ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಸೀಟ್‌ ಸೌಂದರ್ಯಕ್ಕೆ ಧಕ್ಕೆ

ಕಿಡಿಗೇಡಿಗಳ ಕೃತ್ಯ, ಬೆಂಕಿಯಿಂದ ಪರಿಸರಕ್ಕೆ ಹಾನಿ
Last Updated 31 ಡಿಸೆಂಬರ್ 2017, 11:20 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಪ್ರವಾಸಿ ತಾಣವೆಂದರೆ ಮೊದಲು ನೆನಪಿಗೆ ಬರುವುದು ರಾಜಾಸೀಟ್‌. ಆದರೆ, ಈಚೆಗೆ ಅಲ್ಲಿ ಕಿಡಿಗೇಡಿಗಳ ಕೃತ್ಯ ಹೆಚ್ಚಾಗಿ ಸೌಂದರ್ಯಕ್ಕ ಧಕ್ಕೆ ಉಂಟಾಗುತ್ತಿದೆ.

ಕ್ರಿಸ್‌ಮಸ್ ರಜೆ ಹಾಗೂ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದು ರಾಜಾಸೀಟ್‌ನ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸುತ್ತಿದ್ದಾರೆ. ರಾಜಾಸೀಟ್ ಉದ್ಯಾನ ಸ್ವಚ್ಛತೆ ಇಲ್ಲದೇ ತನ್ನ ಅಂದವನ್ನೇ ಕಳೆದುಕೊಂಡಿದೆ.

ರಾಜಾಸೀಟ್‌ಗೆ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಿದೆ. ಉದ್ಯಾನದಲ್ಲಿ ಕಸ ಹಾಕಬಾರದು ಎಂಬ ಬೋರ್ಡ್‌ ಇದ್ದರೂ ಪ್ರವಾಸಿಗರು ಕಸ, ನೀರಿನ ಬಾಟಲ್‌ ಎಸೆದು ಹೋಗುತ್ತಿದ್ದಾರೆ. ಉದ್ಯಾನ ಒಳಗಿರುವ ಶೌಚಾಲಯದಲ್ಲಿ ಶುಚಿತ್ವದ ಕೊರತೆಯಿದೆ.

ಮೋಜಿನ ತಾಣ: ಇಲ್ಲಿರುವ ಉದ್ಯಾನವು ಇತ್ತೀಚೆಗೆ ಅಂದ ಕಳೆದುಕೊಂಡಿದೆ. ಇಷ್ಟು ದಿವಸ ರಾಜಾಸೀಟ್‌ಗೆ ಹೊಂದಿಕೊಂಡಂತೆ 15 ಎಕರೆ ಅರಣ್ಯವಿತ್ತು. ಚಳಿಗಾಲದಲ್ಲಿ ತನ್ನ ಸೌಂದರ್ಯ ಇಮ್ಮಡಿ ಮಾಡಿಕೊಂಡಿತ್ತು. ಆದರೆ, ಈಚೆಗೆ ಕಿಡಿಗೇಡಿಗಳ ಸಿಗರೇಟ್‌ ಕಿಡಿಗೆ ಸುಮಾರು 10 ಎಕರೆಯಷ್ಟು ಅರಣ್ಯ ಭಸ್ಮವಾಗಿದೆ. ಹೀಗಾಗಿ ಎಲ್ಲಿ ನೋಡಿದರೂ ಬೆಂದು ಹೋದ ಮರಗಳು, ಬೋಳಾದ ಪೊದೆಯ ದರ್ಶನವಾಗುತ್ತಿದೆ. ಕಳೆದ ಒಂದುವಾರದಿಂದ ಅಪಾರ ಸಂಖ್ಯೆಯ ಪ್ರವಾಸಿಗರು ನಗರಕ್ಕೆ ಬರುತ್ತಿದ್ದು ಬೇಸರ ವ್ಯಕ್ತಪಡಿಸುತ್ತಾ ವಾಪಸ್‌ ತೆರಳುತ್ತಿದ್ದಾರೆ.

ಬೆಟ್ಟಕ್ಕೆ ಕಾವಲುಗಾರರು ಇಲ್ಲ: ಉದ್ಯಾನಕ್ಕೆ ಮಾತ್ರ ಕಾವಲುಗಾರರನ್ನು ನೇಮಿಸಲಾಗಿದೆ. ಆದರೆ, ಬೆಟ್ಟ ಪ್ರದೇಶವು ಅರಣ್ಯ ಇಲಾಖೆಗೆ ಸೇರುವ ಕಾರಣ ಅವರೂ ಅತ್ತಕಡೆ ಹೋಗುವುದಿಲ್ಲ ಎಂಬ ಆರೋಪವಿದೆ.

ಕಿಡಿಗೇಡಿಗಳು ಅಲ್ಲಿಗೆ ತೆರಳಿ ಮದ್ಯ ಸೇವಿಸುವುದು, ಸಿಗರೇಟು ಸೇದುವುದು ಸಾಮಾನ್ಯವಾಗಿದೆ.

ಉದ್ಯಾನದಲ್ಲಿ ಏನೂ ಇಲ್ಲ: ಇದು ಹೆಸರಿಗಷ್ಟೇ ಉದ್ಯಾನ. ಆದರೆ, ಹೊಗಳುವಂತಹ ವ್ಯವಸ್ಥೆ ಇಲ್ಲ. ಸಂಗೀತ ಕಾರಂಜಿ ಕೆಟ್ಟು ನಿಂತು ಎರಡು ವರ್ಷವಾದರೂ ಅದನ್ನು ದುರಸ್ತಿ ಪಡಿಸಿಲ್ಲ. ಹಿಂದಿನ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಅವರು ದಸರಾದ ಒಳಗೆ ಕಾರಂಜಿ ದುರಸ್ತಿಗೆ ಪ್ರವಾಸೋದ್ಯಮ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಗಡುವು ಮುಗಿದು ಎರಡು ತಿಂಗಳಾದರೂ ಅದನ್ನು ದುರಸ್ತಿ ಮಾಡಿಸಿಲ್ಲ ಎಂದು ನಾಗರಿಕರು ದೂರುತ್ತಾರೆ.

‘ರಾಜಾಸೀಟ್‌ ಕಳೆಗುಂದಿದೆ. ನಿರ್ವಹಣೆಯ ಸಮಸ್ಯೆ ಕಾಣಿಸುತ್ತಿದೆ. ಕೊಡಗಿನ ಪ್ರವಾಸಿತಾಣದ ವೆಬ್‌ಸೈಟ್‌ನಲ್ಲಿ ನೋಡಿದ ಚಿತ್ರಗಳಿಗೂ ಈ ಚಿತ್ರಕ್ಕೂ ಬಹಳಷ್ಟು ವ್ಯತ್ಯಾಸ ಕಾಣಿಸುತ್ತಿದೆ. ಬೆಂಗಳೂರಿನ ಲಾಲ್‌ಬಾಗ್‌ನಂತೆ ಉದ್ಯಾನ ಅಭಿವೃದ್ಧಿ ಪಡಿಸಬೇಕು’ ಎಂದು ಹೊಸ ವರ್ಷದ ಸಂಭ್ರಮಾಚರಣೆಗೆ ಕೊಡಗಿಗೆ ಬಂದಿರುವ ವಿನೋದ್‌ ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT