ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರೆಯಾಯಿತೇ ವೇಳಾಪಟ್ಟಿ..?

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಾನು ಮನುಷ್ಯ. ರೋಬೊ ಅಲ್ಲ. ನಿರಂತರವಾಗಿ ‍ಪಂದ್ಯಗಳನ್ನು ಆಡಲು ಆಗುವುದಿಲ್ಲ. ನನಗೂ ದಣಿವಾಗುತ್ತದೆ. ದೇಹ ವಿಶ್ರಾಂತಿ ಬಯಸುತ್ತದೆ..’

ಇತ್ತೀಚಿಗೆ ನಡೆದಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಹೀಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದು ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಬ್ಯಾಡ್ಮಿಂಟನ್‌ ರಂಗದಲ್ಲೂ ಈಗ ವೇಳಾಪಟ್ಟಿ ಕುರಿತ ಅಸಮಾಧಾನದ ಕಿಡಿ ಹೊತ್ತಿದೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 15 ಸ್ಥಾನ ಹೊಂದಿರುವ ಸಿಂಗಲ್ಸ್‌ ಮತ್ತು ಅಗ್ರ 10 ಸ್ಥಾನ ಹೊಂದಿರುವ ಡಬಲ್ಸ್‌ ವಿಭಾಗದ ಆಟಗಾರರು ಮತ್ತು ಆಟಗಾರ್ತಿಯರು 2018ರಲ್ಲಿ ನಡೆಯುವ ಟೂರ್ನಿಗಳ ಪೈಕಿ ಕನಿಷ್ಠ 12ರಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಹೇಳಿದೆ. ಇಲ್ಲವಾದಲ್ಲಿ ಕ್ರೀಡಾಪಟುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಬಿಡಬ್ಲ್ಯುಎಫ್‌ನ ಈ ನಿರ್ಧಾರಕ್ಕೆ ಭಾರತದ ಸೈನಾ ನೆಹ್ವಾಲ್‌, ಸ್ಪೇನ್‌ನ ಕ್ಯಾರೋಲಿನಾ ಮರಿನ್‌, ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸಲ್‌ಸನ್‌ ಸೇರಿದಂತೆ ಹಲವು ಕ್ರೀಡಾಪಟುಗಳು ಮತ್ತು ಕೋಚ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘2018ರ ವೇಳಾಪಟ್ಟಿ ಕ್ರೀಡಾಪಟುಗಳಿಗೆ ಹೊರೆಯಾಗುವಂತಿದೆ. ಸದ್ಯ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ (ಪಿಬಿಎಲ್‌) ಆಡುತ್ತಿರುವ ನಾವು ಇದು ಮುಗಿದ ಕೂಡಲೇ ಸತತವಾಗಿ ಮೂರು ಪ್ರಮುಖ ಟೂರ್ನಿಗಳಲ್ಲಿ ಭಾಗವಹಿಸಬೇಕು. ಈಗಿನ ವೇಳಾಪಟ್ಟಿಯನ್ನು ನೋಡಿದರೆ ಆಲ್‌ ಇಂಗ್ಲೆಂಡ್‌ ಓಪನ್‌, ವಿಶ್ವ ಚಾಂಪಿಯನ್‌ಷಿಪ್‌ನಂತಹ ಮಹತ್ವದ ಟೂರ್ನಿಗಳಲ್ಲಿ ಸೂಕ್ತ ತಯಾರಿ ಇಲ್ಲದೆಯೇ ಕಣಕ್ಕಿಳಿಯುವುದು ಅನಿವಾರ್ಯವಾಗಬಹುದು. ಹೀಗಾದಲ್ಲಿ ಖಂಡಿತವಾಗಿಯೂ ಗುಣಮಟ್ಟದ ಸಾಮರ್ಥ್ಯ ತೋರಲು ಆಗುವುದಿಲ್ಲ’ ಎಂದು ಮರಿನ್‌ ಹೇಳಿದ್ದರು.

ಸೈನಾ ಕೂಡ ಇದಕ್ಕೆ ದನಿಗೂಡಿಸಿರುವುದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಿಡಬ್ಲ್ಯುಎಫ್‌ನ ಈ ನಿರ್ಧಾರದ ಹಿಂದಿನ ಉದ್ದೇಶ ಏನು ಎಂಬುದನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ವಾಹಿನಿಗಳ ಒತ್ತಡಕ್ಕೆ ಮಣಿದಿದೆಯೇ ಬಿಡಬ್ಲ್ಯುಎಫ್‌?

ಬ್ಯಾಡ್ಮಿಂಟನ್‌ ಟೂರ್ನಿಗಳ ಪ್ರಸಾರದ ಹಕ್ಕು ಖರೀದಿಸಿರುವ ಕೆಲ ಕ್ರೀಡಾ ವಾಹಿನಿಗಳ ಒತ್ತಡಕ್ಕೆ ಮಣಿದು ಬಿಡಬ್ಲ್ಯುಎಫ್‌ ಟೂರ್ನಿಗಳ ಸ್ವರೂಪದಲ್ಲಿ ಬದಲಾವಣೆ ಮಾಡಿದೆ. ಜೊತೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಿ ಅವುಗಳನ್ನು ಕ್ರೀಡಾಪಟುಗಳ ಮೇಲೆ ಹೇರಲು ಮುಂದಾಗುತ್ತಿದೆ ಎನ್ನಲಾಗಿದೆ.

ಈ ಮೊದಲು ಕ್ರೀಡಾಪಟುಗಳು ವರ್ಷದಲ್ಲಿ ಇಂತಿಷ್ಟು ಟೂರ್ನಿಗಳಲ್ಲಿ ಆಡಲೇಬೇಕು ಎಂಬ ಕಡ್ಡಾಯ ನಿಯಮವೇನೂ ಇರಲಿಲ್ಲ. ಹೀಗಾಗಿ ಪ್ರಮುಖ ತಾರೆಯರು ಆಲ್‌ ಇಂಗ್ಲೆಂಡ್‌, ವಿಶ್ವ ಚಾಂಪಿಯನ್‌ಷಿಪ್‌ನಂತಹ ಮಹತ್ವದ ಟೂರ್ನಿಗಳಿಗೂ ಮುನ್ನ ವಿಶೇಷ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಕೆಲ ಟೂರ್ನಿಗಳಿಗೆ ಗೈರಾಗುತ್ತಿದ್ದರು. ಅಂತಹ ಟೂರ್ನಿಗಳ ಟಿ.ವಿ. ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿತ್ತು. ಜೊತೆಗೆ ಕ್ರೀಡಾಂಗಣಗಳೂ ಪ್ರೇಕ್ಷಕರಿಲ್ಲದೆ ಬಿಕೊ ಎನ್ನುತ್ತಿದ್ದವು. ಈ ಕಾರಣದಿಂದಾಗಿ ಹಿಂದೆ ಜಾಹೀರಾತು ಸೇರಿದಂತೆ ಇತರ ಮೂಲಗಳಿಂದ ಬರುತ್ತಿದ್ದ ಆದಾಯವೂ ಕುಸಿದಿತ್ತು. ಇದರಿಂದ ಕಂಗಾಲಾಗಿದ್ದ ವಾಹಿನಿಗಳು ಬಿಡಬ್ಲ್ಯುಎಫ್‌ ಮೇಲೆ ಒತ್ತಡ ಹೇರಿ ಹೊಸ ಪದ್ದತಿ ಅನುಷ್ಠಾನಗೊಳ್ಳುವಂತೆ ನೋಡಿಕೊಂಡಿವೆ ಎಂದೂ ಹೇಳಲಾಗುತ್ತಿದೆ.

ಕುಸಿಯಲಿದೆಯೇ ಸಾಮರ್ಥ್ಯ?

ಬಿಡುವಿಲ್ಲದೆ ಟೂರ್ನಿಗಳನ್ನು ಆಡುವುದರಿಂದ ಕ್ರೀಡಾಪಟುಗಳು ದೈಹಿಕ ಮತ್ತು ಮಾನಸಿಕವಾಗಿ ಹೆಚ್ಚು ದಣಿಯುತ್ತಾರೆ. ಇದರಿಂದ ಅವರ ಸಾಮರ್ಥ್ಯ ಕುಂಠಿತಗೊಳ್ಳುವ ಸಂಭವ ಹೆಚ್ಚಿರುತ್ತದೆ. ಜೊತೆಗೆ ಪದೇ ಪದೇ ಗಾಯಗೊಳ್ಳುವ ಸಾಧ್ಯತೆಯೂ ಇದೆ. ಸೈನಾ ನೆಹ್ವಾಲ್‌ ಇದೇ ಮಾತನ್ನು ಒತ್ತಿ ಹೇಳಿದ್ದಾರೆ.

‘ಸತತವಾಗಿ ಟೂರ್ನಿಗಳಲ್ಲಿ ಆಡುವುದರಿಂದ ಗುಣಮಟ್ಟದ ಸಾಮರ್ಥ್ಯ ತೋರಲು ಸಾಧ್ಯವಿಲ್ಲ. ಒಂದು ಟೂರ್ನಿಯ ಬಳಿಕ ಅಲ್ಪ ಬಿಡುವು ಸಿಕ್ಕರೆ ಮುಂದಿನ ಟೂರ್ನಿಗೆ ಸಜ್ಜಾಗಲು ಅನುಕೂಲವಾಗುತ್ತದೆ. ಇದರಿಂದ ಆಟಗಾರರ ಮನೋಬಲ ಹೆಚ್ಚುತ್ತದೆ. ಬಿಡಬ್ಲ್ಯುಎಫ್‌ ಕಠಿಣ ಕ್ರಮ ಕೈಗೊಳ್ಳಬಹುದು ಎಂಬ ಭಯದಿಂದ ಕ್ರೀಡಾಪಟುಗಳು ಟೂರ್ನಿಗಳಲ್ಲಿ ಭಾಗವಹಿಸಬೇಕಾದ ಪರಿಸ್ಥಿತಿ ಇನ್ನು ಮುಂದೆ ನಿರ್ಮಾಣವಾಗಬಹುದು. ಹೀಗಾದಲ್ಲಿ ಆಟಗಾರರು ಪ್ರಶಸ್ತಿ ಗೆಲ್ಲಬೇಕೆಂಬ ಛಲವನ್ನೇ ಕಳೆದುಕೊಳ್ಳಬಹುದು. ಇದರಿಂದ ಯಾರಿಗೂ ಲಾಭವಾಗುವುದಿಲ್ಲ. ಪಿಬಿಎಲ್‌ ನಂತರ ಸತತ ಮೂರು ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೂ ಮುನ್ನ ನಿರಂತರ ಮೂರು ಓಪನ್‌ ಟೂರ್ನಿಗಳನ್ನು ಆಡಬೇಕು. ಇದು ಅಸಾಧ್ಯ. ಬಿಡಬ್ಲ್ಯುಎಫ್‌ ತನ್ನ ನಿಯಮಾವಳಿಗಳನ್ನು ಕ್ರೀಡಾಪಟುಗಳ ಮೇಲೆ ಹೇರುವುದು ಎಳ್ಳಷ್ಟು ಸರಿಯಲ್ಲ. ಇದಕ್ಕೆ ನನ್ನ ವಿರೋಧವಿದೆ’ ಎಂದು ಸೈನಾ ಹೇಳಿದ್ದರು.

‘ಸತತವಾಗಿ ಟೂರ್ನಿಗಳಲ್ಲಿ ಆಡಲು ಫಿಟ್‌ನೆಸ್‌ ತುಂಬಾ ಅಗತ್ಯ. ಒಮ್ಮೆ ಗಾಯಗೊಂಡರೆ ಅದರಿಂದ ಗುಣಮುಖರಾಗಲು ಸಾಕಷ್ಟ ಸಮಯ ಬೇಕು. ಸಣ್ಣ ಗಾಯ ಎಂದು ನಿರ್ಲಕ್ಷಿಸಿ ಆಡಿದರೆ ಅದು ದೊಡ್ಡದಾಗಿ ಬಿಡಬಹುದು. ಆಗ ನಷ್ಟವಾಗುವುದು ಕ್ರೀಡಾಪಟುಗಳಿಗೆ. ವೇಳಾಪಟ್ಟಿ ಸಿದ್ಧಪಡಿಸುವ ವೇಳೆ ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು’ ಎಂದೂ ಅವರು ಬಿಡಬ್ಲ್ಯುಎಫ್‌ ಕ್ರಮವನ್ನು ಟೀಕಿಸಿದ್ದರು.

ಟೂರ್ನಿಗಳ ಸ್ವರೂಪದಲ್ಲಿ ಬದಲಾವಣೆ

ಬಿಡಬ್ಲ್ಯುಎಫ್‌  ಈ ಹಿಂದೆ ಇದ್ದ ಟೂರ್ನಿಗಳ ಸ್ವರೂಪದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಇವು 2018ರಿಂದ ಜಾರಿಗೆ ಬರಲಿವೆ. ಹೊಸ ನಿಯಮದ ಪ್ರಕಾರ ಈ ಋತುವಿನಲ್ಲಿ ನಡೆಯುವ ಟೂರ್ನಿಗಳನ್ನು ವಿವಿಧ ಗ್ರೇಡ್‌ ಮತ್ತು ಹಂತಗಳನ್ನಾಗಿ ವಿಭಾಗಿಸಿದೆ.
ಒಲಿಂಪಿಕ್ಸ್‌, ಥಾಮಸ್‌ ಕಪ್‌, ಊಬರ್‌ ಕಪ್‌, ಸುದೀರ್‌ಮನ್‌ ಕಪ್‌, ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟ ಮತ್ತು ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ಗಳನ್ನು ಗ್ರೇಡ್‌ -1ಕ್ಕೆ ಸೇರಿಸಲಾಗಿದೆ. ಗ್ರೇಡ್‌-2ರಲ್ಲಿ ಬರುವ ಟೂರ್ನಿಗಳನ್ನು ಆರು ಹಂತಗಳನ್ನಾಗಿ ವಿಂಗಡಿಸಲಾಗಿದೆ.  ಒಂದನೇ ಹಂತದಲ್ಲಿ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿ ಇದ್ದು, ಆಲ್‌ ಇಂಗ್ಲೆಂಡ್‌, ಇಂಡೊನೇಷ್ಯಾ ಮತ್ತು ಚೀನಾ ಓಪನ್‌ಗಳನ್ನು ಎರಡನೇ ಹಂತದ ಟೂರ್ನಿಗಳನ್ನಾಗಿ ಪರಿಗಣಿಸಲಾಗಿದೆ. ಇವುಗಳನ್ನು ಮೊದಲು ಪ್ರೀಮಿಯರ್‌ ಸೂಪರ್‌ಸೀರಿಸ್‌ ಎಂದು ಕರೆಯಲಾಗುತ್ತಿತ್ತು.
ಮಲೇಷ್ಯಾ , ಚೀನಾ, ಡೆನ್ಮಾರ್ಕ್‌, ಫ್ರಾನ್ಸ್‌ ಮತ್ತು ಜಪಾನ್‌ ಓಪನ್‌ ಟೂರ್ನಿಗಳು ಮೂರನೇ ಹಂತದಲ್ಲಿವೆ. ಮಲೇಷ್ಯಾ ಮಾಸ್ಟರ್ಸ್‌ ಸೇರಿದಂತೆ ಒಟ್ಟು ಏಳು ಟೂರ್ನಿಗಳು ನಾಲ್ಕನೇ ಹಂತದ ಟೂರ್ನಿಗಳಾಗಿ ಪರಿಗಣಿತವಾಗಿವೆ. ಇವುಗಳನ್ನು ಮೊದಲು ಗ್ರ್ಯಾನ್‌ ಪ್ರಿ ಗೋಲ್ಡ್‌ ಎಂದು ಹೇಳಲಾಗುತ್ತಿತ್ತು. ಐದನೇ ಹಂತದಲ್ಲಿ 11 ಟೂರ್ನಿಗಳಿವೆ.  ಅರ್ಹತಾ ಟೂರ್ನಿಗಳನ್ನು ಆರನೇ ಹಂತಕ್ಕೆ ಸೇರಿಸಲಾಗಿದ್ದು, ಇವುಗಳನ್ನು 2, 3 ಮತ್ತು  4ನೇ ಹಂತಗಳನ್ನಾಗಿ ವರ್ಗೀಕರಿಸಲಾಗಿದೆ.

ಹೊಸ ಪದ್ಧತಿಯ ಅನುಸಾರ ಅಗ್ರ 15 ಮಂದಿ ಸಿಂಗಲ್ಸ್‌ ಮತ್ತು ಅಗ್ರ 10 ಡಬಲ್ಸ್‌ ಆಟಗಾರರು ಎರಡನೇ ಹಂತದ ಮೂರು, ಮೂರನೇ ಹಂತದ ಐದು ಮತ್ತು ನಾಲ್ಕನೇ ಹಂತದ ಟೂರ್ನಿಗಳ ಪೈಕಿ ಕನಿಷ್ಠ ನಾಲ್ಕರಲ್ಲಿ ಭಾಗವಹಿಸಲೇಬೇಕು. ಇವುಗಳ ಜೊತೆಗೆ ಥಾಮಸ್‌ ಕಪ್‌, ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಬೇಕು.‌
***
ಕ್ರೀಡಾಪಟುಗಳಿಗೆ ತೊಂದರೆ ಹೆಚ್ಚು

ನಿರಂತರವಾಗಿ ಪಂದ್ಯಗಳನ್ನು ಆಡುವುದರಿಂದ ಕ್ರೀಡಾಪಟುಗಳು ಗಂಭೀರವಾಗಿ ಗಾಯಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಒಮ್ಮೆ ಗಾಯಗೊಂಡರೆ ಅದರಿಂದ ಚೇತರಿಸಿಕೊಳ್ಳುವುದು ತುಂಬಾ ಕಷ್ಟ. ಈ ಕಾರಣದಿಂದಲೇ ಹಲವು ಮಂದಿ ಕ್ರೀಡಾ ತಾರೆಯರು ಬಹು ಬೇಗನೆ ಕ್ರೀಡಾ ಬದುಕಿಗೆ ವಿದಾಯ ಪ್ರಕಟಿಸಿದ್ದಾರೆ’ ಎಂದು ಫಿಫಾ ವೈದ್ಯಕೀಯ ಮತ್ತು ಉದ್ದೀಪನಾ ಮದ್ದು ತಡೆ ಅಧಿಕಾರಿ, ಕರ್ನಾಟಕದ ಕಿರಣ್‌ ಕುಲಕರ್ಣಿ ‘ಪ್ರಜಾವಾಣಿ’ಗೆ ಹೇಳಿದರು.

‘ಕ್ರೀಡಾಪಟುಗಳು ನಿರಂತರವಾಗಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ದಣಿಯುತ್ತಾರೆ. ಇದನ್ನು ನಾವು ವೈಜ್ಞಾನಿಕ ಭಾಷೆಯಲ್ಲಿ ‘ಫಿಸಿಕಲ್‌ ಆ್ಯಂಡ್‌ ಸೈಕಾಲಜಿಕಲ್‌ ಫಟಿಗ್‌’ ಎಂದು ಕರೆಯುತ್ತೇವೆ. ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದರಿಂದ ಫೆರಡೇಷನ್‌ಗಳು ಅಥವಾ ಇತರ ಕ್ರೀಡಾ ಸಂಸ್ಥೆಗಳಿಗೆ ಜಾಹೀರಾತು, ಪ್ರಸಾರದ ಹಕ್ಕು ಸೇರಿದಂತೆ ಇತರ ಮೂಲಗಳಿಂದ ಸಾಕಷ್ಟು ಆದಾಯ ಬರುತ್ತದೆ. ಹೀಗಾಗಿಯೇ ಆದಷ್ಟು ಹೆಚ್ಚು ಟೂರ್ನಿಗಳನ್ನು ನಡೆಸಲು ಮುಂದಾಗುತ್ತಿವೆ ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT