ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ನಾಗರಾಜ ಅಯ್ಯ, ಭದ್ರಾವತಿ

ನಮ್ಮದು ರೈತ ಕುಟುಂಬ. ನಮ್ಮ ಒಂದು ಮನೆಯನ್ನು ₹ 7 ಲಕ್ಷಕ್ಕೆ ಭೋಗ್ಯ ಮಾಡಿ, ಹಣ ಪಡೆದಿದ್ದೇನೆ. ಬ್ಯಾಂಕಿನಲ್ಲಿ ಠೇವಣಿ ಮಾಡಬೇಕೆಂದಿದ್ದೇವೆ. ನಿಮ್ಮ ಅಭಿಪ್ರಾಯ ಏನು?
ಉತ್ತರ: ನಿಮ್ಮ ಅಭಿಪ್ರಾಯ ಸರಿ ಇದೆ. ಭೋಗ್ಯ ಪಡೆದವರು ಮನೆ ಖಾಲಿ ಮಾಡುವಾಗ ಹಣ ವಾಪಸು ಕೇಳುತ್ತಾರೆ. ಅವರಿಗೆ ತಕ್ಷಣ ಹಣ ಕೊಡಬೇಕಾಗುತ್ತದೆ. ಇವನ್ನೆಲ್ಲಾ ಗಮನಿಸುವಾಗ ಬ್ಯಾಂಕ್ ಠೇವಣಿಯೇ ಲೇಸು. ಭೋಗ್ಯದ ಅವಧಿಗೆ ಸರಿಯಾಗಿ ಬ್ಯಾಂಕಿನಲ್ಲಿ ಠೇವಣಿ ಮಾಡಿರಿ. ಮಧ್ಯದಲ್ಲಿ ಮನೆ ಖಾಲಿ ಮಾಡಿದರೂ, ಅವಧಿ ಠೇವಣಿಯನ್ನು, ಅವಧಿಗೆ ಮುನ್ನ ಪಡೆಯುವ ಹಕ್ಕು ನಿಮಗಿದೆ. ಹೆಚ್ಚಿನ ಬಡ್ಡಿ ಆಸೆಯಿಂದ ಅಭದ್ರವಾದ ಜಾಗದಲ್ಲಿ ವಿನಿಯೋಗಿಸದಿರಿ.

ಚಲಪತಿ. ಬಿ.ವಿ., ಬೆಂಗಳೂರು

ಮನೆ ಬದಲಾಯಿಸುವಾಗ ಕಿಸಾನ್‌ ಪತ್ರ ಕಳೆದುಹೋಗಿದೆ. ಇದನ್ನು ಪೋಸ್ಟ್‌ ಮಾಸ್ಟರಿಗೆ ತಿಳಿಸಿದಾಗ, Indemnity Bond+ Govt. Employees surety ಕೊಡಬೇಕು ಎನ್ನುತ್ತಾರೆ. ಏನು ಮಾಡಲಿ?

ಉತ್ತರ: ಠೇವಣಿ ಬಾಂಡುಗಳು ಕಳೆದಾಗ, ಇನ್ನೊಂದು ಹೊಸ ಬಾಂಡು ಪಡೆಯುವಾಗ Indemnity Bond ಕೊಡಬೇಕಾಗುತ್ತದೆ.  ನೀವು KVCಯ ಮೊತ್ತ ತಿಳಿಸಿಲ್ಲ. ದೊಡ್ಡ ಮೊತ್ತವಾದಲ್ಲಿ surety ಕೇಳುತ್ತಾರೆ. ದೊಡ್ಡ ಮೊತ್ತವಲ್ಲವಾದರೆ Indemnity Bond ಸಾಕಾಗುತ್ತದೆ. ಅಂಚೆ ಕಚೇರಿಯ ನಿಯಮಾವಳಿಗೆ ಅನುಸಾರವಾಗಿ ಕೇಳಿರಬಹುದು. ನೀವು ಚೀಫ್‌ ಪೋಸ್ಟ್‌ಮಾಸ್ಟರ್‌ ಜನರಲ್‌ ಕಚೇರಿಗೆ ಹೋಗಿ ಅಲ್ಲಿ ಪಬ್ಲಿಕ್‌ ರೀಲೇಷನ್‌ ಆಫೀಸರ್‌ರನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಮಂಜುನಾಥ, ಬೆಂಗಳೂರು

ನನ್ನ ಮಗಳು IT-MNCಯಲ್ಲಿ ಕೆಲಸ ಮಾಡುತ್ತಾಳೆ. ಅವಳು ಸಂಬಳದ ಶೇ 20 ರಷ್ಟು ಆದಾಯ ತೆರಿಗೆ ಸಲ್ಲಿಸುತ್ತಾಳೆ. 2016 ರಲ್ಲಿ ಸೆಕ್ಷನ್‌ 80 ಸಿಸಿಡಿ (1ಬಿ) ಆಧಾರದ ಮೇಲೆ ₹ 50,000 ಎನ್‌ಪಿಎಸ್‌ ಮಾಡಿರುತ್ತಾಳೆ. ಅವಳಿಗೆ PRAN A/c ಇದೆ. ಅವಳು ಅಂತಹ ಎರಡು ಖಾತೆ ಹೊಂದಿ ಪ್ರತ್ಯೇಕವಾಗಿ ₹ 50,000 ದಂತೆ, ವಾರ್ಷಿಕ ₹ 1 ಲಕ್ಷ ತುಂಬಿ ತೆರಿಗೆ ವಿನಾಯ್ತಿ ಪಡೆಯಬಹುದೇ?

ಉತ್ತರ: NPS ಮಾಡುವವರಿಗೆ PRAN ಖಾತೆ ಒದುಗಿಸುತ್ತಾರೆ. (Permanent Retirement Account Number ) NPS ರಿಜಿಸ್ಟ್ರೇಶನ್‌ ಮಾಡಿದ ನಂತರ PRAN A/c No. ಖಾತೆದಾರ ಪಡೆಯಬಹುದು. PRAN ನಿಂದಾಗಿ ಖಾತೆದಾರ NPS ಕಟ್ಟಿದ ಖಾತೆಯ ವಿವರ ತಿಳಿಯಲು ಸಾಧ್ಯ. PRAN ಖಾತೆ ಹೊಂದಿರುವ ಕಾರಣದಿಂದ, ಸೆಕ್ಷನ್‌ 80 ಸಿಸಿಡಿ(1ಬಿ) ಆಧಾರದ ಮೇಲೆ ಎರಡು ಎನ್‌ಪಿಎಸ್‌ ಖಾತೆ ತೆರೆದು, ಗರಿಷ್ಠ ಮಿತಿಗಿಂತ ಹೆಚ್ಚಿನ ಹಣ ಕಟ್ಟಿ ತೆರಿಗೆ ವಿನಾಯತಿ ಪಡೆಯುವಂತಿಲ್ಲ. PRAN ಎನ್ನುವುದು NPS ಖಾತೆಯ ಒಂದು ಅಂಶ ಹಾಗೂ ಇದು ಬೇರೊಂದು ಖಾತೆಯಲ್ಲ.

ಸುರಭಿ. ಎಸ್‌.ಎನ್‌., ಬೆಂಗಳೂರು

ನಾನು IT ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ಕಡಿತದ ನಂತರ ₹ 35,000 ಬರುತ್ತದೆ. ತೆರಿಗೆ ವಾರ್ಷಿಕವಾಗಿ ₹ 11,340. ಮನೆ ಬಾಡಿಗೆ ₹ 12,000. ನನ್ನ ಕುಟುಂಬದಲ್ಲಿ 5 ಜನರಿದ್ದಾರೆ. ನನಗೆ 6 ತಿಂಗಳ ಗಂಡುಮಗು ಇದೆ. 4–5 ವರ್ಷಗಳಲ್ಲಿ ಸ್ವಂತ ಮನೆ ಮಾಡಬೇಕು ಹಾಗೂ ನನ್ನ ಮಗುವಿನ ಭವಿಷ್ಯಕ್ಕೆ ಸಲಹೆ ನೀಡಿ?

ಉತ್ತರ: ನೀವು ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ಉಳಿಸುತ್ತಿರಬಹುದು. ಇದರಲ್ಲಿ PPFಗೆ ಹೆಚ್ಚಿನ ಪ್ರಾಧಾನ್ಯ ಕೊಡಿ. ನಿಮ್ಮ ಚಿಕ್ಕ ಕಂದನ ಸಲುವಾಗಿ ವಾರ್ಷಿಕವಾಗಿ ಕನಿಷ್ಠ ₹ 15,000 ಎಲ್‌ಐಸಿ ಯವರ ‘New Childrens’ Money Back Policy  ಮಾಡಿಸಿ. ಇದರಿಂದ ಮಗುವು ಪ್ರಾಯಕ್ಕೆ ಬಂದು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗುತ್ತದೆ. ನಿಮ್ಮ ಆದಾಯ ಹಾಗೂ ನಿಮ್ಮ ಪರಿಸರ ಗಮನಸಿದಾಗ ಸದ್ಯಕ್ಕೆ ಗೃಹಸಾಲ ಪಡೆದು ಮನೆ ಕಟ್ಟಿಸುವುದಕ್ಕಿಂತ, ಕನಿಷ್ಠ 30X40 ನಿವೇಶನ ಕೊಳ್ಳುವುದೇ ಲೇಸು ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗೆ ನಿವೇಶನ ಕೊಳ್ಳಲು ಬ್ಯಾಂಕಿನಿಂದ ಸಾಲ ಪಡೆದರೆ, ಅವರು ವಿಧಿಸುವ ಕಂತಿಗಿಂತ ಹೆಚ್ಚಿನ ಹಣ ತುಂಬಿ ಆದಷ್ಟು ಬೇಗ ಸಾಲ ತೀರಿಸಿರಿ, ಅಷ್ಟರಲ್ಲಿ ನಿಮಗೆ ಹೆಚ್ಚಿನ ವರಮಾನ ಬರಬಹುದು. ಆ ಸಮಯದಲ್ಲಿ ಮನೆ ಕಟ್ಟಿಕೊಳ್ಳಿ. ನಿವೇಶನ ಕೊಳ್ಳಲು ಸಾಧ್ಯವಾಗದಿದ್ದರೆ, ಸಂಬಳ ಪಡೆಯುವ ಬ್ಯಾಂಕಿನಲ್ಲಿ ನೀವು ಉಳಿಸಬಹುದಾದ ಗರಿಷ್ಠ ಹಣ ಆರ್‌.ಡಿ. ಮಾಡಿ.

ಮಲ್ಲಮ್ಮ.ಬಿ., ದಾವಣಗೆರೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. ವಯಸ್ಸು 40. ನನ್ನ ಸಂಬಳ ₹ 25,400. ಎರಡು ಮಕ್ಕಳು. ಹುಡುಗಿ 9 ವರ್ಷ, ಹುಡುಗ 6 ವರ್ಷ. ಯಜಮಾನರು ಕೃಷಿ ಮಾಡುತ್ತಾರೆ. ಒಂದು ಎಕರೆ ಜಮೀನಿದೆ. ಬೇರೆ ಏನೂ ಆದಾಯವಿಲ್ಲ. ಸಂಬಳದಲ್ಲಿ ಕಡಿತ: ಎಲ್.ಐ.ಸಿ. ₹ 1,214, ಕೆ.ಜಿ.ಐ.ಡಿ. ₹ 2,750, ಎನ್.ಪಿ.ಎಸ್. ₹ 2,349, ಮಗಳ ಹೆಸರಿನಲ್ಲಿ ವಾರ್ಷಿಕ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ₹ 12,000. ಮಗನ ಹೆಸರಿನಲ್ಲಿ ₹ 2,000 ಆರ್.ಡಿ. (ಇದೇ ಡಿಸೆಂಬರಕ್ಕೆ ಮುಗಿಯುತ್ತದೆ) ಎಲ್ಲಾ ಖರ್ಚು ಕಳೆದು ₹ 8,000 ಉಳಿಯಬಹುದು. ಮಕ್ಕಳ ಭವಿಷ್ಯಕ್ಕೆ ಹಾಗೂ ನಮ್ಮ ಮುಂದಿನ ದಿನಗಳಿಗೆ ಉಳಿತಾಯ ಯೋಜನೆ ತಿಳಿಸಿ?

ಉತ್ತರ: ನಿಮ್ಮ ಸಂಬಳದಲ್ಲಿ ಕಡಿತವಾಗುವ ಉಳಿತಾಯ ಚೆನ್ನಾಗಿದ್ದು ಅವುಗಳನ್ನು ಹಾಗೆಯೇ ಮುಂದುವರೆಸಿ. ಮಗನ ಆರ್.ಡಿ. ಮುಗಿಯುತ್ತಲೇ ಬರುವ ಮೊತ್ತ 5 ವರ್ಷಗಳ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ. ನೀವು ಉಳಿಸಬಹುದಾದ ₹ 8,000 ದಲ್ಲಿ, ಕನಿಷ್ಠ ₹ 5,000, 10 ವರ್ಷಗಳ ಆರ್.ಡಿ. ಮಾಡಿ. ಶೇ 7 ಬಡ್ಡಿ ದರದಲ್ಲಿ 10 ವರ್ಷಗಳ ನಂತರ ₹ 86,84,600 ಪಡೆಯುವಿರಿ. ಈ ಮೊತ್ತ ಮಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ. ಮುಂದೆ ವಾರ್ಷಿಕ ಇನ್‌ಕ್ರೀಮೆಂಟ್, ಅರ್ಧ ವಾರ್ಷಿಕ ಡಿ.ಎ. ಬರುವಾಗ, ಕನಿಷ್ಠ ಶೇ 50 ರಷ್ಟು ದೀರ್ಘಾವಧಿ (10 ವರ್ಷಗಳ) ಆರ್.ಡಿ. ಪ್ರತೀ ವರ್ಷ ಮಾಡಿ. ಈ ಪ್ರಕ್ರಿಯೆ ಮಕ್ಕಳ ಮದುವೆ ತನಕ ನಿರಂತರವಾಗಿ ಮುಂದುವರೆಸಿ. ನಿಮಗೂ ನಿಮ್ಮ ಮಕ್ಕಳಿಗೂ ಉಜ್ವಲ ಭವಿಷ್ಯಕ್ಕೆ ಹಾರೈಸುತ್ತೇನೆ.

ಕೃಷ್ಣಮೂರ್ತಿ. ಹೊಸಕೋಟೆ

ವಯಸ್ಸು 80. ನನ್ನ ನಿವೃತ್ತಿ ವೇತನದಲ್ಲಿ ಶೇ 20ರಷ್ಟು ಹೆಚ್ಚಾಗಿದೆ. 2017–18ರಲ್ಲಿ ನನ್ನ ವಾರ್ಷಿಕ ವರಮಾನ ಪಿಂಚಣಿ ₹ 3.40 ಲಕ್ಷ, ಬ್ಯಾಂಕ್ ಬಡ್ಡಿ ₹ 30,000, ವ್ಯವಸಾಯದಿಂದ ₹ 4,000 ಹಾಗೂ ಕಂಪೆನಿ ಡಿವಿಡೆಂಟ್ ₹ 50,000. ತೆರಿಗೆ ಬರುತ್ತದೆಯೇ?

ಉತ್ತರ: ನೀವು 80 ವರ್ಷ ದಾಟಿದ ಹಿರಿಯ ನಾಗರಿಕರಾದ್ದರಿಂದ, ಈಗ ನಿಮ್ಮ ಆದಾಯದ ಮಿತಿ ₹ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ. ವ್ಯವಸಾಯದಿಂದ ಬರುವ ಆದಾಯ ಸೆಕ್ಷನ್ 10(1) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಇದೆ. ಸೆಕ್ಷನ್ 10 (34) ಆಧಾರದ ಮೇಲೆ ಕಂಪೆನಿ ಡಿವಿಡೆಂಡ್‌ನಿಂದ ನೀವು ಪಡೆಯುವ ₹ 50,000 ಕೂಡಾ ಸಂಪೂರ್ಣ ವಿನಾಯ್ತಿಗೆ ಒಳಗಾಗಿದೆ. ಇವೆಲ್ಲಾ ಪರಿಗಣಿಸುವಾಗ ನಿಮ್ಮ ಪಿಂಚಣಿ ಹಾಗೂ ಬ್ಯಾಂ‌ಕ್ ಠೇವಣಿ ಬಡ್ಡಿ ₹ 3.70 ಲಕ್ಷ (₹ 5 ಲಕ್ಷದೊಳಗಿದ್ದು), ನೀವು ರಿಟರ್ನ್ ತುಂಬುವ ಅಥವಾ ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ. ನಿಮ್ಮ ಮೊಬೈಲ್‌ಗೆ ಫೋನ್ ಮಾಡಿ ನಿಮ್ಮ ಮಗನಿಗೆ ವಿವರವಾಗಿ ತಿಳಿಸಿದ್ದೇನೆ. ತೆರಿಗೆ ಭಯದಿಂದ ಹೊರಬಂದು ನೆಮ್ಮದಿ ಜೀವನ ಸಾಗಿಸಿ.

ಕೆ.ಆರ್. ಜಗದೀಶ್, ಅರಕಲಗೂಡು

ನಾನು ಸಣ್ಣ ಅಂಗಡಿ ಇಟ್ಟುಕೊಂಡಿದ್ದೇನೆ. ನನ್ನ ಮಗ ಡಿಪ್ಲೊಮಾ ಮುಗಿಸಿ ಬೆಂಗಳೂರಿನಲ್ಲಿ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಾನೆ. ತಿಂಗಳ ಸಂಬಳ ₹ 11,000. ವಸತಿ, ಊಟ, ಖರ್ಚು ಸೇರಿ ₹ 6,000 ಬರುತ್ತದೆ. ಉಳಿದ 5,000 ಎಲ್ಲಿ ಹೇಗೆ ಇರಿಸಬೇಕು ತಿಳಿಸಿ. ನನ್ನ ಇನ್ನೊಬ್ಬ ಮಗ ಪಿ.ಯು.ಸಿ. (ಸೈನ್ಸ್) ಮುಗಿಸಿದ್ದಾನೆ. ಮುಂದೆ ಯಾವ ಕೋರ್ಸಿಗೆ ಹೋಗಲಿ ತಿಳಿಸಿ?

ಉತ್ತರ: ನಿಮ್ಮ ದೊಡ್ಡ ಮಗ ಮದುವೆ ಆಗುವ ತನಕ ಅಂದರೆ ಇನ್ನೂ 5 ವರ್ಷಗಳ ₹ 5,000, ಅವರು ಸಂಬಳ ಪಡೆಯುವ ಬ್ಯಾಂಕಿನಲ್ಲಿ 5 ವರ್ಷಗಳ ಆರ್.ಡಿ. ಠೇವಣಿ ಮಾಡಲಿ. ಇದು ಕಡ್ಡಾಯ ಉಳಿತಾಯ ಹಾಗೂ ಭದ್ರತೆಯಿಂದೊಡಗೂಡಿದೆ. ನಿಮ್ಮ ಎರಡನೆ ಮಗನಿಗೆ ಅಭಿರುಚಿ ಇರುವಲ್ಲಿ ಬಿ.ಇ. ಓದಿಸಿ. ನಿಮ್ಮ ಎರಡೂ ಮಕ್ಕಳಿಗೂ ಉಜ್ವಲ ಭವಿಷ್ಯ ಹಾರೈಸುತ್ತೇನೆ. ನಿಮ್ಮ ವಾರ್ಷಿಕ ಆದಾಯ ₹ 4.50 ಲಕ್ಷದೊಳಗಿರುವಲ್ಲಿ ಬ್ಯಾಂಕಿನಲ್ಲಿ ಬಿ.ಇ. ಓದಲು, ಬಡ್ಡಿ ಅನುದಾನಿತ ಶಿಕ್ಷಣ ಸಾಲ ದೊರೆಯುತ್ತದೆ.

ರಂಗರಾಜು, ನಂಜನಗೂಡು

ನನ್ನ ತಂದೆಯ ತಂಗಿ ಹಾಗೂ ಅವರ ಗಂಡ ತೀರಿಕೊಂಡಿದ್ದು, ಅವರು ಬಿಟ್ಟು ಹೋದ ಹಣ ನಾನು ನಾಮ ನಿರ್ದೇಶನದಿಂದ ಪಡೆದಿದ್ದೇನೆ. ಈ ಹಣಕ್ಕೆ  ತೆರಿಗೆ ಇದೆಯೇ ತಿಳಿಸಿ. ನನ್ನ ಮಿತ್ರರೊಬ್ಬರು ಬ್ಯಾಂಕಿನಲ್ಲಿ ಹಣ ಇಡಬೇಡಿ, ಇಟ್ಟರೂ ಹೆಚ್ಚಿಗೆ ಇಡಬೇಡಿ ಮುಂದೆ ತೊಂದರೆಯಾಗುತ್ತದೆ ಎಂದು ಹೇಳುತ್ತಾರೆ. ಇದು ನನಗೆ ಅರ್ಥವಾಗಲಿಲ್ಲ. ದಯವಿಟ್ಟು ವಿವರಿಸಿ?

ಉತ್ತರ: ನೀವು ನಾಮ ನಿರ್ದೇಶನದಿಂದ ಪಡೆದ ಹಣಕ್ಕೆ ಆದಾಯ ತೆರಿಗೆ ಇರುವುದಿಲ್ಲ. ಮುಂದೆ ಈ ಹಣದಿಂದ ಬರುವ ಬಡ್ಡಿ ಹಾಗೂ ನಿಮ್ಮ ಇತರೆ ಆದಾಯ ವಾರ್ಷಿಕವಾಗಿ ₹ 2.50 ಲಕ್ಷ ದಾಟಿದಲ್ಲಿ, ಅಂತಹ ಮೊತ್ತಕ್ಕೆ ಮಾತ್ರ ತೆರಿಗೆ ಬರುತ್ತದೆ. ನಿಮ್ಮ ಮಿತ್ರರು ನಿಮಗೆ ತಿಳಿಸಿದ ವಿಚಾರ ಸತ್ಯಕ್ಕೆ ದೂರವಾಗಿದೆ. ನಮ್ಮ ಕಣ್ಣೆದುರು ಕಾಣುವ ಬಹಳಷ್ಟು ಹೂಡಿಕೆಗಳಲ್ಲಿ ಬ್ಯಾಂಕ್ ಠೇವಣಿಗಿಂತ ಮಿಗಿಲಾದ ಭದ್ರವಾದ ಹೂಡಿಕೆ ಬೇರೊಂದಿಲ್ಲ. ಸ್ಥಿರ ಆಸ್ತಿ ಹೂಡಿಕೆ ಇನ್ನೂ ಉತ್ತಮವಿದ್ದರೂ ಇಲ್ಲಿ ಸಾಮಾನ್ಯರಿಂದ ಹಣ ತೊಡಗಿಸಲು ಸಾಧ್ಯವಿಲ್ಲ. ಬ್ಯಾಂಕ್ ಠೇವಣಿಯಲ್ಲಿ ಭದ್ರತೆ, ದ್ರವ್ಯತೆ ಹಾಗೂ ನಿಶ್ಚಿತ ವರಮಾನವಿದ್ದು, ಆಪತ್ತಿನಲ್ಲಿ ಯಾವಾಗ ಬೇಕಾದರೂ ಹಿಂಪಡೆಯಬಹುದು. ಈ ಮೂರೂ ಅಂಶಗಳನ್ನೊಳಗೊಂಡ ಹೂಡಿಕೆ ಬೇರಾವುದಿಲ್ಲ. ಬಹಳಷ್ಟು ಜನಸಾಮಾನ್ಯರಲ್ಲಿ ಬ್ಯಾಂಕ್ ಠೇವಣಿಯ ಮೇಲೆ ಏನೇನೋ ತೆರಿಗೆ ಬರುತ್ತದೆ, ಸರ್ಕಾರಕ್ಕೆ ಲೆಕ್ಕ ಸಿಗುತ್ತದೆ, ಮುಂದೆ ತೊಂದರೆಯಾಗಬಹುದು ಎನ್ನುವ ಭಯವಿದೆ. ನಿಜವಾಗಿ ಭಯಪಡುವ ಅವಶ್ಯವಿಲ್ಲ. ಯಾವುದೇ ಹೂಡಿಕೆಗೆ ಪ್ಯಾನ್ ಕಾರ್ಡು ಒದಗಿಸಬೇಕು. ತೆರಿಗೆ ಬರುವಲ್ಲಿ ಪ್ಯಾನ್‌ನಿಂದಾಗಿ ಎಲ್ಲಿ ಯಾವ ರೀತಿಯ ಹೂಡಿಕೆ ಮಾಡಿದರೂ ವಿಚಾರ ತಿಳಿಯಬಹುದು. ಒಟ್ಟಿನಲ್ಲಿ ಬ್ಯಾಂಕ್ ಹೊರತು ಅಭದ್ರವಾದ ಜಾಗದಲ್ಲಿ ಹಣ ಹೂಡಿ ಅಸಲನ್ನೇ ಕಳೆದುಕೊಳ್ಳಬೇಡಿ.

ಹೆಸರು–ಊರು ಬೇಡ

ನಾನು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ವಯಸ್ಸು 32. ಎಲ್ಲಾ ಕಡಿತದ ನಂತರ ₹ 16,000 ಬರುತ್ತದೆ. ನನ್ನ ಪತಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ₹ 15,000 ಬರುತ್ತದೆ. ನಮಗೆ ಸ್ವಂತ ಮನೆ ಇದೆ. ಎರಡು ಮಕ್ಕಳು. ಮಗ 10 ವರ್ಷ, ಮಗಳು 6 ವರ್ಷ, ಮಗಳ ಹೆಸರಿನಲ್ಲಿ ₹ 1,000 ಸುಕನ್ಯಾ ಕಟ್ಟುತ್ತೇನೆ. ನಿವೇಶನ ಸಾಲ ಮಾಡದೇ ಕೊಳ್ಳಲು ಹಾಗೂ ಪಿಎಲ್‌ಐ ಮಾಡಿಸಲು ಮಾರ್ಗದರ್ಶನ ಮಾಡಿ?

ಉತ್ತರ: ನಿಮ್ಮಿಬ್ಬರ ಮಾಸಿಕ ಸಂಬಳ ಹಾಗೂ ಮನೆ ಖರ್ಚು ಲೆಕ್ಕಕ್ಕೆ ತೆಗೆದುಕೊಂಡಾಗ, ಸದ್ಯದ ಪರಿಸ್ಥಿತಿಯಲ್ಲಿ ಸಾಲ ಮಾಡದೇ ನಿವೇಶನ ಕೊಳ್ಳುವುದು ಕಷ್ಟವಾದೀತು. ಸಾಧ್ಯವಾದರೆ ₹ 10,000 ಆರ್‌.ಡಿ. 5 ವರ್ಷಗಳ ಅವಧಿಗೆ ಮಾಡಿರಿ. ಅಷ್ಟರಲ್ಲಿ ನಿಮಗೆ ಉದ್ಯೋಗದಲ್ಲಿ ಬಡ್ತಿ ದೊರೆತು ಹೆಚ್ಚಿನ ಸಂಬಳ ದೊರೆಯುವುದರಿಂದ, 5 ವರ್ಷಗಳ ನಂತರ ನಿವೇಶನ ಕೊಳ್ಳಿರಿ. ವಾರ್ಷಿಕವಾಗಿ 10 ಗ್ರಾಮ್‌ ಬಂಗಾರದ ನಾಣ್ಯ ಕೊಳ್ಳಿರಿ. ಅಂಚೆ ಕಚೇರಿ Money Back Policy ₹ 5 ಲಕ್ಷಗಳಿಗೆ ಮಾಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT