ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮ ವೃತ್ತ; ಏಕಮುಖ ಸಂಚಾರ

Last Updated 2 ಜನವರಿ 2018, 9:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹಳೇ ಬಸ್‌ ನಿಲ್ದಾಣದ ಬಳಿ ಇರುವ ನ್ಯೂ ಕಾಟನ್‌ ಮಾರುಕಟ್ಟೆಯಿಂದ ಚನ್ನಮ್ಮ ವೃತ್ತದವರೆಗೆ ದಿಢೀರ್‌ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತಂದಿರುವುದರ ಬಗ್ಗೆ ಸಾರ್ವಜನಿಕ‌ರಿಂದ ಆಕ್ಷೇಪ ವ್ಯಕ್ತವಾಗಿದೆ.

ಬಿಆರ್‌ಟಿಎಸ್‌ (ತ್ವರಿತ ಸಾರಿಗೆ ವ್ಯವಸ್ಥೆ) ವತಿಯಿಂದ ಹಳೇ ಬಸ್‌ ನಿಲ್ದಾಣದ ಎದುರು ಬಸ್‌ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಹೀಗಾಗಿ, ಆಗಾಗ್ಗೆ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಭಾನುವಾರ ಸಂಜೆಯಿಂದ ಏಕಾಏಕಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಹಳೇ ಪಿ.ಬಿ. ರಸ್ತೆಯಿಂದ ಚನ್ನಮ್ಮ ವೃತ್ತದ ಕಡೆಗೆ ಹೋಗುವವರು ಕಾಟನ್‌ ಮಾರುಕಟ್ಟೆ, ನೀಲಿಜಿನ್‌ ರಸ್ತೆ ಮೂಲಕ ಚನ್ನಮ್ಮ ವೃತ್ತ ಸೇರಬೇಕು. ಚನ್ನಮ್ಮ ವೃತ್ತದಿಂದ ಹಳೇ ಬಸ್‌ ನಿಲ್ದಾಣದ ಮೂಲಕ ವಾಹನ ಸವಾರರು ಎಂದಿನಂತೆ ಹಳೇ ಪಿ.ಬಿ. ರಸ್ತೆಯಲ್ಲಿ ಸಂಚರಿಸಬೇಕು.

ಕಾಟನ್‌ ಮಾರುಕಟ್ಟೆ ವೃತ್ತ ಮತ್ತು ಬಸವ ವನ ಬಳಿ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದು, ಸಂಚಾರ ಪೊಲೀಸರು ಎಡಕ್ಕೆ ಚಲಿಸುವಂತೆ ವಾಹನ ಸವಾರರಿಗೆ ಸೂಚಿಸುತ್ತಿದ್ದ ದೃಶ್ಯ ಸೋಮವಾರ ಕಂಡುಬಂತು. ಆದರೆ, ಏಕಮುಖ ಸಂಚಾರ ವ್ಯವಸ್ಥೆ ಜಾರಿ ಮಾಡಿರುವ ಬಗ್ಗೆ ಬ್ಯಾರಿಕೇಡ್‌ನಲ್ಲಿ ಸೂಚನ ಫಲಕವನ್ನು ಅಳವಡಿಸದೇ ಇರುವುದರಿಂದ ವಾಹನ ಸವಾರರು ಗೊಂದಲಕ್ಕೀಡಾದರು.

ಏಕಮುಖ ಸಂಚಾರ ವ್ಯವಸ್ಥೆ ಜಾರಿಯಾದ ಮೇಲೆ ಹಳೇ ಬಸ್‌ ನಿಲ್ದಾಣದ ಎದುರು ನಿತ್ಯ ಆಗುತ್ತಿದ್ದ ಸಂಚಾರ ದಟ್ಟಣೆ ಈಗ ತಪ್ಪಿದೆ. ಏಕಮುಖ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಾಗುತ್ತಿದ್ದ ದೃಶ್ಯ ಕಂಡುಬಂತು.

ಅಡೆತಡೆಗಳ ತೆರವು: ಚನ್ನಮ್ಮ ವೃತ್ತ ಹಾದು ಹಳೇ ಬಸ್‌ ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದ ಬಸ್‌ಗಳು ಒಳಹೋಗಲು ತಿಣುಕಾಡುತ್ತಿದ್ದವು. ಅಲ್ಲಲ್ಲಿ ಬ್ಯಾರಿಕೇಡ್‌ಗಳು, ದ್ವಿಚಕ್ರ ವಾಹನಗಳ ನಿಲುಗಡೆ ಮಾಡಲಾ ಗುತ್ತಿತ್ತು. ಅಲ್ಲದೆ, ಕಸ, ಮಣ್ಣಿನ ಗುಡ್ಡೆ ಇದ್ದುದ್ದರಿಂದ ಬಸ್‌ಗಳ ಸಂಚಾರಕ್ಕೆ ಅನಾನುಕೂಲ ಉಂಟಾಗಿತ್ತು. ಇದರಿಂದ ಸಂಚಾರ ದಟ್ಟಣೆ ಸಹ ಆಗುತ್ತಿತ್ತು. ಡಿಸಿಪಿ (ಅಪರಾಧ–ಸಂಚಾರ) ಬಿ.ಎಸ್.ನೇಮಗೌಡ ಸೋಮವಾರ ಖುದ್ದು ನಿಂತು ಬಸ್‌ಗಳ ಸುಗಮ ಸಂಚಾರಕ್ಕೆ ಇದ್ದ ಅಡೆತಡೆಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸಿದರು.

* * 

ನ್ಯೂ ಕಾಟನ್‌ ಮಾರುಕಟ್ಟೆಯಿಂದ ಚನ್ನಮ್ಮ ವೃತ್ತದ ವರೆಗೆ ಪ್ರಯೋಗಾರ್ಥ ಏಕ ಮುಖ ಸಂಚಾರ ಜಾರಿ ಮಾಡಲಾಗಿದೆ. ದಟ್ಟಣೆ ತಗ್ಗಿದರೆ ಮುಂದುವರಿಸಲಾಗುವುದು –ಬಿ.ಎಸ್‌.ನೇಮಗೌಡ, ಡಿಸಿಪಿ (ಅಪರಾಧ–ಸಂಚಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT