ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರನ್‌ವೇ ಮೂರೂವರೆ ಗಂಟೆ ಬಂದ್‌

ಎಂಟು ವಿಮಾನಗಳ ಪ್ರಯಾಣ ರದ್ದು l 58 ವಿಮಾನ ವಿಳಂಬ
Last Updated 30 ಡಿಸೆಂಬರ್ 2017, 20:29 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಬೆಳಿಗ್ಗೆಯೂ ದಟ್ಟ ಮಂಜು ಆವರಿಸಿದ್ದರಿಂದ, ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಮೂರೂವರೆ ಗಂಟೆ ಸ್ಥಗಿತಗೊಳಿಸಲಾಯಿತು.

ಒಂದು ವಾರದಿಂದ ನಗರದಲ್ಲಿ ನಿತ್ಯವೂ ಬೆಳಿಗ್ಗೆ ದಟ್ಟ ಮಂಜು ಕಾಣಿಸುತ್ತಿದ್ದು, ನಿಲ್ದಾಣದ ರನ್‌ವೇ ಗೋಚರಿಸದ ಸ್ಥಿತಿ ನಿರ್ಮಾಣವಾಗುತ್ತಿದೆ. ಶನಿವಾರ ಬೆಳಿಗ್ಗೆ 4 ಗಂಟೆಯಿಂದಲೇ ದಟ್ಟ ಮಂಜು ನಿಲ್ದಾಣವನ್ನು ಆವರಿಸಿಕೊಂಡಿತ್ತು. ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸದ ಸ್ಥಿತಿ ಇತ್ತು.

ನಿಗದಿಯಂತೆ 50ಕ್ಕೂ ಹೆಚ್ಚು ವಿಮಾನಗಳು ಬೆಳಿಗ್ಗೆ ಹಾರಾಟ ನಡೆಸಲು ಸಜ್ಜಾಗಿದ್ದವು. ಪ್ರಯಾಣಿಕರು ವಿಮಾನವೇರಿ ಕುಳಿತುಕೊಂಡಿದ್ದರು. ಆದರೆ, ದಟ್ಟ ಮಂಜು ಇದ್ದ ಕಾರಣಕ್ಕೆ ವಿಮಾನ ಸಂಚಾರ ನಿಯಂತ್ರಣ (ಏರ್‌ ಟ್ರಾಫಿಕ್‌ ಕಂಟ್ರೋಲ್‌) ಅಧಿಕಾರಿಗಳು, ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಿಲ್ಲ. ಹೀಗಾಗಿ ವಿಮಾನಗಳು ನಿಲ್ದಾಣ ಬಿಟ್ಟು ಕದಲಿಲ್ಲ. ಜತೆಗೆ ಬೆಳಿಗ್ಗೆ 4.58ರಿಂದ 8.28 ಗಂಟೆವರೆಗೆ ರನ್‌ವೇ ಬಂದ್‌ ಮಾಡಲಾಯಿತು.

ಬೆಳಿಗ್ಗೆ 8.30ರ ಬಳಿಕ ಮಂಜು ಕ್ರಮೇಣ ಕಡಿಮೆಯಾಯಿತು. ನಂತರವೇ ವಿಮಾನಗಳು ಒಂದೊಂದಾಗಿ ಹಾರಿದವು. ಬೆಳಿಗ್ಗೆ 5ರಿಂದ 8 ಗಂಟೆಯ ಅವಧಿಯಲ್ಲಿ ಹಾರಬೇಕಿದ್ದ 58 ವಿಮಾನಗಳು ತಡವಾಗಿ ಹಾರಾಟ ನಡೆಸಿದವು. ಬೇರೆ ನಿಲ್ದಾಣದಿಂದ ಬರಬೇಕಿದ್ದ 44 ವಿಮಾನಗಳು ತಡವಾಗಿ ಬಂದವು.

ಇನ್ನು ನಗರದ ನಿಲ್ದಾಣಕ್ಕೆ ಬರುತ್ತಿದ್ದ ಬ್ರಿಟಿಷ್‌ ಏರ್‌ವೇಸ್‌, ಬ್ಲೂಡಾರ್ಟ್‌ ವಿಮಾನವನ್ನು ಚೆನ್ನೈ ನಿಲ್ದಾಣಕ್ಕೆ ಹಾಗೂ ಇಂಡಿಗೊ ವಿಮಾನವನ್ನು ಹೈದರಾಬಾದ್‌ ನಿಲ್ದಾಣಕ್ಕೆ ಕಳುಹಿಸಲಾಯಿತು. ಮಧ್ಯಾಹ್ನವೇ ಆ ವಿಮಾನಗಳು ನಗರದ ನಿಲ್ದಾಣಕ್ಕೆ ಬಂದು ಸೇರಿದವು.

ನಿಗದಿತ ಸಮಯಕ್ಕಿಂತ ಹೆಚ್ಚಿಗೆ ತಡವಾಗಿದ್ದ ಇಂಡಿಗೊ ಕಂಪೆನಿಯ ಎಂಟು ವಿಮಾನ ಹಾರಾಟವನ್ನೇ ರದ್ದು ಮಾಡಲಾಯಿತು.

ಪ್ರಯಾಣಿಕರ ಅಸಮಾಧಾನ

ವಿಮಾನಗಳ ಹಾರಾಟ ತಡವಾಗಿದ್ದಕ್ಕೆ ಹಲವು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಅವನೀಶ್‌ ಸಿನ್ಹಾ ಹಾಗೂ ಅನುಪಮಾ ಸುಧಾಕರ್‌, ‘ಬೆಳಿಗ್ಗೆ 4.30 ಗಂಟೆಗೆ ನಿಲ್ದಾಣಕ್ಕೆ ಬಂದಿದ್ದೇವೆ. ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಎರಡು ಗಂಟೆಯಿಂದ ಕುಳಿತುಕೊಂಡಿದ್ದೇವೆ. ಸೀಟಿನಿಂದ ಎದ್ದು ಹೋಗಲು ಸಿಬ್ಬಂದಿ ಬಿಡುತ್ತಿಲ್ಲ’ ಎಂದಿದ್ದಾರೆ.

ಇನ್ನೊಬ್ಬ ಪ್ರಯಾಣಿಕ ರಾಬಾ, ‘ಮಂಜಿನಿಂದ ವಿಮಾನಗಳು ಹಾರುತ್ತಿಲ್ಲ. 2 ಗಂಟೆಯಿಂದ ವಿಮಾನದ ಸೀಟಿನಲ್ಲೇ ಕುಳಿತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT