ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಕ್ರಿಕೆಟ್‌ನಲ್ಲಿ ಹೊಸ ಕನಸು ಬಿತ್ತಿದ ರಣಜಿ ಟೂರ್ನಿ

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ದೀರ್ಘ ಮಾದರಿಯ ಕ್ರಿಕೆಟ್‌ ಪಂದ್ಯಗಳು ಬೋರಿಂಗ್. ನಾಲ್ಕೈದು ದಿನಗಳವರೆಗೆ ಯಾರು ನೋಡುತ್ತಾರೆ? ರಣಜಿ ಪಂದ್ಯಗಳನ್ನಂತೂ ನೋಡಲು ಜನರೇ ಬರಲ್ಲ. ಆದ್ದರಿಂದ ಮಾದರಿ ಬದಲಾಗಬೇಕು...’

ಟ್ವೆಂಟಿ–20 ಕ್ರಿಕೆಟ್ ಮಾದರಿ ಜನಪ್ರಿಯಗೊಂಡ ಮೇಲೆ ಬಹುತೇಕ ಕ್ರಿಕೆಟ್‌ ಪ್ರಿಯರಿಂದ ಕೇಳಿಬರುವ ವ್ಯಂಗ್ಯದ ಮಾತುಗಳಿವು.. ಆದರೆ, ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆದ ಕರ್ನಾಟಕ ಮತ್ತು ವಿದರ್ಭ ತಂಡಗಳ ನಡುವಣ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯ ಮೇಲಿನ ವ್ಯಾಖ್ಯಾನಗಳನ್ನು ಸಪ್ಪೆಯಾಗಿಸಿತ್ತು.

ಐದು ದಿನಗಳ ಪಂದ್ಯದ ಪ್ರತಿ ಹಂತವೂ ರೋಚಕ ರಸದೌತಣ ನೀಡಿದ್ದು ಸುಳ್ಳಲ್ಲ. ಹೊಸ ವರ್ಷದಲ್ಲಿ ದೇಶಿ ಕ್ರಿಕೆಟ್‌ಗೆ ನವೋಲ್ಲಾಸ ತುಂಬಲು ಈ ಪಂದ್ಯ ಕಾರಣವಾಗಿತ್ತು. ಹೊಸ ಪ್ರತಿಭೆಗಳನ್ನು ಪ್ರವರ್ಧಮಾನಕ್ಕೆ ತರಲು ರಣಜಿ ಟೂರ್ನಿ ಸೂಕ್ತ ಎಂಬ ವಾದಕ್ಕೆ ಮತ್ತಷ್ಟು ಬಲ ತುಂಬಿದೆ. ವಿದರ್ಭ ತಂಡದ ಮಧ್ಯಮವೇಗಿ ರಜನೀಶ್ ಗುರುಬಾನಿ, ಮುಂಬೈ ತಂಡದ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಮಿಂಚಿದ್ದ ಶಿವಂ ದುಬೆ, ಕರ್ನಾಟಕದ ಬ್ಯಾಟಿಂಗ್ ಪ್ರತಿಭೆ ಡೇಗಾ
ನಿಶ್ಚಲ್ ಭರವಸೆ ಮೂಡಿಸಿದ ಪ್ರತಿಭೆಗಳು. ಇನ್ನು ಅನುಭವಿಗಳು, ತಾವಿನ್ನೂ ಸಬಲರು, ಮತ್ತಷ್ಟು ವರ್ಷ ತಂಡಗಳಿಗೆ ಅಮೂಲ್ಯ ಕಾಣಿಕೆ ಕೊಡಲು ಸಮರ್ಥರು ಎಂಬುದನ್ನು ಸಾಬೀತುಪಡಿಸಿದ್ದಾರೆ. ‌

ಅದರಲ್ಲಿ ಪ್ರಮುಖರು ಕರ್ನಾಟಕ ತಂಡದ ನಾಯಕ ಆರ್. ವಿನಯಕುಮಾರ್, ಮಯಂಕ್ ಅಗರವಾಲ್, ಬಂಗಾಳ ತಂಡದ ಅಶೋಕ ದಿಂಡಾ ಹಾಗೂ ವಿದರ್ಭ ತಂಡದಲ್ಲಿ ಆಡುತ್ತಿರುವ ಕನ್ನಡಿಗ ಗಣೇಶ್ ಸತೀಶ್. ಆದರೆ ಉತ್ತರ ಪ್ರದೇಶ ತಂಡದ ನಾಯಕ ಸುರೇಶ್ ರೈನಾ, ಪಂಜಾಬ್ ತಂಡದ ಯುವರಾಜ್ ಸಿಂಗ್, ಬಂಗಾಳ ತಂಡದ ಮನೋಜ್ ತಿವಾರಿ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ.

ಪ್ರತಿವರ್ಷವೂ ಉದಯೋನ್ಮುಖರ ದಂಡು ಲಗ್ಗೆಯಿಡುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಹಿರಿಯ ಆಟಗಾರರು ಹೆಚ್ಚು ಬೆವರು ಹರಿಸಬೇಕಾದ ಅವಶ್ಯಕತೆ ಇದೆ. ಪ್ರಮುಖವಾಗಿ ಫಿಟ್‌ನೆಸ್ ನಿರ್ವಹಿಸಿಕೊಳ್ಳುವ ಮಹತ್ವದ ಸವಾಲು ಅವರ ಮುಂದಿದೆ. ಇದರಿಂದಾಗಿ ತಮ್ಮ ಸಮಕಾಲೀನರು ಮತ್ತು ಕಿರಿಯ ಆಟಗಾರರೊಂದಿಗೆ ಪೈಪೋಟಿ ನಡೆಸುವ ಸವಾಲು ಆಟಗಾರರ ಮುಂದಿದೆ. ಇದು ಆಟದ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದು.

‘ರಜನೀಶ್ ಗುರುಬಾನಿಗೆ ಇದು ಕೇವಲ ಒಂಬತ್ತನೇ ರಣಜಿ ಪಂದ್ಯ. ಲಲಿತ್ ಯಾದವ್ ಗಾಯಗೊಂಡಿದ್ದ ಕಾರಣ ಕ್ವಾರ್ಟರ್‌ಫೈನಲ್‌ನಲ್ಲಿ ಅವಕಾಶ ಪಡೆದಿದ್ದ. ಆ ಪಂದ್ಯದಲ್ಲಿ ಕೇರಳ ವಿರುದ್ಧ ನಮ್ಮ ತಂಡದ ಜಯಕ್ಕೆ ಕಾರಣನಾಗಿದ್ದ. ಇಲ್ಲಿಯೂ ಬಲಿಷ್ಠ ಕರ್ನಾಟಕ ತಂಡದ ಎದುರು ಜಯಿಸಲು ಕಾರಣನಾದ. ಬೆಂಚ್‌ನಲ್ಲಿರುವ ಪ್ರತಿಯೊಬ್ಬರೂ ಅವಕಾಶ ಸಿಕ್ಕರೆ ತಮ್ಮ ಸಾಮರ್ಥ್ಯ ತೋರಲು ಕಾದಿದ್ದಾರೆ. ಅದರಿಂದ ತಂಡಕ್ಕೆ ಲಾಭ’ ಎಂದು ಕೋಲ್ಕತ್ತದಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಗೆದ್ದ ವಿದರ್ಭ ತಂಡದ ಕೋಚ್ ಚಂದ್ರಕಾಂತ್ ಪಂಡಿತ್ ಹೇಳಿದ್ದರು.

ಕರ್ನಾಟಕವು ಒಂದೂ ಪಂದ್ಯ ಸೋಲದೇ ಸೆಮಿಫೈನಲ್‌ ತಲುಪಿದ್ದರ ಹಿಂದೆಯೂ ಇಂತಹದ್ದೇ ಸಮೀಕರಣ ಕೆಲಸ ಮಾಡಿತ್ತು. ಹೊಸ ಕೋಚ್ ಪಿ.ವಿ. ಶಶಿಕಾಂತ್ ಮತ್ತು ಜಿ.ಕೆ. ಅನಿಲಕುಮಾರ್ ಅವರು ಹೆಚ್ಚಿನ ಬದಲಾವಣೆಗೆ ಕೈ ಹಾಕಿರಲಿಲ್ಲ. ಅನುಭವಿ ನಾಯಕ ವಿನಯಕುಮಾರ್, ಮಧ್ಯಮ ವೇಗಿಗಳಾದ ಅಭಿಮನ್ಯು ಮಿಥುನ್, ಎಸ್. ಅರವಿಂದ್, ಸ್ಪಿನ್ನರ್‌ ಶ್ರೇಯಸ್ ಗೋಪಾಲ್, ಬ್ಯಾಟ್ಸ್‌ಮನ್‌ ಕರುಣ್ ನಾಯರ್ ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಕೆ.ಎಲ್. ರಾಹುಲ್ ಗೈರು
ಹಾಜರಿಯಲ್ಲಿ ಮಯಂಕ್ ಅಗರವಾಲ್ ಮತ್ತು ಆರ್. ಸಮರ್ಥ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಸಫಲರಾಗಿದ್ದರು.

ಮನೀಷ್ ಪಾಂಡೆ ಅನುಪಸ್ಥಿತಿಯಲ್ಲಿಯೂ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದ ಸ್ಟುವ‌ಟ್ ಬಿನ್ನಿ, ಕರುಣ್, ಹೋರಾಟ ಗಮನ ಸೆಳೆದಿತ್ತು ಈ ಬಾರಿಯ ಪ್ರಮುಖ ಅಂಶವೆಂದರೆ, ಕರ್ನಾಟಕ ತಂಡದ ಬಾಲಂಗೋಚಿಗಳು ಆಲ್‌ ರೌಂಡರ್‌ಗಳಾಗಿ
ಬೆಳಗಿದ್ದು. ಶ್ರೇಯಸ್, ಮಿಥುನ್, ವಿನಯ್, ಅರವಿಂದ್ ವಿಕೆಟ್‌ ಗಳಿಸುವುದರೊಂದಿಗೆ ರನ್‌ಗಳ ಗಳಿಕೆಯನ್ನೂ ಹೆಚ್ಚು ಮಾಡಿಕೊಂಡಿದ್ದಾರೆ. ರಣಜಿ ಋತು ಅಂತ್ಯಗೊಂಡಿದೆ. ಆದರೆ ಈ ದೇಶಿ ಋತುವಿನಲ್ಲಿ ಇನ್ನೂ ವಿಜಯ ಹಜಾರೆ ಟ್ರೋಫಿ ಬಾಕಿ ಇದೆ. ಕರ್ನಾಟಕ ತಂಡವು ಟೂರ್ನಿಯಲ್ಲಿ ಮಿಂಚಲಿದೆ. ಹೊಸ ವರ್ಷದಲ್ಲಿ ಹೊಸ ಉತ್ಸಾಹ, ಕನಸುಗಳೊಂದಿಗೆ
ಹೋರಾಟ ಆರಂಭಿಸಲಿದೆ. ‘ಈ ಬಾರಿಯ ರಣಜಿ ಋತು ನಮಗೆ ಹಲವು ಮಧುರ ನೆನಪುಗಳನ್ನು ನೀಡಿದೆ. ಅಲ್ಲದೇ ಸಾಕಷ್ಟು ಪಾಠಗಳನ್ನೂ ಕಲಿತಿದ್ದೇವೆ ಇನ್ನಷ್ಟು ಪರಿಶ್ರಮದಿಂದ ಅಭ್ಯಾಸ ಮಾಡಿ ಮುಂದಿನ ರಣಜಿ ಋತುವಿನಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮ ಗುರಿ. ಅದಕ್ಕಾಗಿ ಈಗಿನಿಂದಲೇ ಪ್ರಯತ್ನ ಆರಂಭಿಸುತ್ತೇವೆ’ ಎಂದು ಕರ್ನಾಟಕ ತಂಡದ ನಾಯಕ ವಿನಯಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT