ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ರಾಗಿ, ಹುರುಳಿ ಉತ್ಪಾದನೆ ಹೆಚ್ಚಳ

Last Updated 3 ಜನವರಿ 2018, 6:56 IST
ಅಕ್ಷರ ಗಾತ್ರ

ಮಂಡ್ಯ: ಭತ್ತ, ಕಬ್ಬು ಬೆಳೆಯಿಂದಲೇ ಗುರುತಿಸಿಕೊಳ್ಳುತ್ತಿದ್ದ ಜಿಲ್ಲೆ ಈ ಮುಂಗಾರು ಹಂಗಾಮಿನಲ್ಲಿ ರಾಗಿ ಮತ್ತು ಹುರುಳಿಯಿಂದ ಗುರುತಿಸಿಕೊಂಡಿದೆ. ತಡವಾಗಿ ಸುರಿದ ಮಳೆ, ಕಬ್ಬು, ಭತ್ತ ಬೆಳೆಯದಂತೆ ಸರ್ಕಾರದ ಸೂಚನೆ, ಕೆಆರ್‌ಎಸ್‌ ನೀರಿನಿಂದ ತುಂಬಿದ ಕೆರೆಗಳು. ಈ ಎಲ್ಲಾ ಕಾರಣಗಳಿಂದ ರಾಗಿ, ಹುರುಳಿಗೆ ಮೊರೆ ಹೋದ ರೈತರು ಬೇಸರದ ನಡುವೆಯೂ ಸುಗ್ಗಿಯ ಹರ್ಷದಲ್ಲಿದ್ದಾರೆ.

ಜೂನ್‌, ಜುಲೈ ತಿಂಗಳಲ್ಲಿ ಸರಿಯಾಗಿ ಮುಂಗಾರು ಮಳೆ ಸುರಿದಿದ್ದರೆ ರೈತರು ಭತ್ತ, ಕಬ್ಬಿನ ನಾಟಿಯತ್ತ ತೊಡಗುತ್ತಿದ್ದರು. ಆದರೆ ಸಕಾಲದಲ್ಲಿ ಮಳೆ ಬಾರದ ಕಾರಣ ಇನ್ನೊಂದು ಬರ ಅನುಭವಿಸಬೇಕಾದ ಆತಂಕ ರೈತರನ್ನು ಕಾಡಿತು. ಆದರೆ ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಉತ್ತಮ ಮಳೆ ಸುರಿದ ನಂತರ ರೈತರು ಬರದ ಕರಿನೆರಳಿನಿಂದ ತಪ್ಪಿಸಿಕೊಂಡರು. ಕೆಆರ್‌ಎಸ್‌ ಜಲಾಶಯ ಕೂಡ 110 ಅಡಿ ದಾಟಿತು, ಕೆರೆಗಳು ತುಂಬಿದವು. ಆದರೆ ಸಮಯ ಮೀರಿದ್ದ ಕಾರಣ ರೈತ ಭತ್ತ ನಾಟಿ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಜೊತೆಗೆ ಕಾವೇರಿ ಸಲಹಾ ಸಮಿತಿ ಸಭೆ ನಡೆಸಿದ ಸರ್ಕಾರ ನಾಲೆಗಳಿಗೆ ಕೆಆರ್‌ಎಸ್‌ ನೀರು ಹರಿಸುವ ಮೊದಲು ರೈತರಿಗೆ ಕಬ್ಬು, ಭತ್ತ ಬೆಳೆಯದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿತು.

ಒಲ್ಲದ ಮನಸ್ಸಿನಿಂದಲೇ ಅನಿವಾರ್ಯವಾಗಿ ರೈತರು ರಾಗಿ, ಹುರುಳಿಯತ್ತ ಮನಸ್ಸು ಮಾಡಿದರು. ಉತ್ತಮ ಮಳೆ, ಕೆಆರ್‌ಎಸ್‌ ನೀರು, ಮರುಪೂರಣಗೊಂಡ ಕೊಳವೆ ಬಾವಿಗಳಿಂದಾಗಿ ರೈತರು ಈ ಬೆಳೆಗಳನ್ನು ಉಳಿಸಿಕೊಂಡರು. ಈಗ ರಾಗಿ ಕೊಯ್ಲು ಮುಗಿಯುತ್ತಾ ಬಂದಿದ್ದು ಒಕ್ಕಣೆ ಹಂತಕ್ಕೆ ಬಂದಿದೆ. ಮರತೇ ಹೋಗಿದ್ದ ಕಣ, ಕಣಜಗಳು ರೈತರಿಗೆ ಮತ್ತೊಮ್ಮೆ ನೆನಪಿಗೆ ಬಂದಿದೆ. ರಾಗಿ ನಾಟಿ ಮಾಡಿದ ದಿನದಿಂದ ಕಾಯಿ ಕಟ್ಟುವ ಹಂತದವರೆಗೂ ಉತ್ತಮ ಮಳೆಯಾದ ಕಾರಣ ರಾಗಿ ರೈತನ ಕೈ ಹಿಡಿದಿದೆ.

ಹೆಚ್ಚು ಉತ್ಪಾದನೆ: ಜಿಲ್ಲೆಯಲ್ಲಿ ಈ ಬಾರಿ 67 ಸಾವಿರ ಹೆಕ್ಟೇರ್‌ ವಿಸ್ತೀರ್ಣದಲ್ಲಿ 6,74 ಲಕ್ಷ ಕ್ವಿಂಟಲ್‌ ರಾಗಿ ಬೆಳೆದಿದ್ದಾರೆ. 17 ಸಾವಿರ ಹೆಕ್ಟೇರ್‌ ವಿಸ್ತೀರ್ಣದಲ್ಲಿ 38 ಸಾವಿರ ಕ್ವಿಂಟಲ್‌ ಹುರುಳಿ ಬೆಳೆದಿದ್ದಾರೆ. ಹುರುಳಿ ಮತ್ತು ರಾಗಿ ಎರಡರಲ್ಲೂ ನಾಗಮಂಗಲ ಮೊದಲ ಸ್ಥಾನದಲ್ಲಿದೆ. ನಾಗಮಂಗಲ ಹಾಗೂ ಕೆ.ಆರ್‌.ಪೇಟೆ ತಾಲ್ಲೂಕು ಹೆಚ್ಚು ಮಳೆಯಾಶ್ರಿತ ಪ್ರದೇಶವಾದ ಕಾರಣ ಸಹಜವಾಗಿ ಹೆಚ್ಚಿನ ಉತ್ಪಾದನೆಯಾಗಿದೆ. 21 ಹೆಕ್ಟೇರ್‌ ಪ್ರದೇಶದಲ್ಲಿ 2.15 ಲಕ್ಷ ಕ್ವಿಂಟಲ್‌ ರಾಗಿಯನ್ನು ನಾಗಮಂಗಲ ತಾಲ್ಲೂಕಿನ ರೈತರು ಬೆಳೆದಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಅತೀ ಕಡಿಮೆ 1,899 ಹೆಕ್ಟೇರ್‌ ವಿಸ್ತೀರ್ಣದಲ್ಲಿ 19 ಸಾವಿರ ಕ್ವಿಂಟಲ್‌ ರಾಗಿ ಬೆಳೆದಿದ್ದಾರೆ.

‘ನಾವು ಕಣ ಮಾಡಿ ಮೂರು ವರ್ಷಗಳಾಗಿದ್ದವು. ಬೆಳೆದ ಅತ್ಯಲ್ಪ ರಾಗಿಯನ್ನು ರಸ್ತೆಯ ಮೇಲೆ ಒಕ್ಕಣೆ ಮಾಡಿಕೊಳ್ಳುತ್ತಿದ್ದೆವು. ಈ ಬಾರಿ 25 ಮೂಟೆ ರಾಗಿ ಬೆಳೆ ಬರುವ ನಿರೀಕ್ಷೆ ಇದೆ. ಈಗ ಕಣ ಮಾಡುತ್ತಿದ್ದೇನೆ. ಮನೆಯಲ್ಲಿ ಖಾಲಿ ಇದ್ದ ಕಣಜವನ್ನು ರಾಗಿ ತುಂಬಲು ಸ್ವಚ್ಛಗೊಳಿಸುತ್ತಿದ್ದೇನೆ’ ಎಂದು ಪಣಕನಹಳ್ಳಿ ಗ್ರಾಮದ ರೈತ ಶಿವರಾಮೇಗೌಡ ತಿಳಿಸಿದರು.

‘ಪೂರ್ವ ಮುಂಗಾರು ಉತ್ತಮವಾಗಿತ್ತು. ಆ ಸಂದರ್ಭದಲ್ಲಿ ರೈತರು ಸಿರಿಧಾನ್ಯಗಳನ್ನು ಬೆಳೆದುಕೊಂಡರು. ಆದರೆ ಮುಂಗಾರು ಮಳೆ ಕೈಕೊಟ್ಟ ಕಾರಣ ಬಿತ್ತನೆ ಪ್ರದೇಶ ಕುಸಿಯಿತು. ತಡವಾಗಿ ಮಳೆ ಸುರಿದಾಗ ರೈತರು ಅನಿವಾರ್ಯವಾಗಿ ರಾಗಿ, ಹುರುಳಿ ಕಡೆ ಮುಖ ಮಾಡಿದರು. ಕೃಷಿ ಇಲಾಖೆ ಸಕಾಲದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿತು. ಹೀಗಾಗಿ ಉತ್ತಮ ಉತ್ಪಾದನೆ ಬಂದಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾಸುಲೋಚನಾ ತಿಳಿಸಿದರು.

ರಾಗಿ ಖರೀದಿ ಕೇಂದ್ರಕ್ಕೆ ಒತ್ತಾಯ

ರಾಗಿಯ ಬೆಲೆ ಕುಸಿದಿರುವ ಕಾರಣ ಸರ್ಕಾರ ಶೀಘ್ರ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಕ್ವಿಂಟಲ್‌ ರಾಗಿಗೆ ₹ 2,400 ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಆದರೆ ವ್ಯಾಪಾರಿಗಳು ರೈತರ ಮನೆ, ಕಣಗಳಿಗೆ ತೆರಳಿ ಅತೀ ಕಡಿಮೆ ಬೆಲೆಗೆ ರಾಗಿ ಖರೀದಿ ಮಾಡುತ್ತಿದ್ದಾರೆ.

₹ 1,500ರಂತೆ ಖರೀದಿ ಮಾಡಿ ಸಂಗ್ರಹ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಸರ್ಕಾರ ಖರೀದಿ ಕೇಂದ್ರ ಆರಂಭಿಸಿದ ನಂತರ ಅದೇ ರಾಗಿಯನ್ನು ₹ 2,400ಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಶೀಘ್ರ ಸರ್ಕಾರ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಒಂದು ಸುತ್ತಿನ ಸಭೆ ನಡೆದಿದೆ. ಜ.8ರಂದು ಇನ್ನೊಂದು ಸುತ್ತಿನ ಸಭೆ ನಡೆಯಲಿದೆ. ರಾಜ್ಯ ಉಗ್ರಾಣ ನಿಗಮವನ್ನು ನೋಡೆಲ್‌ ಏಜೆನ್ಸಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಅವರೇ ರಾಗಿ ಸಂಗ್ರಹ ಮಾಡುತ್ತಾರೆ. ಶೀಘ್ರ ರಾಗಿ ಖರೀದಿ ಕೇಂದ್ರಗಳು ಆರಂಭವಾಗುತ್ತವೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಕುಮುದಾ ಶರತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT