ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರರ ಸಂಭ್ರಮದಲ್ಲಿ ಶಾಂತಮ್ಮ ಮೆತ್ತನೋರ್‌

ಗುರುಗುಂಟಾದ ಅಮರೇಶ್ವರ ದೇವರ ಅರ್ಚಕ ಕುಟುಂಬದಲ್ಲಿ 76 ಸದಸ್ಯರು
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಯರಡೋಣದ ಶಾಂತಮ್ಮ ಸಿದ್ದಯ್ಯಸ್ವಾಮಿ ಮೆತ್ತನೋರ್‌ ಅವರಿಗೆ ನೂರು ವರ್ಷಗಳು ತುಂಬಿದ್ದು, ಕುಟುಂಬ ಸದಸ್ಯರಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಕುಟುಂಬ ಗುರುಗುಂಟಾದ ಅಮರೇಶ್ವರ ದೇವರ ಅರ್ಚಕ ಕುಟುಂಬಗಳಲ್ಲಿ ಪ್ರಮುಖವಾಗಿದೆ.

ಯರಡೋಣಿ ಕ್ರಾಸ್‌ನ ಸಿದ್ಧರಾಮೇಶ್ವರ ಗುರುಮಠದ ಪೀಠಾಧಿಪತಿ ಮುರುಘೇಂದ್ರ ಸ್ವಾಮೀಜಿ ಅವರ ಅಜ್ಜಿ(ತಾಯಿಯ ತಾಯಿ) ಹಾಗೂ ವೈದ್ಯ ಡಾ.ಶಿವಮೂರ್ತಿಸ್ವಾಮಿ ಮೆತ್ತನೋರ್‌ ತಾಯಿ ಶಾಂತಮ್ಮ ಅವರಿಗೆ ನೂರು ವರ್ಷ ತುಂಬಿದ್ದರಿಂದ ಸಿದ್ಧರಾಮೇಶ್ವರ ಗುರುಮಠದಲ್ಲಿ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮ ಕ್ಕಳು, ಗಿರಿಮೊಮ್ಮಕ್ಕಳು ಸೇರಿ 76 ಕುಟುಂಬ ಸದಸ್ಯರು ಒಟ್ಟಾಗಿ ಖುಷಿ ಹಂಚಿಕೊಂಡರು.

ಶಾಂತಮ್ಮ ಸಿದ್ದಯ್ಯಸ್ವಾಮಿ ದಂಪತಿಗೆ ವಿರಾತಯ್ಯಸ್ವಾಮಿ, ಡಾ.ಶಿವಮೂರ್ತಿಸ್ವಾಮಿ, ಗುರುಮೂರ್ತಿ ಸ್ವಾಮಿ ಹಾಗೂ ಅಮರಗುಂಡಮ್ಮ, ಈರಮ್ಮ, ಶರಣಮ್ಮ, ಕಾಮಾಕ್ಷಿ ಒಟ್ಟು 7 ಮಕ್ಕಳು. ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿರುವಾಗಲೆ ಸಿದ್ದಯ್ಯಸ್ವಾಮಿ ಮೆತ್ತನೋರ್‌ ನಿಧನ ರಾದರು. ಅಮರೇಶ್ವರದ ಪೂಜೆ ಕೈಂಕರ್ಯ ಜತೆಗೆ ಕೃಷಿ ಚಟುವಟಿಕೆಗಳ ಸಾರಥ್ಯ ಶಾಂತಮ್ಮ ನಿರ್ವಹಿಸುತ್ತ ಬಂದರು.

ಶಾಂತಮ್ಮ ಅವರಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು. 35 ಮೊಮ್ಮಕ್ಕಳು(12 ಗಂಡು, 23 ಹೆಣ್ಣು), 33 ಮರಿಮೊಮ್ಮಕ್ಕಳು(14 ಗಂಡು, 19 ಹೆಣ್ಣು ), ಒಂದು ಗಂಡು, ಒಂದು ಹೆಣ್ಣು ಗಿರಿಮೊಮ್ಮಕ್ಕಳಿದ್ದಾರೆ. ಇವರೆಲ್ಲ ಸೇರಿದರೆ ಕುಟುಂಬದ ಸದಸ್ಯರ ಸಂಖ್ಯೆ 76 ಆಗುತ್ತದೆ. ವೃದ್ಧರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವ ಈ ದಿನಗಳಲ್ಲಿ ಮೆತ್ತನೋರ್‌ ಕುಟುಂಬದವರು ಶತಾ ಯುಷಿ ಅಜ್ಜಿಯನ್ನು ಮಮತೆಯಿಂದ ನೋಡಿಕೊಳ್ಳುತ್ತಿದ್ದಾರೆ.

ಶತಾಯುಷಿ ಶಾಂತಮ್ಮ ಮೆತ್ತನೋರ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ರಜಾಕಾರರ ಹಾವಳಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮ ಎಲ್ಲ ನೋಡಿ ಬೆಳೆದಿರುವೆ. ಆದರೆ, ಕೃಷಿ ಕುಟುಂಬವಾಗಿದ್ದರಿಂದ ಜಮೀನಿನಲ್ಲಿ ಕೆಲಸ ಮಾಡಿ, ಅಮರೇಶ್ವರ ಅರ್ಚಕ ಕೆಲಸಗಳೊಂದಿಗೆ ಮಕ್ಕಳಿಗೆ, ಮೊಮ್ಮಕ್ಕಳಿಗೆ ಶಿಕ್ಷಣ ಕೊಡಿಸುತ್ತ ಬಂದೆ. ನಿತ್ಯ ಮಿತ ಆಹಾರ ಸೇವನೆ ಶತಾಯುಷ್ಯಕ್ಕೆ ತಂದಿದೆ’ ಎಂದು ಹರ್ಷ ಹಂಚಿಕೊಂಡರು.

ಯರಡೋಣಕ್ರಾಸ್‌ ಸಿದ್ಧರಾಮೇಶ್ವರ ಗುರುಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ನನ್ನ ಪೂರ್ವಾ ಶ್ರಮದ ತಾಯಿಯ ತಾಯಿ ಶಾಂತಮ್ಮ ಅವರಿಗೆ ನೂರು ವರ್ಷ ತುಂಬಿದೆ. ಇನ್ನೂ ಆರೋಗ್ಯವಾಗಿರೋದು ನಮಗೆಲ್ಲ ಮಾದರಿ. ಈ ವಯಸ್ಸಿನಲ್ಲಿ ಕಣ್ಣು, ಕಿವಿ ಚುರುಕಾಗಿವೆ. ಚೆನ್ನಾಗಿ ನಡೆದಾಡ ಬಲ್ಲರು’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT