ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೆಟ್ಟಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು

Last Updated 2 ಜನವರಿ 2018, 8:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹೊಸ ವರ್ಷದ ಮೊದಲ ದಿನವಾದ ಸೋಮವಾರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಸಾವಿರಾರು ಜನರು, ವಾಹನಗಳಿಂದ ಬೆಟ್ಟದ ದಾರಿಯಲ್ಲಿ ಮಧ್ಯಾಹ್ನದ ನಂತರ ಕಾಣಿಸಿಕೊಂಡ ವಾಹನ ದಟ್ಟಣೆಗೆ ಸಾಕಷ್ಟು ಪ್ರವಾಸಿಗರು ಹೈರಾಣಾದರು.

ಹೊಸ ವರ್ಷದ ಮೋಜಿಗಾಗಿ ಸೋಮವಾರ 3,903 ವಾಹನಗಳಲ್ಲಿ 12 ಸಾವಿರಕ್ಕೂ ಅಧಿಕ ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆ ಇಟ್ಟಿದ್ದರು. ಇದರಿಂದ ತೋಟಗಾರಿಕೆ ಇಲಾಖೆಗೆ ಹೊಸ ವರ್ಷದ ಮೊದಲ ದಿನದಲ್ಲೇ ₹ 2.69 ಲಕ್ಷ ಆದಾಯ ಬಂದಿದೆ.

ಹೊಸ ವರ್ಷಾಚರಣೆ ವೇಳೆ ನಡೆಯುವ ಅವಘಡಗಳನ್ನು ಹಾಗೂ ಅನೈತಿಕ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಸೋಮವಾರ ನಂದಿಬೆಟ್ಟದಲ್ಲಿ ಸುಮಾರು 60 ಕಾನ್‌ಸ್ಟೆಬಲ್‌ಗಳನ್ನು, ಸುಮಾರು 15 ಸಂಚಾರ ಪೊಲೀಸರನ್ನು ನಿಯೋಜಿಸಿತ್ತು.

ಹೊಸ ಸಂವತ್ಸರದ ಸೂರ್ಯೋ ದಯ ನೋಡುವ ಕಾತುರದಿಂದ ನೂರಾರು ವಾಹನಗಳಲ್ಲಿ ಪ್ರವಾಸಿಗರು ಬೆಳಂಬೆಳಗ್ಗೆ ನಂದಿಬೆಟ್ಟಕ್ಕೆ ಆಗಮಿಸಿದರು. ಆದರೆ ಆ ವಾಹನಗಳನ್ನು ಚೆಕ್‌ಪೋಸ್ಟ್‌ನಲ್ಲಿ ತಡೆದ ಪೊಲೀಸರು ಬೆಳಿಗ್ಗೆ 8ರ ವರೆಗೆ ಬೆಟ್ಟದತ್ತ ವಾಹನಗಳನ್ನು ಬಿಡಲಿಲ್ಲ. ಸಂಜೆ 6ರ ವರೆಗೆ ಪ್ರವಾಸಿಗರಿಗೆ ಬೆಟ್ಟದಲ್ಲಿರಲು ಅವಕಾಶ ನೀಡಲಾಗಿತ್ತು.

ಬೆಳಿಗ್ಗೆ ಕಡಿಮೆ ಸಂಖ್ಯೆಯಲ್ಲಿದ್ದ ಪ್ರವಾಸಿಗರ ಸಂಖ್ಯೆ ಮಧ್ಯಾಹ್ನವಾಗುತ್ತಿದ್ದಂತೆ ಹೆಚ್ಚುತ್ತ ಬಂತು. ಮಧ್ಯಾಹ್ನ ಮೂರುವರೆ ಸುಮಾರಿಗೆ ಬೆಟ್ಟದ ದಾರಿಯಲ್ಲಿ ವಾಹನದಟ್ಟಣೆ ಕಾಣಿಸಿಕೊಂಡಿತು. ನೂರಾರು ವಾಹನಗಳು ಕಿಲೋ ಮೀಟರ್‌ಗಟ್ಟಲೇ ನಿಂತು ನಿಧಾನಗತಿಯಲ್ಲಿ ಸಾಗಿದವು. ವಾಹನ ದಟ್ಟಣೆ ನಿರ್ವಹಿಸಲು ಸಂಚಾರ ಪೊಲೀಸರು ಸುಸ್ತಾಗಿ ಹೋದರು.

ಬಹುತೇಕ ಪ್ರವಾಸಿಗರು ಕುಟುಂಬ ಸಮೇತರಾಗಿ ಬೆಟ್ಟಕ್ಕೆ ಬಂದಿದ್ದರು. ಹಸಿರು ಸಸ್ಯ ಶ್ಯಾಮಲೆಯ ಮಡಿಲಲ್ಲಿ ಆಹ್ಲಾದಕರ ವಾತಾವರಣದ ನಡುವೆ ಎಲ್ಲಿ ನೋಡಿದರಲ್ಲಿ ಸಂಭ್ರಮ ಮನೆ ಮಾಡಿತ್ತು. ದಂಡಿ ದಂಡಿಯಾಗಿ ಬಂದಿದ್ದ ಪ್ರೇಮಿಗಳಂತೂ ಎಲ್ಲೆಂದರಲ್ಲಿ ತಿರುಗಿ ಹೊಸ ವರ್ಷದ ಮೊದಲ ದಿನದ ಸಂಭ್ರಮವನ್ನು ಅವಿಸ್ಮರಣೀಯ ವಾಗಿಸಿಕೊಳ್ಳುವ ತವಕದಲ್ಲಿದ್ದರು.

ಕುಟುಂಬ ಸಮೇತರಾಗಿ ಬಂದವರೆಲ್ಲ ಮಕ್ಕಳೊಂದಿಗೆ ವಿವಿಧ ಬಗೆಯ ಮೋಜಿನಾಟಗಳನ್ನು ಆಡುವಲ್ಲಿ ತಲ್ಲಿನರಾಗಿದ್ದರು. ಅನೇಕ ಕಡೆಗಳಲ್ಲಿ ವನಭೋಜನದ ದೃಶ್ಯಗಳು ಕಂಡುಬಂದವು. ಪೊಲೀಸರ ದಂಡು ಬೆಟ್ಟದ ತುಂಬಾ ಪಹರೆ ಕೆಲಸ ನಡೆಸಿತ್ತು. ಪಡ್ಡೆ ಹುಡುಗರ ತುಂಟಾಟಗಳನ್ನು ಕಂಡು ಎಚ್ಚರಿಕೆ ನೀಡುತ್ತ ಯಾವುದೇ ಅಹಿತಕರ ಘಟನೆಗಳಾಗದಂತೆ ನೋಡಿಕೊಂಡರು.

ಅಬಾಲವೃದ್ಧರಾದಿ ಮೊಬೈಲ್‌ ಹಿಡಿದು ಬಂದವರೆಲ್ಲ ಬೆಟ್ಟದ ಮೂಲೆ, ಮೂಲೆಗೆ ನುಗ್ಗಿ ವಿವಿಧ ಭಂಗಿಗಳಲ್ಲಿ ‘ಸೆಲ್ಫಿ’ಗೆ ಮುಖವೊಡ್ಡುತ್ತಿದ್ದ ಪರಿ ಯಂತೂ ನಗೆ ಉಕ್ಕಿಸುತ್ತಿತ್ತು. ಇನ್ನು ಅನೇಕರು ಆಪ್ತರೊಂದಿಗೆ ಕೇಕ್‌ಗಳನ್ನು ತಂದು ಬೆಟ್ಟದಲ್ಲಿ ಕತ್ತರಿಸಿ, ಬಾಯಿ ಸಿಹಿ ಮಾಡಿಕೊಂಡು ಹೊಸ ವರ್ಷವನ್ನು ಸಂಭ್ರಮಿಸಿದರು.

ಇನ್ನು ಬೆಟ್ಟದಲ್ಲಿರುವ ಕೋತಿಗಳ ಕಪಿಚೇಷ್ಟೆ ದೊಡ್ಡವರಿಗೆ ಪೀಕಲಾಟ ತಂದಿಡುತ್ತಿದ್ದರೆ, ಮಕ್ಕಳಿಗೆ, ಪುಟಾಣಿಗಳಿಗೆ ಮೋಜಿನ ಸಂಗತಿಯಾಗಿತ್ತು. ಪ್ರವಾಸಿಗರ ಕೈಯಲ್ಲಿನ ಆಹಾರ ಪೊಟ್ಟಣಗಳನ್ನು ಕಸಿಯಲು ವಾನರ ಸೇನೆ ನಡೆಸಿದ ಕಸರತ್ತು ಕೆಲವರಿಗೆ ಮನರಂಜನೆ ಒದಗಿಸಿತ್ತು.

ಬೆಟ್ಟದ ಮೇಲಿರುವ ಬೆರಳೆಣಿಕೆ ಹೊಟೇಲ್, ಮಳಿಗೆಗಳಲ್ಲಿ ಸೋಮವಾರ ಭರ್ಜರಿ ವ್ಯಾಪಾರ ಕಂಡುಬಂತು. ಬಿಸ್ಕಿಟ್, ಐಸ್‌ಕ್ರಿಂ, ಕುಡಿಯುವ ನೀರು, ಸೌಂತೆಕಾಯಿ, ಎಳೆನೀರು ವಹಿವಾಟು ಜೋರಾಗಿತ್ತು. ಬೆಟ್ಟಕ್ಕೆ ಬಂದಿದ್ದ ಬಹುಪಾಲು ಜನರು ಬೆಟ್ಟದ ಮೇಲಿನ ಯೋಗ ನಂದೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯಕಂಡು. ದಿನವೀಡಿ ದೇವಾಲಯದಲ್ಲಿ ಸರದಿ ಸಾಲಿನಲ್ಲಿ ಭಕ್ತರ ದಂಡು ಕಂಡುಬಂತು.

ಸೋಮವಾರ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ದೇವಾಲಯ, ಸುಲ್ತಾನ್‌ಪೇಟೆ ಸಮೀಪದ ಕಣಿವೆ ಬಸವಣ್ಣ ದೇವಾಲಯ ಸೇರಿದಂತೆ ನಗರದ ಅನೇಕ ದೇವಾಲಯಗಳಲ್ಲಿ ಜನರು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಗೋಚರಿಸಿತು.

ಒಂಬತ್ತು ಪಟ್ಟು ಹೆಚ್ಚಿನ ಆದಾಯ!

ಸಾಮಾನ್ಯ ದಿನಗಳಲ್ಲಿ ನಂದಿಬೆಟ್ಟಕ್ಕೆ ಸರಾಸರಿ 400 ಬೈಕ್‌, 200 ಕಾರುಗಳು, ಐದು ಆಟೊಗಳು, ಎರಡು ಬಸ್‌ಗಳಲ್ಲಿ 1,500 ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಿಂದ ತೋಟಗಾರಿಕೆ ಇಲಾಖೆಗೆ ₹ 25 ಸಾವಿರ ಆದಾಯ ಬರುತ್ತದೆ. ಈ ಆದಾಯ ಈ ಬಾರಿಯ ಹೊಸ ವರ್ಷದ ಮೊದಲ ದಿನ ಒಂಬತ್ತು ಪಟ್ಟು ಹೆಚ್ಚಳವಾಗಿತ್ತು.

* * 

ಈ ಬಾರಿ ನಾವು ಹೊಸ ವರ್ಷದ ದಿನ ಎಂಟು ಸಾವಿರ ಪ್ರವಾಸಿಗರ ನಿರೀಕ್ಷೆಯಲ್ಲಿದ್ದೆವು. ಆದರೆ 12 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದರು.
ರಮೇಶ್, ನಂದಿಬೆಟ್ಟದ ವಿಶೇಷ ಅಧಿಕಾರಿ

ಅಂಕಿಅಂಶಗಳು..
ನಂದಿಬೆಟ್ಟದಲ್ಲಿ ಸೋಮವಾರ ಕಂಡ ಚಿತ್ರಣ
ಬೈಕ್ 2,421
ಕಾರು 1,402
ಆಟೊ 56
ಬಸ್ 24
ಪ್ರವಾಸಿಗರು 12, 438
ಆದಾಯ ₹ 2,69,560

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT