ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳಲ್ಲಿ ಭಕ್ತಸಾಗರ

Last Updated 2 ಜನವರಿ 2018, 5:43 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರಸ್ವಾಮಿಯ ದೇವಾಲಯಕ್ಕೆ ಸೋಮವಾರ ಹೊಸ ವರ್ಷದ ಮೊದಲ ದಿನ ಹಾಗೂ ಬನದ ಹುಣ್ಣಿಮೆ ಪ್ರಯುಕ್ತ ರಾಜ್ಯದ ವಿವಿಧ ಭಾಗದಿಂದ ಭಕ್ತಸಾಗರ ಹರಿದುಬಂದಿತ್ತು.

ಕುಟುಂಬ ಸಮೇತ ಭಾನುವಾರ ರಾತ್ರಿಯೇ ಬಂದು ತಂಗಿದ್ದ ಭಕ್ತರು ಬೆಳಿಗ್ಗೆ 4.30ರಿಂದಲೇ ಕಪಿಲಾ ನದಿಯಲ್ಲಿ ಮಿಂದು ದೇವರ ದರ್ಶನ ಪಡೆದರು. ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಸೇವೆಯ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ದೇವಾಲಯದ ಮುಂಭಾಗ ಭಕ್ತರು ಉರುಳು ಸೇವೆ, ಧೂಪ– ದೀಪದ ಸೇವೆಯಲ್ಲಿ ನಿರತರಾಗಿದ್ದರು. ಹರಕೆ ಮುಡಿ ಸಲ್ಲಿಸಲು ಮುಡಿಕಟ್ಟೆಯಲ್ಲಿ ಭಕ್ತರ ಸಂದಣಿ ಏರ್ಪಟ್ಟಿತ್ತು. ದೇವಾಲಯದ ಮುಂಭಾಗ ಹೊಸ ವರ್ಷದ ಪ್ರಯುಕ್ತ ಸ್ವಯಂ ಸೇವಾ ಸಂಸ್ಥೆಗಳು ಸಿಹಿ ಹಂಚಿ ಶುಭಾಶಯ ಕೋರಿದವು. ಬನದ ಹುಣ್ಣಿಮೆ ಪ್ರಯುಕ್ತ ಚಿಕ್ಕತೇರಿನಲ್ಲಿ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಎಳೆದು ಸಂಭ್ರಮಿಸಿದರು.

‘ವಿಶೇಷ ದರ್ಶನದ ₹ 100 ಮೌಲ್ಯದ ಟಿಕೆಟ್‌ನಿಂದ ₹ 3.25 ಲಕ್ಷ, ₹ 30 ಟಿಕೆಟ್‌ನಿಂದ ₹ 1.70 ಲಕ್ಷ ಆದಾಯ ಬಂದಿದೆ. ಲಾಡು, ಕಲ್ಲುಸಕ್ಕರೆ ಪ್ರಸಾದಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂತು. ದಾಸೋಹ ಭವನದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು’ ಎಂದು ದೇವಾಲಯದ ಇಒ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ವಿಶೇಷ ದಿನಗಳಲ್ಲಿ ಮೈಸೂರಿನಿಂದ ಹೆಚ್ಚಿನ ವಿಶೇಷ ರೈಲು ಓಡಿಸಬೇಕು ಎಂದು ಭಕ್ತರು ನಗರದ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಅವರಿಗೆ ಆಗ್ರಹಿಸಿದ ಪ್ರಸಂಗ ನಡೆಯಿತು. ಸಿಪಿಐ ಗೋಪಾಲಕೃಷ್ಣ, ಪಿಎಸ್ಐಗಳಾದ ಸವಿ ಹಾಗೂ ಪುನೀತ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಚಿಕ್ಕದೇವಮ್ಮ ಬೆಟ್ಟಕ್ಕೆ ದಂಡು

ಹಂಪಾಪುರ: ಹೊಸ ವರ್ಷಾಚರಣೆ ಹಾಗೂ ಸರಗೂರು ತಾಲ್ಲೂಕು ಕಾರ್ಯಾರಂಭ ಅಂಗವಾಗಿ ಸೋಮವಾರ ಕುಂದೂರು ಚಿಕ್ಕದೇವಮ್ಮ ಬೆಟ್ಟದಲ್ಲಿ ಭಕ್ತ ಸಾಗರವೇ ಸೇರಿತ್ತು. ಸರಗೂರಿಗೆ ಆರೇಳು ಕಿಲೋಮೀಟರ್ ದೂರವಿರುವ ಚಿಕ್ಕದೇವಮ್ಮನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ವಿವಿಧ ಗ್ರಾಮಗಳಿಂದ ಟೆಂಪೊ, ಟ್್ರ್ಯಾಕ್ಟರ್, ಎತ್ತಿನಗಾಡಿ, ಆಟೊ, ಕಾರು, ದ್ವಿಚಕ್ರವಾಹನಗಳಲ್ಲಿ ಭಕ್ತರು ಬಂದಿದ್ದರಿಂದ ವಾಹನ ದಟ್ಟಣೆ ಉಂಟಾಯಿತು. ಪಾದಾಚಾರಿಗಳು ಸಹ ಪರದಾಡುವಂತಾಯಿತು. ಇದರಿಂದ ರಸ್ತೆ ಬಿಟ್ಟು ಕಾಲುದಾರಿಯಲ್ಲಿ ಬೆಟ್ಟವೇರಿದರು. ಬೇರೆ ದಿನಗಳಲ್ಲಿ ಬೆಟ್ಟ ಹತ್ತಿ ಇಳಿಯಲು ಒಂದು ಗಂಟೆ ಬೇಕು. ಆದರೆ, ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಸುಮಾರು 5 ಗಂಟೆ ಸಮಯ ಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT