ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಮೇಳಕ್ಕೆ ಅವಳಿ ಜಿಲ್ಲೆಯ ಸಿರಿಧಾನ್ಯಗಳು

Last Updated 2 ಜನವರಿ 2018, 8:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಇದೇ 19 ರಿಂದ 21ರವರೆಗೆ ಬೆಂಗಳೂರಿನ ಅರಮಮನೆ ಮೈದಾನದಲ್ಲಿ ನಡೆಯಲಿರುವ ಸಾವಯವ ಮತ್ತು ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳು ಪ್ರದರ್ಶನಗೊಳ್ಳುತ್ತಿವೆ.

ಸಿರಿಧಾನ್ಯಗಳನ್ನೇ ಹೆಚ್ಚಾಗಿ ಬೆಳೆಯುವ ಈ ಜಿಲ್ಲೆಗಳಿಂದ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮೇಳವೊಂದರಲ್ಲಿ ಸಿರಿಧಾನ್ಯಗಳು ಮತ್ತು ಸಾವಯವ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ.

ಕೃಷಿ ಇಲಾಖೆಯ ಸಹಕಾರದೊಂದಿ ರಚಿಸಲಾಗಿರುವ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಒಕ್ಕೂಟದ ಮೂಲಕ ಮೇಳದಲ್ಲಿ ಜಿಲ್ಲೆಗಳ ರೈತರು ಪಾಲ್ಗೊಂಡು, ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು, ಮಾರಾಟ ಮಾಡುತ್ತಿದ್ದಾರೆ.

ಮೂರು ದಿನಗಳ ಮೇಳಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದೆ. ಒಕ್ಕೂಟದಿಂದ ಸಿರಿಧಾನ್ಯಗಳು, ಸಾವಯವ ಪದಾರ್ಥಗಳನ್ನು ತಯಾರಕರಿಗೆ ವಿತರಿಸಿ, ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಹೊಸದುರ್ಗ ತಾಲ್ಲೂಕಿನಿಂದ ಉದ್ಯಮಿ ಸುಧಾ ಅವರು ಸಾವಯವ ಶೇಂಗಾ ಮತ್ತು ಕೊಬ್ಬರಿ ಎಣ್ಣೆಯನ್ನು ಮೇಳದಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ. ಹೊಳಲ್ಕೆರೆ ತಾಲ್ಲೂಕು ಪ್ರಗತಿಪರ ರೈತ ಈಚಘಟ್ಟದ ಸಿದ್ದವೀರಪ್ಪ ಅವರು ನೆಲ್ಲಿ ಕಾಯಿಯಿಂದ ತಯಾರಿಸಿದ ಏಳೆಂಟು ರೀತಿಯ ಆರೋಗ್ಯ ವರ್ಧಕ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು, ಮಾರಾಟ ಮಾಡುತ್ತಿದ್ದಾರೆ.

ಉತ್ಪನ್ನಗಳ ಜತೆ ಚಿತ್ರದುರ್ಗ ಜಿಲ್ಲೆಯಾದ್ಯಂತ ನವಣೆ ಮತ್ತು ಸಾಮೆ ಧಾನ್ಯಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ‘ಧಾನ್ಯಗಳ ಸಂಸ್ಕರಣೆಗೆ ದಾವಣಗೆರೆಯಲ್ಲಿ ಘಟಕವಿದ್ದು, ದಿನಕ್ಕೆ 50 ಕ್ವಿಂಟಲ್ ನಷ್ಟು ಧಾನ್ಯಗಳನ್ನು ಸಂಸ್ಕರಿಸಿ, ಮೇಳಕ್ಕೆ ಕಳಿಸಿಕೊಡುತ್ತೇವೆ. ಮೂರು ದಿನ ಮೇಳದಲ್ಲೂ ಸಿರಿಧಾನ್ಯಗಳನ್ನು ಮಾರಾಟ ಮಾಡಲಾಗುತ್ತದೆ’ ಎಂದು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಒಕ್ಕೂಟದ ಅಧ್ಯಕ್ಷ ಟಿ.ಕೃಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸಿರಿಧಾನ್ಯಗಳ ರುಚಿ ಪರಿಚಯಿಸುವ ಸಲುವಾಗಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿದ್ದಾರೆ. ನವಣೆ ಬಿಸ್ಕತ್ತು, ಮೈಸೂರ್ ಪಾಕ್, ಸೋಂಪಾಪುಡಿ ಸೇರಿದಂತೆ ಬೇಕರಿಯಲ್ಲಿರುವ ಬಹುತೇಕ ಉತ್ಪನ್ನಗಳನ್ನು ಸಿರಿಧಾನ್ಯಗಳಿಂದಲೇ ಸಿದ್ದಪಡಿಸಲಾಗುತ್ತಿದೆ. ಒಕ್ಕೂಟದಿಂದಲೇ ಕಚ್ಚಾವಸ್ತುಗಳನ್ನು ಪೂರೈಸಿ, ಸಿಹಿ– ಖಾರದ ತಿನಿಸುಗಳನ್ನು ತಯಾರಿಸಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 14 ಪ್ರಾಂತೀಯ ಸಾವಯವ ಒಕ್ಕೂಟಗಳಿವೆ. ಪ್ರತಿ ಒಕ್ಕೂಟಕ್ಕೆ ಒಂದು ಮಳಿಗೆ ಕೊಟ್ಟಿದ್ದಾರೆ. ಆ ಮಳಿಗೆಯಲ್ಲಿ ಸಿರಿಧಾನ್ಯ, ಸಾವಯವ ಉತ್ಪನ್ನಗಳ ಜತೆಗೆ, ಆಹಾರ ಪೂರೈಕೆ ಮಾಡುವ ‘ಫುಡ್ ಕೋರ್ಟ್‌’ ಇರುತ್ತದೆ ಎಂದು ಕೃಪ ತಿಳಿಸಿದರು. ‘ಮೂರು ದಿನಗಳ ಕಾಲ ಮೇಳದಲ್ಲಿ ಪಾಲ್ಗೊಂಡು ಬೇರೆ ರಾಜ್ಯ, ರಾಷ್ಟ್ರಗಳ ರೈತರೊಟ್ಟಿಗೆ ಸಂವಾದ ನಡೆಸಲಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

* * 

ಶೇಂಗಾ ಎಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ನೋವು ನಿವಾರಕ ಎಣ್ಣೆಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿಡುತ್ತಿದ್ದೇವೆ. ಒಕ್ಕೂಟದಿಂದಲೇ ಕಚ್ಚಾವಸ್ತು ಖರೀದಿಸಲಾಗಿದೆ.
ಟಿ. ಸುಧಾ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT