ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ರಂದು ಸಚಿವರ ಮನೆಗೆ ಮುತ್ತಿಗೆ

Last Updated 2 ಜನವರಿ 2018, 7:29 IST
ಅಕ್ಷರ ಗಾತ್ರ

ಬೀದರ್: ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್‌ ಕಬ್ಬಿಗೆ ₹ 2,200 ಮುಂಗಡ ಕೊಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಜನವರಿ 8 ರಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಭಾಲ್ಕಿ ನಿವಾಸಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಲು ನಿರ್ಧರಿಸಿದೆ. ನಗರದ ಗಾಂಧಿಗಂಜ್‌ನ ರೈತ ಭವನದಲ್ಲಿ ಸೋಮವಾರ ನಡೆದ ಸಂಘದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

‘ಡಿಸೆಂಬರ್‌ 12 ರಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪ್ರತಿ ಟನ್‌ ಕಬ್ಬಿಗೆ ₹ 2,200 ಮುಂಗಡ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಿ ಎರಡು ತಿಂಗಳು ಕಳೆದರೂ ಕಬ್ಬಿನ ಹಣ ಪಾವತಿಸಿಲ್ಲ’ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ದೂರಿದರು.

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ)ಗೆ ಬ್ಯಾಂಕ್‌ನಿಂದ ಶೀಘ್ರ ಸಾಲ ಕೊಡಿಸಬೇಕು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕೆಲ ರೈತರಿಗೆ ಸಾಲದ ಬಡ್ಡಿ ಮನ್ನಾ ಲಾಭ ದೊರೆತಿಲ್ಲ. ಹೀಗಾಗಿ ಅಸಲು ಪಾವತಿಸುವ ಅವಧಿಯನ್ನು ಮಾರ್ಚ್‌ ವರೆಗೆ ವಿಸ್ತರಿಸಬೇಕು. ತಕ್ಷಣ ಹೊಸ ಸಾಲ ಕೊಡಿಸಬೇಕು, ಬೆಂಬಲ ಬೆಲೆಯಲ್ಲಿ ಖರೀದಿಗೆ ಜಿಲ್ಲೆಗೆ 10 ಲಕ್ಷ ಕ್ವಿಂಟಲ್‌ ತೊಗರಿ ನಿಗದಿಪಡಿಸಬೇಕು. ಮಾರ್ಚ್‌ ವರೆಗೆ ತೊಗರಿ ಖರೀದಿಸಬೇಕು. ಖರೀದಿ ಕೇಂದ್ರಗಳು ಇನ್ನೂ ಹೆಚ್ಚಿಸಬೇಕು. ಉದ್ದು, ಹೆಸರು ಮಾರಾಟ ಮಾಡಿದ ರೈತರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ವೈಜನಾಥ ನೌಬಾದೆ, ಪ್ರಮುಖರಾದ ಸಿದ್ರಾಮಪ್ಪ ಆಣದೂರೆ, ಕೊಂಡಿಬಾರಾವ್‌ ಪಾಂಡ್ರೆ, ಶೇಷರಾವ್‌ ಕಣಜಿ, ಶೋಭಾದೇವಿ ಕಾರಬಾರಿ, ಶ್ರೀಮಂತ ಬಿರಾದಾರ, ವಿಠ್ಠಲರೆಡ್ಡಿ, ಬಾಬುರಾವ್‌ ಜೋಳದಾಪಕಾ, ಪ್ರಕಾಶ ಬಾವಗೆ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT