ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬರ್ಟೊ ಸವಾಲು ಮೀರಿದ ರಾಮಕುಮಾರ್‌

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಪುಣೆ: ಬಲಿಷ್ಠ ಎದುರಾಳಿಯ ವಿರುದ್ಧ ಛಲದ ಆಟ ಆಡಿದ ಭಾರತದ ರಾಮಕುಮಾರ್‌ ರಾಮನಾಥನ್‌, ಟಾಟಾ ಓಪನ್‌ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯಲ್ಲಿ ಜಯದ ಮುನ್ನುಡಿ ಬರೆದಿದ್ದಾರೆ.

ಬಾಲೇವಾಡಿ ಕ್ರೀಡಾ ಸಂಕೀರ್ಣದ ಅಂಗಳದಲ್ಲಿ ಸೋಮವಾರ ರಾತ್ರಿನಡೆದ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ರಾಮಕುಮಾರ್‌ 7–6, 6–2ರ ನೇರ ಸೆಟ್‌ಗಳಿಂದ ಸ್ಪೇನ್‌ನ ರಾಬರ್ಟೊ ಕಾರ್ಬಲ್ಲೆಸ್‌ ಬಯೆನಾಗೆ ಆಘಾತ ನೀಡಿದರು.

ರಾಬರ್ಟೊ, ವಿಶ್ವ ರ‍್ಯಾಂಕಿಂಗ್‌ನಲ್ಲಿ ರಾಮಕುಮಾರ್‌ಗಿಂತ 42 ಸ್ಥಾನ ಮೇಲಿದ್ದರು. ಹೀಗಾಗಿ ಅವರ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದರೆ ರಾಮನಾಥನ್‌ ಎಲ್ಲರ ಊಹೆಯನ್ನು ತಲೆಕೆಳಗಾಗಿಸಿದರು.

2017ರಲ್ಲಿ ಹಲವು ಸ್ಮರಣೀಯ ಗೆಲುವುಗಳನ್ನು ಗಳಿಸಿದ್ದ ಭಾರತದ ಆಟಗಾರ ಮೊದಲ ಸೆಟ್‌ನ ಶುರುವಿನಿಂದಲೇ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರು.

ರಾಬರ್ಟೊ ತಂತ್ರಗಳಿಗೆ ಪ್ರತಿತಂತ್ರ ಹೆಣೆದ ಅವರು 3–2ರ ಮುನ್ನಡೆ ಗಳಿಸಿದರು. ಒಂಬತ್ತನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡು ಮುನ್ನಡೆಯನ್ನು 5–4ಕ್ಕೆ ಹೆಚ್ಚಿಸಿಕೊಂಡರು.

ಮರು ಗೇಮ್‌ನಲ್ಲಿ ಕಾರ್ಬಲೆಸ್‌ ಮಿಂಚಿನ ಆಟ ಆಡಿ 5–5ರಲ್ಲಿ ಸಮಬಲ ಸಾಧಿಸಿದರು. ಆ ನಂತರ ಇಬ್ಬರೂ ಬೇಸ್‌ಲೈನ್‌ ಹೊಡೆತಗಳಿಗೆ ಒತ್ತು ನೀಡಿ ಸರ್ವ್‌ ಕಾಪಾಡಿಕೊಂಡರು. ಹೀಗಾಗಿ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ಒತ್ತಡದ ಪರಿಸ್ಥಿತಿಯಲ್ಲಿ ಮನಮೋಹಕ ಬ್ಯಾಕ್‌ಹ್ಯಾಂಡ್‌ ಹೊಡೆತಗಳನ್ನು ಬಾರಿಸಿದ ರಾಮಕುಮಾರ್‌ ಸೆಟ್‌ ಗೆದ್ದು ಮುನ್ನಡೆ ತಮ್ಮದಾಗಿಸಿಕೊಂಡರು.

ರ‍್ಯಾಂಕಿಂಗ್‌ನಲ್ಲಿ 148ನೇ ಸ್ಥಾನ ಹೊಂದಿರುವ ಭಾರತದ ಆಟಗಾರ, ಎರಡನೇ ಸೆಟ್‌ನಲ್ಲೂ ಮೋಡಿ ಮಾಡಿದರು. ಮೊದಲ ಗೇಮ್‌ನಲ್ಲಿ ‘ಡಬಲ್‌ ಫಾಲ್ಟ್‌’ ಎಸಗಿದ ಕಾರ್ಬಲೆಸ್‌, ಬ್ರೇಕ್‌ ಪಾಯಿಂಟ್‌ ಅನ್ನು ಹಾಳುಮಾಡಿಕೊಂಡರು. ಹೀಗಾಗಿ ರಾಮಕುಮಾರ್‌ಗೆ ಮುನ್ನಡೆ ಲಭಿಸಿತು.

ಎದುರಾಳಿ ಆಟಗಾರ ಒತ್ತಡಕ್ಕೆ ಒಳಗಾಗಿರುವುದನ್ನು ಮನಗಂಡ ರಾಮನಾಥನ್‌, ನಂತರದ  ಗೇಮ್‌ಗಳಲ್ಲಿ ಭಿನ್ನ ರಣನೀತಿ ಹೆಣೆದು ಆಡಿ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿಕೊಂಡರು.

ಬಳಿಕವೂ ತುಂಬು ವಿಶ್ವಾಸದಿಂದಲೇ ಆಡಿದ ಅವರು ತವರಿನ ಅಂಗಳದಲ್ಲಿ ನಿರಾಯಾಸವಾಗಿ ಜಯದ ತೋರಣ ಕಟ್ಟಿದರು.

ಎರಡನೇ ಸುತ್ತಿನಲ್ಲಿ ರಾಮನಾಥನ್‌, ಕ್ರೊವೇಷ್ಯಾದ ಬಲಿಷ್ಠ ಆಟಗಾರ ಮರಿನ್‌ ಸಿಲಿಕ್‌ ವಿರುದ್ಧ ಸೆಣಸಲಿದ್ದಾರೆ.

ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ರಿಕಾರ್ಡೊ ಒಜೆಡಾ ಲಾರಾ 6–3, 7–6ರಲ್ಲಿ ಜೆಕ್ ಗಣರಾಜ್ಯದ ಜೆರಿ ವೆಸ್ಲಿ ಎದುರು ಗೆದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 68ನೇ ಸ್ಥಾನದಲ್ಲಿದ್ದ ವೆಸ್ಲಿ, ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ ಎನಿಸಿದ್ದರು.

ದಿನದ ಇತರ ಪಂದ್ಯಗಳಲ್ಲಿ ಮಿಖಾಯಿಲ್‌ ಕುಕುಸ್ಕಿನ್‌ 6–2, 7–6ರಲ್ಲಿ ರಾಡು ಅಲ್ಬಟ್‌ ಎದುರೂ, ಮಾರ್ಟನ್‌ ಫುಕ್ಸೊವಿಚ್‌ 6–0, 6–3ರಲ್ಲಿ ನಿಕೊಲಸ್‌ ಕಿಕ್ಕರ್‌ ಮೇಲೂ, ನಿಕೊಲಸ್‌ ಜೆರ‍್ರಿ 6–7, 6–4, 7–5ರಲ್ಲಿ ಪ್ಯಾಬ್ಲೊ ಆ್ಯಂಡುಜಾರ್‌ ಎದುರೂ, ಗಿಲ್ಲೆಸ್‌ ಸಿಮನ್‌ 6–4, 6–1ರಲ್ಲಿ ಟೆನ್ಯಾಸ್‌ ಸ್ಯಾಂಡ್‌ಗ್ರೆನ್‌ ವಿರುದ್ಧವೂ, ಪಿಯೆರ್‌ ಹ್ಯೂಸ್‌ ಹರ್ಬರ್ಟ್‌ 7–6, 6–7, 6–2ರಲ್ಲಿ ಮಾರ್ಕೊ ಸೆಚ್ಚಿನಾಟೊ ಎದುರೂ ಗೆದ್ದರು.

ಡಬಲ್ಸ್‌ ವಿಭಾಗದ ಪಂದ್ಯಗಳಲ್ಲಿ ಭಾರತದ ವಿಷ್ಣುವರ್ಧನ ಮತ್ತು ಎನ್‌.ಶ್ರೀರಾಮ್‌ ಬಾಲಾಜಿ 6–3, 6–7, 6–10ರಲ್ಲಿ ಆದಿಲ್‌ ಶಂಸುದ್ದೀನ್‌
ಮತ್ತು ನಿಯೆಲ್‌ ಸ್ಕುಪ್‌ಸ್ಕಿ ಎದುರೂ, ಅರ್ಜುನ್‌ ಖಾಡೆ ಮತ್ತು ಪಿಯೆರೆ 6–1, 5–7, 7–10ರಲ್ಲಿ ರಾಬಿನ್‌ ಹಾಸ್‌ ಮತ್ತು ಮ್ಯಥ್ಯೂ ಮಿಡಲ್‌ಕೂಪ್‌ ವಿರುದ್ಧವೂ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT