ಸಂಪಾದಕೀಯ

ಭಾರತ– ಪಾಕಿಸ್ತಾನ ಬಾಂಧವ್ಯ ದ್ವಂದ್ವಮಯ ಹಾದಿ

ಸಾರ್ವಜನಿಕವಾಗಿ ಪಾಕ್ ವಿರುದ್ಧದ ಮಾತುಗಳನ್ನಾಡುತ್ತಿದ್ದರೂ ಸಂಬಂಧ ಕಾಯ್ದುಕೊಳ್ಳುವುದಕ್ಕೂ ಬಹುಶಃ ಭಾರತ ಗಮನ ನೀಡುತ್ತಿದೆ

ಭಾರತ– ಪಾಕಿಸ್ತಾನ ಬಾಂಧವ್ಯ ದ್ವಂದ್ವಮಯ ಹಾದಿ

ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತದ ನೀತಿ ಏನು ಎಂಬುದು ಇತ್ತೀಚಿನ ದಿನಗಳಲ್ಲಿ ದ್ವಂದ್ವಮಯವಾಗಿದೆ. ಕಳೆದ ಕೆಲವು ದಿನಗಳ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಇದು ವ್ಯಕ್ತವಾಗುತ್ತದೆ. ಗಡಿಯಾಚೆಗಿನ ಭಯೋತ್ಪಾದನೆ ಬೆಂಬಲಿಸುವ ಪಾಕಿಸ್ತಾನವನ್ನು ಹೆಸರಿಸಿ ಭಾರತ ಮಾತನಾಡುತ್ತಲೇ ಇದೆ. ವಿಶ್ವಸಂಸ್ಥೆಯಲ್ಲೂ ಪಾಕಿಸ್ತಾನದ  ಭಯೋತ್ಪಾದನೆ ವಿರುದ್ಧದ ಚರ್ಚೆಗಳಿಗೆ ಅನೇಕ ಸಲ ಭಾರತ ದನಿ ನೀಡಿದೆ. ಜೈಷ್ ಇ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಯ ಪ್ರಮುಖ ಸಂಚುಕೋರ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಪ್ರಸ್ತಾವಕ್ಕೆ ಚೀನಾ ಅನೇಕ ಸಲ ಅಡ್ಡಗಾಲು ಹಾಕಿದ ವಿದ್ಯಮಾನಗಳೂ ನಡೆದಿವೆ. ಹಾಗೆಯೇ 2008ರ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್‌ನನ್ನು ಪಾಕಿಸ್ತಾನ ರಕ್ಷಿಸುತ್ತಿರುವ ಪರಿಗೆ ಭಾರತ ಅನೇಕ ಸಲ ಆಕ್ರೋಶ ವ್ಯಕ್ತಪಡಿಸಿದೆ. ಗೃಹಬಂಧನದ ನಂತರ ಈಗ ಹಫೀಜ್ ಸಯೀದ್ ಬಿಡುಗಡೆಯೂ ಆಗಿದ್ದಾನೆ. ಆತನ ಜೊತೆ ಕಳೆದ ವಾರ ಸಭೆಯೊಂದರಲ್ಲಿ ಪಾಕಿಸ್ತಾನದಲ್ಲಿರುವ ಪ್ಯಾಲೆಸ್ಟೀನ್ ರಾಯಭಾರಿ ವೇದಿಕೆ ಹಂಚಿಕೊಂಡಿದ್ದಂತೂ ಭಾರತವನ್ನು ತೀವ್ರವಾಗಿ ಕೆರಳಿಸಿತ್ತು. ಈ ಬಗ್ಗೆ ಭಾರತ ವ್ಯಕ್ತಪಡಿಸಿದ ಪ್ರತಿಭಟನೆಗೆ ಸ್ಪಂದಿಸಿದ ಪ್ಯಾಲೆಸ್ಟೀನ್, ಪಾಕಿಸ್ತಾನದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿತು. ಅಷ್ಟೇ ಅಲ್ಲ, ಭಯೋತ್ಪಾದನೆಯ ವಿರುದ್ಧ ಭಾರತದ ಸಮರವನ್ನು ಬೆಂಬಲಿಸುವುದಾಗಿಯೂಪ್ಯಾಲೆಸ್ಟೀನ್ ಹೇಳಿತು. ಮಸೂದ್ ಅಜರ್ ಹಾಗೂ ಹಫೀಜ್ ಸಯೀದ್– ಈ ಇಬ್ಬರೂ ಅನೇಕ ಭಾರತೀಯರ ನೆತ್ತರು ಹರಿಯಲು ಕಾರಣರಾಗಿದ್ದಾರೆ. ಈ ಮಧ್ಯೆಯೇ ಗಡಿಯಲ್ಲಿ ಭಯೋತ್ಪಾದನೆ ಕೃತ್ಯ ನಿಲ್ಲಿಸುವವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಇದೇ ಕಾರಣಕ್ಕೇ ಅಮೆರಿಕವೂ ಪಾಕಿಸ್ತಾನಕ್ಕೆ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಿರುವುದು ಭಾರತದ ವಾದವನ್ನು ಎತ್ತಿ ಹಿಡಿದಂತಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಜೊತೆಗೆ, ಭಾರತದ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹಾಗೂ ಪಾಕಿಸ್ತಾನದ ಭದ್ರತಾ ಸಲಹೆಗಾರ ಜನರಲ್ ನಾಸೀರ್ ಖಾನ್ ಜಂಜುವಾ ಬ್ಯಾಂಕಾಕ್‍‍ನಲ್ಲಿ ರಹಸ್ಯವಾಗಿ ಸಭೆ ಸೇರಿ ಮಾತುಕತೆ ನಡೆಸಿದ್ದಾರೆ ಎಂಬುದು ವಿಶೇಷ. ಅದೂ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದ ಜೈಲಿನಲ್ಲಿ ಭೇಟಿಯಾದ ಜಾಧವ್ ಅವರ ಪತ್ನಿ ಹಾಗೂ ತಾಯಿಯನ್ನು ಪಾಕಿಸ್ತಾನ ನಡೆಸಿಕೊಂಡ ರೀತಿಯ ಬಗ್ಗೆ ಸಂಸತ್‌ನಲ್ಲೂ ಆಕ್ರೋಶ ವ್ಯಕ್ತವಾದ ನಂತರ ಈ ಸಭೆ ನಡೆದಿದೆ ಎಂಬುದು ಮಹತ್ವದ್ದು. ಎಂದರೆ, ತೆರೆಮರೆಯಲ್ಲಿ ಭಾರತ– ಪಾಕಿಸ್ತಾನ ನಡೆಸುವ ರಾಜತಾಂತ್ರಿಕತೆ ಜೀವಂತವಾಗಿದೆ ಎನ್ನುವುದಕ್ಕೆ ಈ ಬೆಳವಣಿಗೆ ದ್ಯೋತಕ. ಸಾರ್ವಜನಿಕವಾಗಿ ಪಾಕ್ ವಿರುದ್ಧದ ಮಾತುಗಳನ್ನಾಡುತ್ತಿದ್ದರೂ ಸಂಬಂಧ ಕಾಯ್ದುಕೊಳ್ಳುವುದಕ್ಕೂ ಬಹುಶಃ ಭಾರತ ಗಮನ ನೀಡುತ್ತಿದೆ. ಆದರೆ ಕೆಲವೇ ದಿನಗಳ ಹಿಂದೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೊಹಮ್ಮದ್‌ ಕಸೂರಿ ಜೊತೆ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮಾಜಿ ರಾಜತಾಂತ್ರಿಕ ಮಣಿಶಂಕರ್ ಅಯ್ಯರ್ ಮನೆಯಲ್ಲಿ ರಹಸ್ಯ ಸಭೆ ನಡೆಸಿದರೆಂಬುದನ್ನು ಗುಜರಾತ್ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು ಎಂಬುದು ವಿಪರ್ಯಾಸ. ಇದೇನೇ ಇರಲಿ, ರಾಜತಾಂತ್ರಿಕ ಮಾತುಕತೆ ಪುನರಾರಂಭಕ್ಕೆ ಬ್ಯಾಂಕಾಕ್‌ನಲ್ಲಿ ನಡೆದ ರಹಸ್ಯ ಸಭೆ ಈಗ ಸೋಪಾನವಾಗಲಿದೆ ಎಂಬುದು ಆಶಾದಾಯಕ. ಜನವರಿ 1– ಭಾರತ – ಪಾಕಿಸ್ತಾನ ಪರಸ್ಪರ ತಂತಮ್ಮ ರಾಷ್ಟ್ರಗಳಲ್ಲಿನ ಕೈದಿಗಳ ಮಾಹಿತಿ ವಿನಿಮಯ ಮಾಡಿಕೊಳ್ಳುವ ದಿನ. ಇದು ಯಥಾಪ್ರಕಾರ ಈ ವರ್ಷವೂ ನಡೆದಿದೆ ಎಂಬುದೂ ಬಾಂಧವ್ಯ ಮಾಮೂಲುಗೊಳಿಸುವ ಸಕಾರಾತ್ಮಕ ನಡೆ.

Comments
ಈ ವಿಭಾಗದಿಂದ ಇನ್ನಷ್ಟು
ಕೆರೆಗೆ ಮತ್ತೆ ಮತ್ತೆ ಬೆಂಕಿ ಗಂಭೀರವಾಗಿ ಪರಿಗಣಿಸಿ

ಸಂಪಾದಕೀಯ
ಕೆರೆಗೆ ಮತ್ತೆ ಮತ್ತೆ ಬೆಂಕಿ ಗಂಭೀರವಾಗಿ ಪರಿಗಣಿಸಿ

22 Jan, 2018
ಎಪಿಪಿ ಖಾಲಿ ಹುದ್ದೆ ಭರ್ತಿ ವಿಳಂಬ ಅಸಮರ್ಥನೀಯ

ನ್ಯಾಯಾಂಗ
ಎಪಿಪಿ ಖಾಲಿ ಹುದ್ದೆ ಭರ್ತಿ ವಿಳಂಬ ಅಸಮರ್ಥನೀಯ

20 Jan, 2018
ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಗಮನ ಕೊಡಿ

ಸ್ಥಿತಿಗತಿ
ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಗಮನ ಕೊಡಿ

19 Jan, 2018
ಹಜ್ ಯಾತ್ರೆ ಸಬ್ಸಿಡಿ ರದ್ದು: ಕೋರ್ಟ್ ಆದೇಶದ ಪಾಲನೆ ಸ್ವಾಗತಾರ್ಹ

ಸಂಪಾದಕೀಯ
ಹಜ್ ಯಾತ್ರೆ ಸಬ್ಸಿಡಿ ರದ್ದು: ಕೋರ್ಟ್ ಆದೇಶದ ಪಾಲನೆ ಸ್ವಾಗತಾರ್ಹ

18 Jan, 2018
ಶುದ್ಧೀಕರಣ ಪ್ರಕ್ರಿಯೆ ಅಸಂಗತ ಪ್ರಹಸನ

ಸಂಪಾದಕೀಯ
ಶುದ್ಧೀಕರಣ ಪ್ರಕ್ರಿಯೆ ಅಸಂಗತ ಪ್ರಹಸನ

17 Jan, 2018