ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ಕಲುಷಿತ ನೀರು ಕಾಲುವೆಗೆ: ಆತಂಕ

ಕೆ.ಇ.ಆರ್ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ
Last Updated 31 ಡಿಸೆಂಬರ್ 2017, 9:48 IST
ಅಕ್ಷರ ಗಾತ್ರ

ಆಲಮೇಲ: ಇಲ್ಲಿನ ಕಡಣಿ ರಸ್ತೆಯಲ್ಲಿರುವ ಕೆ.ಪಿ.ಆರ್. ಸಕ್ಕರೆ ಕಾರ್ಖಾನೆಯಲ್ಲಿ ಬಳಕೆಯಾಗುತ್ತಿರುವ ಕಲುಷಿತ ನೀರನ್ನು  ಹೊಲಗಾಲುವೆಗೆ ಹರಿದು ಬಿಡುವ ಮೂಲಕ ಶುದ್ಧ ನೀರು ಮಲಿನ ಮಾಡುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ರೈತರು ಈ ಬಗ್ಗೆ ‘ಪ್ರಜಾವಾಣಿ’ ಗೆ ಖುದ್ದಾಗಿ ಮಾಹಿತಿ ನೀಡಿದ್ದಲ್ಲದೆ ಕಲುಷಿತ ನೀರು ಕಾಲುವೆ ಸೇರುವುದನ್ನು ಖಚಿತಪಡಿಸಿದರು. ಇದರಿಂದ ಜಾನುವಾರುಗಳ ಆರೋಗ್ಯ ಕೆಡುತ್ತಿದೆ ಎಂದು ದೂರಿದ ರೈತರು ಈ ವಿಷಯವನ್ನು ಕಾರ್ಖಾನೆಗೆ ತಿಳಿಸಿದರೂ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನಿಂಗನಗೌಡ ಪಾಟೀಲ ತಿಳಿಸಿದರು.

ಯುಕೆಪಿ ಯೋಜನಯ 16ನೇ ವಿತರಣಾ ಕಾಲುವೆಯ ಶಾಖಾಧಿಕಾರಿ ಸಂತೋಷ ದಾಯಿಗೋಡೆ ಅವರನ್ನು ಸಂಪರ್ಕಿಸಿದಾಗ ಕಾರ್ಖಾನೆಯ ಬಲಭಾಗದಲ್ಲಿ ಲ್ಯಾಟ್ರಿನ್ ಆರ್–4 ಹೊಲಗಾಲುವೆ ಹಾದು ಕಾರ್ಖಾನೆಯ ಒಳಕ್ಕೂ ಹೋಗುತ್ತದೆ. ಈ ಹಂತದಲ್ಲಿ ನೀರು ಸೇರುತ್ತದೆ. ಇದು ನಮ್ಮ ಗಮನಕ್ಕೂ ಬಂದಿದೆ. ಈ ಕುರಿತು ಕಾರ್ಖಾನೆಯ ಅಧಿಕಾರಿಗಳಿಗೆ ಈ ಮುಂಚೆ ನೋಟಿಸ್‌ ನೀಡಲಾಗಿತ್ತು. ಹೀಗೆ ಹರಿದು ಬಿಡುವುದು ನಿಗಮ ವಿರೋಧಿ ಚಟುವಟಿಕೆ ಎಂದರು.

ಸಾವಿರಾರು ಎಕರೆಯ ಬೆಳೆಗೆ ರೈತರು ಕಾಲುವೆ ನೀರನ್ನು ನಂಬಿಕೊಂಡಿದ್ದಾರೆ. ಅಂಥವುದರಲ್ಲಿ ಈ ರೀತಿ ನೀರು ಮಲಿನ ಮಾಡುವುದು ಸರಿಯಲ್ಲ ಎಂದು ವಿಶ್ವನಾಥ ಕಲ್ಲೂರು ಹೇಳಿದರು.

ಅಪಾಯಕಾರಿ ನೀರು: ಕೃಷ್ಣಾನದಿ ನೀರು ಕಾಲುವೆ ಮೂಲಕ ಆಲಮೇಲ ಸುತ್ತಲಿನ ಹಳ್ಳಿಗಳಿಗೂ ಹರಿದು ಬರುತ್ತಿದೆ. ಈ ಮಧ್ಯೆ ಕಾರ್ಖಾನೆಗಳು ಬಳಿಸಿದ ನೀರು (ತಾಜ್ಯ, ನಿರುಪಯುಕ್ತ) ಸೇರಿಕೊಂಡು ಮಲಿನಗೊಂಡು ನೀರನ್ನು ಹೀಗೆ ಬೇಕಾಬಿಟ್ಟಿಯಾಗಿ ಹರಿದುಬಿಡಲಾಗುತ್ತದೆ. ಗಬ್ಬು ವಾಸನೆಯಿಂದ ಈ ಪ್ರದೇಶದಲ್ಲಿ ಬದುಕುವುದಕ್ಕೂ ಸಾಧ್ಯವಿಲ್ಲ ಎನ್ನುತ್ತಾರೆ ತೋಟದ ನಿವಾಸಿಗಳು.

ನಮ್ಮ ಕಾರ್ಖಾನೆಗೆ ಭೀಮಾನದಿಯಿಂದ ನೀರು ತರಲಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ನೀರು ಶುದ್ದೀಕರಣ ಪ್ರಮಾಣ ಶೇ 7ರಷ್ಟಿದೆ. ನಾವು ಯಾವೊತ್ತಿಗೂ ಹೊಲಗಾಲುವೆಗೆ ನೀರುಬಿಟ್ಟಿಲ್ಲ. ಆದರೆ ಕೆಲ ರೈತರ ಮನವಿ ಮೇರೆಗೆ ನೀರು ಕೊಡಲಾಗುತ್ತಿದ್ದು, ಆ ನೀರನ್ನು ಶುದ್ದೀಕರಣಗೊಳಿಸುವ ಪ್ರಕ್ರಿಯೆ ಮೂಲಕವೇ ಕೊಡಲಾಗುತ್ತಿದೆ. ಬೆಳೆಗೆ ಯಾವುದೇ ಹಾನಿಯಾಗಲು ಸಾಧ್ಯವಿಲ್ಲ. ನೀರಿನ ಶುದ್ಧತೆಯ ಪ್ರಮಾಣ ಶೇ6 ಕ್ಕಿಂತ ಕಡಿಮೆಯಿದ್ದಲ್ಲಿ ಬೆಳೆಹಾನಿ ಆಗಬಹುದು. ಈವರೆಗೂ ಅಂತಹ ತೊಂದರೆ ಆಗಿಲ್ಲ ಎಂದು ಕಾರ್ಖಾನೆ ಅಧಿಕಾರಿ ಎ.ಎಂ.ಚೌಧರಿ ಹೇಳುತ್ತಾರೆ.

ಈ ನೀರಿನ ಗುಣಮಟ್ಟದ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಸ್ಪಷ್ಟತೆ ನೀಡಬೇಕಿದೆ. ರೈತರಲ್ಲಿ ಮೂಡಿದ ಆತಂಕವನ್ನು ಅಧಿಕಾರಿಗಳು ಅರಿಯಬೇಕಿದೆ.

ಡಾ.ರಮೇಶ ಎಸ್.ಕತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT