ಮೋದಿ ಬೆಂಬಲಕ್ಕಿರುವ ಮೂರು ವರ್ಗಗಳು

ಮೋದಿ ಅವರ ಜೊತೆ ತುಸು ಸಾಮ್ಯತೆ ಇರುವ ನಾಯಕರನ್ನು ಹೆಸರಿಸಲು ಮುಂದಾದರೆ ನನಗೆ ರಷ್ಯಾದ ವ್ಲಾದಿಮಿರ್ ಪುಟಿನ್ ಮತ್ತು ಟರ್ಕಿಯ ರೆಸಿಪ್ ತಯ್ಯಿಪ್ ಎರ್ಡೊಗನ್ ಅವರು ನೆನಪಿಗೆ ಬರುತ್ತಾರೆ. ನನಗೆ ಆ ಎರಡು ದೇಶಗಳ ರಾಜಕೀಯದ ಬಗ್ಗೆ ಆಳವಾದ ತಿಳಿವಳಿಕೆ ಇಲ್ಲ. ಆದರೆ ಆ ಇಬ್ಬರು ನಾಯಕರು ಹೊಂದಿರುವ ಬೆಂಬಲವು ಒಂದು ರೀತಿಯಲ್ಲಿ ಮೋದಿ ಅವರು ಹೊಂದಿರುವ ಬೆಂಬಲದಂತೆಯೇ ಇದೆ.

ಮೋದಿ ಬೆಂಬಲಕ್ಕಿರುವ ಮೂರು ವರ್ಗಗಳು

ನರೇಂದ್ರ ಮೋದಿ ಅವರು ನಮ್ಮ ಕಾಲದ ಅತ್ಯಂತ ಬುದ್ಧಿವಂತ ರಾಜಕಾರಣಿ- ಭಾರತದ ಮಟ್ಟಿಗೆ ಮಾತ್ರವೇ ಅಲ್ಲ, ದೂರದ ದೇಶಗಳಲ್ಲಿನ ರಾಜಕಾರಣಿಗಳ ಜೊತೆ ಹೋಲಿಸಿದರೂ ಇದೇ ಮಾತು ಹೇಳಬೇಕಾಗುತ್ತದೆ. ಮೋದಿ ಅವರಷ್ಟು ಜನಪ್ರಿಯರಾಗಿರುವ ಇನ್ನೊಬ್ಬ ಚುನಾಯಿತ ನಾಯಕನನ್ನು ಹೆಸರಿಸುವುದು ಸುಲಭದ ಕೆಲಸವಲ್ಲ.

ಮೋದಿ ಅವರ ಜೊತೆ ತುಸು ಸಾಮ್ಯತೆ ಇರುವ ನಾಯಕರನ್ನು ಹೆಸರಿಸಲು ಮುಂದಾದರೆ ನನಗೆ ರಷ್ಯಾದ ವ್ಲಾದಿಮಿರ್ ಪುಟಿನ್ ಮತ್ತು ಟರ್ಕಿಯ ರೆಸಿಪ್ ತಯ್ಯಿಪ್ ಎರ್ಡೊಗನ್ ಅವರು ನೆನಪಿಗೆ ಬರುತ್ತಾರೆ. ನನಗೆ ಆ ಎರಡು ದೇಶಗಳ ರಾಜಕೀಯದ ಬಗ್ಗೆ ಆಳವಾದ ತಿಳಿವಳಿಕೆ ಇಲ್ಲ. ಆದರೆ ಆ ಇಬ್ಬರು ನಾಯಕರು ಹೊಂದಿರುವ ಬೆಂಬಲವು ಒಂದು ರೀತಿಯಲ್ಲಿ ಮೋದಿ ಅವರು ಹೊಂದಿರುವ ಬೆಂಬಲದಂತೆಯೇ ಇದೆ.

ಈ ಮೂವರೂ ನಾಯಕರು ತಾವು ಪ್ರತಿನಿಧಿಸುವ ಪಕ್ಷಕ್ಕಿಂತ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿದ್ದಾರೆ, ಅವರು ಪಕ್ಷದ ಸಾಂಪ್ರದಾಯಿಕ ಮತದಾರರ ನೆಲೆಯನ್ನು ವಿಸ್ತರಿಸಿದ್ದಾರೆ.

ಮೋದಿ ಅವರ ಜನಪ್ರಿಯತೆಯ ಮಟ್ಟ ಯಾವಾಗಲೂ ಶೇಕಡ 70ರಷ್ಟಕ್ಕಿಂತ ಹೆಚ್ಚಿರುತ್ತದೆ. ನಾಯಕನ ಜನಪ್ರಿಯತೆಯನ್ನು ಅಳೆಯುವ ಸಮೀಕ್ಷೆಗಳು ಖಚಿತವಾಗಿರುವುದಿಲ್ಲ, ಅವು ಅವೈಜ್ಞಾನಿಕವಾಗಿರುತ್ತವೆ. ಆದರೆ, 2014ರಲ್ಲಿ ಬಿಜೆಪಿ ಪಡೆದ ಶೇಕಡಾವಾರು ಮತಗಳ ಪ್ರಮಾಣ 31ರಷ್ಟು ಮಾತ್ರವಾಗಿದ್ದರೂ, ಮೋದಿ ಅವರು ನಿರಂತರವಾಗಿ ಶೇಕಡ 70ರಷ್ಟಕ್ಕಿಂತ ಹೆಚ್ಚು ಪ್ರಮಾಣದ ಜನಪ್ರಿಯತೆಯನ್ನು ದಾಖಲಿಸುತ್ತಿರುವುದು ಗಮನಾರ್ಹ. ಮೋದಿ ಅವರು ಜನಪ್ರಿಯ ನಾಯಕ ಎಂಬ ವಿಚಾರ ನಾನು ಕೆಲವರ ಜೊತೆ ಮಾತನಾಡುವಾಗ ಕೂಡ ವ್ಯಕ್ತವಾಗುತ್ತದೆ.

ಮೋದಿ ಅವರನ್ನು ಸೂಕ್ಷ್ಮವಾಗಿ ಗಮನಿಸಿರೆ, ಅವರ ರಾಜಕೀಯ ಕಾರ್ಯಶೈಲಿ ಮತ್ತು ಅವರ ವ್ಯಕ್ತಿತ್ವದತ್ತ ಆಕರ್ಷಿತರಾಗಿರುವವರಲ್ಲಿ ನಿರ್ದಿಷ್ಟ ಬಗೆಯ ಕೆಲವು ಜನರನ್ನು ಗುರುತಿಸಬಹುದು. ಇಲ್ಲಿ ಮುಖ್ಯವಾದುದು ಮೇಲ್ಜಾತಿಗಳ ಜನರಲ್ಲಿ, ಮಧ್ಯಮ ವರ್ಗದ ಜನರಲ್ಲಿ ಮತ್ತು ನಗರವಾಸಿ ಮತದಾರರಲ್ಲಿ ಮೋದಿ ಅವರು ಹೊಂದಿರುವ ನೆಲೆ.

ಗುಜರಾತಿನ ನಗರಗಳಲ್ಲಿ ಬಿಜೆಪಿ ಸಾಧಿಸಿರುವ ವಿಜಯವು ಈ ವಿಶ್ಲೇಷಣೆಗೆ ಸಮರ್ಥನೆಯಾಗಿ ನಿಲ್ಲುತ್ತದೆ: ಬಿಜೆಪಿಯ ನೀತಿಗಳು ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಲ್ಲಿ ವೈಫಲ್ಯ ಕಾಣುತ್ತಿದ್ದರೂ, ನಗರವಾಸಿ ಮತದಾರ ಸಮೂಹ ಬಿಜೆಪಿಯ ಹಿಂದೆ ಗಟ್ಟಿಯಾಗಿ ನಿಂತಿದೆ. ಅಷ್ಟೇ ಅಲ್ಲ, ಈ ಸಮುದಾಯ ವೈಯಕ್ತಿಕವಾಗಿ ಮೋದಿ ಅವರ ಬೆನ್ನಿಗೂ ನಿಂತಿದೆ. ಈ ಬೆಂಬಲಕ್ಕೆ ಕಾರಣಗಳು ಹಲವು. ಈ ದೇಶದ ಆಡಳಿತ ಸರಿಯಾಗಿ ಆಗುತ್ತಿಲ್ಲ, ಕ್ರಾಂತಿಕಾರಕ ಕ್ರಮಗಳ ಮೂಲಕ ದೇಶದ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಮಧ್ಯಮ ವರ್ಗ ನಂಬಿದೆ.

ಬಲಿಷ್ಠ ವ್ಯಕ್ತಿಯೊಬ್ಬ ಈ ಕೆಲಸ ಮಾಡುತ್ತಾನೆ ಎಂಬ ಪರಿಕಲ್ಪನೆ ಈ ವರ್ಗದವರಿಗೆ ಯಾವತ್ತಿಗೂ ಆಕರ್ಷಕವಾಗಿ ಕಂಡಿದೆ. ಸರಿಸುಮಾರು ಐವತ್ತು ವರ್ಷ ಸವೆಸಿರುವ ನಾನು ಈ ಬಗೆಯ ಧೋರಣೆ ಕನಿಷ್ಠ ಮೂವತ್ತು ವರ್ಷಗಳಿಂದ ಜನರಲ್ಲಿದೆ ಎಂದು ಹೇಳಬಲ್ಲೆ. ಈ ರೀತಿಯ ಪರಿಕಲ್ಪನೆಯು ಸಂಕೀರ್ಣ ಸಮಸ್ಯೆಗಳನ್ನು ತೀರಾ ಸರಳೀಕೃತವಾಗಿ ನೋಡುತ್ತದೆ ಎಂಬುದು ನಿಜ. ಆದರೆ ಅದರ ಬಗ್ಗೆ ನಾನು ಈಗ ಚರ್ಚಿಸುವುದಿಲ್ಲ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಹೊಂದಿರುವ ಮೀಸಲಾತಿ ವಿರೋಧಿ ನಿಲುವು, ಸಂಸ್ಕೃತಿಯ ಬಗ್ಗೆ ಸಂಘ ಹೊಂದಿರುವ ಬ್ರಾಹ್ಮಣ ದೃಷ್ಟಿಕೋನವು ಈ ವರ್ಗವು ತನ್ನ ಸುತ್ತಲಿನ ಜಗತ್ತನ್ನು ನೋಡುವ ರೀತಿಗೆ ಹತ್ತಿರವಾಗಿದೆ. ಈ ವರ್ಗವು ರಾಷ್ಟ್ರೀಯತೆಯನ್ನು ಮನಸ್ಸಿನಲ್ಲಿ ಅಪಾರವಾಗಿ ತುಂಬಿಕೊಂಡಿದೆ (ಮೋದಿ ಅವರು ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಭಾರತೀಯ ವಲಸಿಗರನ್ನು ಉದ್ದೇಶಿಸಿ ನಡೆಸುವ ಕಾರ್ಯಕ್ರಮಗಳಲ್ಲಿ ಕಾಣಿಸುವವರು ಇದೇ ವರ್ಗದ ಜನ), ಈ ರಾಷ್ಟ್ರೀಯವಾದವು ಬಿಜೆಪಿಯ ಮನೋಭಾವಕ್ಕೆ ಹೊಂದಿಕೆಯಾಗುತ್ತದೆ.

ಶಕ್ತಿಶಾಲಿ ರಾಷ್ಟ್ರೀಯವಾದ ಅಂದರೆ ಅದನ್ನು ಒಪ್ಪಿದವರು ಪಾಕಿಸ್ತಾನ ಮತ್ತು ಚೀನಾ ವಿಚಾರಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಂಡಿರುತ್ತಾರೆ. ಸಂಕೀರ್ಣತೆಗಳ ಜೊತೆ ಅನುಸಂಧಾನ ನಡೆಸುವ ಸಾಮರ್ಥ್ಯ ಇಲ್ಲದಿರುವುದು ಕೂಡ ಬಿಜೆಪಿಯ ದೃಷ್ಟಿಕೋನಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.

ಆರ್ಥಿಕವಾಗಿ ಈ ವರ್ಗವು ಹೆಚ್ಚಿನ ಜಿಡಿಪಿ ಬೆಳವಣಿಗೆ ದರ, ಬೌದ್ಧಿಕ ಶ್ರಮದ ಉದ್ಯೋಗಗಳ ಹೆಚ್ಚುವಿಕೆ, ಆಧುನಿಕ ಮೂಲ
ಸೌಕರ್ಯ ವಲಯದಲ್ಲಿನ ಬಂಡವಾಳ ಹೂಡಿಕೆ (ಉದಾಹರಣೆಗೆ: ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳಿಗಿಂತ ಬುಲೆಟ್ ರೈಲುಗಳ ಮೇಲೆ ಹೂಡಿಕೆ, ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ಸುಗಳಿಗಿಂತ ವಿಮಾನ ನಿಲ್ದಾಣಗಳ ಮೇಲಿನ ಹೂಡಿಕೆ) ನಂಬಿಕೊಂಡಿದೆ.

ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ವಿಚಾರದಲ್ಲಿ ಸರಳೀಕೃತವಾಗಿ ಮಾತನಾಡುವುದು ಸುಲಭವಲ್ಲ. ಆದರೆ, ದಕ್ಷಿಣ ಏಷ್ಯಾದ ಎಲ್ಲ ಸಮುದಾಯಗಳಲ್ಲೂ ಅಲ್ಪಸಂಖ್ಯಾತರ ಬಗ್ಗೆ ಅಸಮಾಧಾನ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ, ವಿಪರೀತ ಎನ್ನಬಹುದಾದ ಹಿಂಸೆಯು ಈ ವರ್ಗವನ್ನು ತೊಂದರೆಗೆ ಗುರಿಮಾಡುತ್ತದೆ ಎಂಬುದನ್ನು ಹೇಳಬೇಕು. ಏಕೆಂದರೆ, ಈ ಹಿಂಸಾಚಾರವು ಈ ವರ್ಗವು ಭಾರತದ ಬಗ್ಗೆ ಹೊಂದಿರುವ ಪರಿಕಲ್ಪನೆಗಳ ಜೊತೆ ಸಂಘರ್ಷಕ್ಕೆ ಮುಂದಾಗುತ್ತದೆ.

'ಸೆಕ್ಯುಲರಿಸಂ'ನ ಶುದ್ಧ ಪರಿಕಲ್ಪನೆಯು ಈ ವರ್ಗಕ್ಕೆ ಅಷ್ಟೊಂದು ಇಷ್ಟವಾಗುವುದಿಲ್ಲ. ಭಾರತದಲ್ಲಿ ಹೆಚ್ಚಿನವರು ಸೆಕ್ಯುಲರಿಸಂ ಪರವಾಗಿ ಇಲ್ಲ. ಮಧ್ಯಮ ವರ್ಗದಲ್ಲಿ ಜನಿಸಿದ ಕಾರಣಕ್ಕೆ, ಜೀವನದ ಬಹುತೇಕ ವರ್ಷಗಳನ್ನು ವೇತನದಾರರಾಗಿಯೇ ಕಳೆಯುವ ಈ ವರ್ಗದವರು ‘ಪ್ರತಿಭೆ’ ಎಂಬುದು ಅತ್ಯಂತ ಮಹತ್ವದ್ದು ಎಂದು ನಂಬುತ್ತಾರೆ. ಮೋದಿ ಅವರು ತಾವಾಗಿಯೇ ಮೇಲೆ ಬಂದವರು, ರಾಹುಲ್‌ ಗಾಂಧಿ ಅವರಂತೆ ವಂಶದ ಹಿನ್ನೆಲೆ ಹೊಂದಿಲ್ಲ ಎಂಬ ಕಾರಣಕ್ಕೆ ಮೋದಿ ಅವರನ್ನು ಇಷ್ಟಪಡುತ್ತಾರೆ.

ಮೋದಿ ಅವರನ್ನು ಬೆಂಬಲಿಸುವ ಎರಡನೆಯ ವರ್ಗದ ಜನರು ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರು. ಅಂದರೆ ಪಕ್ಷವನ್ನು ಬೆಂಬಲಿಸುವ ಪ್ರಬಲ ಜಾತಿಗಳಿಗೆ ಸೇರಿದವರು. ಕರ್ನಾಟಕದ ಲಿಂಗಾಯತರು, ಗುಜರಾತಿನ ಪಟೇಲರು ಮತ್ತು ರಾಜಸ್ಥಾನದ ರಜಪೂತರನ್ನು ಇಲ್ಲಿ ಉಲ್ಲೇಖಿಸಬಹುದು. ಮೋದಿ ಅವರನ್ನು ಬೆಂಬಲಿಸುವ ಮೂರನೆಯ ವರ್ಗದ ಜನ, ಹಿಂದುತ್ವದತ್ತ ಆಕರ್ಷಿತರಾದವರು. ಶತ್ರು ನಮ್ಮ ನಡುವೆಯೇ ಇದ್ದಾನೆ, ದೇಶ ಮುನ್ನಡೆಯಬೇಕು ಎಂದಾದರೆ ಶತ್ರುವನ್ನು ನಿವಾರಿಸಿಕೊಳ್ಳಬೇಕು ಎಂದು ನಂಬಿದವರು ಇವರು.

ಎರಡನೆಯ ಹಾಗೂ ಮೂರನೆಯ ವರ್ಗದ ಜನ ಇಂದಿನ ಲೇಖನಕ್ಕೆ ಅಷ್ಟೇನೂ ಮುಖ್ಯರಲ್ಲ. ಏಕೆಂದರೆ, ಬಿಜೆಪಿಯನ್ನು ಯಾರೇ ಮುನ್ನಡೆಸಿದರೂ, ಇಂದೂ - ನಾಳೆಯೂ ಅವರು ಬಿಜೆಪಿಯ ಜೊತೆಯಲ್ಲೇ ಇರುತ್ತಾರೆ. ಮೋದಿ ಅವರ ಚರಿಷ್ಮಾ, ಹೇಳಿದ್ದನ್ನು ಮಾಡಿ ತೋರಿಸುವ ಮೋದಿಯವರ ಸಾಮರ್ಥ್ಯ ಒಂದನೆಯ ವರ್ಗದ ಜನರನ್ನು ಎರಡನೆಯ ಮತ್ತು ಮೂರನೆಯ ವರ್ಗದ ಜನರಿಂದ ಬೇರೆಯಾಗಿ ನಿಲ್ಲಿಸುತ್ತದೆ. 2018ನೆಯ ಇಸವಿ ಈಗ ನಮ್ಮ ಮುಂದೆ ನಿಂತಿದೆ. ಲೋಕಸಭಾ ಚುನಾವಣೆಗೂ ಮೊದಲಿನ ವರ್ಷ ಇದು.

ಆರ್ಥಿಕ ವಿಚಾರಗಳಲ್ಲಿ ಮೋದಿ ಅವರ ಸಾಧನೆ ಏನು ಎಂಬುದರ ಅಂಕಿ-ಅಂಶ ಎದುರಿದೆ: ಈ ವಿಚಾರದಲ್ಲಿ ಮೋದಿ ಸೋತಿದ್ದಾರೆ. ಯುಪಿಎ ಆಡಳಿತದ ಹತ್ತು ವರ್ಷಗಳಲ್ಲಿ ಸಾಧ್ಯವಾದ ಸರಾಸರಿ ಜಿಡಿಪಿ ದರವನ್ನು ಸಾಧಿಸಲು ಮೋದಿ ಅವರಿಗೆ ಆಗದು ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. ತ್ರೈಮಾಸಿಕದ ಅವಧಿಯಲ್ಲಿ ಕಂಪೆನಿ ತೋರಿದ ಸಾಧನೆಯನ್ನು ಆಧರಿಸಿ ಮುಖ್ಯ ಕಾರ್ಯನಿರ್ವಾಹಕರ ಸಾಮರ್ಥ್ಯ ಅಳೆಯುವ ಕಾರ್ಪೊರೇಟ್ ಜಗತ್ತು (ಈ ಜಗತ್ತು ಮೋದಿ ಅವರನ್ನು ಇಷ್ಟಪಡುತ್ತದೆ) ಮೋದಿ ಅವರನ್ನು ಕೆಲಸದಿಂದ ಕಿತ್ತುಹಾಕಿರುತ್ತಿತ್ತು.

ನನಗೆ ಮುಖ್ಯವಾಗುವ ಅಂಕಿ-ಅಂಶ ಇದು: ಹಣಕಾಸು ಬಿಕ್ಕಟ್ಟಿನ ಕಾರಣದಿಂದಾಗಿ 2009ರಲ್ಲಿ ವಿಶ್ವದ ಅರ್ಥ ವ್ಯವಸ್ಥೆ ಸಮಸ್ಯೆ ಎದುರಿಸಿತು. ಆದರೆ, ಇಂದು ವಿಶ್ವದ ಅರ್ಥ ವ್ಯವಸ್ಥೆ ಶೇಕಡ 3ರಷ್ಟು ಬೆಳವಣಿಗೆ ದರ ದಾಖಲಿಸುತ್ತಿದ್ದರೂ ಭಾರತದ ಬೆಳವಣಿಗೆ ದರ ಮಾತ್ರ ಕುಸಿದಿದೆ. ನೋಟು ರದ್ದತಿಯಂತಹ ವಿಲಕ್ಷಣ ಕ್ರಮಗಳ ಮೂಲಕ ಬೆಳವಣಿಗೆ ದರವನ್ನು ಉದ್ದೇಪೂರ್ವಕವಾಗಿ ತಗ್ಗಿಸಿದಂತಿದೆ.

ಈ ವೈಫಲ್ಯವು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಹೇಳಿಕೊಳ್ಳುವಂತಹ ಆರ್ಥಿಕ ಸಾಧನೆ ಆಗಿಲ್ಲ ('ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ' ಎಂಬ ಸಾಲನ್ನು ನೀವು ಕಡೆಯ ಬಾರಿ ಕೇಳಿದ್ದು ಯಾವಾಗ?), ಚುನಾವಣಾ ಅಭಿಯಾನವು 2014ರಲ್ಲಿ ಆದಂತೆ 'ಅಚ್ಛೇ ದಿನ' ಎಂಬಂತಹ ಘೋಷಣೆಗಳ ಆಧಾರದಲ್ಲಿ ನಡೆಯುತ್ತದೆ ಎಂದು ನಾನು ಭಾವಿಸಿಲ್ಲ. ಮುಂಬರುವ ಚುನಾವಣಾ ಅಭಿಯಾನ ವಿಷಕಾರಿಯಾಗಿಯೂ, ವಿಭಜನಕಾರಿಯಾಗಿಯೂ ಇರಲಿದೆ.

ಭಾರತೀಯನಾಗಿ ಇದು ಬೇಸರದ ವಿಚಾರ. ಆದರೆ ಒಬ್ಬ ಬರಹಗಾರನಾಗಿ, ವೀಕ್ಷಕನಾಗಿ, ಮೋದಿ ಅವರು ವೈಯಕ್ತಿಕವಾಗಿ ಹೊಂದಿರುವ ಬೆಂಬಲದ ಪ್ರಮುಖ ಸ್ತಂಭವಾದ ಮೊದಲ ವರ್ಗದ ಜನ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕುತೂಹಲಕರವಾಗಿರುತ್ತದೆ.

ಲೇಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

Comments
ಈ ವಿಭಾಗದಿಂದ ಇನ್ನಷ್ಟು
ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

ದೂರ ದರ್ಶನ
ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

20 Mar, 2018
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

ದೂರ ದರ್ಶನ
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

12 Mar, 2018
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

ದೂರ ದರ್ಶನ
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

5 Mar, 2018
ಗುಜರಾತ್ ಮಾದರಿಯ ಇನ್ನೊಂದು ಮುಖ!

ದೂರ ದರ್ಶನ
ಗುಜರಾತ್ ಮಾದರಿಯ ಇನ್ನೊಂದು ಮುಖ!

26 Feb, 2018

ದೂರ ದರ್ಶನ
ಹಿಂಸೆಯಿಲ್ಲದ ಯುದ್ಧದಲ್ಲಿ ತಂತ್ರಜ್ಞಾನದ್ದೇ ಮೇಲುಗೈ

ಆಧುನಿಕ ರಾಷ್ಟ್ರವು ಯುದ್ಧದ ವೇಳೆ ಶತ್ರು ರಾಷ್ಟ್ರದ ಸಂಪರ್ಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವತ್ತ ಗಮನ ನೀಡುತ್ತದೆ. ಇಂಟರ್ನೆಟ್‌ ಸೇವೆಗಳು ಸ್ಥಗಿತವಾಗುವಂತೆ ಮಾಡಿದರೆ ಯಾವುದೇ ಆಧುನಿಕ ರಾಷ್ಟ್ರ...

19 Feb, 2018