ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಯಲ್ಲಿ ಹೊಸ ವರುಷದ ಕಲರವ.!

Last Updated 2 ಜನವರಿ 2018, 8:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಸಿದ್ಧ ಸ್ಥಳವಾದ ತುಪ್ಪದ ಕೊಳದ ಮೇಲೆ ತರುಣ - ತರುಣಿಯರು ಸೆಲ್ಫಿ ತೆಗೆದುಕೊಳ್ಳಲು ನಿರತರಾಗಿದ್ದರೆ, ಕೇಕ್ ಕತ್ತರಿಸಲು ಕೆಲವರು ಹಾತೊರೆಯುತ್ತಿದ್ದರು. ಕಣ್ಣು ಹಾಯಿಸಿದಷ್ಟು ದೂರ ಜನಸಾಗರ!

ಇದು ಕಂಡು ಬಂದಿದ್ದು, ಸೋಮವಾರ ಇಲ್ಲಿನ ಐತಿಹಾಸಿಕ ಕಲ್ಲಿನ ಕೋಟೆಯ ಮೇಲುದುರ್ಗದಲ್ಲಿ. ಅದೇ ರೀತಿ ಕೆಳಭಾಗದ ಕೋಟೆ ದ್ವಾರದ ಕೌಂಟರ್ ಮುಂಭಾಗದಲ್ಲೂ ಟಿಕೆಟ್ ಪಡೆಯಲು ಸಾವಿರಾರು ಮಂದಿ ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತಿದ್ದರು. ಜತೆಗೆ ಟ್ರಾಫಿಕ್‍ ಕಿರಿಕಿರಿ, ಜನಸಮೂಹವನ್ನು ದಾಟಿ ಕೋಟೆಯೊಳಗೆ ಪ್ರವೇಶ ಪಡೆಯುವುದೇ ದೊಡ್ಡ ಸವಾಲಾಗಿತ್ತು.

ತಂಡೋಪ ತಂಡವಾಗಿ ಕೋಟೆ ಪ್ರವೇಶಿಸಿದ ಸಾವಿರಾರು ಪ್ರವಾಸಿಗರು ಮದ್ದುಗುಂಡು, ಬೀಸುವ ಕಲ್ಲು, ಒಂಟಿಕಲ್ಲಿನ ಬಸವಣ್ಣ, ಬಂದಿಖಾನೆ, ಮಧ್ಯರಂಗ, ತುಪ್ಪದ ಕೊಳ, ಏಕನಾಥೇಶ್ವರಿ, ಬನಶಂಕರಿ, ಹಿಡಂಬೇಶ್ವರ, ಸಂಪಿಗೆ ಸಿದ್ದೇಶ್ವರ, ಬೆಟ್ಟದ ಗಣಪತಿ, ಗೋಪಾಲಸ್ವಾಮಿ ಹೀಗೆ ಇಲ್ಲಿನ ಐತಿಹಾಸಿಕ ದೇಗುಲಗಳಿಗೆ ಭೇಟಿ ನೀಡಿ ಹೊಸ ವರ್ಷ 2018 ಅನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಕೋಟೆಯಷ್ಟೇ ಅಲ್ಲದೆ, ಚಂದ್ರವಳ್ಳಿ ತೋಟ, ಮುರುಘಾಮಠದ ಮುರುಘಾವನ, ಆಡುಮಲ್ಲೇಶ್ವರದಂತಹ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷದ ಸಂಭ್ರಮದ ಕಥನ ಆರಂಭಗೊಂಡಿತು.

ಹಲವೆಡೆಗಳಲ್ಲಿ ಕೇಕ್ ಕತ್ತರಿಸಿ ಯುವಸಮೂಹ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.  ಪರಿಚಿತರು, ಅಪರಿಚಿತರೆಂಬ ಭೇದ ಭಾವವಿಲ್ಲದೇ ಶುಭಾಶಯ ರವಾನೆಯಾಯಿತು ಎನ್ನುತ್ತಾರೆ ಬೆಂಗಳೂರಿನಿಂದ ಚಿತ್ರದುರ್ಗದ ಕೋಟೆ ನೋಡಲು ಬಂದಿದ್ದ ಪ್ರವಾಸಿಗ ರಮೇಶ್.

ಕೋಟೆಯೊಳಗಿನ ಪ್ರತಿ ಕಲ್ಲು ಇತಿಹಾಸ ಸಾರುತ್ತದೆ. ಬೇರೆ ದಿನಗಳಲ್ಲಿ ಕೋಟೆ ನೋಡುವುದಕ್ಕಿಂತ ಹೊಸ ವರ್ಷಕ್ಕೆ ಇಲ್ಲಿ ಬಂದರೆ ಸಿಗುವ ಸಂತೋಷವೇ ಬೇರೆ. ಉತ್ಸಾಹದ ಬುಗ್ಗೆಯಂತಿದ್ದ ಯುವಕ - ಯುವತಿಯರು ಕಲ್ಲಿನ ಕೋಟೆಗೆ ಬಣ್ಣ ತುಂಬಿದ್ದಾರೆ ಎನ್ನುತ್ತಾರೆ ದಾವಣಗೆರೆಯ ಹಿರಿಯ ನಾಗರಿಕ ರಾಜಣ್ಣ

ಕೋಟೆಯ ಅಂಗಳದಲ್ಲಿ ಹೊಸ ವರ್ಷ ಆಚರಿಸಬೇಕು ಎಂಬುದು ನನ್ನ ಬಹು ದಿನದ ಕನಸಾಗಿತ್ತು. ಇಲ್ಲಿ ಬಂದು ನೋಡಿದರೆ, ಹೊಸ ವರ್ಷಾಚರಣೆಗೆ ನಿರೀಕ್ಷೆಗೂ ಮೀರಿದ ಜನಸ್ತೋಮವಿತ್ತು. ಇದು ನೆನಪಿನಲ್ಲಿ ಉಳಿಯುವಂತಹ  ವರ್ಷ ಆಚರಣೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಬೆಂಗಳೂರಿನ ನಿವಾಸಿ ಮಮತಾ.

ವಿವಿಧೆಡೆ ಟ್ರಾಫಿಕ್ ಸಮಸ್ಯೆ: ಅಧಿಕ ಸಂಖ್ಯೆಯ ಪ್ರವಾಸಿಗರು ಕೋಟೆಗೆ ಭೇಟಿ ನೀಡಿದ್ದರ ಪರಿಣಾಮವಾಗಿ ಜೋಗಿಮಟ್ಟಿ ರಸ್ತೆಯಿಂದ ಕೋಟೆ ಮಾರ್ಗದ ರಸ್ತೆ ಹಾಗೂ ಗಾಂಧಿ ವೃತ್ತದಿಂದ ಕೋಟೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಕೋಟೆಯ ಮುಂಭಾಗದ ಎಡ, ಬಲಗಳಲ್ಲಿ ವಾಹನಗಳು ನಿಂತಿದ್ದವು. ಇದರಿಂದ ಸುಗಮ ಸಂಚಾರಕ್ಕೆ ತೊಡಕು ಉಂಟಾಯಿತು. ಅದೇ ರೀತಿ ಮುರುಘಾಮಠದ ಮುಂಭಾಗದಲ್ಲೂ ಟ್ರಾಫಿಕ್ ಸಮಸ್ಯೆ ಉಂಟಾಯಿತು.

ಬೋರೇಶ ಎಂ.ಜೆ.ಬಚ್ಚಬೋರನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT