ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ, ಕೆಜಿಎಫ್‌ನಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚು

ಸಾರ್ವಜನಿಕ ಸಭೆಯಲ್ಲಿ ಆರೋಗ್ಯ ಸಚಿವ ರಮೇಶ್‌ ಕುಮಾರ್
Last Updated 31 ಡಿಸೆಂಬರ್ 2017, 11:28 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ಬಂಗಾರಪೇಟೆ ಮತ್ತು ಕೆಜಿಎಫ್ ಭಾಗದಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಾಗಿದೆ. ಕೆಜಿಎಫ್‌ನಲ್ಲಿ ದೇಶದಲ್ಲಿ ಇರುವ ಎಲ್ಲ ಪಕ್ಷಗಳ ಶಾಖೆಯೂ ಇದೆ ಎಂದು ಸಚಿವ ರಮೇಶ್‌ಕುಮಾರ್ ಹೇಳಿದರು.

ಪಟ್ಟಣದ ಕಿರಿಯ ಕಾಲೇಜು ಮೈದಾನದಲ್ಲಿ ಶನಿವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಮುಖಂಡರು ಇತರರಿಗೆ ಮಾದರಿಯಾಗಬೇಕು. ನಮ್ಮನ್ನು ನೋಡಿ ಜನ ನಗಬಾರದು’ ಎಂದರು.

‘ಜನವರಿ 27 ರಿಂದ ಕೆಜಿಎಫ್ ಹೊಸ ತಾಲ್ಲೂಕು ರಚನೆಯಾಗುತ್ತದೆ. ಕೆಜಿಎಫ್ ಸೇರಿದಂತೆ ರಾಜ್ಯದಲ್ಲಿ ಐವತ್ತು ತಾಲ್ಲೂಕು ರಚನೆಯನ್ನು ಸರ್ಕಾರ ಮಾಡಲಿದೆ. ಈಗಾಗಲೇ ರಾಜ್ಯ ಪತ್ರ ಹೊರಡಿಸಿದ್ದು, ಆಕ್ಷೇಪಣೆಗೆ ಒಂದು ತಿಂಗಳ ಕಾಲಾವಕಾಶ ಬೇಕಾಗಿದೆ. ಆದ್ದರಿಂದ ತಾಲ್ಲೂಕು ರಚನೆ ಕೊಂಚ ವಿಳಂಬವಾಯಿತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಸ್ಮಾರಕಕ್ಕೆ ಈಗಾಗಲೇ ₹ 2 ಕೋಟಿ ಬಿಡುಗಡೆ ಮಾಡಲಾಗಿದೆ. ಅವಶ್ಯಕತೆ ಇರುವ ಇನ್ನೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಕೆ.ಸಿ.ರೆಡ್ಡಿಯವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಲಾಗುವುದು. ಬಂಗಾರಪೇಟೆಯಲ್ಲಿ ಇಂದಿರಾ ಕ್ಯಾಂಟೀನ್‌ ಜನವರಿ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ’ ಎಂದರು.

‘ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಸರ್ಕಾರದ ಅನುದಾನವನ್ನು ತರುವಲ್ಲಿ ನಿಸ್ಸೀಮ. ಅಭಿವೃದ್ಧಿ ಕೆಲಸ ಮಾಡುವಲ್ಲಿ ಹೆಚ್ಚು ಬದ್ದತೆ ತೋರಿಸಿದ್ದಾರೆ. ಜನರ ಮುಂದೆ ಸುಳ್ಳು ಹೇಳದೆ, ಮಾಡಿರುವ ಕೆಲಸವನ್ನು ತಿಳಿಸಿ. ಜನ ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾರೆ’ ಎಂದರು.

‘ಚೆಕ್ ಮೂಲಕ ಲಂಚ ಪಡೆದ ಯಡಿಯೂರಪ್ಪ, ಕೃಷ್ಣಯ್ಯಶೆಟ್ಟಿ, ಕಟ್ಟಾಸುಬ್ರಹ್ಮಣ್ಯ ನಾಯ್ಡುರವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಸಿದ್ಧರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಹೇಳುತ್ತಾರೆ. ನಮ್ಮದು ಹಗರಣ ಮುಕ್ತ ಸರ್ಕಾರ. ಚರ್ಚೆ ಮಾಡಲು ಒಂದೇ ವೇದಿಕೆಗೆ ದಾಖಲೆ ಸಮೇತ ಬನ್ನಿ ಎಂದರೆ ಯಡಿಯೂರಪ್ಪ ಉಸಿರೆತ್ತುತ್ತಿಲ್ಲ’ ಎಂದು ಆರೋಪಿಸಿದರು.

‘ಜೆಡಿಎಸ್‌ಗೆ ರಾಜ್ಯದಲ್ಲಿ 25 ಸೀಟ್ ಬರೊಲ್ಲ. ಅವರು ಯಾವುದೇ ಪಕ್ಷಕ್ಕೆ ಬಹುಮತ ಬಾರದೆ ಇರಲಿ ಎಂದು ಆಶಿಸುತ್ತಿದ್ದಾರೆ. ಅವರದ್ದು ಜಾತ್ಯತೀತ ಪಕ್ಷ ಅಲ್ಲ. ಅವರದ್ದು ಅವಕಾಶ ರಾಜಕಾರಣ’ ಎಂದು ಟೀಕಿಸಿದರು.

‘ಅವಿಭಜಿತ ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಸಿದ್ಧರಾಮಯ್ಯ ಸರ್ಕಾರ ಯಾರೂ ನೀಡದಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದರು.

ಶಾಸಕ ಎಸ್‌.ಎನ್.ನಾರಾಯಣ ಸ್ವಾಮಿ, ವೇದಿಕೆಯಲ್ಲಿ ಮುಖಂಡರಾದ ಸುದರ್ಶನ್‌, ದಳಸನೂರು ಗೋಪಾಲಕೃಷ್ಣ, ಕೆ.ಚಂದ್ರಾರೆಡ್ಡಿ, ಅನಿಲ್‌ಕುಮಾರ್‌, ಭಾಗ್ಯಲಕ್ಷ್ಮೀ, ಜಮೀರ್ ಪಾಷ, ಎನ್‌.ಶ್ರೀನಿವಾಸ್‌, ಶಾಹಿದ್‌, ರಮೇಶ್‌, ಆರೋಕ್ಯರಾಜನ್‌, ಜಿಲ್ಲಾಧಿಕಾರಿ ಜಿ.ಸತ್ಯವತಿ,ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT