ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸಜ್ಜು

ಅಗ್ನಿಶಾಮಕ ವಾಹನ ಮಾದರಿಯಲ್ಲಿಯೇ ಲಘು ವಾಹನ ತಯಾರಿ
Last Updated 1 ಜನವರಿ 2018, 10:09 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಬೇಸಿಗೆ ಆರಂಭಕ್ಕೂ ಮೊದಲೇ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಇದಕ್ಕಾಗಿ ಅಗ್ನಿಶಾಮಕ ವಾಹನ ಮಾದರಿಯಲ್ಲಿಯೇ ಲಘು ವಾಹನ ತಯಾರಿಸಿ, ಇದರ ಬಳಕೆ ಕುರಿತು ಸಿಬ್ಬಂದಿ ತರಬೇತಿ ನೀಡಿದೆ.

ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾಮಕ ವಾಹನ ಬರುವುದು ತಡವಾಗುತ್ತದೆ. ಅಲ್ಲದೆ, ಕಿರಿದಾದ ಮತ್ತು ತಗ್ಗು ಪ್ರದೇಶಗಳಲ್ಲಿ ಸಂಚಾರ ಅಸಾಧ್ಯ. ಇದರಿಂದ ಬೆಂಕಿ ನಂದಿಸು ವುದು ವಿಳಂಬವಾಗಿ ಹೆಚ್ಚಿನ ಪ್ರಮಾಣದ ಅನಾಹುತ ಸಂಭವಿಸುತ್ತದೆ. ಹೀಗಾಗಿ, ಇಲಾಖೆ ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ರಾಷ್ಟ್ರೀಯ ಉದ್ಯಾನಗಳ ಉಪ ವಿಭಾಗಗಳಿಗೆ ತಲಾ ಒಂದೊಂದು ವಾಹನ ಸಿದ್ಧಪಡಿಸಲಾಗಿದೆ. ಇದರಲ್ಲಿ 2 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾ ಗಿದೆ. ಇದಕ್ಕೆ ಪಂಪ್ ಜೋಡಿಸಲಾಗಿದ್ದು, ಇದು ಸುಮಾರು 50 ಮೀಟರ್ ದೂರಕ್ಕೆ ನೀರು ಚಿಮ್ಮಿಸುವ ಸಾಮರ್ಥ್ಯ ಹೊಂದಿದೆ.

ಇದರಿಂದ ಸಿಬ್ಬಂದಿಗೆ ಬೆಂಕಿಯ ಶಾಖ ತಗುಲುವುದಿಲ್ಲ. ಹಾಗೂ ಅವಘಡ ಗಳಿಗೆ ಸಿಲುಕುವ ಸಾಧ್ಯತೆ ಕಡಿಮೆ. ಜತೆಗೆ, ಅಗ್ನಿಶಾಮಕ ವಾಹನಕ್ಕೆ ಕಾಯುವ ಪ್ರಮೇಯ ಉಂಟಾಗುವುದಿಲ್ಲ. 20 ಲೀಟರ್ ಸಾಮರ್ಥ್ಯದ ಸ್ಪೇಯರ್ ಕೂಡ ಸಿದ್ಧ ಮಾಡಿಕೊಳ್ಳಲಾಗುತ್ತದೆ. ಹೆಗಲಿಗೆ ನೇತುಹಾಕಿಕೊಂಡು ಸುಲಭವಾಗಿ ಉಪಯೋಗಿಸಬಹುದಾಗಿದೆ.

ಹಿಂದಿನ ವರ್ಷ ಬಂಡೀಪುರ ಹುಲಿ ರಕ್ಷಿತಾರಣ್ಯದ ಎಚ್.ಡಿ.ಕೋಟೆ ಭಾಗಕ್ಕೆ ಸೇರಿದ ಬೇಗೂರು, ಗುಂಡ್ರೆ, ಮೊಳೆಯೂರು ವಲಯದಲ್ಲಿ ಕಾಡ್ಗಿಚ್ಚಿಗೆ ಅಪಾರ ವನಸಂಪತ್ತು ನಾಶವಾಗಿತ್ತು. ಬೆಂಕಿ ನಂದಿಸಲು ಹೋಗಿದ್ದ ಸಿಬ್ಬಂದಿ ಕೂಡ ತೀವ್ರವಾಗಿ ಗಾಯಗೊಂಡಿದ್ದರು. ಹೀಗಾಗಿ, ಈ ಬಾರಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಬೆಂಕಿ ರೇಖೆ: ಬಂಡೀಪುರ ಅಭಯಾರಣ್ಯ ಎಚ್.ಡಿ.ಕೋಟೆ ಭಾಗದ ವಲಯದಲ್ಲಿರುವ ರಸ್ತೆಗಳ ಇಕ್ಕೆಲದಲ್ಲಿ ಬೆಂಕಿ ರೇಖೆ ಹಾಕಲಾಗುತ್ತಿದೆ. ಇದಕ್ಕಾಗಿ ಇಕ್ಕೆಲದಿಂದ 10 ಮೀಟರ್ ಮತ್ತು ಡೀ ಲೈನ್ ಅಕ್ಕಪಕ್ಕದಲ್ಲಿ 20 ಮೀಟರ್ ದೂರ ಗಿಡ–ಗಂಟಿ ತೆರವುಗೊಳಿಸಲಾಗಿದೆ.
‘ಹುಲ್ಲು ಒಣಗಿದ ನಂತರ ಗಿಡ–ಗಂಟಿ ತೆರವುಗೊಳಿಸಿರುವ ಸ್ಥಳಗಳಲ್ಲಿ ಬೆಂಕಿ ರೇಖೆ ಹಾಕಲಾಗುತ್ತಿದೆ. ತಾಲ್ಲೂಕಿನ ಮೇಟಿಕುಪ್ಪೆ, ಅಂತರಸಂತೆ ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸುಮಾರು 550 ಕಿ.ಮೀ. ಬೆಂಕಿ ರೇಖೆ ಮಾಡಲಾಗಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೆಂಕಿರೇಖೆಯ ಲಾಭಗಳು: ಕಾಡಿನ ಮಧ್ಯೆ ಹಾದುಹೋಗುವ ರಸ್ತೆಗಳಲ್ಲಿ ಸಂಚರಿಸುವ ಧೂಮಪಾನಿಗಳು ಬೀಡಿ, ಸಿಗರೇಟ್ ಬಿಸಾಡಿದಾಗ ಅದರಿಂದ ಒಣಗಿದ ಹುಲ್ಲು ಮತ್ತು ಎಲೆಗಳಿಗೆ ಕಿಡಿ ತಗುಲಿ, ನಂತರ ಅರಣ್ಯಕ್ಕೆ ವ್ಯಾಪಿಸಲಿದೆ. ಈ ಅನಾಹುತದಿಂದ ಪಾರಾಗಲು ರಸ್ತೆಗಳ ಇಕ್ಕೆಲದಲ್ಲಿನ ಒಣ ಹುಲ್ಲು, ಗಿಡ–ಗಂಟಿ ಸುಡಲಾಗುತ್ತದೆ. ಇದರಿಂದ ರಸ್ತೆ ಬದಿ ಬೆಂಕಿಯ ಕಿಡಿ ಬಿದ್ದರೂ ಅದು ಕಾಡಿನ ಒಳಗೆ ವ್ಯಾಪಿಸುವುದಿಲ್ಲ.

‘ಬಂಡೀಪುರ ಉದ್ಯಾನದ ಶೇ 70 ಭಾಗದಲ್ಲಿ ಗಿಡ–ಗಂಟಿ ತೆರವುಗೊಳಿಸಲಾಗಿದೆ. ಪ್ರಾಣಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶ ದಿಂದ ಹೆಚ್ಚು ಹುಲ್ಲು ಕಡಿಯುತ್ತಿಲ್ಲ. ಲಂಟನಾದಂತಹ ಸಸ್ಯ ಮಾತ್ರ ಕಡಿಯಲಾಗುತ್ತಿದೆ. ಮುಂಜಾಗ್ರತೆ ಕ್ರಮವಾಗಿ ಬಾಡಿಗೆ ಆಧಾರದ ಮೇಲೆ ಮೂರು ಲಘು ನೀರಿನ ಟ್ಯಾಂಕ್ ಉಳ್ಳ ವಾಹನ ತೆಗೆದುಕೊಳ್ಳಲಾಗುತ್ತಿದೆ’ ಎಂದು ಬಂಡೀಪುರ ಅರಣ್ಯದ ಸಿಎಫ್ ಅಂಬಾಡಿ ಮಾದವ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT