ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಮಾರುಕಟ್ಟೆಯಲ್ಲಿ ಗೂಡಿಗೆ ಬರ

ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಳಿಯ ಅಬ್ಬರಕ್ಕೆ ರೇಷ್ಮೆ ಹುಳುಗಳಿಗೆ ಕಾಡುತ್ತಿರುವ ಸುಣ್ಣ ಕಟ್ಟು ರೋಗದ ಪರಿಣಾಮ ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಬರುವ ಗೂಡಿನ ಆವಕ ಪ್ರಮಾಣ ದಿನೇ ದಿನೇ ಇಳಿಮುಖವಾಗುತ್ತಿದೆ. ಇದರಿಂದಾಗಿ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನವೆಂಬರ್‌ನಲ್ಲಿ ಮಾರುಕಟ್ಟೆಗೆ 43 ಟನ್‌ ಗೂಡಿನ ಆವಕವಾಗಿತ್ತು. ಅದೇ ಡಿಸೆಂಬರ್‌ ಅಂತ್ಯದ ಹೊತ್ತಿಗೆ ಅದರ ಪ್ರಮಾಣ 15 ಟನ್‌ಗೆ ಇಳಿಕೆಯಾಗಿದೆ. ಶುಕ್ರವಾರವಷ್ಟೇ ಮಾರುಕಟ್ಟೆಗೆ 23 ಲಾಟುಗಳು ಬಂದಿದ್ದವು. ಭಾನುವಾರ ಕೇವಲ ಏಳು ಲಾಟು ಹರಾಜಾದವು.

ರೇಷ್ಮೆ ಬೆಳೆಯನ್ನೇ ನಂಬಿ ಬದುಕುತ್ತಿರುವ ರೈತರು ಚಳಿಗಾಲದಲ್ಲಿ ಸುಣ್ಣ ಕಟ್ಟು ರೋಗ ಬಾಧೆಗೆ ಹೆದರಿ ರೇಷ್ಮೆ ಹುಳು ಸಾಕಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳ ಮಾಲೀಕರು ಗೂಡಿನ ಅಭಾವದಿಂದ ಈ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಮುಂದಾಗಿದ್ದಾರೆ.

‘ನಗರದಲ್ಲಿ ಒಟ್ಟು 75ಕ್ಕೂ ಅಧಿಕ ರೀಲರ್‌ಗಳಿದ್ದೇವೆ. ಚಳಿಗಾಲದಲ್ಲಿ ಗೂಡು ಕೊಳ್ಳಲು ನಾಮುಂದು, ತಾಮುಂದು ಎಂದು ಪೈಪೋಟಿ ನಡೆಯುತ್ತದೆ. ಇದರಿಂದ ಬೆಲೆ ಕೂಡ ಹೆಚ್ಚಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಗೂಡು ಸಿಗುತ್ತಿಲ್ಲ. ಬಿಚ್ಚಾಣಿಕೆ ಘಟಕದಲ್ಲಿ ಕಾರ್ಮಿಕರಿಗೆ ಮುಂಗಡ ಹಣ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದ್ದೇವೆ. ಇದೀಗ ಅವರಿಗೆ ಕೆಲಸ ಇಲ್ಲದಂತಾಗಿದೆ. ಒಂದೊಮ್ಮೆ ಗೂಡಿನ ಕೊರತೆಯಿಂದ ಘಟಕ ಬಂದ್‌ ಆದರೆ ಅವರಿಗೂ ಕಷ್ಟ’ ಎನ್ನುತ್ತಾರೆ ರೀಲರ್‌ ಶ್ರೀನಿವಾಸ್.

‘ಸುಮಾರು 40ವರ್ಷಗಳಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ. ಚಳಿಗಾಲದಲ್ಲಿ ರೈತರು ಗೂಡು ಬೆಳೆಯಲು ಎಷ್ಟು ಕಷ್ಟ ಪಡುತ್ತಾರೋ ಅಷ್ಟೇ ಕಷ್ಟ ನಾವು ಅನುಭವಿಸುತ್ತಿದ್ದೇವೆ. ದಿನಕ್ಕೆ ರೇಷ್ಮೆ ನೂಲು ಬಿಚ್ಚಲು ಒಬ್ಬರಿಗೆ ₹ 320 ಸಂಬಳ ಕೊಡುತ್ತಿದ್ದೇನೆ. ಇನ್ನು ಗೂಡು ಖರೀದಿ ಮಾಡಲು ಕೈಯಲ್ಲಿ ಹಣ ಇಲ್ಲದಿದ್ದರೂ ಸಾಲ ಮಾಡಿಯಾದರೂ ಗೂಡು ಖರೀದಿಸಬೇಕಾಗಿದೆ’ ಎಂದು ಕೌಸರ್‌ ನಗರದ ನಿವಾಸಿ ಎಸ್‌.ಚಾಂದ್‌ ಪಾಷಾ ಹೇಳಿದರು.

‘ನಗರದ ಮಾರುಕಟ್ಟೆಯಲ್ಲಿ ಗೂಡಿನ ಅಭಾವ ಇದ್ದಾಗ ಸ್ಥಳೀಯ ವಿಜಯಪುರ ಮಾರುಕಟ್ಟೆಯಲ್ಲಿ ಖರೀದಿ ಮಾಡಿ ರೇಷ್ಮೆ ನೂಲು ಬಿಚ್ಚುವ ಕೆಲಸ ಮಾಡಿಸುತ್ತಿದ್ದೇನೆ. ಅಲ್ಲಿಯೂ ಗೂಡು ಸಿಗದಿದ್ದರೆ ಮಕ್ಕಳಿಗೆ ಹಾಕಿ ಕೊಟ್ಟಿರುವ ಸ್ಟೀಲ್‌ ಅಂಗಡಿಯ ವ್ಯಾಪಾರ ನೋಡಿಕೊಳ್ಳುತ್ತೇನೆ’ ಎಂದೂ ಅವರು ಹೇಳುದರು.

‘ಪ್ರತಿ ತಿಂಗಳು 100 ರಿಂದ 150 ಮೊಟ್ಟೆ ಹುಳು ಸಾಕುತ್ತೇನೆ. ಈ ತಿಂಗಳಲ್ಲಿ 150 ಮೊಟ್ಟೆ ಹುಳಕ್ಕೆ ₹ 30 ಸಾವಿರ ಖರ್ಚು ಮಾಡಿ ರೇಷ್ಮೆ ಗೂಡು ಬೆಳೆಸಿದ್ದೇನೆ. ಅದರಲ್ಲಿ 50ಕ್ಕೂ ಹೆಚ್ಚು ಮೊಟ್ಟೆ ಹುಳಗಳು ಚಳಿಗೆ ಸತ್ತಿವೆ. ಆಗೊಮ್ಮೆ, ಈಗೊಮ್ಮೆ ರೇಷ್ಮೆ ಗೂಡಿನ ಬೆಲೆ ಏರುತ್ತಿರುವಾಗ ಬೇಡಿಕೆಗೆ ತಕ್ಕಷ್ಟು ಗೂಡು ಬೆಳೆಯಲು ಸಾಧ್ಯವಾಗುತ್ತಿಲ್ಲ. ಚಳಿಗಾಲದಲ್ಲಂತೂ ಸುಣ್ಣ ಕಟ್ಟು ರೋಗ, ಹೂಜಿಗಳ ಕಾಟ ಹೆಚ್ಚಾಗಿ ಬೆಳೆಗೆ ಹಾಕಿದ ಬಂಡವಾಳ ಕೈಗೆ ಸಿಗುತ್ತಿಲ್ಲ’ ಎಂದು ದಿಬ್ಬೂರಿನ ರೈತ ನಾರಾಯಣಮೂರ್ತಿ ತಿಳಿಸಿದರು.

‘ಚಳಿಗಾಲದಲ್ಲಿ ರೇಷ್ಮೆ ಹುಳು ಸಾಕುವುದು ಕಷ್ಟದ ಕೆಲಸ. ಒಮ್ಮೆ ಬಿಸಿಲು ಹೆಚ್ಚಾದರೆ ಉಷ್ಣಾಂಶ ಏರುತ್ತದೆ. ಸಂಜೆಯಾಗುತ್ತಿದ್ದಂತೆ ಮಂಜು ಬಿದ್ದು, ವಾತಾವರಣ ತಂಪಾಗುತ್ತದೆ. ತೇವಾಂಶ ಹೆಚ್ಚುವರು. ಇದರಿಂದ ಸಾಕಾಣಿಕಾ ಮನೆಗಳಲ್ಲಿ ಹುಳುಗಳಿಗೆ ಅಗತ್ಯವಾಗಿ ಬೇಕಾದ ವಾತಾವರಣ ನಿರ್ಮಿಸಲು ತೊಂದರೆಯಾಗುತ್ತಿದೆ’ ಎಂದು ಎಂದು ಗಂಡ್ಲಹಳ್ಳಿ ರೈತ ವೆಂಕಟೇಶ್‌ ಅಳಲು ತೋಡಿಕೊಳ್ಳುವರು.

ಮುಂಜಾಗ್ರತಾ ಕ್ರಮ ಅಗತ್ಯ

‘ಚಳಿಗಾಲದಲ್ಲಿ ರೈತರು ಹುಳು ಸಾಕಾಣಿಕೆ ಮನೆಯ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚುತ್ತಾರೆ. ಇದರಿಂದ ಹಿಕ್ಕೆಯಲ್ಲಿ ಉತ್ಪತ್ತಿಯಾಗುವ ಉಷ್ಣಾಂಶದಿಂದ ಸುಣ್ಣ ಕಟ್ಟು ಸೋಂಕಿಗೆ ಕಾರಣವಾಗುವ ಸೂಕ್ಷ್ಮಾಣು ಜೀವಿಗಳು ಹರಡಿಕೊಳ್ಳುತ್ತವೆ. ಆಗ ಹುಳುಗಳು ಉಸಿರಾಡಲು ಅವಕಾಶವಿಲ್ಲದಂತೆ ಮಾಡುತ್ತವೆ. ಹೀಗಾದಾಗ ಹುಳುಗಳು ಸೊಪ್ಪಿನ ಒಳಗೆ ಸೇರಿ ಸಾಯುತ್ತವೆ. ಆದ್ದರಿಂದ ರೋಗ ಬಾಧೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಗಂಗರತ್ನಮ್ಮ ತಿಳಿಸಿದರು.

* * 

ರೇಷ್ಮೆಗೂಡಿನ ಆವಕ ತುಂಬಾ ಕಡಿಮೆಯಾಗಿದೆ. ಮುಂದಿನ ವಾರವೂ ಇದೇ ಸ್ಥಿತಿ ಇದ್ದರೆ ಸ್ಪಲ್ಪ ದಿನಗಳ ಕಾಲ ಬಿಚ್ಚಾಣಿಕೆ ಘಟಕ ಸ್ಥಗಿತಗೊಳಿಸಲು ನಿರ್ಧರಿಸಿದ್ದೇನೆ
ಶ್ರೀನಿವಾಸ್ ರೀಲರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT