ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದೇವತೆ ಹೆಜ್ಜೆ ಗುರುತು ಉಳಿಸಲು ಬಂದೂಕು ಅಗತ್ಯ

ದಲಿತ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕವಿಗೋಷ್ಠಿ ಉದ್ಘಾಟನೆ
Last Updated 1 ಜನವರಿ 2018, 8:52 IST
ಅಕ್ಷರ ಗಾತ್ರ

ಕೋಲಾರ: ‘ನೆಲದೇವತೆಗಳ ಹೆಜ್ಜೆ ಗುರುತುಗಳನ್ನು ಉಳಿಸಿಕೊಳ್ಳಲು ಬಂದೂಕು ಹಿಡಿಯುವ ಅಗತ್ಯವಿದೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ದಲಿತ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ‘ದಲಿತ ಲೇಖಕ ಕಲಾವಿದರ ಯುವ ಸಂಘಟನೆಯಿಂದ ನಡು ಇರುಳು ಶಕುನ ನುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ದೇಶ ಬಹಳ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ನುಡಿಯ ಗುರಿಕಾರರು ಸಿಡಿಲಕ್ಷರಗಳ ಸಂವಹನ ತಂತ್ರಗಾರಿಕೆಗಳ ಮೂಲಕ ಜನ ಸಮುದಾಯವನ್ನು ಎಚ್ಚರಗೊಳಿಸಬೇಕು ಎಂದು
ಹೇಳಿದರು.

ರಾಜ್ಯದಲ್ಲಿ ಡಾಕ್ಟರ್ ಮೋದಿ ಕಣ್ಣುಗಳನ್ನು ತೆರೆಸುತ್ತಿದ್ದರು, ಪ್ರಧಾನಿ ಮೋದಿ ತೆರೆದಿರುವ ಕಣ್ಣುಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಇಂತ ಸನ್ನಿವೇಶದಲ್ಲಿ ಬುದ್ಧನನ್ನು ಬ್ರಾಂಡ್‌ನಂತೆ ಬಳಸಿಕೊಳ್ಳದೆ ಜನಸಮುದಾಯದ ಒಳ ಅರಿವು ಬೆಳಗಿಸಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ದಲಿತ ಸಾಹಿತ್ಯವು ಹಿಂದೆಂದಿಗಿಂತಲೂ ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಮಾನವೀಯ ಮೌಲ್ಯ ತುಂಬಿಕೊಂಡಿರಬೇಕು’ ಎಂದು ಸ್ನಾತಕೋತ್ತರ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಸಲಹೆ ನೀಡಿದರು.

ದಲಿತ ಸಾಹಿತ್ಯ ಇಲ್ಲದಿದ್ದರೆ ಕನ್ನಡ ಸಾಹಿತ್ಯ ಸತ್ವ ಇಲ್ಲದಂತಾಗುತ್ತಿತ್ತು. ಅಂಬೇಡ್ಕರ್‌ ಅವರಿಂದ ಆರಂಭವಾದ ದಲಿತ ಸಾಹಿತ್ಯ ವಿಮರ್ಶಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಂದ ಹುಟ್ಟಿತು. ಸಾಮಾಜಿಕ ತಿಳುವಳಿಕೆ ಇಲ್ಲದಿದ್ದರೆ ದಲಿತ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ ಮಾತನಾಡಿ, ‘ದಲಿತ ಸಾಹಿತಿ ಬರಹಗಾರರು ದೇಶದಲ್ಲಿ ಮತ್ತೊಂದು ಇತಿಹಾಸ ಚರಿತ್ರೆ ಸೃಷ್ಠಿಸಬೇಕಾಗಿರುವುದರಿಂದ ಕಣ್ಣು, ಕಿವಿ, ಮೂಗನ್ನು ಸಂವೇದನಾಶೀಲವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಂಬೇಡ್ಕರ್ ಸಾಹಿತ್ಯದಿಂದ ಪ್ರೇರಣೆಗೊಂಡ ಅಸಂಖ್ಯಾತ ದಲಿತ ಬರಗಾರರು ದೇಶಾದಲ್ಲಿದ್ದಾರೆ. ದಲಿತ ಸಾಹಿತಿಗಳಿಗೆ ಇರುವಷ್ಠು ಜೀವನಾನುಭವ ಇತರೆ ವರ್ಗದ ಸಾಹಿತಿಗಳಿಗೆ ಸಿಗಲು ಸಾಧ್ಯವಿಲ್ಲ. ಶ್ರದ್ಧೆ ಮತ್ತು ಪೂರ್ವಸಿದ್ಧತೆಗಳಿಂದ ಸಾಹಿತ್ಯ ರಚನೆ ಮಾಡಿದರೆ ಸಾಹಿತಿಗಳಿಗೆ ಗೌರವ ಸಿಗುತ್ತದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ‘ಅನುಭವಿ ಹಾಗೂ ಶ್ರಮಿಕ ವರ್ಗದ ಕಾರಣ ದಲಿತ ಸಾಹಿತ್ಯವು ದೇಶದ ಮಹಾ ಕಾವ್ಯಗಳಿಗಿಂತಲೂ ಅನುಭವ ಜನ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯವು ಪ್ರಖರವಾಗಿ, ತೀಕ್ಷ್ಣವಾಗಿ ಹೃದಯ ತಟ್ಟುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ದಲಿತ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲುತ್ತದೆ ಎಂದು ಪ್ರಕಟಿಸಿದರು.

ಸರ್ಕಾರಗಳೇ ಸಮಾಜವನ್ನು ವಿಭಜಿಸಲು ಮುಂದಾಗಿರುವುದರಿಂದ ಸಾಹಿತಿಗಳು ಸೂಜಿಗಳಂತೆ ಜೋಡಿಸುವ ಕಾರ್ಯವನ್ನು ತಮ್ಮ ಸಾಹಿತ್ಯ ಕೃಷಿಯ ಮೂಲಕ ಮಾಡಬೇಕಾಗಿದೆ. ದಲಿತರು ಬರೆದಿದ್ದೆಲ್ಲವೂ ದಲಿತ ಸಾಹಿತ್ಯವಾಗುವುದಿಲ್ಲ. ದಲಿತರ ಬದುಕು ಬವಣೆಯ ಕುರಿತು ಬರೆದಿದ್ದೇ ದಲಿತ ಸಾಹಿತ್ಯವಾಗಲಿ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಅರ್ಜುನ ಗೊಳಸಂಗಿ, ಕೆ.ವೆಂಕಟೇಶಪ್ಪ, ಪಾಪಣ್ಣ, ಸದಾಶಿವ, ವೈ.ವಿ.ಗೋವಿಂದಪ್ಪ, ರಘುಪತಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT