಂಡು ‘ಅಮ್ಮ ಅದ್ಯಾರೋ ಬಂದ, ನೋಡೇ, ನಂಗ್ ಗೊತ್ತಾಗಿಲ್ಲೆ’ ಹೇಳಿದ್ದೇ,  ‘ಹೌದನೇ, ಯಾರ ಹಾಂಗಾದ್ರೆ?’ ಅಂದವಳ ಹಿಂದೆ ಆನೂ ಹೋದೆ. ಆಮ್ಮ ಒಂದ್ ನಿಮಿಷ ಅವನನ್ನ ದಿಟ್ಟಿಸಿ ನೋಡಿ ಗುರ್ತ ಸಿಗದೇ ‘ಯಾರ ಅದು?" ಕೇಳ್ತು.
‘ನಾನು ಅಮ್ಮಾರೆ. ಹೊನ್ನ. ಬಳೆಹೊನ್ನ ಬನವಾಸಿಯವ..’ ಅಂದ.

ಓಹ್..!! ಗಾಡ್‌!!!
ದೇವರೇ... ಇವ ಹೊನ್ನನ..? ಅವನ ತೊನ್ನು ಹಿಡಿದ ಮೈ, ಬಡಕಲು ಶರೀರ, ಗುಳಿಬಿದ್ದ ಕೆನ್ನೆ, ಒಳಹೊಕ್ಕ ಕಣ್ಣು, ಎಲ್ಲವನ್ನೂ ಕಳೆದುಕೊಂಡಂಥ ಯಾವುದೋ ನಿರ್ವಿಕಾರದ ಮುಖ ಇದನ್ನೆಲ್ಲಾ ನೋಡಿದ್ರೆ ಅವ ಬಳೆ ಮಾರೋ ಹೊನ್ನನ ರೂಪ ಅಂತ ನಂಬಲೇ ಆಗಲ್ಲೆ. ಗರ ಬಡದವಳ ಹಾಂಗೆ ನಿಂತುಕೊಂಡಿದ್ದವಳಿಗೆ ಅಮ್ಮ ಹೊನ್ನನ ಹತ್ರ ‘ಹೊನ್ನಾ, ಇದ್ ಯಾವ ನಮನಿ ಆಗ್ ಹೋಗಿದೀಯ ನೀನು?’ ಅಂತ ಹೇಳಿದಾಗ ಹೌದಲ್ಲ ಅನ್ನಿಸ್ತು.

ಆಗ  ನನ್ನ ಮುಂದೆ ಧುತ್ತೆಂದು ಬಂದು ನಿಂತದ್ದು, ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಬಳೆ ತರುವ ಹೊನ್ನನ ರೂಪ... ಯಾರೋ ಕೊಟ್ಟ ಹಳೇ ಪ್ಯಾಂಟನ್ನೇ ಸ್ವಚ್ಛವಾಗಿ ತೊಳೆದು ಅದಕ್ಕೆ ಇಸ್ತ್ರಿ ಹಾಕಿ, ಒಂದು ತುಂಬು ತೋಳಿನ ಅಂಗಿ ತೊಟ್ಟು, ಕೇರಂ ಬೋರ್ಡಿನಂಥ ಒಂದು ಹಲಗೆಗೆ ಮೊಳೆಗಳ ಹೊಡೆದು, ನೂರೊಂದು ನಮೂನೆಯ ಗಾಜಿನ ಬಳೆಯನ್ನು ಅದರಲ್ಲಿ ಅಚ್ಚುಕಟ್ಟಾಗಿ ಸಿಕ್ಕಿಸಿ, ಬಗಲಲ್ಲಿ ನೇತುಕೊಂಡ ಚೀಲದಲ್ಲಿ ಪ್ಲಾಸ್ಟಿಕ್ ಬಳೆ ಇಟ್ಟುಕೊಂಡು ಹೊನ್ನ ಬಂದನೆಂದರೆ ಮಕ್ಕಳಿಂದ ಹಿಡಿದು ಮುದುಕಿಯರವರೆಗೂ ಬಳೆತೊಟ್ಟುಕೊಳ್ಳುವ ಸಂಭ್ರಮ.

ಬಳೆ ಹೊನ್ನ ಇರೋದು ನಮ್ಮ ಮನೆಯಿಂದ ಆರು ಕಿಲೋಮೀಟರ್ ದೂರದ ಬನವಾಸಿಲ್ಲಾಗಿತ್ತು. ಅವನದು ಚಿಕ್ಕ ಚೊಕ್ಕ ಸಂಸಾರ. ಒಂದೇ ಮಗ. ಮಗನ್ನ ಓದಿಸ್ತಾ ಇದ್ದಿದ್ದ. ಒಳ್ಳೆ ನಿಯತ್ತಿನ ಮನಶಾ ಅಂತ ಅಪ್ಪಯ್ಯ ಹೇಳ್ತಾ ಇರ್ತಿದ್ದ. ಮೂರ್ನಾಲ್ಕು ತಿಂಗಳಿಗೆ ಒಂದ್ ಬಾರಿ ಬಳೆ ಹೊನ್ನ ನಮ್ ಕಡೆಗೆ ಟೂರ್ ಮಾಡದು ಕಾಮನ್ ಆಗಿತ್ತು.

ನನ್ನ ಮದ್ವಿಗೆ ಒಂದ್ ತಿಂಗಳ ಇದ್ದಾಗ ಒಂದಿನ ಅಪ್ಪಯ್ಯ ಪ್ಯಾಟಿಂದ ಬಂದವ ಅಮ್ಮನ ಹತ್ರ ‘ಪಾಪ. ಈವತ್ತು ಪಂಡಿತರ ಅಸ್ಪತ್ರೆಲ್ಲಿ ಹೊನ್ನ ಸಿಕ್ಕಿದ್ದ. ಅವನ ಹೆಂಡತಿ ಕ್ಯಾನ್ಸರ್ ಆಗಿ ತೀರಕಂಡು ಬಿಟ್ಟಿಗಿದು. ಒಂದ್ ಮೂರ್ ಸಾವಿರ ರೂಪಾಯ್ ಕೇಳದ. ಕೊಟ್ಟಿಕ್ ಬಂದೆ ಪಾಪ’ ಹೇಳಿದ್ದು ನೆನಪಾತು. ಆಮೇಲೆ ಹೊನ್ನ ಯಾವತ್ತೂ ಬಂದಿರಲಿಲ್ಲ.

ಈಗ 10 ವರ್ಷಗಳ ನಂತರ ಹೊನ್ನ ಬಂದಿದ್ದ. ಆಗಲೇ ಸಂಜೆ ಆರು ಗಂಟೆ ಆಗಿ ಹೋಗಿತ್ತು. ಕತ್ತಲು ಕವಚ್ಕೆಂಬಲೆ ಶುರುವಾಗಿತ್ತು. ಡಿಸಂಬರ್ ತಿಂಗಳು. ಸಣ್ಣಕೆ ಚಳಿನೂ ಶುರುವಾಗಿತ್ತು. ಅಷ್ಟು ಹೊತ್ತಿಗೆ ಹೊರಗೆ ಹೋದ ಅಣ್ಣ, ಅಪ್ಪ ಇಬ್ರೂ ಬಂದರು. ಅಮ್ಮ ಹೊನ್ನನನ್ನ ತೋರಿಸ್ತಾ ‘ಪಾಪ, ಹ್ಯಾಂಗ್ ಅಗೋಜ ನೋಡಿ ನಮ್ ಬಳೆ ಹೊನ್ನ’ ಅಂತ ಲೊಚಗುಟ್ಟತು. ‘ಇದೆಂತ ಆಯ್ತಾ ನಿಂಗೆ? ಅಪ್ಪಯ್ಯ ಕೇಳಿದಾಗ ಹೊನ್ನ ನಕ್ಕು, ‘ಎಂತಾ ಇಲ್ರಾ ಒಡೆರಾ, ಎಲ್ಲಾ ಆರಾಮ’ ಅಂದ್ರೂ ಅವನ ಕಣ್ ಅಂಚಲ್ಲಿ ನೀರು ಬಂದಿದ್ದು ಸ್ಪಷ್ಟವಾಗಿ ಕಾಣತಾ ಇತ್ತು. ಪಾಪ ಎಂತಾ ತೊಂದರೇನೇನೋ ಅನ್ನಿಸ್ತು.

ಕತ್ತಲಾಗ್ತಿತ್ತು. ಹೊನ್ನ ಹೊರಡೋ ಥರ ಕಾಣದಿದ್ದಾಗ ಅಣ್ಣ ‘ನಿಂಗೆ ಎಷ್ಟು ಹೊತ್ತಿಗೆ ಬಸ್ಸು?’ ಅಂತ ಕೇಳಿದ. ‘ಒಡೆರಾ ನನ್ನ ಕೈಲಿ ಈಗ ಹೋಗುಕೆ ಅಗಲ್ಯಾ. ರಾತ್ರಿ ಇಲ್ಲೇ ಉಳಕಂಡು ಬೆಳ್ಳಂ ಬೆಳಿಗ್ಗೆ ಹೋಗ್ ಬಿಡ್ತೀನಿ ಅಂದಾಗ ಅಣ್ಣನಿಗೆ ಕಸಿವಿಸಿಯಾಗಿದ್ದು ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು.

ಒಳಗೆ ಬಂದವ ಸ್ವಲ್ಪ ಸಿಡಿಮಿಡಿಗುಟ್ಕತ್ತ ಅಣ್ಣ ‘ಅವಂಗೆ ಆ ನಮನಿ ತೊನ್ನು ಆಜು. ಅವನ ಬನವಾಸಿ ತನಕ ಬಿಟ್ಟಿಕ್ಕೆ ಬರತೆ’ ಅಂದ. ಅಮ್ಮ‘ಅವ ಎಷ್ಟ ಬಾರಿ ನಮ್ಮಲ್ಲಿ ರಾತ್ರಿ ಉಳಕಂಡು ಹೋಗಿರಲ್ಲೆ. ಪಾಪ ತೊಗರ್ ಒಲೆ ಹತ್ರ ಮಲಗಿ ಬೆಳಿಗ್ಗೆ ಎದ್ದು ಹೋಗ್ತಿದ್ದ’ ಅಂತು.

ಅಣ್ಣ ‘ಅಮ್ಮ ಅವ ಮೊದ್ಲ ಇದ್ ಸ್ಥಿತಿಗೂ, ಈಗಲೂ ವ್ಯತ್ಯಾಸ ಇದ್ದು. ಅವನ ನೋಡಿರೆ ಆ ನಮನಿ ಆಜ. ರಾತ್ರಿ ಏನಾದ್ರೂ ಹೆಚ್ಚು ಕಡಿಮೆ ಆತು ಅಂದ್ರೆ ಯೆಂತ ಮಾಡದು? ಆನು ಅವನ್ನ ಮನೆ ತನಕ ಬಿಟ್ಟಿಕ್ಕೆ ಬರ್ತೆ’ ಅಂದಾಗ ‘ಸರಿ, ನಿನ್ನಿಷ್ಟ’ ಅಂದ್ಕಂಡು ಅಮ್ಮ– ಅಪ್ಪಯ್ಯ ಇಬ್ರೂ ಸುಮ್ಮನಾದ. ನಂಗೆ ಹೊನ್ನನ ಪರಿಸ್ಥಿತಿ ನೋಡಿ ಪಾಪ ಅನ್ನಿಸಿದ್ರೂ. ಅಣ್ಣ ಹೇಳದೂ ಸರಿ ಅನ್ನಿಸ್ತು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ?

ಅಣ್ಣ ಹೊನ್ನನ ಹತ್ರ ಬಂದು ‘ಹೊನ್ನಾ, ಬಾ, ನಿನ್ನ ಮನೆಗೆ ಬಿಟ್ ಬರ್ತೀನಿ. ಈ ಕತ್ತಲಲ್ಲಿ ನೀ ಹ್ಯಾಂಗ್ ಒಬ್ಬನೇ ಹೋಗತೆ’ ಅಂದಾಗ, ‘ಸಣ್ಣ ಭಟ್ಟರೇ, ನಾ ಈವಾಗ ಬನವಾಸಿಲ್ಲಿ ಇಲ್ಲರಾ, ನಾ ಈವತ್ತೊಂದು ರಾತ್ರಿ ಉಳಕಂಡು ಬೆಳಿಗ್ಗೆ ಹೋಗಿ ಬಿಡ್ತೀನಿ’ ಅಂದ. ಅಣ್ಣ ಆಯ್ತು ಮತ್ತೆ, ನೀ ಎಲ್ಲಿ ಇರುದು ಹೇಳು, ನಾ ಬಿಟ್ ಕೊಡ್ತೀನಿ’ ಅಣ್ಣ ಅಷ್ಟ್ ಕೇಳಿದ್ದೇ, ಹೊನ್ನನ ಕಣ್ಣಲ್ಲಿ ಬಳಬಳ ನೀರು. ‘ಒಡೆರಾ, ನಂಗ ರಾತ್ರಿ ಅಂದ್ರೆ ರಾಶಿ ಹೆದ್ರಿಕೆ ಅಗತ್ರಾ, ನನ್ನ ಕೈಲಿ ಹೊಪೂಕಾಗ’ ಅಂತ ಒಂದೇ ಸ್ವರದಲ್ಲಿ ಅಂಗಲಾಚಿದ. ಅಮ್ಮಂಗೆ ಅವನ ಕಣ್ಣೇರ್ ನೋಡಲಾಜಿಲ್ಲೆ.

‘ವಿಶ್ವಾ ಬಾ ಇಲ್ಲಿ’ ಹೇಳಿ ಕರತ್ತು. ‘ಎಂತಾ ಆ ನಮನಿ ಜಿದ್ದು ನಿಂದು. ಇರ್ಲಿ ಬಿಡು ಒಂದ್ ರಾತ್ರಿ ಅತ್ಲಾಗೆ ಬಿದ್ಕಂಡು ಹೋಗತಾ’ ಅಂತು.

ಊಟ ಆದ್ ಮೇಲೆ ತೊಗರ್ ಒಲೆ ಹತ್ರ ಕುಂತಕಂಡಿದ್ದ ಹೊನ್ನನ ಅಪ್ಪಯ್ಯ ಕೇಳದ ‘ಈವಾಗ ಎಲ್ಲಿ ಇರೋದು ನೀನು? ನಿನ್ನ ಮಗ ಏನ್ ಮಾಡ್ತಾನೋ? ಮದ್ವೆ ಆಗಿರಬೇಕಲ್ಲ?’.  ಅಪ್ಪಯ್ಯ ಅಷ್ಟ್ ಕೇಳಿದ್ದೆ ತಡ, ಹೊನ್ನನ ಕಣ್ಣಲ್ಲಿ ಬಳಬಳ ನೀರು. ‘ಎಂತಾ ಹೇಳಲಿ ಒಡೆರಾ, ಎಲ್ಲಾ ದೇವರು ಕೊಟ್ಟಿದ್ದು, ಅವನೇ ತಕಂಬುಟ್ಟ, ಅವನಿಗೆ ನನ್ನ ಮಗ ಚಂದ ಇರೋದು ನೋಡ್ಲಿಕ್ ಆಗಲಿಲ್ಲ ಒಡೆರಾ. ಅಂದ್ಕಂಡು ಪೂರ್ತಿ ಕಥೆ ಹೇಳಿದ.

ಈಗ ಆರು ವರ್ಷದ ಹಿಂದೆ, ಹೊನ್ನನ ಮಗ ಕೃಷ್ಣನಿಗೆ ಕಾಲೇಜ್  ಮುಗದ್ ಮೇಲೆ, ಯಾರದೋ ಕೈಕಾಲು ಹಿಡದು ಅಲ್ಲೇ ತೋಟಗಾರ್ಸ್‌ ಸೊಸೈಟಿಲ್ಲಿ ಕ್ಲರ್ಕ್ ಕೆಲಸ ಕೊಡಿಸಿದ್ದ. ಆಮೇಲೆ ಒಂದ್ ವರ್ಷಕ್ಕೆ ಮದ್ವೆ ಆತು. ಅದಾದ್ ಒಂದ್ ವರ್ಷಕ್ಕೆ ಚಂದದ ಒಂದ್ ಮಗ ಕೂಡ ಹುಟ್ಟಿದ ಕೃಷ್ಣನಿಗೆ. ಕೃಷ್ಣ ಅಪ್ಪನಿಗೆಂದು ಸಿರ್ಸಿಲೇ ಹೆಣ್ ಮಕ್ಕಳ ಫ್ಯಾಷನ್ ವಸ್ತು ಎಲ್ಲಾ ಇದ್ದಿದ್ದ ಒಂದ್ ಅಂಗಡಿ ಇಡಸಿ ಅಲ್ಲಿ ಬಳೆಗಳನ್ನೂ ಇಡಿಸಿ ಕೊಟ್ಟಿದ್ದ. ಕೃಷ್ಣನ ಹೆಂಡತಿ ಗಂಗೆನೂ ಮಾವಂಗೆ ಸಹಾಯ ಮಾಡ್ತಿತ್ತು. ಹೊನ್ನಂಗೆ ಅಕ್ಕಪಕ್ಕದ ಊರಿನ ಜನ ಪರಿಚಯ ಇದ್ದಿದ್ದಕ್ಕೆ, ಅವನ ವ್ಯಾಪಾರ ಚೊಲೋ ನಡೆಯುತ್ತಿತ್ತು. ಆದರೆ ಇದೆಲ್ಲದರ ನಡುವೆ ಒಂದು ದುಖ್ಖ ಆಗಿದ್ದು ಅಂದ್ರೆ ಹೊನ್ನಂಗೆ ತೊನ್ನು ಶುರುವಾಗಿತ್ತು.

ಯಾಕೋ ದೇವರಿಗೆ ಈ ಸಂಸಾರದ ಖುಷಿ ನೋಡಲಾಗಲಿಲ್ಲೇ. ಎರಡು ವರ್ಷದ ಹಿಂದೆ, ಒಂದ್ ಅಮಾವಾಸ್ಯೆ ದಿನ ಕೃಷ್ಣ ಮಗನನ್ನು ಕರೆದುಕೊಂಡು ರಾತ್ರಿ ಪಕ್ಕದ ಊರಿಂದ ಬರುತ್ತಿದ್ದಾಗ  ಬೈಕ್ ಅಪಘಾತಕ್ಕೀಡಾಗಿ ಕೃಷ್ಣ, ಅವನ ಮಗ ಜಾಗದಲ್ಲೇ ಅಸುನೀಗಿದರು.  ಅದಾದ ಮೇಲೆ ಹೊನ್ನಂಗೆ ಜೀವನನೇ ಬ್ಯಾಡ ಅನ್ನಿಸಿಬಿಡ್ತು. ಅವನ ಆರೋಗ್ಯ ಕೂಡ ಹದಗೆಟ್ಟು, ತೊನ್ನು ಇಡೀ ಮೈಗೆ ಆವರಿಸಿಕೊಂಡಿತು. ಆದರೆ ಹೊನ್ನನ ಸೊಸೆ ಮಾತ್ರ ಮಾವನನ್ನ ತಂದೆಗಿಂತ ಮಿಗಿಲಾಗಿ ನೋಡಿಕೊಳ್ಳತಾ ಇತ್ತು. ಒಂದ್ ಆರು ತಿಂಗಳ ಹಿಂದೆ ಅವಳನ್ನ ಮನವೊಲಿಸಿ, ಕೃಷ್ಣನ ವಿದುರ ಗೆಳೆಯ ಶಂಕರಂಗೆ ಮದುವೆ ಮಾಡಿಕೊಟ್ಟಿದ್ದ. ಎಷ್ಟು ವಿನಂತಿಸಿಕೊಂಡರೂ ಅಲ್ಲಿ ಉಳಿಯಲು ಹೋಗಲಿಲ್ಲ.

ಸೊಸೆ ಹೋದ ಮೇಲೆ ಹೊನ್ನನಿಗೆ ಏನೂ ಬೇಡವಾಯ್ತು. ಅಂಗಡಿ ಮಾರಿ ಬಂದ 3 ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಅದರ 2000 ರೂಪಾಯಿ ಬಡ್ಡಿ ಹಣವೇ ಅವನ ಜೀವನಾಧಾರವಾಗಿತ್ತು.

ಹೊನ್ನನ ಕತೆ ಕೇಳಿ, ಎಲ್ಲರ ಕಣ್ಣೂ ಒದ್ದೆಯಾದವು. ಆದ್ರೆ ಈಗ ಬಂದಿದ್ದು ಯಾಕೆಂತ ಕೇಳಿದರೆ ಹಾರಿಕೆಯ ಉತ್ತರ ಕೊಟ್ಟ.

ಹೊನ್ನನ ವಿಷಯವನ್ನೆಲ್ಲಾ ಕೇಳಿದ್ದ ಯಂಗೆ, ಎಂತಕ್ಕೋ ರಾಶಿ ತ್ರಾಸ್ ಆತು. ಹೊಟ್ಟೆಲ್ಲೆಲ್ಲಾ ಏನೋ ಕಿವುಚಿದ ಅನುಭವ. ಅವನ ಶರೀರದ ತೊನ್ನು, ಹಾಗೂ ಜೀರ್ಣಕಾಯವನ್ನು ನೋಡಿದ ನಂಗೆ ಎಲ್ಲೋ ತುಸು ಭೀತಿ, ಅಸಹ್ಯವಾಗಿದ್ದು ಸುಳ್ಳಲ್ಲ. ಅಣ್ಣ ಮತ್ತೆ ತಾನು ತುಸು Practical ಆಗಿ ಯೋಚಿಸಿದ್ದು, ಸರಿ ಅನ್ನಿಸಿತ್ತು. ಆದರೆ ಈಗ ಎಂತಕ್ಕೋ ಮನಸ್ಸಿನಲ್ಲಿ ತಳಮಳ.

ಎನ್ನ ಒಳಗಿನ ಭಾವನೆಗಳನ್ನ ಹೊರಗಿನ ವಸ್ತುಸ್ಥಿತಿಗಳು ಡಾಮಿನೇಟ್ ಮಾಡುತ್ತಿವೆಯೇ? ಅಪ್ಪಯ್ಯ, ಆಯಿಗೆ ಅವ ರಾತ್ರಿ ಇಲ್ಲಿ ಉಳಕಂಡು ಹೋಗಲಿ ಅನಿಸಿದ ಆರ್ದ್ರತೆ ಎನ್ನಲ್ಲಿ ಯಾಕಿಲ್ಲೆ? ಅಂದ್ರೆ ಈ ಸೋ ಕಾಲ್ಡ್‌ ಜನರೇಷನ್‌ ಗ್ಯಾಪ್‌  ಹೇಳದು ಭಾವನಾತ್ಮಕವಾದ ಅನಿಸಿಕೆಗಳನ್ನ ಕೂಡಾ ಎಲ್ಲೋ ಕಡಿಮೆ ಮಾಡ್ತಾ ಇದ್ದೇನು?  ಮಾನವೀಯ ಮೌಲ್ಯಗಳ ಒರತೆಯನ್ನ ಮೇಲೆ ಬರದ ಹಾಂಗೇ ಎಲ್ಲೋ ಅದುಮಿ ಇಡ್ತಾ ಇವೆಯಾ?’

ಇಷ್ಟಾಗಿ ಎನಗೆ ಎಂತಕ್ಕೆ ಹೊನ್ನನ ತೊನ್ನು ಹಿಡಿದ ಚರ್ಮೆ ಮಾತ್ರ ಕಂಡಿತು. ಮಗ ಸತ್ತ ಮೇಲೆ ತನ್ನ ಸ್ವಾರ್ಥಗಳನ್ನೆಲ್ಲಾ ಬದಿಗಿಟ್ಟು ಸೊಸೆಗೆ ಹೊಸ ಬದುಕು ಕೊಟ್ಟ ಅವನ ಉನ್ನತ ಮೌಲ್ಯಗಳು ಎಂತಕ್ಕೆ ತನಗೆ ಕಾಣತಾ ಇಲ್ಲೆ. ಬರೇ ನಾಲ್ಕನೇ ತರಗತಿ ಓದಿದ ಅವ, ಜೀವನ ಮೌಲ್ಯಗಳ ಗೌರವಿಸಿದ ರೀತಿಗೆ ಒಂದು ಮೆಚ್ಚುಗೆ ತನ್ನ ಮನಸ್ಸಿನಲ್ಲಿ ಯಾಕಿಲ್ಲವಾಯ್ತು? ನಾಳೆ  ಸೊಸೆ ಬಿಟ್ಟು ಹೋದರೆ ತಾನು ಅನಾಥ ಎಂಬ ಸತ್ಯವನ್ನು ಮನಗಂಡ ಮೇಲೂ, ವಿಧವೆ ಸೊಸೆಯನ್ನು ಧಾರೆಯೆರೆದು ಪಿತೃತ್ವ ಮೆರೆದ ಅವನ ಉತ್ತಮ ವಿಚಾರದ ಬಗ್ಗೆ ತನಗ್ಯಾಕೆ ಒಂದ್ ಸೆಲ್ಯೂಟ್ ಹೊಡೆಯವು ಅನಿಸಿದ್ದಿಲ್ಲೆ? ಅಷ್ಟೊಂದು ಪ್ರಾಕ್ಟಿಕಲ್ ಆಗ್ತಾ ಇದ್ನ ನಾನು? ಎಂತಕ್ಕೋ ಯೋಚನೆ ಮಾಡಿದಷ್ಟೂ ತಲೆ ಭಾರ ಆತು. ಯಾವಾಗ ನಿದ್ದೆ ಬಂತೋ ಗೊತ್ತಾಜಿಲ್ಲೆ.

ದಿನಾಲೂ ಬೆಳಿಗ್ಗೆ 5.30ಕ್ಕೆ ಏಳುವವಳಿಗೆ, ಆಮ್ಮ ಆರೂವರೆಗೆ ಚಹಾ ಕುಡಿಯಲು ಎಬ್ಬಿಸಿದಾಗಲೇ ಎಚ್ಚರವಾದದ್ದು. ‘ಆ ಹೊನ್ನಂಗೂ ಒಂದ್ ಕಪ್ ಚಾ ಕೊಟ್ ಬುಡತಿ ಅಂದ ಅಮ್ಮನಿಗೆ ಹೊನ್ನ ಕಾಣಲಿಲ್ಲ. ನಾನು ತಕ್ಷಣ ಅಟ್ಟಕ್ಕೆ ಹೋಗಿ ಅಡಿಕೆ ಇದೆಯಾ ಎಂದು ನೋಡಿದೆ. ಅಡಿಕೆ ಗುಪ್ಪೆ ಹಾಗೇ ಇತ್ತು. ಬಚ್ಚಲ ತಾಮ್ರದ ಹಂಡೆ ಇದೆಯಾ ನೋಡಿದೆ. ಅದೂ ಅಲ್ಲೇ ಇತ್ತು. ಅಷ್ಟರಲ್ಲಿ ಕೊಟ್ಟಿಗೆಯಿಂದ ಬಂದ ಅತ್ತಿಗೆ ‘ಯಾರೂ ಎದ್ದಿದ್ರಿಲ್ಲೇ, ಎನ್ ಹತ್ರ ಹೊನ್ನ ಈ ಲಕೋಟೆ ಕೊಟ್ ಹೋದ’ ಹೇಳಿ ಒಂದು ಹಳೆ ಹಳೇ ಲಕೋಟೆ ಕೊಡ್ತು. ಅಣ್ಣನ ಕೈಲಿ. ಅಣ್ಣ ಅದನ್ನ ಒಡೆದು ನೋಡಿದ. ಅದರಲ್ಲಿ 500 ರೂಪಾಯಿಯ ಆರು ಗರಿ ಗರಿ ನೋಟು. ಆಮೇಲೆ ತಪ್ಪು ತಪ್ಪು ಕನ್ನಡದಲ್ಲಿ ಗೀಚಿದ ಒಂದು ಚೀಟಿ. ‘ಒಡೆರಾ, ಕ್ಷಮಸಿ, ನಿಮ್ ದುಡ್ ಕೊಡಲಿಕ್ಕೆ ತಡ ಆತು’ ಅನ್ನೋ ಕ್ಷಮಾಪಣೆ.

ಒಂದು ಕ್ಷಣ ಪಿನ್ ಡ್ರಾಪ್ ಸೈಲೆನ್ಸ್‌. ಯಾರೂ ಮಾತಾಡಿದ್ವಿಲ್ಲೆ. ಯಂಗೆ ಯಾಕೋ ಅಲ್ಲಿ ನಿಲ್ಲಲಾಗದೇ ಒಳಗೆ ನೆಡದಿ. ‘ಛೇ, ಎಂತಾ ಯೋಚನೆ ಮಾಡಿಬಿಟ್ಟೆ ಒಂದು ಕ್ಷಣ, ಅವ ಏನಾದ್ರೂ ಕದ್ ಕಂಡು ಹೋಗಿಕ್ಕು ಹೇಳಿ, ಸೊಸೆಗೆ ತೊಂದರೆ ಕೊಡದೆ ತನ್ನ ಗಂಜಿಯ ತಾನೇ ಬೇಯಿಸಿಕೊಳ್ಳುವ ಆ ಸ್ವಾಭಿಮಾನಿಯನ್ನ ಯಾಕೆ ತನ್ನ ಮನಸ್ಸು ತಪ್ಪಾಗಿ ನೋಡತು. ಅಪ್ಪಯ್ಯ, ಅವ ರಾಶಿ ಸಾಚಾ ಮನಶಾ ಹೇಳಿ ಆಯಿ ಹತ್ರ ಹತ್ ಬಾರಿ ಹೇಳಿದ್ರೂ, ಎಂತಕ್ಕೆ ಯೆನ್ ಮನಸು ಹೀಂಗೆ ಯೋಚನೆ ಮಾಡ್ತು. ಎಂತಕ್ಕೋ ಎನ್ ಮೇಲೇ ಯಂಗೆ ಒಂಥರಾ ಬೇಜಾರಾಗೋತು. ಹೊನ್ನ ಕೊಟ್ಟ ಐನೂರರ ಗರಿ ಗರಿ ನೋಟುಗಳು ಕಣ್ಣೆದುರು ಕುಣಿದಂತಾಗಿ ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT