ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತ್ಯವಂತರಾಗಿದ್ದರೆ ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬನ್ನಿ’

Last Updated 2 ಜನವರಿ 2018, 5:33 IST
ಅಕ್ಷರ ಗಾತ್ರ

ಮಂಗಳೂರು: ‘ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಕುರಿತು ಮದುವೆ ಸಮಾರಂಭವೊಂದರಲ್ಲಿ ಅವಾಚ್ಯ ಶಬ್ದ ಬಳಸಿ ನಿಂದಿಸಿಲ್ಲ ಎಂಬ ಮಾತಿಗೆ ಸಚಿವ ಬಿ.ರಮಾನಾಥ ರೈ ಬದ್ಧರಾಗಿದ್ದರೆ ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬರಲಿ’ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್‌ ಮತ್ತೆ ಸವಾಲು ಹಾಕಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆಬ್ರುವರಿ ತಿಂಗಳಿನಲ್ಲಿ ಈ ಘಟನೆ ನಡೆದಿರುವುದು ನಿಜ. ಜನಾರ್ದನ ಪೂಜಾರಿ ಅವರಿಂದಲೇ ನನಗೆ ಗೊತ್ತಾಯಿತು. ಜುಲೈ 3ರಂದು ಪತ್ರಿಕಾಗೋಷ್ಠಿ ನಡೆಸಿ ಅವರನ್ನು ಪ್ರಮಾಣಕ್ಕೆ ಆಹ್ವಾನಿಸಿದ್ದೆ. ಅದಕ್ಕೆ ಅವರು ಪ್ರತಿಕ್ರಿಯಿಸಲಿಲ್ಲ. ಭಾನುವಾರ ಸಚಿವರು ಬಂಟ್ವಾಳದಲ್ಲಿ ಕಣ್ಣೀರು ಹಾಕಿದ್ದಾರೆ. ಅವರು ಹೇಳುವುದು ಸತ್ಯವೇ ಆಗಿದ್ದಲ್ಲಿ ಮಂಜು ನಾಥನ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ’ ಎಂದು ಆಗ್ರಹಿಸಿದರು.

ಸುರತ್ಕಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪೂಜಾರಿ ಕುರಿತು ರೈ ಹೇಳಿದ್ದಾರೆ ಎಂದು ಆರೋಪಿಸಲಾಗುತ್ತಿರುವ ವಾಕ್ಯಗಳನ್ನು ಬರೆದು ಪ್ರದರ್ಶಿಸಿದ ಹರಿಕೃಷ್ಣ, ‘ಈ ಮಾತುಗಳನ್ನು ಹೇಳುವಾಗ ಎದುರಿಗೆ ಇದ್ದ ಅರುಣು ಕುಯೆಲ್ಲೋ ಅವರನ್ನೂ ಪ್ರಮಾಣಕ್ಕೆ ಕರೆತರುತ್ತೇನೆ. ಈ ಪ್ರತಿಗೆ ಸಹಿ ಹಾಕಿ ದೇವರ ಮುಂದೆ ಇಡುತ್ತೇವೆ. ಸಚಿವರು ಹೇಳುವ ಯಾವುದೇ ದಿನದಂದು ಪ್ರಮಾಣಕ್ಕೆ ನಾನು ಸಿದ್ಧ’ ಎಂದರು.

ಪೂಜಾರಿ ಮೂವರು ಪ್ರಧಾನಿಗಳ ಜೊತೆ ಕೆಲಸ ಮಾಡಿದವರು. ಅವರು ಸುಳ್ಳು ಹೇಳುವುದಿಲ್ಲ. ರೈ ಅವರ ಮಾತಿನಿಂದ ಘಾಸಿಗೊಂಡಿದ್ದಾರೆ. ಇತ್ತೀಚೆಗೆ ಕಂಕನಾಡಿ ಗರಡಿಯಲ್ಲಿ ಮಾತನಾಡುವಾಗ ಈ ವಿಚಾರ ಪ್ರಸ್ತಾಪಿಸಿ ಅವರು ನೋವಿನಿಂದ ಕಣ್ಣೀರು ಹಾಕಿದ್ದಾರೆ. ಪೂಜಾರಿಯವರ ನೋವು ತನ್ನ ಸೋಲಿಗೆ ಕಾರಣವಾಗಬಹುದು ಎಂಬ ಭಯದಿಂದ ರಮಾನಾಥ ರೈ ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ದೊಡ್ಡ ಮೋಸಗಾರ: ‘ರಮಾನಾಥ ರೈ ದೊಡ್ಡ ಮೋಸಗಾರ. 1985ರಲ್ಲಿ ನನಗೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿಸಿದ್ದರು. ಕಳೆದ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅವರ ಸೂಚನೆಯಂತೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೆ.

ಆದರೆ, ಬೆಂಗಳೂರಿಗೆ ಶಾಸಕರನ್ನು ಕರೆದೊಯ್ದು ನನಗೆ ಟಿಕೆಟ್‌ ನೀಡದಂತೆ ಒತ್ತಡ ಹೇರಿದರು. ಸುಳ್ಳು ಹೇಳುವುದು ಮತ್ತು ಮೋಸ ಮಾಡುವುದೇ ಅವರ ಕಾಯಕ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT