ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ಬೆಂಬಲ ಬೆಲೆಗೆ ಆಗ್ರಹಿಸಿ ಹೋರಾಟ: ಅಣ್ಣಾ ಹಜಾರೆ ಅಭಿಮತ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಧಾರವಾಡ: ‘ಕೃಷಿ ಉತ್ಪನ್ನಗಳಿಗೆ ದೇಶದಾದ್ಯಂತ ಏಕರೂಪದ ಬೆಂಬಲ ಬೆಲೆ ನಿಗದಿಪಡಿಸಬೇಕೆನ್ನುವ ಬೇಡಿಕೆಯನ್ನು ಮಾರ್ಚ್‌ 23ರ ಒಳಗೆ ಈಡೇರಿಸದಿದ್ದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಈ ಕುರಿತು ಪ್ರಧಾನಿಗೆ ಪತ್ರ ಬರೆಯಲಾಗುವುದು. ಸ್ವಾಮಿನಾಥನ್‌ ಆಯೋಗದ ವರದಿಯನ್ನು ಅನುಷ್ಠಾನ ಮಾಡುವಂತೆಯೂ ಮನವಿ ಮಾಡಲಾಗುವುದು’  ಎಂದು ಅವರು ಹೇಳಿದರು.

‘ಜಮೀನು ಹದ ಮಾಡುವುದರಿಂದ ಕಟಾವು ಮಾಡುವವರೆಗಿನ ಎಲ್ಲ ರೀತಿಯ ಖರ್ಚುಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿಯೇ ದರ ನಿಗದಿಪಡಿಸಬೇಕು. ಒಟ್ಟಾರೆ ಖರ್ಚಿಗಿಂತ ಕನಿಷ್ಠ ಶೇ 50ರಷ್ಟು ಹೆಚ್ಚಿಗೆ ಬೆಲೆ ನಿಗದಿಪಡಿಸಬೇಕು. 60 ವರ್ಷ ದಾಟಿದ ಹಿರಿಯ ಕೃಷಿಕರಿಗೆ ಮಾಸಿಕ ಪಿಂಚಣಿ ಕನಿಷ್ಠ ₹ 5 ಸಾವಿರ ನೀಡಬೇಕು. ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರ ದೇಶಕ್ಕೆ ಅನ್ನ ನೀಡುವ ಕೃಷಿಕರ ಸಾಲ ಮನ್ನಾ ಮಾಡುತ್ತಿಲ್ಲ. ಇಂಥ ತಾರತಮ್ಯ ಖಂಡಿಸಿ ಯುವ ಸಮುದಾಯ ಹೋರಾಟದಲ್ಲಿ ಪಾಲ್ಗೊಳ್ಳಬೇಕು’ ಎಂದು ಕರೆ ನೀಡಿದರು.

‘ದೇಶಕ್ಕಾಗಿ ಹೋರಾಡಿ ಜೈಲಿಗೆ ಹೋಗುವುದು ಹೆಮ್ಮೆಯ ಸಂಗತಿ. ರೈತರಿಗಾಗಿ ನಡೆಯುವ ಈ ಹೋರಾಟದಿಂದ ದೇಶದ ಎಲ್ಲಾ ಜೈಲುಗಳು ತುಂಬಬೇಕು. ಹೋರಾಟಕ್ಕೆ ಬೆಂಬಲ ನೀಡಲು ತರಗತಿಗಳನ್ನು ಬಹಿಷ್ಕರಿಸಿ. ಹಾಗೆಂದ ಮಾತ್ರಕ್ಕೆ ದೆಹಲಿಗೆ ಬರುವ ಅಗತ್ಯವಿಲ್ಲ. ತಾವುಗಳು ಇದ್ದಲ್ಲೇ ಹೋರಾಟ ನಡೆಸಬೇಕು’ ಎಂದರು.

ನನ್ನನ್ನು ಯಾರೂ ಅನುಕರಿಸಬೇಡಿ

‘ನನ್ನಂತೆ ನೀವು ಬ್ರಹ್ಮಚಾರಿಗಳಾಗಬೇಡಿ. ಎಲ್ಲರೂ ಮದುವೆಯಾಗಿ ಚಿಕ್ಕ ಕುಟುಂಬ ಕಟ್ಟಿಕೊಳ್ಳಿ. ಸಮಾಜ ಮತ್ತು ದೇಶವನ್ನು ದೊಡ್ಡ ಪರಿವಾರದಂತೆ ಪರಿಗಣಿಸಿ ಬದುಕಿ. ಇತರರಿಗೆ ಒಳಿತು ಮಾಡುವಲ್ಲಿ ಖುಷಿ ಕಾಣಿರಿ. ನಾಲ್ಕು ಗೋಡೆ ನಡುವೆ ಪೂಜೆ ಮಾಡುವುದಕ್ಕಿಂತ, ಜನರನ್ನೇ ದೇವರು ಎಂದು ನಂಬಿ ಸೇವೆ ಮಾಡುವುದೇ ಶ್ರೇಷ್ಠ’ ಎಂದು ಅಣ್ಣಾ ಹಜಾರೆ ಹೇಳಿದರು.

‘ನನಗೆ ಜನರೇ ದೇವರು, ಮಂದಿರಗಳೇ ನನ್ನ ಮನೆ. ಜೀವ ಇರುವವರೆಗೆ ಸಾಮಾಜಿಕ ನ್ಯಾಯಕ್ಕೆ ಹೊರಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT