ದೃಢಪಡಿಸಿದ ತಜ್ಞರು

ರಾಜಧಾನಿಗೆ ಮತ್ತೆ ಕಾಲಿಟ್ಟ ಹಕ್ಕಿಜ್ವರ: ಉತ್ತರ ತಾಲ್ಲೂಕಿನ ದಾಸರಹಳ್ಳಿಯ ಕೋಳಿಗಳಲ್ಲಿ ರೋಗಾಣು ಪತ್ತೆ

ಕೋಳಿಗಳಲ್ಲಿ ಎಚ್‌5ಎನ್‌1 ರೋಗಾಣು ಇರುವುದನ್ನು ಪ್ರಯೋಗಾಲಯದ ತಜ್ಞರು ಡಿಸೆಂಬರ್‌ 31ರಂದು ದೃಢಪಡಿಸಿದ್ದರು. ಅದರ ವರದಿಯು ಆರೋಗ್ಯ ಇಲಾಖೆಗೆ ಮಂಗಳವಾರ ತಲುಪಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ದಾಸರಹಳ್ಳಿಯ ಮನೆಗಳಿಗೆ ಭೇಟಿ ನೀಡಿದರು

ಬೆಂಗಳೂರು: ಉದ್ಯಾನನಗರಿಗೆ ಹಕ್ಕಿಜ್ವರ (ಎಚ್‌5ಎನ್‌1) ಮತ್ತೆ ಕಾಲಿಟ್ಟಿದೆ. ಉತ್ತರ ತಾಲ್ಲೂಕಿನ ಥಣಿಸಂದ್ರ ಬಳಿಯ ದಾಸರಹಳ್ಳಿಯ ಕೆ.ಜಿ.ಎನ್‌. ಕೋಳಿ
ಮಾಂಸದ ಅಂಗಡಿಯ ಕೋಳಿಗಳಲ್ಲಿ ಎಚ್‌5ಎನ್‌1 ರೋಗಾಣು ಇರುವುದು ದೃಢಪಟ್ಟಿದೆ.

ಈ ಅಂಗಡಿಯು ತೌಸಿಫ್‌ ಎಂಬುವರಿಗೆ ಸೇರಿದೆ. ಡಿಸೆಂಬರ್‌ 28ರಂದು ತಮಿಳುನಾಡಿನಿಂದ ಕ್ಯಾಂಟರ್‌ ಮೂಲಕ ಕೋಳಿಗಳನ್ನು ಸಾಗಣೆ ಮಾಡಲಾಗಿತ್ತು. ಈ ಪೈಕಿ 5–6 ಕೋಳಿಗಳು ಏಕಾಏಕಿ ಮೃತಪಟ್ಟಿದ್ದವು. ಇದರಿಂದ ಸಂಶಯಗೊಂಡ ಮಾಲೀಕರು, ಅವುಗಳನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕೊಂಡೊಯ್ದಿದ್ದರು. ಅಲ್ಲಿ ಪರೀಕ್ಷೆ ನಡೆಸಲಾಗಿತ್ತು. ಬಳಿಕ, ಕೋಳಿಗಳ ಮಾದರಿಗಳನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಎನ್‌ಐಎಚ್‌ಎಸ್‌ಎಡಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.

ಕೋಳಿಗಳಲ್ಲಿ ಎಚ್‌5ಎನ್‌1 ರೋಗಾಣು ಇರುವುದನ್ನು ಪ್ರಯೋಗಾಲಯದ ತಜ್ಞರು ಡಿಸೆಂಬರ್‌ 31ರಂದು ದೃಢಪಡಿಸಿದ್ದರು. ಅದರ ವರದಿಯು ಆರೋಗ್ಯ ಇಲಾಖೆಗೆ ಮಂಗಳವಾರ ತಲುಪಿದೆ.

ದಾಸರಹಳ್ಳಿಯ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ರೋಗಪೀಡಿತ ವಲಯ’ ಹಾಗೂ 1ರಿಂದ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಜಾಗೃತ ವಲಯ’ ಎಂದು ಘೋಷಿಸಲಾಗಿದೆ. ಸದ್ಯ ರೋಗವು ಹತೋಟಿಯಲ್ಲಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಕೆ.ಜಿ.ಎನ್‌. ಕೋಳಿಮಾಂಸದ ಅಂಗಡಿಯನ್ನು ಡಿಸೆಂಬರ್‌ 30ರಿಂದ ಮುಚ್ಚಲಾಗಿದೆ. ಅಲ್ಲಿ ಐವರು ಕೆಲಸ ಮಾಡುತ್ತಿದ್ದರು. ಅವರಿಗೆ ಸೋಂಕು ಹರಡಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಅವರನ್ನು ಬುಧವಾರ ತಪಾಸಣೆ ನಡೆಸಲಿದ್ದೇವೆ. ಇಲಾಖೆಯ ಅಧಿಕಾರಿಗಳ ತಂಡವು ದಾಸರಹಳ್ಳಿಯ 40 ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾರಲ್ಲೂ ಜ್ವರದ ಲಕ್ಷಣ ಕಂಡುಬಂದಿಲ್ಲ’ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸುನಂದಾ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಂಪಾಪುರ ಮುಖ್ಯರಸ್ತೆ, ದಾಸರಹಳ್ಳಿ, ಮರಿಯಣ್ಣಪಾಳ್ಯದ ಸುತ್ತಲಿನ ಪ್ರದೇಶಗಳಲ್ಲಿ ಸುಮಾರು 30 ಅಂಗಡಿಗಳನ್ನು ಮುಚ್ಚಿಸಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

‘ಕೋಳಿಗಳಲ್ಲಿ ಎಚ್‌5ಎನ್‌1 ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತ ಕೋಳಿಗಳನ್ನು ಸಾಯಿಸುವ ಕುರಿತು ಆದೇಶ ಹೊರಡಿಸುವಂತೆ ಜಿಲ್ಲಾ
ಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ’ ಎಂದು ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

2012ರಲ್ಲಿ ಹೆಸರಘಟ್ಟದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿತ್ತು. ಇದರಿಂದ ಸಾವಿರಾರು ಕೋಳಿಗಳನ್ನು ನಾಶ ಮಾಡಲಾಗಿತ್ತು.

ಏನಿದು ಹಕ್ಕಿಜ್ವರ?

ಹಕ್ಕಿಜ್ವರ ಅಥವಾ ಕೋಳಿ ಶೀತ ಜ್ವರ ಎಚ್‌5ಎನ್‌1 ವೈರಸ್‌ನಿಂದ ಹರಡುವ ರೋಗ. ಇದು ಟರ್ಕಿ ಕೋಳಿ, ಗಿನಿ ಕೋಳಿ, ಬಾತುಕೋಳಿ ಹಾಗೂ ಗೀಜಗ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರೋಗಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ರೋಗಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ, ಸೋಂಕಿರುವ ಹಸಿ ಮೊಟ್ಟೆಗಳನ್ನು ತಿನ್ನುವುದರಿಂದ ಹಾಗೂ ಕೋಳಿಗಳ ಹಿಕ್ಕೆಗಳು ಕುಡಿಯುವ ನೀರಿನೊಳಗೆ ಬೆರೆತು ಕಲುಷಿತಗೊಂಡಾಗ ಈ ರೋಗ ಹರಡುತ್ತದೆ. ಕೆಲವೊಮ್ಮೆ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ.

ರೋಗ ಲಕ್ಷಣ

ಹಕ್ಕಿಜ್ವರದ ಲಕ್ಷಣಗಳು ಎಚ್‌1ಎನ್‌1 ಜ್ವರದ ಲಕ್ಷಣಗಳಂತೆಯೇ ಇರುತ್ತವೆ. ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು ಹಾಗೂ ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು. ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

ಮುನ್ನೆಚ್ಚರಿಕೆ ಕ್ರಮಗಳು

ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿ ನಾಗರಿಕರು ಕೆಲ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಸೋಂಕು ಹರಡದಂತೆ ತಡೆಯಬಹುದು.

* ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತುಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕು.

* ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು.

* ಹಕ್ಕಿಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು. ಒಂದು ವೇಳೆ ಈ ವಾತಾವರಣದ ಸಂಪರ್ಕಕ್ಕೆ ಬಂದರೆ ತಕ್ಷಣ ಕೈಕಾಲು ಮತ್ತು ಮುಖವನ್ನು ತೊಳೆದುಕೊಳ್ಳಬೇಕು. ಬಟ್ಟೆಯನ್ನು ಬದಲಾಯಿಸಿಕೊಳ್ಳಬೇಕು. ಮುಂದಿನ 4 ದಿನಗಳವರೆಗೆ ದೇಹದ ಉಷ್ಣಾಂಶದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬೇಕು. ಜ್ವರದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

* ಸೋಂಕಿರುವ ಪ್ರದೇಶದಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಕೈಗಳನ್ನು ಸೋಪಿನಿಂದ ತೊಳೆಯಬೇಕು.

ಚೆನ್ನಾಗಿ ಬೇಯಿಸದ ಮಾಂಸ, ಹಸಿ ಮೊಟ್ಟೆಯಿಂದ ಹಕ್ಕಿಜ್ವರ ಬರುವ ಸಾಧ್ಯತೆ

ಕೋಳಿ ಮಾಂಸ ಅಥವಾ ಮೊಟ್ಟೆಗಳನ್ನು ತಿನ್ನುವುದರಿಂದ ಈ ಕಾಯಿಲೆ ಬರುವುದಿಲ್ಲ. ಆದರೆ, ಸೋಂಕಿತ ಕೋಳಿಯ ಮಾಂಸವನ್ನು ಚೆನ್ನಾಗಿ ಬೇಯಿಸದೇ ಹಾಗೂ ಅವುಗಳ ಹಸಿ ಮೊಟ್ಟೆಗಳನ್ನು ತಿನ್ನುವುದರಿಂದ ರೋಗ ತಗಲುವ ಸಾಧ್ಯತೆ ಇರುತ್ತದೆ.

ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ತಿನ್ನಬೇಕು. ಅಡುಗೆಗಾಗಿ ಕೋಳಿ ಮಾಂಸವನ್ನು ಸಿದ್ಧಪಡಿಸಿದ ನಂತರ ಕೈಗಳನ್ನು ನಂಜುನಾಶಕದಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಸೋಂಕಿತ ಹಸಿ ಮೊಟ್ಟೆಯನ್ನು ತಿನ್ನಬಾರದು.

Comments
ಈ ವಿಭಾಗದಿಂದ ಇನ್ನಷ್ಟು

ಸಂಕ್ಷಿಪ್ತ ಸುದ್ದಿ
ನಾಟಕ ಅಕಾಡೆಮಿ ಕೈಪಿಡಿಗೆ ಮಾಹಿತಿ ಕೊಡಿ

ಲಾಭದಾಯಕ ಹುದ್ದೆ ಹೊಂದಿರುವ ಛತ್ತೀಸ್‌ಗಡದ ಆಡಳಿತಾರೂಢ ಬಿಜೆಪಿಯ 11 ಶಾಸಕರನ್ನು ಅನರ್ಹಗೊಳಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಸೋಮವಾರ ಒತ್ತಾಯಿಸಿದೆ.

23 Jan, 2018
‘ಬೆಳವಣಿಗೆಗೆ ಜಾತಿ ಲಕ್ಷ್ಮಣ ರೇಖೆಯಾಗದಿರಲಿ’

ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನ
‘ಬೆಳವಣಿಗೆಗೆ ಜಾತಿ ಲಕ್ಷ್ಮಣ ರೇಖೆಯಾಗದಿರಲಿ’

23 Jan, 2018
‌136 ಅಂಗವಿಕಲರಿಗೆ ಉದ್ಯೋಗ

ಅಂಗವಿಕಲರಿಗಾಗಿ ಉದ್ಯೋಗ ಮೇಳ
‌136 ಅಂಗವಿಕಲರಿಗೆ ಉದ್ಯೋಗ

23 Jan, 2018
ಐಷಾರಾಮಕ್ಕಾಗಿ ಕಳ್ಳತನ: ಇಬ್ಬರ ಸೆರೆ

450 ಗ್ರಾಂ ಚಿನ್ನಾಭರಣ ಜಪ್ತಿ
ಐಷಾರಾಮಕ್ಕಾಗಿ ಕಳ್ಳತನ: ಇಬ್ಬರ ಸೆರೆ

23 Jan, 2018
‘ಅತ್ಯುತ್ತಮ ವ್ಯಕ್ತಿತ್ವ ವಿದ್ಯಾರ್ಥಿಯದ್ದಾಗಲಿ’

ಬೆಂಗಳೂರು
‘ಅತ್ಯುತ್ತಮ ವ್ಯಕ್ತಿತ್ವ ವಿದ್ಯಾರ್ಥಿಯದ್ದಾಗಲಿ’

23 Jan, 2018