ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ದೇವಸ್ಥಾನ ಅನೈತಿಕ ಚಟುವಟಿಕೆಯ ತಾಣ

Last Updated 31 ಡಿಸೆಂಬರ್ 2017, 10:28 IST
ಅಕ್ಷರ ಗಾತ್ರ

ಡಂಬಳ: ಪ್ರವಾಸಿಗರಿಗೆ ಡಂಬಳ ಗ್ರಾಮದ ಇತಿಹಾಸ, ಪರಂಪರೆ ಬಗ್ಗೆ ಬೆಳಕು ಚೆಲ್ಲಬೇಕಾದ ಪ್ರಾಚೀನ ದೇವಸ್ಥಾನಗಳು, ಶಿಲ್ಪಕಲೆಗಳು ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಇಲ್ಲಿನ ಸ್ಮಾರಕಗಳು ಕಾಲಗರ್ಭ ಸೇರುತ್ತಿವೆ.

ಗ್ರಾಮದ ಜಪದಬಾವಿಯಿಂದ ಸಮೀಪದಲ್ಲಿರುವ ಸಿದ್ದೇಶ್ವರ ದೇವಾಲಯ ಗರ್ಭಗೃಹ, ಅಂತರಾಳ, ನೃತ್ಯ ಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಎರಡು ಅಡಿ ಎತ್ತರದ ಸುಂದರವಾದ ಶಿವಲಿಂಗದ ಮೂರ್ತಿ ಇದೆ. ದೇವಸ್ಥಾನದ ಮಧ್ಯದಲ್ಲಿ ಭುವನೇಶ್ವರಿ, ದ್ವಾರ ಬಂಧನವಿದೆ. ಅಂತರಾಳದಲ್ಲಿ ನಂದಿ ಶಿಲ್ಪ, ನೃತ್ಯಮಂಟಪದಲ್ಲಿ ಸಾಣಿ ಹಿಡಿದ ಹೊಳಪುಳ್ಳು ನಾಲ್ಕು ಕಂಬಗಳಿವೆ. ಮಧ್ಯದಲ್ಲಿ 12ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ನೃತ್ಯಮಂಟಪ ಹಲವು ವಿಶೇಷತೆಗಳನ್ನು ಹೊಂದಿದೆ.

‘ದೇವಸ್ಥಾನ ಅಳಿವಿನ ಅಂಚಿನಲ್ಲಿದೆ. ದೇವಸ್ಥಾನದ ಗೋಡೆಯ ಮೇಲೆ ಹುಲ್ಲು ಬೆಳೆದು ನಿಂತಿದೆ. ಕೆಲವು ಭಾಗ ಕುಸಿದಿದೆ. ಇಲ್ಲಿ ಹಗಲು ಮತ್ತು ರಾತ್ರಿ ಕುಡಕರ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯ ಪುಂಡ ಪೋಕರಿಗಳು ಜೂಜಾಟವಾಡುತ್ತಾರೆ. ಐತಿಹಾಸಿಕ ತಾಣ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು, ಪುರಾತತ್ವ ಇಲಾಖೆಯ ಅಧಿಕಾರಿಗಳ ದಿವ್ಯನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ಗ್ರಾಮದ ಮಂಜುನಾಥ ಸಂಜೀವಣ್ಣನವರ ಮತ್ತು ಮಂಜುನಾಥ ಅರವಟಿಗಿಮಠ ಆರೋಪಿಸಿದರು.

‘ಪುರಾತತ್ವ ಇಲಾಖೆಯು ದೊಡ್ಡ ಬಸವೇಶ್ವರ, ಸೋಮೇಶ್ವರ ದೇವಸ್ಥಾನವನ್ನು ಮಾತ್ರ ಅಭಿವೃದ್ಧಿ ಮಾಡುತ್ತದೆ. ಜತೆಗೆ ಅವಸಾನದ ಅಂಚಿನಲ್ಲಿರುವ ಕಲ್ಲೇಶ್ವರ ದೇವಸ್ಥಾನ, ಜಪದ ಬಾವಿ ಹಾಗೂ ಸ್ಮಾರಕಗಳು, ಶಿಲ್ಪಕಲೆಗಳನ್ನು ರಕ್ಷಣೆ ಮಾಡಬೇಕು. ವಿಕ್ಟೋರಿಯಾ ಮಹಾರಾಣಿ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸಬೇಕು. ವಿವಿಧ ಜಿಲ್ಲೆಗಳಿಂದ ಭೇಟಿ ನೀಡುವ ಪ್ರವಾಸಿಗರಿಗೆ ಗ್ರಾಮದ ಇತಿಹಾಸವನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂದು ಶಿಕ್ಷಕ ರಮೇಶ ಕೊರ್ಲಹಳ್ಳಿ, ಟಿ.ಬಸೀರಅಹ್ಮದ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT