ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಾರು ಕಂಠಗಳಲ್ಲಿ ಮೊಳಗಿದ ‘ವಂದೇ ಮಾತರಂ’

ಅದಮ್ಯ ಚೇತನ, ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಶ್ರಯದಲ್ಲಿ ‘ಪ್ರಕೃತಿ– ಸಂಸ್ಕೃತಿ’
Last Updated 1 ಜನವರಿ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ ಸೇರಿದ್ದ ಸಾವಿರಾರು ಮನಸುಗಳಿಗೆ ದೇಶಪ್ರೇಮದ ತುಡಿತವಿತ್ತು. ಇಡೀ ದೇಶವೇ ಒಂದು ಎನ್ನುವ ಛಲವಿತ್ತು. ‘ವಂದೇ ಮಾತರಂ’ ಹಾಡಿಗೆ ಇಡೀ ಸಮೂಹವೇ ಒಕ್ಕೊರಲಿನಿಂದ ಧ್ವನಿಗೂಡಿಸಿದ್ದು ವಿಶೇಷ.

ಅದಮ್ಯ ಚೇತನ ಸಂಸ್ಥೆ ಹಾಗೂ ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪ್ರಕೃತಿ– ಸಂಸ್ಕೃತಿ’ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂತು.

ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು, ಯುವಕ–ಯುವತಿಯರು, ಮಹಿಳೆಯರು ಹಾಗೂ ಹಿರಿಯರು ‘ವಂದೇ ಮಾತರಂ’ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ದೇಶಪ್ರೇಮವನ್ನು ಸಾರಿದರು.

ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಪಶ್ಚಿಮ ಬಂಗಾಳ, ಮಣಿಪುರ, ಗುಜರಾತ್, ರಾಜಸ್ಥಾನ, ಕೇರಳ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.‌

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌, ದೇಶದ ಪ್ರಗತಿಯಲ್ಲಿ ಆವಿಷ್ಕಾರ ಮತ್ತು ಸಂಶೋಧನೆ ಅತಿಮುಖ್ಯ. ಶಿಕ್ಷಣ ಸಂಸ್ಥೆಗಳು ಆವಿಷ್ಕಾರದ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ, ಇಂಟರ್‍ನೆಟ್ ಆಫ್ ಥಿಂಗ್ಸ್, ತ್ರೀಡಿ ಮುದ್ರಣ ಕ್ಷೇತ್ರಗಳಲ್ಲಿ ಪ್ರಯೋಗ ಮತ್ತು ಆವಿಷ್ಕಾರ ನಡೆಸಲು ಉತ್ತೇಜಿಸಲಾಗುತ್ತಿದೆ. ಪ್ರತಿವರ್ಷ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಕೇಂದ್ರ ಸಚಿವ ಅನಂತ ಕುಮಾರ್, ‘ಭೂಮಿತಾಯಿಗೆ ವಂದಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸುವುದೇ ಸೇವಾ ಉತ್ಸವದ ಮುಖ್ಯ ಉದ್ದೇಶ. ಈ ವರ್ಷವನ್ನು ಹಸಿರು ವರ್ಷವನ್ನಾಗಿ ಆಚರಿಸಲಾಗುತ್ತದೆ. ಹಸಿರು ಬೆಂಗಳೂರು, ಹಸಿರು ಕರ್ನಾಟಕ ಹಾಗೂ ಹಸಿರು ಭಾರತವನ್ನು ಸೃಷ್ಟಿಸುವುದೇ ಅಂತಿಮ ಗುರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT