ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಗೆರೆಗಳ ಸ್ವಾಗತ

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಉದ್ಯಾನನಗರಿಯ ಇಂದಿರಾನಗರ, ಜಾಲಹಳ್ಳಿ, ಕೋರಮಂಗಲ, ಮಹಾತ್ಮಾಗಾಂಧಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಸೇರಿದಂತೆ ಹಲವೆಡೆ ವರ್ಷಾರಂಭದ ದಿನಗಳಲ್ಲಿ ಇಳಿಸಂಜೆಯಿಂದ ನಡುರಾತ್ರಿಯವರೆಗೆ ಝಗಮಗಿಸುವ ವಿದ್ಯುತ್ ದೀಪಾಲಂಕಾರದೊಂದಿಗೆ ಹೊಸವರ್ಷದ ಆಗಮನಕ್ಕೆ ತಯಾರಿಗೊಳಿಸಿ ಸಹಸ್ರಾರು ಜನರನ್ನು ಆಕರ್ಷಿಸುವುದು ಹೊಸ ಕಾಲದ ಸಂಪ್ರದಾಯವೇ ಆಗಿದೆ.

ಬ್ರಿಗೇಡ್ ರಸ್ತೆಯು ಕ್ರಿಸ್‌ಮಸ್‌ ಹಬ್ಬಕ್ಕೆಂದು ಸಿಂಗರಿಸಿಕೊಂಡಿದೆ. ಹೊಸವರ್ಷದ ದಿನ ರಾತ್ರಿ 1 ಗಂಟೆಯವರೆಗೂ ಆಚರಣೆಗೆ ಅನುವು ಮಾಡಿಕೊಳ್ಳಲಿದೆ. ಈ ರಸ್ತೆಯ ವಿದ್ಯುತ್ ದೀಪ ಶೃಂಗಾರದ ಝಲಕ್ ಒಂದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಆರ್.ಎಂ.ವಿ. ಎರಡನೇ ಹಂತದ ಕೃಷ್ಣ ಕಾರ್ತಿಕ್.

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಕೃಷ್ಣ ಕಾರ್ತಿಕ್ ಕಳೆದ ಐದು ವರ್ಷಗಳಿಂದ ಕ್ಯಾಂಡಿಡ್, ವನ್ಯಜೀವಿ, ವಾಸ್ತುಶಿಲ್ಪ ಛಾಯಾಗ್ರಹಣದಲ್ಲಿ ಆಸಕ್ತರು. ಈ ಚಿತ್ರ ತೆಗೆಯಲು ಬಳಸಿದ ಕ್ಯಾಮೆರಾ, ಕೆನಾನ್ 70 ಡಿ, ಲೆನ್ಸ್ ಫೋಕಲ್ ಲೆಂಗ್ತ್ 50 ಎಂ.ಎಂ., ಅಪರ್ಚರ್ f 8, ಷಟರ್ ವೇಗ 1/30 ಸೆಕೆಂಡ್, ಐ.ಎಸ್.ಒ 100 ಹಾಗೂ ಟ್ರೈಪಾಡ್ ಬಳಸಲಾಗಿದೆ.

ಈ ಚಿತ್ರದೊಂದಿಗೆ ನಡೆಸಬಹುದಾದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನ ಇಂತಿದೆ:

* ವಿದ್ಯುತ್ ದೀಪಗಳು ವಸ್ತುಗಳನ್ನು ಬೆಳಗುವುದರಿಂದ, ಅಲ್ಲಿ, ಕೆಲವು ಬೆಳಕಿನ ಮೂಲ ಸ್ಥಿರವಾಗಿರಬಹುದು, ಮತ್ತೆ ಕೆಲವು ಚಲನೆಯಲ್ಲಿರಬಹುದು. ಬೆಳಗಿದ ವಸ್ತುಗಳೂ ಸ್ಥಿರವಾಗಿರಬಹುದು ಅಥವಾ ಕೆಲವು ಚಲನೆಯಲ್ಲಿರಬಹುದು. ಕ್ಯಾಮೆರಾದ ಕೋನ ಹಾಗೂ ಸೆರೆಹಿಡಿಯಬೇಕಾದ ‘ವಸ್ತು’ವಿನ ರೂಪುರೇಷೆ, ಚಿತ್ರ ಏನನ್ನು ತೋರಿಸಬಯಸುತ್ತದೆ ಎಂಬುದರ ಸ್ಪಷ್ಟತೆ ಛಾಯಾಗ್ರಾಹಕನಿಗೆ ಇರಬೇಕು.

* ಇಳಿಸಂಜೆಯಾಗಿದ್ದರೆ ತೆಳು ಬೆಳಕಿನ ಆಗಸ ಮತ್ತು ಇತರೆ ಬೆಳಕಿನ (ಆ್ಯಂಬಿಯೆಂಟ್) ಸಮರ್ಪಕ ಉಪಯೋಗವೂ ಮುಖ್ಯ.

* ಈ ಚಿತ್ರದಲ್ಲಿ ಮೊದಲೆರಡು ಅಂಶಗಳ ನಿರ್ವಹಣೆ ತಾಂತ್ರಿಕವಾಗಿ ಸಮರ್ಪಕವಾಗಿವೆ. ಟ್ರೈಪಾಡ್ ಮೇಲೆ ಕ್ಯಾಮೆರಾವನ್ನು ಸ್ಥಿರಗೊಳಿಸಿ ಷಟರ್ ವೇಗ ನಿಧಾನಗೊಳಿಸಲಾಗಿದೆ. ಅದಕ್ಕನುಗುಣವಾಗಿ ಅಪರ್ಚರ್ ಮತ್ತು ಐಎಸ್ಒ ಅಳವಡಿಸಲಾಗಿದೆ.

* ಮುನ್ನೆಲೆಯಲ್ಲಿ ಚಲಿಸಿರುವ ವಾಹನಗಳನ್ನು ದಾಖಲಿಸದೇ ಮಸುಕಾಗಿಸಲಾಗಿದೆ (ಮೋಷನ್ ಬ್ಲರ್). ಹೀಗಾಗಿಯೇ ಟೇಲ್ ಲೈಟ್ ಮತ್ತು ಹೆಡ್‌ಲೈಟ್‌ಗಳು ಬೆಳಕಿನ ಗೆರೆಗಳು (ಟ್ರೇಲಿಂಗ್) ಮಾತ್ರವೇ ಆಗಿವೆ.

* ಇದೇ ದೃಶ್ಯವನ್ನು ಇನ್ನೂ ತೆಳುವಾದ ಇಳಿಸಂಜೆಯ ಸಮಯದಲ್ಲಿ ಸೆರೆಹಿಡಿದಿದ್ದರೆ, ಹಿನ್ನೆಲೆಯ ನೀಲಿ ಆಗಸದ, ಕಟ್ಟಡಗಳ ಮತ್ತು ಪರಿಸರದ ಮಾಹಿತಿಯೂ ಅಲ್ಪಸ್ವಲ್ಪ ಮೂಡಿ, ಈ ದೃಶ್ಯಕ್ಕೆ ಹೆಚ್ಚಿನ ಮೆರುಗು ದೊರೆಯುತ್ತಿತ್ತು.

* ಕಲಾತ್ಮಕವಾಗಿ ಇದೊಂದು ಸುಂದರವಾದ ಹಾಗೂ ಸಾಂದರ್ಭಿಕವಾದ ಉತ್ತಮ ಛಾಯಾಚಿತ್ರವೆಂದು ಗುರುತಿಸಬಹುದು. ಸ್ಥಿರವಾದ ರಸ್ತೆಯುದ್ದಕ್ಕೂ ಅಲಂಕರಿಸಿರುವ ವಿದ್ಯುತ್ ದೀಪಗಳ ವಿವಿಧ ವಿನ್ಯಾಸಗಳು ಅದ್ದೂರಿತನದ ವೈಭವವನ್ನೇ ಸೃಷ್ಟಿಸಿವೆ.

* ನೋಡುಗನ ಕುತೂಹಲವನ್ನು ಚೌಕಟ್ಟಿನ ಒಳಭಾಗದಲ್ಲಿ ರೂಪಿಸಿರುವ ಆ ವರ್ಣರಂಜಿತ ದೃಶ್ಯದೆಡೆಗೆ ಒಯ್ಯಲು ಸಹಕಾರಿಯಾಗುವ ವಾಹನಗಳ ಕೆಂಪು ಬೆಳಕಿನ ಗೆರೆಗಳು ಚೌಕಟ್ಟಿನ ಮುನ್ನೆಲೆಯಿಂದಲೇ ಆ ದಿಕ್ಕಿನೆಡೆ ತಿರುಗುತ್ತಾ ಸುಂದರವಾಗಿ ಮೂಡಿವೆ.

* ಬೆಳಕಿನ ಗೆರೆಗಳು, ಸ್ಥಿರ ದೀಪಗಳ ಕೂಡುವಿಕೆಯ ಭಾಗ ಚೌಕಟ್ಟಿನ ಮೂರನೇ ಒಂದು ಅಂಶದಲ್ಲಿ ಕಾಣಿಸುತ್ತಿರುವುದು ಚಿತ್ರ ಸಂಯೋಜನೆಯ ಮೌಲ್ಯವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT