ರಾಮನಗರ

ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ಧತೆ

ಕೆರೆಗೆ ನೀರು ತುಂಬಿಸುವ ಯೋಜನೆಯ ಶ್ರೇಯ ಪಡೆಯುವ ಸಲುವಾಗಿ ಈಗಾಗಲೇ ಸಿ.ಪಿ. ಯೋಗೇಶ್ವರ್‌ ಹಾಗೂ ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟ ನಡೆದಿದೆ.

ಚನ್ನಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಮೈದಾನದಲ್ಲಿ ವೇದಿಕೆ ಸಿದ್ಧಗೊಂಡಿರುವುದು

ರಾಮನಗರ: ಇದೇ 3ರಂದು ಚನ್ನಪಟ್ಟಣ ಹಾಗೂ ಮಾಗಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಚನ್ನಪಟ್ಟಣದ ಕೆರೆ ನೀರು ತುಂಬಿಸುವ ಯೋಜನೆಯ ಅಧಿಕೃತ ಉದ್ಘಾಟನೆ ಹಾಗೂ ಎರಡನೇ ಹಂತದ ಪೈಪ್‌ಲೈನ್‌ ಕಾಮಗಾರಿಗೆ ಶಂಕುಸ್ಥಾಪನೆಯೂ ಇದೇ ವೇಳೆ ನೆರವೇರಲಿದೆ.

ಚನ್ನಪಟ್ಟಣದಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಕಾವೇರಿ ಅಭಿವೃದ್ಧಿ ನಿಗಮದ ವತಿಯಿಂದ ಅಂದು ₨225.05 ಕೋಟಿ ವೆಚ್ಚದಲ್ಲಿ ಕಣ್ವ ಕುಡಿಯುವ ನೀರು ಯೋಜನೆಯ ಮೊದಲ ಹಂತದ ಕಾಮಗಾರಿಯ ಉದ್ಘಾಟನೆ ಹಾಗೂ ಎರಡನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ಕಳೆದ ಮೂರು ವರ್ಷಗಳಿಂದ ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸುತ್ತಿರುವ ಯೋಜನೆಯನ್ನು ಈಗ ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅಂತೆಯೇ ಯೋಜನೆಯ ಎರಡನೇ ಹಂತದ 83 ಕಿ.ಮೀ. ಉದ್ದದ ಪೈಪ್‌ಲೈನ್‌ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಣ್ವ ಯೋಜನೆಯು 2015ರಲ್ಲಿಯೇ ಕಾರ್ಯಾರಂಭ ಮಾಡಿದ್ದರೂ ಈವರೆಗೆ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಮೊದಲ ಹಂತದಲ್ಲಿ ಈ ಯೋಜನೆಗಾಗಿ 58 ಕಿ.ಮೀ. ಉದ್ದದ ಪೈಪ್‌ಲೈನ್‌ ಕಾಮಗಾರಿ ನಡೆದಿದ್ದು, 60ಕ್ಕೂ ಹೆಚ್ಚು ಕೆರೆಗಳ ನೀರು ತುಂಬಿಸಲಾಗಿದೆ. ಎರಡನೇ ಹಂತದಲ್ಲಿ 83 ಕಿಲೋಮೀಟರ್‌ ಉದ್ದದ ಕಾಮಗಾರಿಗೆ ಯೋಜಿಸಲಾಗಿದ್ದು, ಇದರಲ್ಲಿ ಸುಮಾರು 70 ಕಿ.ಮೀ.ನಷ್ಟು ಉದ್ದದ ಕಾಮಗಾರಿಯು ಮುಕ್ತಾಯದ ಹಂತದಲ್ಲಿ ಇದೆ.

ಕೆರೆಗೆ ನೀರು ತುಂಬಿಸುವ ಯೋಜನೆಯ ಶ್ರೇಯ ಪಡೆಯುವ ಸಲುವಾಗಿ ಈಗಾಗಲೇ ಸಿ.ಪಿ. ಯೋಗೇಶ್ವರ್‌ ಹಾಗೂ ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟ ನಡೆದಿದೆ. ಬುಧವಾರ ಚನ್ನಪಟ್ಟಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇದೇ ಪ್ರಮುಖ ವಿಷಯವಾಗಿದೆ. ಸಂಪ್ರದಾಯದಂತೆ ಸ್ಥಳೀಯ ಶಾಸಕರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದೆ. ಆದರೆ ಯೋಗೇಶ್ವರ್‌ ಪಾಲ್ಗೊಳ್ಳುವುದು ಅನುಮಾನವಾಗಿದೆ. ಅವರ ಗೈರನ್ನೇ ಆಧಾರವಾಗಿ ಇಟ್ಟುಕೊಂಡು ಸಿಪಿವೈ ರನ್ನು ಹಣಿಯಲು ವೇದಿಕೆಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಗೆದ್ದು ಶಾಸಕರಾದ ಸಿ.ಪಿ. ಯೋಗೇಶ್ವರ್ ನಂತರದಲ್ಲಿ ಕಾಂಗ್ರೆಸ್‌ನ ಸಹ ಶಾಸಕಾಂಗ ಪಕ್ಷದ ಸದಸ್ಯರಾಗಿ ಗುರುತಿಸಿಕೊಂಡರು. ಆದರೆ ಚುನಾವಣೆಯ ಹೊಸ್ತಿಲಲ್ಲಿ ಅವರು ಬಿಜೆಪಿಗೆ ಜಿಗಿದಿರುವುದು ಕೈ ಪಾಳಯಕ್ಕೆ ಕ್ಷೇತ್ರದಲ್ಲಿ ದೊಡ್ಡ ಹೊಡೆತವನ್ನೇ ನೀಡಿದೆ.
ಮುಂಬರುವ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲು ಕಾಂಗ್ರೆಸ್‌ಗೆ ಸದ್ಯ ಪ್ರಬಲ ಅಭ್ಯರ್ಥಿ ಸಿಕ್ಕಿಲ್ಲ. ಮತ್ತೊಂದೆಡೆ ಪಕ್ಷದ ಬಲವೂ ಕುಸಿದಿದೆ. ಇಂತಹ ಹೊತ್ತಿನಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ,ಕೆ. ಸುರೇಶ್ ಸ್ವತಃ ಚನ್ನಪಟ್ಟಣದ ಉಸ್ತುವಾರಿ ಹೊತ್ತು ಆಗಾಗ್ಗೆ ಭೇಟಿ ಕೊಟ್ಟು ಕಾರ್ಯಕರ್ತರಲ್ಲಿ ಧೈರ್ಯ ತುಂಬುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಚನ್ನಪಟ್ಟಣದ ಕಾರ್ಯಕ್ರಮ ಎಷ್ಟರಮಟ್ಟಿಗೆ ಯಶಸ್ಸು ಕಾಣಲಿದೆ ಎನ್ನುವ ಬಗ್ಗೆ ಕುತೂಹಲವಿದೆ.

ಮಾಗಡಿಯಲ್ಲಿ ಶಕ್ತಿ ಪ್ರದರ್ಶನ: ಕಾಂಗ್ರೆಸ್‌ಗೆ ಕೈ ಕೊಟ್ಟ ಎ.ಮಂಜುಗೆ ಟಾಂಗ್‌ ನೀಡಿ, ತನ್ನ ಶಕ್ತಿ ಪ್ರದರ್ಶನ ಮಾಡಲು ಬುಧವಾರ ಕಾರ್ಯಕ್ರಮವನ್ನು ಬಳಸಿಕೊಳ್ಳಲು ಕೈ ಪಾಳಯ ಯೋಜಿಸುತ್ತಿದೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ. ಮಂಜು ಅವರಿಗೆ ಟಿಕೆಟ್‌ ಕೈ ತಪ್ಪುವುದು ಖಾತ್ರಿಯಾಗಿದ್ದರಿಂದ ಅವರು ಜೆಡಿಎಸ್‌ಗೆ ವಲಸೆ ಹೋಗಿದ್ದಾರೆ. ಜೆಡಿಎಸ್‌ನಿಂದ ಶಾಸಕರಿಗಾಗಿ ಆಯ್ಕೆಯಾಗಿರುವ ಎಚ್‌.ಸಿ. ಬಾಲಕೃಷ್ಣ ಕಾಂಗ್ರೆಸ್‌ ಹೈಕಮಾಂಡ್‌ನ ಭರವಸೆ ಮೇರೆಗೆ ತಾವೇ ಕೈ ಪಾಳಯದ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಇಂತಹ ಹೊತ್ತಿನಲ್ಲಿ ಕಾರ್ಯಕರ್ತರ ವಲಸೆ ತಡೆಯಲು ಹಾಗೂ ಪಕ್ಷವನ್ನು ಸಂಘಟಿಸಲು ಮುಖ್ಯಮಂತ್ರಿ ಕಾರ್ಯಕ್ರಮವನ್ನು ವೇದಿಕೆಯಾಗಿ ಕೈ ಪಾಳಯ ಬಳಸಿಕೊಳ್ಳತೊಡಗಿದೆ. ಈ ಮೂಲಕ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನವೂ ಆಗಲಿದೆ.

ಯಾವ್ಯಾವ ಕಾಮಗಾರಿ? ಎಷ್ಟೆಷ್ಟು ವೆಚ್ಚ?

ಚನ್ನಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಮೈದಾನದಲ್ಲಿ ಬೆಳಿಗ್ಗೆ 10ಕ್ಕೆ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಒಟ್ಟು ₨571.74 ಕೋಟಿ ವೆಚ್ಚದ 35 ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ನೀರಾವರಿ ಇಲಾಖೆಯ ₨225.02 ಕೋಟಿ ವೆಚ್ಚದ 2 ಕಾಮಗಾರಿ, ಇಂಧನ ಇಲಾಖೆಯ (ಬೆಸ್ಕಾಂ) ₨155.05 ಕೋಟಿ ವೆಚ್ಚದ 10 ಕಾಮಗಾರಿ, ಇಂಧನ ಇಲಾಖೆಯ (ಕೆಪಿಟಿಸಿಎಲ್‌) 103.25 ಕೋಟಿ ವೆಚ್ಚದ 3 ಕಾಮಗಾರಿ, ಲೋಕೋಪಯೋಗಿ ಇಲಾಖೆಯ ₨47.01 ಕೋಟಿ ವೆಚ್ಚದ 15 ಕಾಮಗಾರಿ ಹಾಗೂ ನಗರಾಭಿವೃದ್ಧಿ ಇಲಾಖೆಯ ₨31.15 ಕೋಟಿ ವೆಚ್ಚದ 2 ಕಾಮಗಾರಿಗಳೂ ಸೇರಿವೆ.

ಮಾಗಡಿಯ ಕೋಟೆ ಮೈದಾನದಲ್ಲಿ ಮಧ್ಯಾಹ್ನ 2ಕ್ಕೆ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ₨54.45 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಲೋಕೋಪಯೋಗಿ ಇಲಾಖೆಯ ಒಟ್ಟು ₨36.95 ಕೋಟಿ ವೆಚ್ಚದ 38 ಕಾಮಗಾರಿ, ನಗರಾಭಿವೃದ್ಧಿ ಇಲಾಖೆಯ ₨16.38 ಕೋಟಿ ವೆಚ್ಚದ 40 ಕಾಮಗಾರಿ ಹಾಗೂ ಆರೋಗ್ಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಈ ಸಂದರ್ಭ ಚಾಲನೆ ದೊರೆಯಲಿದೆ.

ಸರ್ಕಾರಿ ಕಾರ್ಯಕ್ರಮವಾದ್ರೆ ಹೋಗ್ತೇನೆ

‘ಚನ್ನಪಟ್ಟಣದಲ್ಲಿ ನಡೆಯಲಿರುವ ಕಾರ್ಯಕ್ರಮವು ಸರ್ಕಾರಿ ಕಾರ್ಯಕ್ರಮವಾದರೆ ಹೋಗುತ್ತೇನೆ. ಆದರೆ ಅದನ್ನು ಕಾಂಗ್ರೆಸ್‌ ವೇದಿಕೆಯಂತೆ ಬಳಸಿಕೊಂಡರೆ ಹೋಗುವುದಿಲ್ಲ’ ಎಂದು ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್‌ ಪ್ರತಿಕ್ರಿಯಿಸಿದರು. ‘ಚನ್ನಪಟ್ಟಣದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಮುಕ್ತಾಯದ ಹಂತದಲ್ಲಿದೆ. ಎರಡನೇ ಹಂತದ ಪೈಪ್‌ಲೈನ್‌ ಕಾಮಗಾರಿಯೂ ಮುಗಿಯುತ್ತಿದೆ. ಹೀಗಿರುವಾಗ ಈಗ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುತ್ತಿರುವುದು ಯಾಕೆ’ ಎಂದು ಅವರು ಪ್ರಶ್ನಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಬಿಡದಿ
‘ಮಾಗಡಿಗೆ ಮಂಜು ಕೊಡುಗೆ ಏನು’

‘ಮಾಗಡಿ ಕ್ಷೇತ್ರದಲ್ಲಿ ಎಚ್.ಸಿ.ಬಾಲಕೃಷ್ಣ ಅವರ ಅಭಿವೃದ್ಧಿ ಕೆಲಸದ ಬಗ್ಗೆ ಪ್ರಶ್ನೆ ಮಾಡುವ ಜೆಡಿಎಸ್ ಅಭ್ಯರ್ಥಿ ಎ.ಮಂಜುರವರು ಕ್ಷೇತ್ರಕ್ಕೆ ತಮ್ಮ ಕೊಡುಗೆ ಏನೆಂದು ಜನರ ಮುಂದೆ...

25 Apr, 2018

ಮಾಗಡಿ
‘ಸಾಂಸ್ಕೃತಿಕ ಪರಂಪರೆ ಮಹಾಬೆಳಕು’

ವರನಟ ಡಾ.ರಾಜ್‌ ಕುಮಾರ್‌ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ಮಹಾಬೆಳಕು ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌...

25 Apr, 2018

ಕನಕಪುರ
ಮೋದಿ ವರ್ಚಸ್ಸಿನಡಿ ಮತಯಾಚನೆ

ಬಿಜೆಪಿ ಅಭ್ಯರ್ಥಿ ನಂದಿನಿಗೌಡ ತಮ್ಮ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿ  ಉಮೇದುವಾರಿಕೆಯನ್ನು ಕೊನೆ ದಿನವಾದ ಮಂಗಳವಾರ ಸಲ್ಲಿಸಿದರು. ‌

25 Apr, 2018

ರಾಮನಗರ
ನಾಮಪತ್ರ ಸಲ್ಲಿಕೆ ಕಸರತ್ತು ಮುಕ್ತಾಯ

ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಒಟ್ಟು 36 ಅಭ್ಯರ್ಥಿಗಳಿಂದ 39 ನಾಮಪತ್ರಗಳು ಸಲ್ಲಿಕೆಯಾಗಿದೆ.

25 Apr, 2018

ರಾಮನಗರ
ಕ್ಷೇತ್ರ ನಿರ್ಲಕ್ಷಿಸಿದ ಎಚ್‌ಡಿಕೆ: ಡಿ.ಕೆ.ಸುರೇಶ್‌

ರಾಮನಗರ ಕ್ಷೇತ್ರವು ಕಳೆದ 12 ವರ್ಷಗಳಿಂದ ಅಭಿವೃದ್ಧಿಯಲ್ಲಿ ವಂಚಿತವಾಗಿದ್ದು, ಈ ಬಾರಿ ಮತದಾರರು ಇಲ್ಲಿನ ಶಾಸಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದ ಡಿ.ಕೆ....

24 Apr, 2018