ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲೇ ಕಿತ್ತು ಬರುತ್ತಿದೆ ಸಿಂಥೆಟಿಕ್ ಟ್ರ್ಯಾಕ್!

ಕಳಪೆ ಕಾಮಗಾರಿ ಆರೋಪ
Last Updated 1 ಜನವರಿ 2018, 11:25 IST
ಅಕ್ಷರ ಗಾತ್ರ

ಶಿವಮೊಗ್ಗ: ಅಥ್ಲೀಟ್‌ಗಳ ಅನುಕೂಲಕ್ಕಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿರುವ ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗುತ್ತಿದೆ.

ಜಿಲ್ಲೆ ನೂರಾರು ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆ ನೀಡಿದೆ. ಇಲ್ಲಿ ಅಭ್ಯಾಸ ನಡೆಸಿದ ಅನೇಕರು ಜಿಲ್ಲೆಯ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸುತ್ತಿದ್ದಾರೆ. ಇಂತಹ ಜಿಲ್ಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇರುವ ಕ್ರೀಡಾಂಗಣ ಒಂದು ಇಲ್ಲ ಎನ್ನುವ ಕೊರಗು ಅನೇಕ ವರ್ಷಗಳಿಂದ ಹಾಗೆಯೇ ಉಳಿದಿತ್ತು. ಇದನ್ನು ನೀಗಿಸುವ ಸಲುವಾಗಿ ಅಂತರರಾಷ್ಟ್ರೀಯ ಮಟ್ಟದ ಸಿಂಥೆಟಿಕ್ ಟ್ರ್ಯಾಕ್‌ ಅನ್ನು ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಿರ್ಮಿಸಲಾಯಿತು.

ಈ ಟ್ರ್ಯಾಕ್‌ 2013ರ ಆ.3 ರಂದು ಉದ್ಘಾಟನೆಗೊಂಡು ಕ್ರೀಡಾಪಟುಗಳ ಸೇವೆಗೆ ಮುಕ್ತವಾಯಿತು. ಇದರಿಂದ ನೂರಾರು ಕ್ರೀಡಾಪಟುಗಳು, ಕ್ರೀಡಾಸಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ, ಈ ಖುಷಿ ಕೆಲವೇ ದಿನಗಳಿಗೆ ಸೀಮಿತವಾಗಿದೆ. ಸಿಂಥೆಟಿಕ್ ಟ್ರ್ಯಾಕ್‌ ಈಗಾಗಲೇ ಬಹುತೇಕ ಭಾಗ ಹಾಳಾಗಿದೆ.

ಮೊದಲಿನಿಂದಲೂ ಆರೋಪ:

ಟ್ರ್ಯಾಕ್‌ ನಿರ್ಮಾಣವಾದ ಮೊದಲ ದಿನದಿಂದಲೂ ನಿರ್ಮಾಣ ಕಾಮಗಾರಿ ಕಳಪೆಯಾಗಿರುವ ಆರೋಪ ಕೇಳಿಬಂದಿತ್ತು. ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ದೂರಲಾಗಿತ್ತು.ಇದಕ್ಕೆ ಪುಷ್ಟಿ ನೀಡುವಂತೆ ಈಗ ಟ್ರ್ಯಾಕ್‌ನ ಬಣ್ಣ ಮಾಸಿದೆ. ಅಲ್ಲದೇ ಕೆಲವೆಡೆ ಕಿತ್ತು ಹೋಗಿದೆ. ಸ್ವಲ್ಪ ಮಳೆ ಬಂದರೂ ಸಾಕು ನೀರು ಸಂಗ್ರಹವಾಗುತ್ತಿದೆ. ಹಲವು ದಿನಗಳವರೆಗೂ ನೀರು ನಿಂತು ಆ ಸ್ಥಳದಲ್ಲಿ ಕೊಳೆತಂತಾಗಿ ಕಪ್ಪಾಗಿ ಮೇಲಿನ ಹೊದಿಕೆ ಕಿತ್ತು ಹೋಗುತ್ತಿದೆ. ಇದು ಅಥ್ಲೀಟ್‌ಗಳ ಅಭ್ಯಾಸಕ್ಕೂ ತೊಂದರೆಯಾಗುತ್ತಿದೆ.

ನಿರ್ವಹಣೆ ಕೊರತೆ:

ಸಿಂಥೆಟಿಕ್‌ ಟ್ರ್ಯಾಕ್‌ನ ಟೆಂಡರ್‌ ಅನ್ನು ಬೆಂಗಳೂರಿನ ಮೇವರಿಕ್ ಟರ್ಫ್‌ ಕಾರ್ಪೊರೇಷನ್‌ಗೆ ವಹಿಸಲಾಗಿತ್ತು. ₹ 4.49 ಕೋಟಿ ವೆಚ್ಚದಲ್ಲಿ ನಿರ್ಮಾಣವಾಯಿತು. ಕಾಮಗಾರಿ ಪೂರ್ಣಗೊಂಡ ಬಳಿಕ ಐದು ವರ್ಷದವರೆಗೂ ಗುತ್ತಿಗೆ ಸಂಸ್ಥೆಯೇ ನಿರ್ವಹಣೆ ಮಾಡಬೇಕು ಎಂಬ ಶರತ್ತು ಹಾಕಲಾಗಿತ್ತು. ಆದರೆ, ಸಂಬಂಧಪಟ್ಟವರು ಅದನ್ನು ಪಾಲಿಸದ ಕಾರಣ ಟ್ರ್ಯಾಕ್‌ ತನ್ನ ಸೌಂದರ್ಯ ಕಳೆದುಕೊಂಡಿದೆ. ನೀಡಿದ ಅವಧಿ ಮುಗಿಯುವುದರೊಳಗೆ ಬಹುತೇಕ ಕಡೆ ಹಾಳಾಗಿದೆ.

ಕ್ರೀಡಾಪಟುಗಳು ಅಸಮಾಧಾನ:

ಸಿಂಥೆಟಿಕ್‌ ಟ್ರ್ಯಾಕ್‌ ಕಳಾಹೀನವಾಗಿರುವುದು ಕ್ರೀಡಾಪಟುಗಳ ಬೇಸರಕ್ಕೆ ಕಾರಣವಾಗಿದೆ. ಟ್ರ್ಯಾಕ್ ಹಲವೆಡೆ ಕಿತ್ತು ಬಂದಿರುವುದರಿಂದ ತಮ್ಮ ಅಭ್ಯಾಸಕ್ಕೆ ಹಾಗೂ ನಿರೀಕ್ಷಿತ ಮಟ್ಟದ ಸಾಧನೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ ಶೀಘ್ರವೇ ಸಂಬಂಧಪಟ್ಟವರು ಈ ಬಗ್ಗೆ ಮುತುವರ್ಜಿ ವಹಿಸಿ ಹಾಳಾಗಿರುವ ಟ್ರ್ಯಾಕ್‌ ಸರಿಪಡಿಸಬೇಕು ಎಂದು ನೂರಾರು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.

ಇನ್ನೂ ಶಿವಮೊಗ್ಗ ಜಿಲ್ಲಾ ಕೇಂದ್ರವಾಗಿರುವುದರಿಂದ ಬಹುತೇಕ ಕ್ರೀಡಾಕೂಟಗಳು ನೆಹರೂ ಕ್ರೀಡಾಂಗಣದಲ್ಲಿಯೇ ನಡೆಯುತ್ತಿವೆ. ಪ್ರಾಥಮಿಕ ಹಂತದಿಂದ ಹಿಡಿದು ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳು ಇಲ್ಲಿಯೇ ನಡೆಯುತ್ತಿವೆ. ಅಲ್ಲದೇ ಚಪ್ಪಲಿ ಧರಿಸಿ ಟ್ರ್ಯಾಕ್‌ ಮೇಲೆ ನಡೆಯದಂತೆ ಫಲಕ ಹಾಕಿದ್ದರೂ ಸಾರ್ವಜನಿಕರು ಹಾಗೂ ಕೆಲವರು ವಾಯು ವಿಹಾರಿಗಳು ನಿಯಮ ‍ಪಾಲಿಸುತ್ತಿಲ್ಲ. ಇದು ಕೂಡ ಟ್ರ್ಯಾಕ್‌ ಬೇಗನೇ ತನ್ನ ಅಂದ ಕಳೆದುಕೊಳ್ಳಲು ಮುಖ್ಯ ಕಾರಣವಾಗಿದೆ.
***
ಟೆಂಡರ್‌ದಾರರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಿಂಥೆಟಿಕ್ ಟ್ರ್ಯಾಕ್ ಹಾಳಾಗುತ್ತಿದೆ. ಈ ಸಂಬಂಧ ಕ್ರೀಡಾ ನಿರ್ದೇಶಕರ ಕಚೇರಿ ಹಾಗೂ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇನೆ.
– ರಮೇಶ್‌
ಸಹಾಯಕ ನಿರ್ದೇಶಕ,
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ

***
ಟ್ರ್ಯಾಕ್‌ಗೆ ಕಾಲಕಾಲಕ್ಕೆ ನೀರು ಹಾಕುವ, ದೂಳು ಹೊಡೆಯುವ ಕೆಲಸ ಆಗಬೇಕು. ಅಥ್ಲೆಟಿಕ್ಸ್‌ ಸಂಸ್ಥೆ ಕೂಡ ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು.
    – ಕೆ.ಎಸ್‌.ಶಶಿ, ಕಾರ್ಯದರ್ಶಿ,
      ಜಿಲ್ಲಾ ಒಲಂಪಿಕ್ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT