ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿತ, ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ

Last Updated 2 ಜನವರಿ 2018, 6:41 IST
ಅಕ್ಷರ ಗಾತ್ರ

ಮುಂಡಗೋಡ: ಮೈಕೊರೆಯುವ ಚಳಿಯೂ ಯುವಕರ ಉತ್ಸಾಹದ ಮುಂದೆ ಮಂಕಾಗಿತ್ತು. ಮನೆಯ ತಾರಸಿ, ಬಯಲು ಪ್ರದೇಶ, ಊರಾಚೆಗಿನ ತೋಟಪಟ್ಟಿಗಳಲ್ಲಿ ಮಧ್ಯರಾತ್ರಿಯ ಸಂಭ್ರಮ ಮನೆ ಮಾಡಿತ್ತು. ಸಂಜೆಯ ವೇಳೆಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಕಳೆದು ಹೋಗುತ್ತಿರುವ ವರ್ಷಕ್ಕೆ ವಿದಾಯ ಹೇಳಿ, ನೂತನ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದ ತಾಲ್ಲೂಕಿನಲ್ಲಿ ಕಂಡುಬಂದ ದೃಶ್ಯ ಇದಾಗಿತ್ತು.

ಬೇಕರಿ, ಬಾರ್‌, ಚಿಕನ್‌್ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕಿದವು. ಯುವ ಸಮೂಹದ ಕುಣಿತ, ಕೇಕೆ, ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ಕೇಕ್‌ ಕತ್ತರಿಸಿ ಮಕ್ಕಳೊಂದಿಗೆ ಸಂಭ್ರಮ, ಪರಸ್ಪರ ಅಪ್ಪುಗೆ, ಅಭಿನಂದನೆ, ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ... ಒಟ್ಟಿನಲ್ಲಿ ಸಿಹಿಕಹಿ ನೆನಪುಗಳ ಬುತ್ತಿಯೊಂದಿಗೆ ಮರೆಯಾದ 2017ಕ್ಕೆ ವಿದಾಯ ಹೇಳಿ, ಮತ್ತಷ್ಟು ಭರವಸೆ, ಕಲ್ಪನೆ, ಹೊಸ ಕನಸಿನೊಂದಿಗೆ 2018ನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕಳೆದ ಕೆಲ ದಿನಗಳಿಂದ ಬೀಸುತ್ತಿದ್ದ ಮೈಕೊರೆಯುವಂತ ಚಳಿಯೂ ಸಹ, ಹೊಸ ವರ್ಷವನ್ನು ಸ್ವಾಗತಿಸಲು ತುಸು ಬಿಡುವು ನೀಡಿದಂತೆ ಕಂಡುಬಂತು. ಮಧ್ಯರಾತ್ರಿಯಲ್ಲಿ ವೇಗ ಹೆಚ್ಚಿಸಿಕೊಂಡಿದ್ದ ಯುವಕರ ಬೈಕ್‌ಗಳು ತುರುಸಿನ ಓಡಾಟ ನಡೆಸಿದವು, ಮನೆಯ ಮೇಲ್ಛಾವಣಿ, ಮೈದಾನಗಳಲ್ಲಿ ಗುಂಪು ಗುಂಪಾಗಿ ಕುಳಿತಿದ್ದವರು, ಹಾಡುಕುಣಿತದೊಂದಿಗೆ ಕೇಕೆ ಹಾಕುತ್ತ ಸಂಭ್ರಮಿಸಿದರು. ಕೆಲವರು ಊರಾಚೆಗಿನ ರೆಸಾರ್ಟ್‌ಗಳಲ್ಲಿ ಕುಟುಂಬ ಸಮೇತರಾಗಿ ಕುಣಿದು, ಕುಪ್ಪಳಿಸಿದರು.

ಮಕ್ಕಳು ಮನೆಯ ಮುಂದಿನ ರಸ್ತೆ, ವರಾಂಡಾದಲ್ಲಿ ಸುಣ್ಣಬಣ್ಣಗಳಿಂದ ಹೊಸ ವರ್ಷದ ಶುಭಾಶಯಗಳನ್ನು ಬರೆಯುವುದರಲ್ಲಿ ತಲ್ಲೀಣರಾಗಿದ್ದರು. ನ್ಯಾಸರ್ಗಿ, ಬಾಚಣಕಿ, ಅತ್ತಿವೇರಿ, ಸನವಳ್ಳಿ, ಶಿಂಗನಳ್ಳಿ ಸೇರಿದಂತೆ ಇನ್ನಿತರ ಕಡೆ ಹೊಸ ವರ್ಷದ ಪಾರ್ಟಿಗಳು ಜೋರಾಗಿದ್ದವು.

ಮಧ್ಯರಾತ್ರಿ 12ಕ್ಕೆ ಸರಿಯಾಗಿ ಕೆಲ ಸೆಕೆಂಡುಗಳ ಕಾಲ ವಿದ್ಯುತ್‌ ಕಡಿತಗೊಳ್ಳುತ್ತಿದ್ದಂತೆ, ಮೂಲೆಮೂಲೆಯಿಂದ ಪಟಾಕಿಗಳ ಸದ್ದು, ಕೇಕೆ ಹಾಕುವುದು ಮುಗಿಲುಮುಟ್ಟಿತು. ಯುವಪಡೆ ಸೇರಿದಂತೆ ಮನೆಮಂದಿ ಪರಸ್ಪರ ಶುಭಾಶಯ ಹೇಳುತ್ತ ನೂತನ ವರ್ಷವನ್ನು ಸ್ವಾಗತಿಸಿದರು. ಮೊಬೈಲ್‌ ಮೂಲಕ ಹೊಸ ವರ್ಷದ ಸಂದೇಶಗಳನ್ನು ಕಳಿಸಲು ಕೆಲ ಹೊತ್ತು ಸಾಧ್ಯವಾಗಲಿಲ್ಲ. ಹೊಸ ವರ್ಷದ ಆರಂಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ಕಿರಣಕುಮಾರ ನಾಯಕ ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು.

ಶಾಲೆಗಳಲ್ಲಿ ಸಂಭ್ರಮಾಚರಣೆ: ತಾಲ್ಲೂಕಿನ ಕೆಲವು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೋಮವಾರ ವಿದ್ಯಾರ್ಥಿಗಳು ಕೇಕ್‌ ಕತ್ತರಿಸಿ ನೂತನ ವರ್ಷವನ್ನು ಸ್ವಾಗತಿಸಿದರು. ಕೆಲವೆಡೆ ಶಿಕ್ಷಕರು ಬೆಳಗಿನ ಪ್ರಾರ್ಥನೆ ಮುಗಿಯುತ್ತಲೇ ಮಕ್ಕಳೊಂದಿಗೆ ಕೇಕ್‌ ಕತ್ತರಿಸಿ, ಸಿಹಿ ಹಂಚಿ ಹೊಸ ವರ್ಷದ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT