ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಮ್ಸ್‌: ಡಿ ಗ್ರೂಪ್‌ ನೌಕರರ ಅರ್ಧ ಸಂಬಳ ಕಡಿತ

ಹಳೆಯ ಸಂಬಳ ನೀಡುವಂತೆ ಕಾರ್ಮಿಕ ಇಲಾಖೆ ಸುತ್ತೋಲೆ; ಕಾರ್ಮಿಕರು ಕಂಗಾಲು
Last Updated 1 ಜನವರಿ 2018, 9:07 IST
ಅಕ್ಷರ ಗಾತ್ರ

ಮಂಡ್ಯ: ‘ಮಿಮ್ಸ್‌’ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುವ 200ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರ ಅರ್ಧ ಕಡಿಮೆ ಯಾಗಿದ್ದು ನೌಕರರು ಕಂಗಾಲಾಗಿದ್ದಾರೆ.

‘ಮಿಮ್ಸ್‌’ನಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಕಾರ್ಮಿಕರನ್ನು ವಿವಿಧ ಹಂತದಲ್ಲಿ ನೇಮಕ ಮಾಡಿ ಕೊಳ್ಳಲಾಗಿದೆ. ನಾನ್‌ಕ್ಲಿನಿಕಲ್‌ ಕಾರ್ಮಿಕರನ್ನು ಅರ್ಕೇಶ್ವರ ಎಂಟರ್‌ ಪ್ರೈಸ್‌ ನೇಮಕ ಮಾಡಿಕೊಂಡಿದೆ. ಈ ವರ್ಗದ ಎಲ್ಲಾ ಕಾರ್ಮಿಕರು ಡಿ ಗ್ರೂಪ್‌ ನೌಕರರಾಗಿದ್ದಾರೆ. ಕಾಲೇಜು ಹಾಗೂ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಈ ಸಿಬ್ಬಂದಿಯ ಸಂಬಳ ತಡವಾಗಿ ಬಂದಿದ್ದು ₹ 4 ಸಾವಿರ ಕಡಿಮೆಯಾಗಿದೆ. ಅವರ ಸಂಬಳ ₹ 9,400 ಇತ್ತು. ನವೆಂಬರ್‌ ತಿಂಗಳಲ್ಲಿ ಕೇವಲ ₹ 5,400 ಮಾತ್ರ ಬಂದಿದೆ.

ಗುತ್ತಿಗೆದಾರರು ಕಾರ್ಮಿಕರ ಸಂಬಳವನ್ನು ನೇರವಾಗಿ ಖಾತೆಗಳಿಗೆ ಜಮಾ ಮಾಡಿದ್ದಾರೆ. ಕಡಿಮೆ ಸಂಬಳ ಬಂದಿರುವುದನ್ನು ಕಂಡ ನೌಕರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಡಿ ಗ್ರೂಪ್‌ ನೌಕರರು ಮಾತ್ರವಲ್ಲದೆ ತಾಂತ್ರಿಕ ಸಿಬ್ಬಂದಿಯ ಅರ್ಧ ಸಂಬಳವೂ ಕಡಿಮೆಯಾಗಿದೆ. ಇವರನ್ನು ರಂಗನಾಥ ಏಜೆನ್ಸಿ ನೇಮಕ ಮಾಡಿಕೊಂಡಿದೆ. ತಾಂತ್ರಿಕ ವರ್ಗದಲ್ಲಿ ಕಂಪ್ಯೂಟರ್‌ ಆಪರೇಟರ್‌ಗಳು, ತೀವ್ರ ನಿಗಾ ಘಟಕ, ರಕ್ತ ಪರೀಕ್ಷಾ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ತಂತ್ರಜ್ಞರು ಸೇರಿದ್ದಾರೆ. ಇವರಿಗೆ ₹ 10 ಸಾವಿರ ಸಂಬಳ ಬರುತ್ತಿತ್ತು. ಆದರೆ ನವೆಂಬರ್‌ ತಿಂಗಳಲ್ಲಿ ಕೇವಲ ₹ 5 ಸಾವಿರ ಮಾತ್ರ ಬಂದಿದೆ.

ಇವರ ಜೊತೆಗೆ ಭದ್ರತಾ ಸಿಬ್ಬಂದಿಯ ಅರ್ಧ ಸಂಬಳ ಕಡಿತಗೊಂಡಿದೆ. ಭದ್ರತಾ ಸಿಬ್ಬಂದಿಯನ್ನು ಕಾಂತ ಏಜೆನ್ಸಿ ನೇಮಕ ಮಾಡಿಕೊಂಡಿದೆ. ತಡವಾಗಿ ಬಂದ ಸಂಬಳ ನೋಡಿದ ಈ ಮೂರು ವರ್ಗದ ನೌಕರರು ಕಂಗಾಲಾಗಿದ್ದಾರೆ. ಈ ಬಗ್ಗೆ ಸಂಸ್ಥೆಯ ಆರ್ಥಿಕ ಇಲಾಖೆಯಲ್ಲಿ ವಿಚಾರಿಸಿದಾಗ ಅವರು ಹೈಕೋರ್ಟ್‌ ಆದೇಶದಂತೆ ಸಂಬಳವನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್‌ ತಡೆಯಾಜ್ಞೆ ಕಾರಣ

ಮೇ ತಿಂಗಳಲ್ಲಿ ಕನಿಷ್ಙ ವೇತನ ಕಾಯ್ದೆಯಡಿ ಹೊರಗುತ್ತಿಗೆ ಕಾರ್ಮಿಕರ ಸಂಬಳವನ್ನು ಹೆಚ್ಚಳ ಮಾಡಲಾಗಿತ್ತು. ಕಾರ್ಮಿಕ ಇಲಾಖೆ ಎಲ್ಲಾ ಆಸ್ಪತ್ರೆಗಳ ನೌಕರರಿಗೆ ಕನಿಷ್ಠ ವೇತನ ನೀಡಬೇಕು ಸುತ್ತೋಲೆ ಕಳುಹಿಸಿತ್ತು. ಅದರಂತೆ ವೇತನವನ್ನು ಹೆಚ್ಚಳ ಮಾಡಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆಗಳು ಕಾಯ್ದೆಯ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದವರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ ಕನಿಷ್ಠ ವೇತನ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಹೀಗಾಗಿ ಕಾರ್ಮಿಕ ಇಲಾಖೆ ಇನ್ನೊಂದು ಸುತ್ತೋಲೆ ಕಳುಹಿಸಿ ಹೊರಗುತ್ತಿಗೆ ಕಾರ್ಮಿಕರಿಗೆ ಹಳೆಯ ವೇತನವನ್ನೇ ನೀಡುವಂತೆ ಸೂಚನೆ ನೀಡಿತ್ತು. ಹೀಗಾಗಿ ನವೆಂಬರ್‌ ತಿಂಗಳಲ್ಲಿ ಅರ್ಧ ಸಂಬಳ ಕಡಿತ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದವು.

‘ಜೂನ್‌ ತಿಂಗಳಲ್ಲೇ ಕನಿಷ್ಠ ವೇತನ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಆದರೆ ನಾವು ನಾಲ್ಕೈದು ಕನಿಷ್ಠ ವೇತನ ಆದೇಶದಂತೆಯೇ ಸಂಬಳ ನೀಡುತ್ತಿದ್ದೆವು. ಗುತ್ತಿಗೆದಾರರು ನೀಡಿದ ಹಾಜರಾತಿಯಂತೆ ನೌಕರರ ಇಎಸ್‌ಐ, ಪಿಎಫ್‌ ಕಡಿತ ಮಾಡಿಕೊಂಡು ಸಂಬಳ ವಿತರಿಸುತ್ತಿದ್ದೆವು. ಆದರೆ ಈಗ ಕಾರ್ಮಿಕ ಇಲಾಖೆಯಿಂದ ಹಳೆಯ ಸಂಬಳ ನೀಡುವಂತೆ ಸುತ್ತೋಲೆ ಬಂದಿರುವ ಕಾರಣ ನವೆಂಬರ್‌ ತಿಂಗಳಿಂದ ಹಳೆಯ ಸಂಬಳ ನೀಡುತ್ತಿದ್ದೇವೆ. ತಡೆಯಾಜ್ಞೆ ತೆರವುಗೊಂಡರೆ ಕನಿಷ್ಠ ವೇತನ ನೀಡಲಾಗುವುದು. ಬಾಕಿ ವೇತನವನ್ನೂ ಬಿಡುಗಡೆ ಮಾಡಲಾಗುವುದು’ ಎಂದು ಮಿಮ್ಸ್‌ ಸಿಇಒ ಎಚ್‌.ಜಯಾ ತಿಳಿಸಿದರು.

‘ಇದ್ದಕ್ಕಿದ್ದಂತೆ ಅರ್ಧ ಸಂಬಳ ಕಡಿಮೆ ಮಾಡಿದ್ದಾರೆ. ಹೊಸ ಸಂಬಳಕ್ಕೆ ನಾವು ಹೊಂದಿಕೊಂಡಿದ್ದೆವು. ಇಷ್ಟು ಹಣದಲ್ಲಿ ಕುಟುಂಬ ನಡೆಯುವುದು ಕಷ್ಟ. ನಮಗೆ ಹೊಸ ಸಂಬಳ ಕೊಡಬೇಕು. ಇಲ್ಲದಿದ್ದರೆ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಮಿಮ್ಸ್‌ನ ಡಿ ಗ್ರೂಪ್‌ ನೌಕರರೊಬ್ಬರು ಹೇಳಿದರು.

ಹೋರಾಟಗಾರರಿಗೆ ಕಮಿಷನ್‌?

ಮಂಡ್ಯ: ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ನಗರದ ಕೆಲ ಕಾರ್ಮಿಕ ಹೋರಾಟಗಾರರು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಕಾರ್ಮಿಕ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಆದರೆ ಕಾನೂನು ಸಮರಕ್ಕೆ ಹೋರಾಟಗಾರರು ಬಡ ಕಾರ್ಮಿಕರಿಂದ ಕಮಿಷನ್‌ ಕೇಳುತ್ತಿದ್ದಾರೆ. ಹೋರಾಟಗಾರರ ಹಣದಾಸೆಯಿಂದ ಈಗಾಗಲೇ ನೋವು ಅನುಭವಿಸುತ್ತಿರುವ ಕಾರ್ಮಿಕರು ಮತ್ತಷ್ಟು ಕಂಗಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕೋರ್ಟಿನ ಖರ್ಚಿಗಾಗಿ ತಿಂಗಳಿಗೆ ಒಬ್ಬ ಕಾರ್ಮಿಕ ₹ 500 ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಲ್ಪ ಹಣದಲ್ಲಿ ಈಗ ಗಂಜಿಗೂ ಗತಿ ಇಲ್ಲದಂತಾಗಿದೆ. ಈಗ ನಮ್ಮ ಮುಖಂಡರು ಹಣ ಕೇಳುತ್ತಿರುವುದು ನಮಗೆ ದಿಕ್ಕು ತೋಚದಂತಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಾರ್ಮಿಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT