ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕರ ವಿರುದ್ಧವೇ ಶ್ರೀನಿವಾಸ ಪ್ರಸಾದ್ ಗುಡುಗು

Last Updated 30 ಡಿಸೆಂಬರ್ 2017, 20:31 IST
ಅಕ್ಷರ ಗಾತ್ರ

ಮೈಸೂರು: ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಬಿಜೆಪಿ ವಕ್ತಾರ ಗೋ.ಮಧುಸೂದನ್ ಅವರು ಮತಾಂಧರು, ಅವಿವೇಕಿಗಳು ಎಂದು ಆ ಪಕ್ಷದ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಇಲ್ಲಿ ಶನಿವಾರ ವಾಗ್ದಾಳಿ ನಡೆಸಿದರು.

ಸಂವಿಧಾನದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅವಮಾನ ಮಾಡಿರುವ ಇಬ್ಬರಿಗೂ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಬೇಕು. ಇದೇ ತಪ್ಪು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಲು ನಮ್ಮಲ್ಲಿರುವ ಸಂವಿಧಾನವೇ ಕಾರಣ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನವೇ ಶ್ರೇಷ್ಠ ಗ್ರಂಥ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಐದು ಸಲ ಸಂಸದರಾಗಿ ಆಯ್ಕೆಯಾಗಿರುವ ಹೆಗಡೆಗೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಆಗದಿರುವುದು ನಾಚಿಕೆಗೇಡಿನ ಸಂಗತಿ’ ಟೀಕಿಸಿದರು.

‘ಸಚಿವ ಸ್ಥಾನದಲ್ಲಿ ಜವಾಬ್ದಾರಿಯಿಂದ ಇರಬೇಕಾದ ವ್ಯಕ್ತಿಗೆ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಇಲ್ಲವೇ? ಜಾತ್ಯತೀತತೆಯ ಅರ್ಥ ತಿಳಿದಿಲ್ಲವೇ? ಇವರ ಹೇಳಿಕೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟಿಸುವಂತಾಗಿದೆ’ ಎಂದು ಕಿಡಿಕಾರಿದರು.

‘ವಿಧಾನ ಪರಿಷತ್ ಸದಸ್ಯನಾಗಿದ್ದ ಗೋ.ಮಧುಸೂದನ್‌ಗೆ ಇನ್ನೂ ಬುದ್ದಿ ವಿಕಾಸವಾಗಿಲ್ಲ. ಸಂವಿಧಾನದ ಬಗ್ಗೆ ಅನವಶ್ಯಕವಾಗಿ ಮಾತನಾಡಿ, ಅದನ್ನು ಸಮರ್ಥಿಸಿಕೊಳ್ಳುವ ಆತನಿಗೆ ನಾಚಿಕೆಯಾಗಬೇಕು’ ಎಂದು ಗುಡುಗಿದರು.

ಪೇಜಾವರ ಸ್ವಾಮೀಜಿ ವಿರುದ್ಧ ಟೀಕೆ: ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಅಗೌರವದ ಮಾತುಗಳನ್ನಾಡಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿ, ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಸ್ವಾಮೀಜಿ ಆಡಿದ ಮಾತುಗಳು ಅಪ್ರಸ್ತುತವಾಗಿದ್ದವು ಎಂದರು.

‘ಅಷ್ಟಮಠದ ಮುಖಂಡರಲ್ಲಿ ನೀವೂ ಒಬ್ಬರು. ಸಂವಿಧಾನದ ಬಗ್ಗೆ ಏನು ತಿಳಿದುಕೊಂಡಿದ್ದೀರಾ? ನೀವು ದ್ವೈತ, ಅದ್ವೈತ ಮತ್ತು ನಿಮ್ಮ ಮಠದ ಬಗ್ಗೆ ಮಾತನಾಡಿದರೆ ಸಾಕು. ಈ ದೇಶದ ಇತಿಹಾಸವನ್ನು ಓದಿದ್ದೀರಾ?’ ಎಂದು ಕಿಡಿಕಾರಿದರು.

*

ರಾಜಕೀಯ ನಾಯಕರ ವೈಯಕ್ತಿಕ ಅಭಿಪ್ರಾಯವನ್ನು ಪಕ್ಷವು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. 

ವಿ.ಶ್ರೀನಿವಾಸಪ್ರಸಾದ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT