ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮೇಲೆ ಹಲ್ಲೆ: ಬಿಜೆಪಿ ಕಾರ್ಪೊರೇಟರ್ ವಿರುದ್ಧ ದೂರು

Last Updated 1 ಜನವರಿ 2018, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾಲಿಕೆಯ ಬಿಜೆಪಿ ಸದಸ್ಯ ಎಸ್.ಮುನಿಸ್ವಾಮಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಅವರು ನನ್ನ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ರುಕ್ಮಿಣಿ (54) ಎಂಬುವರು ಕಾಡುಗೋಡಿ ಠಾಣೆಗೆ ದೂರು ಕೊಟ್ಟಿದ್ದಾರೆ.

ರುಕ್ಮಿಣಿ, ಕಾಡುಗೋಡಿಯ ಸಿದ್ಧಾರ್ಥ ನಗರದ ನಿವಾಸಿ. ಮಗ ಸಂದೀಪ್ ಜತೆ ವಾಸವಿದ್ದಾರೆ.

‘ಡಿ.29ರಂದು ರೌಡಿಗಳ ಜತೆಗೆ ಬಂದ ಮುನಿಸ್ವಾಮಿ, ನನ್ನ ಜಮೀನಿನಲ್ಲಿದ್ದ ಶೆಡ್‌ಗಳನ್ನು ಕೆಡವಿ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದಾಗ ಸೀರೆ ಎಳೆದಾಡಿ ಕಪಾಳಕ್ಕೆ ಹೊಡೆದಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ಸಂದೀಪ್ ಮೇಲೆಯೂ ಹಲ್ಲೆ ಮಾಡಿದ ಅವರಿಬ್ಬರು, ಈ ಜಾಗ ಬಿಟ್ಟು ಹೋಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಹೇಳಿದ್ದಾರೆ.

‘ಸರ್ಕಾರಿ ಜಾಗ ಒತ್ತುವರಿ ಮಾಡಿ ಶೆಡ್‌ಗಳನ್ನು ನಿರ್ಮಿಸಿದ್ದೀರಿ. ಕೂಡಲೇ ಆ ಜಾಗ ತೆರವು ಮಾಡಿ’ ಎಂದು ಮುನಿಸ್ವಾಮಿ ಕೆಲ ದಿನಗಳ ಹಿಂದೆ ಗಲಾಟೆ ಮಾಡಿದ್ದರು. ಅದಕ್ಕೆ ವಿರೋಧಿಸಿದ್ದರಿಂದ ಕೋಪಗೊಂಡು ಹಲ್ಲೆ ಮಾಡಿದ್ದಾರೆ ಎಂದು ಸಂದೀಪ್ ತಿಳಿಸಿದರು.

‘ರುಕ್ಮಿಣಿ ತಾಯಿ ಸಮಾನ’: ‘ರುಕ್ಮಿಣಿ ಅವರು ತಾಯಿ ಸಮಾನ. ದೇವರ ಮೇಲಾಣೆ. ಅವರ ಮೇಲೆ ಹಲ್ಲೆ ಮಾಡಿಲ್ಲ’ ಎಂದು ಮುನಿಸ್ವಾಮಿ ಸ್ಪಷ್ಟಪಡಿಸಿದರು.

‘ಸಿದ್ಧಾರ್ಥ ನಗರ ರಸ್ತೆ ಬದಿಯಲ್ಲಿ ಅವರ ಜಮೀನಿದೆ. ರಸ್ತೆಗೆ ಸೇರಿದ 28 ಗುಂಟೆಯನ್ನು ಅವರು ಒತ್ತುವರಿ ಮಾಡಿದ್ದಾರೆ. ಸಿದ್ದಾರ್ಥ ನಗರದಿಂದ ಚನ್ನಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರು ಹಾಕಲಾಗುತ್ತಿದೆ. ಹೀಗಾಗಿ, ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಅದಕ್ಕೆ ಒಪ್ಪದ ಸಂದೀಪ್, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಹೇಳಿದರು.

‘ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎ.ಸಿ.ಶ್ರೀನಿವಾಸ್ ಅವರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT