ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರ ಅಭಿವೃದ್ಧಿಗೆ ಸಾವಿರ ಕೋಟಿ

Last Updated 2 ಜನವರಿ 2018, 6:17 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವಕರ್ಮರು ಸೇರಿ 103 ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಮೊದಲ ಬಜೆಟ್‌ನಲ್ಲಿಯೇ ₹ 1000 ಕೋಟಿ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಕೈದಾಳದಲ್ಲಿ ಸೋಮವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಯೋಜಿಸಿದ್ದ 5ನೇ ರಾಜ್ಯ ಮಟ್ಟದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯವನ್ನು ಹೊರಗಿಟ್ಟು ಭಾರತೀಯ ಇತಿಹಾಸ, ಕಲಾ ವೈಭವ, ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

’ಸಮಾಜದ ಅಭಿವೃದ್ಧಿ ಹಾಗೂ ನ್ಯಾಯಬದ್ಧ ಅವಕಾಶಗಳಿಗೆ ಈ ಸಮುದಾಯ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜನವರಿ 1ರಂದು ಜಕಣಾಚಾರಿ ಸಂಸ್ಮರಣ ದಿನವನ್ನು ಸರ್ಕಾರದಿಂದಲೇ ಆಚರಣೆ ಮಾಡುವುದು ಸೇರಿದಂತೆ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಬದ್ಧ’ ಎಂದು ಹೇಳಿದರು.

‘ಸ್ವಾರ್ಥ ಬದಿಗಿಟ್ಟು ಸಮಾಜದ ಉನ್ನತಿಗೆ ಸದಾ ಶ್ರಮಿಸುತ್ತಿರುವ ಕೆ.ಪಿ.ನಂಜುಂಡಿ ಅವರ ಕಾರ್ಯ ಗಮನಾರ್ಹವಾದುದು. ಜೀವನದಲ್ಲಿ ಬಹಳ ಕಷ್ಟಪಟ್ಟು ಜೀವನ ಕಟ್ಟಿಕೊಂಡ ವ್ಯಕ್ತಿಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ನಾಡಿನ ಮೂಲೆಗಳಿಂದ ಕಾಯಕ ಸಮುದಾಯದ ಎಲ್ಲ ಸ್ವಾಮೀಜಿಗಳನ್ನು ಈ ಕಾರ್ಯಕ್ರಮದಲ್ಲಿ ಸೇರಿಸಿರುವುದು ಪ್ರಶಂಸನೀಯ’ ಎಂದು ಹೇಳಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಮಾತನಾಡಿ, ‘ಹಲವಾರು ವರ್ಷಗಳಿಂದ ನಮ್ಮ ಸಮುದಾಯವನ್ನು ಯಾಮಾರಿಸಿಕೊಂಡು ಬರಲಾಗಿದೆ. 16 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಸಮುದಾಯದ ಅಭಿವೃದ್ಧಿಪರ ಕೆಲಸಗಳು ಆಗಲಿಲ್ಲ’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ಪರ ಹಿತಚಿಂತಕರಾಗಿದ್ದಾರೆ. ಹಿಂದೆ ಕಾಂಗ್ರೆಸ್‌ನಲ್ಲಿ ನಾನು ಇದ್ದರೂ ಸಹ ಕೈದಾಳ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದರು. ಬಿಜೆಪಿ ಎಂದರೆ ಹಿಂದುಳಿದ ವರ್ಗಗಳನ್ನು ಉದ್ಧಾರ ಮಾಡುವ ಪಕ್ಷವಾಗಿದೆ’ ಎಂದು ಹೇಳಿದರು.

’ನಾನು ರಾಜಕೀಯ ಅಧಿಕಾರ ಪಡೆಯುವುದಕ್ಕಾಗಿ ಅಥವಾ ಒಲೈಕೆಗಾಗಿ ಈ ಮಾತು ಹೇಳುತ್ತಿಲ್ಲ. ರಾಜಕೀಯ ಅಧಿಕಾರ ಲಭಿಸದಿದ್ದರೂ ಚಿಂತೆ ಇಲ್ಲ. ಸಮುದಾಯ, ಜಕಣಾಚಾರಿ ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು ಎಂಬುದೇ ಪ್ರಮುಖ ಆಶಯಗಳಾಗಿವೆ’ ಎಂದು ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡರಾದ ಜಿ.ಎಸ್.ಬಸವರಾಜ್, ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್, ಮುಖಂಡರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಕೃಷ್ಣಕುಮಾರ್, ವೈ.ಎಚ್.ಹುಚ್ಚಯ್ಯ, ಮಸಾಲೆ ಜಯರಾಮ್ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ವೇದಿಕೆಯಲ್ಲಿದ್ದರು.

ಭೋವಿ ಸಮಾಜದ ಸಿದ್ಧರಾಮೇಶ್ವರ ಸ್ವಾಮೀಜಿ, ತೊಗಟವೀರ ಕ್ಷತ್ರೀಯ ಸಮಾಜದ ದಿವ್ಯಜ್ಞಾನಾನಂದ ಸ್ವಾಮೀಜಿ, ಕುಂಚಿಟಿಗ ಸಮಾಜದ ಶಾಂತವೀರ ಸ್ವಾಮೀಜಿ, ಸವಿತಾ ಸಮಾಜದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಪದ್ಮಶಾಲಿ ಸಮಾಜದ ಪ್ರಭುಲಿಂಗ ಸ್ವಾಮೀಜಿ, ಬಂಜಾರ ಸಮಾಜದ ಸೇವಾಲಾಲ್ ಸರ್ದಾರ್ ಸ್ವಾಮೀಜಿ, ತಿಗಳ ಸಮಾಜದ ಜ್ಞಾನಾನಂದಪುರಿ ಸ್ವಾಮೀಜಿ, ಮಾಚಿದೇವ ಸಮಾಜದ ಬಸವಶ್ರೀ ಸ್ವಾಮೀಜಿ, ಹಡಪದ ಸಮಾಜದ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಹೆಳವ ಸಮಾಜದ ಬಸವಬೃಂಗೇಶ್ವರ ಸ್ವಾಮೀಜಿ, ಹುಬ್ಬಳ್ಳಿ ಸರ್ವಧರ್ಮ ಸೇವಾ ಟ್ರಸ್ಟ್‌ನ ಗುರು ಸಂಗಮಾನಂದ ಸ್ವಾಮೀಜಿ, ರೆಡ್ಡಿ ಸಮಾಜದ ಬಸವರಾಜ ಸ್ವಾಮೀಜಿ, ದೊಂಬಿದಾಸ ಸಮಾಜದ ರಾಗಯೋಗಿ ವಿದ್ವಾನ್ ಕರುಣಾಕರ ಸ್ವಾಮೀಜಿ, ಚಲವಾದಿ ಸಮಾಜದ ಬಸವ ನಾಗೀದೇವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ವಿಶ್ವಕರ್ಮ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಕಾಳಹಸ್ತೇಂದ್ರ ಸ್ವಾಮೀಜಿ ಸ್ವಾಗತಿಸಿದರು. ಎಚ್.ಪಿ.ನಾಗರಾಜ್ ವಂದಿಸಿದರು.

ನಂಜುಂಡಿ ಅವರಿಗೆ ಜವಾಬ್ದಾರಿ

ಕೆ.ಪಿ.ನಂಜುಂಡಿ ಸಂಘಟನಾ ಚತುರರು. ಬಿಜೆಪಿ ಅಧಿಕಾರಕ್ಕೆ ಬಂದರೆ ನಂಜುಂಡಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು. 103 ಹಿಂದುಳಿದ ಸಮುದಾಯಗಳನ್ನು ಸಂಘಟಿಸುವ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬೇಲೂರು ಮತ್ತು ಹಳೇ ಬೀಡುವಿನಲ್ಲಿ ಜಕಣಾಚಾರಿ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಮೈಸೂರಿನ ಮಾನಸ ಗಂಗೋತ್ರಿಯ ಲಲಿತ ಕಲಾ ಕಾಲೇಜಿಗೆ ಜಕಣಾಚಾರಿ ಹೆಸರು ಇಡಲಾಗುವುದು. ಲಲಿತ ಕಲಾ ಕಾಲೇಜಿಗೆ ಈ ಹೆಸರು ಇಡಲು ಯಾರೂ ಆಕ್ಷೇಪ ವ್ಯಕ್ತಪಡಿಸಲಿಕ್ಕಿಲ್ಲ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ಪ್ರವಾಸಿ ತಾಣವಾಗಿ ಅಭಿವೃದ್ಧಿ

ಕೈದಾಳ ಗ್ರಾಮದ ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ ಚನ್ನಕೇಶವ ದೇವಾಲಯ, ಗೂಳೂರು ಗಣಪತಿ ಹಾಗೂ ಹೆತ್ತೇನಹಳ್ಳಿ ಲಕ್ಷ್ಮಿದೇವಸ್ಥಾನವನ್ನು ಪ್ರವಾಸಿ  ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಬಿ.ಸುರೇಶ್‌ಗೌಡ ತಿಳಿಸಿದರು.

‘ಕೈದಾಳ ದೇವಸ್ಥಾನದ ಜಾಗವನ್ನು ಅತಿಕ್ರಮಣ ಮಾಡಲಾಗಿತ್ತು. ಊರವರ ಸಹಕಾರದಿಂದ ಅತಿಕ್ರಮಣ ತೆರವುಗೊಳಿಸಿ ದೇವಸ್ಥಾನವನ್ನು ಅಭಿವೃದ್ಧಿ ಮಾಡಿದ್ದೇನೆ. ಎರಡೂವರೆ ಎಕರೆ ಟೆನೆಂಟ್‌ ಜಾಗವನ್ನು ಬಿಡಿಸಿಕೊಂಡು ಭವ್ಯ ಸಮುದಾಯ ಭವನ ನಿರ್ಮಿಸಲಾಗಿದೆ. ಇದಕ್ಕೆ ಈ ಗ್ರಾಮದವರ ಸಹಕಾರ ಕಾರಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT