ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಘಟ್ಟಕ್ಕೆ ‘ಮುನಿರತ್ನ ಕುರುಕ್ಷೇತ್ರ’

Last Updated 1 ಜನವರಿ 2018, 10:24 IST
ಅಕ್ಷರ ಗಾತ್ರ

ಮಧ್ಯಾಹ್ನದ ರಣಬಿಸಿಲು. ಹೈದರಾಬಾದ್‌ನ ರಾಮೋಜಿರಾವ್‌ ಸ್ಟುಡಿಯೋ ಅಂಗಳ ಕುರುಕ್ಷೇತ್ರದ ರಣರಂಗಕ್ಕೆ ಸಜ್ಜಾಗಿತ್ತು. ಅಲ್ಲಿ ದುರ್ಯೋಧನನನ್ನು ಪರಿಚಯಿಸುವ ಹಾಡಿನ ಶೂಟಿಂಗ್‌ ನಡೆಯುತ್ತಿತ್ತು. ‘ಸಾಹಾರೋ ಸಾಹೋ ಸುಯೋಧನ...’ ಗೀತೆಯಲ್ಲಿ ಕಲಾವಿದರು ತಲ್ಲೀನರಾಗಿದ್ದರು. ಅಂಬಾರಿ ಏರಿ ದುರ್ಯೋಧನ ಕುಳಿತುಕೊಂಡು ಬರುವ ದೃಶ್ಯ ಸೆರೆ ಹಿಡಿಯುವ ತಾಲೀಮು ನಡೆಯುತ್ತಿತ್ತು. ದುರ್ಯೋಧನ ಪಾತ್ರಧಾರಿ ದರ್ಶನ್ ತಂಡಕ್ಕೆ ಸೇರಿಕೊಂಡು ಮೂರು ಟೇಕ್ ತೆಗೆದುಕೊಂಡರು. ನಿರ್ದೇಶಕರಿಂದ ಹಸಿರು ನಿಶಾನೆ ಸಿಕ್ಕಿದಾಗ ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿತು. ಆಗ ಊಟದ ಸಮಯವೂ ಮೀರಿತ್ತು!

ಮುನಿರತ್ನ ನಿರ್ಮಾಣದ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಇದು ನಟ ದರ್ಶನ್‌ ಅಭಿನಯದ 50ನೇ ಚಿತ್ರ. ಹಾಗಾಗಿ, ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಕನ್ನಡ ಚಿತ್ರರಂಗದ ಬಹುತೇಕ ನಟರು ನಟಿಸಿರುವುದರಿಂದ ಕುತೂಹಲ ಮೂಡಿಸಿದೆ.

‘ಡಾ.ರಾಜ್‍ಕುಮಾರ್‌ ಕಾಲದಲ್ಲಿ ‘ಬಬ್ರುವಾಹನ’, ‘ಹುಲಿಯ ಹಾಲಿನ ಮೇವು’, ‘ಭಕ್ತ ಪ್ರಹ್ಲಾದ’ದಂತಹ ಐತಿಹಾಸಿಕ, ಪೌರಾಣಿಕ ಸಿನಿಮಾಗಳು ತೆರೆಕಂಡಿದ್ದವು. ಆ ನಂತರ ದರ್ಶನ್ ಅಭಿನಯದ ‘ಸಂಗೊಳ್ಳಿ ರಾಯಣ್ಣ’ ಚಿತ್ರ ತೆರೆಕಂಡಿತು. ಅನ್ಯಭಾಷಿಕರು ಕೂಡ ಕನ್ನಡ ಚಿತ್ರರಂಗದತ್ತ ನೋಡುವಂತೆ ಸಿನಿಮಾ ನಿರ್ಮಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿ ಈ ಸಾಹಸಕ್ಕೆ ಕೈ ಹಾಕಿದ್ದೇನೆ’ ಎಂದು ಮಾತಿಗಿಳಿದರು ನಿರ್ಮಾಪಕ ಮುನಿರತ್ನ.

ಭೀಮನ ಪಾತ್ರ ಹೂರತುಪಡಿಸಿದರೆ ಉಳಿದ ಎಲ್ಲ ಪಾತ್ರಗಳಲ್ಲಿ ಕನ್ನಡದ ನಟರೇ ನಟಿಸಿದ್ದಾರೆ. ಕರ್ಣನಾಗಿ ಅರ್ಜುನ್ ಸರ್ಜಾ, ಕೃಷ್ಣನಾಗಿ ರವಿಚಂದ್ರನ್‌ ನಟಿಸಿದ್ದಾರೆ. ಭಾನುಮತಿ ಪಾತ್ರದಲ್ಲಿ ಮೇಘನಾರಾಜ್, ಭೀಷ್ಮನಾಗಿ ಅಂಬರೀಷ್‌ ಮತ್ತು ಕುಂತಿ ಪಾತ್ರದಲ್ಲಿ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದಾರೆ.

ಚಿತ್ರದ ಶೇ 40ರಷ್ಟು ಭಾಗ ಗ್ರಾಫಿಕ್ಸ್‌ನಿಂದ ಕೂಡಿದೆ. 2ಡಿ, 3ಡಿ ಮಾದರಿಯಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಹಾಗಾಗಿ, ಪ್ರತಿ ದೃಶ್ಯವನ್ನು ಎರಡು ಬಾರಿ ಚಿತ್ರೀಕರಣ ನಡೆಸಬೇಕಿದೆಯಂತೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಕಲಾವಿದರು, ಕುದುರೆಗಳು, ಆನೆಗಳು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿವೆ. ಮಾರ್ಚ್ 2ರಂದು ಸೆನ್ಸಾರ್ ಮುಂದೆ ಚಿತ್ರ ಬರಲಿದೆ. ಅದೇ ತಿಂಗಳ ಎರಡನೇ ವಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

‘ಎಲ್ಲಾ ಕಲಾವಿದರಿಗೂ ಪೌರಾಣಿಕ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಸಹಜ. ಆ ಕನಸು ನನಸಾಗಿದೆ‘ ಎಂದರು ನಟಿ ಮೇಘನಾರಾಜ್.

‘ದರ್ಶನ್‌ ಮುಂಜಾನೆ 5 ಗಂಟೆಗೆ ಎದ್ದು ಮೂರು ಗಂಟೆ ವ್ಯಾಯಾಮ ಮಾಡಿ ಪಾತ್ರಕ್ಕೆ ಸಿದ್ಧರಾಗುತ್ತಿದ್ದರು. ಹದಿನಾರು ದಿನಗಳ ಕಾಲ ಕ್ಲೈಮ್ಯಾಕ್ಸ್‌ ಚಿತ್ರೀಕರಿಸಲಾಗಿದೆ. ಏಕಕಾಲಕ್ಕೆ ನೃತ್ಯ, ಯುದ್ಧದ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕ ನಾಗಣ್ಣ.‌

‘ಪೌರಾಣಿಕ, ಐತಿಹಾಸಿಕ ಸಿನಿಮಾಕ್ಕೆ ಮೊದಲು ಆದ್ಯತೆ ನೀಡುತ್ತೇನೆ. ಮುಂದಿನ ತಲೆಮಾರಿನವರಿಗೆ ಭೀಮ, ದುರ್ಯೋಧನ ಯಾರೆಂದು ತಿಳಿಯುವುದಿಲ್ಲ. ಇಂತಹ ಚಿತ್ರಗಳಿಂದ ಮಕ್ಕಳಿಗೆ ಮಹಾಭಾರತ, ರಾಮಾಯಣದ ಬಗ್ಗೆ ಅರಿವಾಗುತ್ತದೆ. ನಾಗಣ್ಣ, ಜಯನನ್‌ ವಿನ್ಸೆಂಟ್ ಅದ್ಭುತವಾಗಿ ಕೆಲಸ ಮಾಡಿದ್ದಾರೆ’ ಎಂದರು ನಟ ದರ್ಶನ್.

‘ಈ ಚಿತ್ರ ಕನ್ನಡ ಚಿತ್ರರಂಗದ ಹೊಸ ಮೈಲುಗಲ್ಲು ಆಗಲಿದೆ. ಮುನಿರತ್ನ ಅವರ ಸಿನಿಮಾ ಪ್ರೀತಿ ನನಗಿಷ್ಟ. ಯಾರು ಬೇಕಾದರೂ ಕಮರ್ಷಿಯಲ್ ಸಿನಿಮಾ ಮಾಡಬಹುದು. ಪೌರಾಣಿಕ ಸಿನಿಮಾ ಮಾಡೋದು ಸುಲಭವಲ್ಲ. ಈ ಸಿನಿಮಾದಿಂದ ನಾನು ತಾಳ್ಮೆ ಕಲಿತೆ’ ಅಂತಾರೆ ದರ್ಶನ್.

ಜಯನನ್‌ ವಿನ್ಸೆಂಟ್‌ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಿ. ನಾಗೇಂದ್ರಪ್ರಸಾದ್‌ ಸಾಹಿತ್ಯ ನೀಡಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಕಿಂಗ್‌ ಸಾಲೋಮನ್‌ ಅವರ ಸಾಹಸ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT