ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರು ಒಂದೊಂದು ಅನುಭವ ಮಂಟಪವಿದ್ದಂತೆ

ನಿವೃತ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ
Last Updated 1 ಜನವರಿ 2018, 12:17 IST
ಅಕ್ಷರ ಗಾತ್ರ

ತುಮಕೂರು: ’ನಮ್ಮ ನಡುವೆ ಇರುವ ಹಿರಿಯರು ಒಂದೊಂದು ಅನುಭವ ಮಂಟಪವಿದ್ದಂತೆ, ಹೀಗಾಗಿ ಹಿರಿಯರನ್ನು ಅವಮಾನಿಸುವುದು ಸಭ್ಯತೆಯೂ ಅಲ್ಲ, ಸಂಸ್ಕೃತಿಯೂ ಅಲ್ಲ’ ಎಂದು ಹಿರೇಮಠದ ಅಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಭಾನುವಾರ ನಡೆದ ನಿವೃತ್ತರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸೇವೆಯಲ್ಲಿರುವಾಗ ಬೇರೆ ಬೇರೆ ಇಲಾಖೆಗಳಲ್ಲಿ, ಬೇರೆ ಬೇರೆ ಶ್ರೇಣಿಗಳಲ್ಲಿ ಕೆಲಸ ಮಾಡಿದ್ದರೂ ನಿವೃತ್ತರಾದ ನಂತರ ಎಲ್ಲರದ್ದೂ ಒಂದೇ ಜಾತಿ, ಅದು ನಿವೃತ್ತರ ಜಾತಿ. ಸರ್ಕಾರ ಕೇವಲ ವೃತ್ತಿಗೆ ಮಾತ್ರ ನಿವೃತ್ತಿ ನೀಡುತ್ತದೆ. ಆದರೆ ಮನುಷ್ಯನ ಪ್ರವೃತ್ತಿಗೆ ಎಂದಿಗೂ ನಿವೃತ್ತಿ ಎನ್ನುವುದಿಲ್ಲ. ಹೀಗಾಗಿ ನಿವೃತ್ತಿ ಹೊಂದಿದ ಹಿರಿಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ಬೋಬಡೆ ಮಾತನಾಡಿ, ‘ನಿವೃತ್ತರಿಗೆ ನೀಡುವ ಪಿಂಚಣಿ ಯಾವ ಉದಾರತೆಯೂ ಅಲ್ಲ ಅಥವಾ ಯಾವ ಉಪಕಾರವೂ ಅಲ್ಲ, ಸತತವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಪಿಂಚಣಿ ನೀಡುವುದು ಸರ್ಕಾರದ ಕರ್ತವ್ಯ. ಹಿರಿಯ ನಾಗರಿಕರ ರಕ್ಷಣೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಹೊಣೆಯಾಗಿರುತ್ತದೆ’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಕಾರ್ಯಕ್ರಮಕ್ಕೆ ಬಂದಿಲ್ಲ.  ಪ್ರತಿ ಸಾರಿಯೂ ಬರುತ್ತೇವೆ, ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಮಾತ್ರ ಹಾಜರಾಗಿಲ್ಲ. ಇದು ಹಿರಿಯರ ಮೇಲೆ ಅವರಿಗಿರುವ ತಾತ್ಸಾರ ಮನೋಭಾವನೆಯನ್ನು ತೋರಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತರ ವಾಣಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಹಿರಿಯ ನಿವೃತ್ತರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT