ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಸ್ವಾಗತಕ್ಕೆ ಸಿದ್ಧತೆ ಪೂರ್ಣ

Last Updated 3 ಜನವರಿ 2018, 7:06 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಬುಧವಾರ ಬರೋಬ್ಬರಿ ₹800 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯವು ನೆರವೇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಚನ್ನಪಟ್ಟಣ ಹಾಗೂ ಮಾಗಡಿ ಪಟ್ಟಣದಲ್ಲಿ ಕಾರ್ಯಕ್ರಮಗಳಿಗೆಂದು ಭರ್ಜರಿ ವೇದಿಕೆಗಳು ಸಿದ್ಧವಾಗಿವೆ. ಚನ್ನಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಬೆಳಿಗ್ಗೆ 10ಕ್ಕೆ ಮೊದಲ ಕಾರ್ಯಕ್ರಮ ನಿಗದಿಯಾಗಿದೆ. ಮಾಗಡಿಯ ಕೋಟೆ ಮೈದಾನದಲ್ಲಿ ಮಧ್ಯಾಹ್ನ 2ಕ್ಕೆ ಮತ್ತೊಂದು ಕಾರ್ಯಕ್ರಮವು ನಡೆಯಲಿದೆ.

ಮುಖ್ಯಮಂತ್ರಿಗಳ ಜೊತೆಗೆ ಅವರ ಸಂಪುಟ ಸಚಿವರ ದಂಡೇ ಜಿಲ್ಲೆಗೆ ಬರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಜೊತೆಗೆ ಎಚ್.ಎಂ. ರೇವಣ್ಣ, ಎಚ್.ಸಿ. ಮಹದೇವಪ್ಪ, ಕೆ.ಆರ್. ರಮೇಶ್‌ಕುಮಾರ್, ಕೃಷ್ಣ ಬೈರೇಗೌಡ, ಎಸ್.ಎಸ್. ಮಲ್ಲಿಕಾರ್ಜುನ್‌, ಈಶ್ವರ ಖಂಡ್ರೆ ಸಾಥ್‌ ನೀಡಲಿದ್ದಾರೆ. ಚನ್ನಪಟ್ಟಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್‌ ಉಪಸ್ಥಿತಿ ಅನುಮಾನವಾಗಿದೆ. ಮಾಗಡಿಯ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಪ್ರಯಾಣ: ಮುಖ್ಯಮಂತ್ರಿ ಬುಧವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಹೊರಟು 11 ಗಂಟೆಗೆ ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಯಲ್ಲಿನ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ 2.30ಕ್ಕೆ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ನಿರ್ಗಮಿಸಿ 2.50ಕ್ಕೆ ಮಾಗಡಿಯ ಜೂನಿಯರ್‌ ಕಾಲೇಜು ಮೈದಾನದಲ್ಲಿನ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ಮಾಗಡಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸಂಜೆ 5.15ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ.

ರಸ್ತೆಗಳಿಗೆ ದುರಸ್ತಿ ಭಾಗ್ಯ: ಮುಖ್ಯಮಂತ್ರಿಗಳು ವಾಯು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ಯಾಗೂ ಜಿಲ್ಲೆಯ ರಸ್ತೆಗಳಿಗೆ ದುರಸ್ತಿ ಭಾಗ್ಯ ಕೂಡಿಬಂದಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಮುಖ್ಯ ರಸ್ತೆಗಳನ್ನು ‘ಸಾರಿಸುವ’ ಕಾಯಕದಲ್ಲಿ ನಿರತರಾಗಿದ್ದಾರೆ. ಬೆಂಗಳೂರು–ಮೈಸೂರು ಹೆದ್ದಾರಿ, ರಾಮನಗರ–ಮಾಗಡಿ ಹೆದ್ದಾರಿಯಲ್ಲಿನ ಗುಂಡಿಗಳನ್ನು ಜಲ್ಲಿಕಲ್ಲಿನಿಂದ ಮುಚ್ಚಲಾಗುತ್ತಿದೆ. ಅಲ್ಲಲ್ಲಿ ಡಾಂಬರಿನ ಭಾಗ್ಯ ಸಹ ಒದಗಿಬಂದಿದೆ.

ಸಕಲ ಸಿದ್ಧತೆ: ಕಾರ್ಯಕ್ರಮಕ್ಕೆ ಕೈಗೊಂಡ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಬಿ.ಆರ್. ಮಮತಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವಿವಿಧ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಚಾಲನೆ ನೀಡುವುದರ ಜೊತೆಗೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಣೆ ಮಾಡಲಿದ್ದಾರೆ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಜಿಲ್ಲೆಯಲ್ಲಿ ಆಗಿರುವ ಪ್ರಗತಿಯ ಚಿತ್ರಣ ನೀಡಲು ಕೆಲವು ಪ್ರದರ್ಶನಗಳ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದರು.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಆದ್ದರಿಂದ ನರೇಗ ಗ್ರಾಮವನ್ನು ನಿರ್ಮಾಣ ಮಾಡಲಾಗಿದೆ. ಇದರ ಉದ್ಘಾಟನೆಯನ್ನು ಸಹ ಅವರು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಭದ್ರತೆಗಾಗಿ 1,200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲ ಕಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಲತಾ ಇದ್ದರು.

ಬಸ್‌ಗಳ ವ್ಯವಸ್ಥೆ

ಎರಡೂ ಕಾರ್ಯಕ್ರಮಗಳು ಕಾಂಗ್ರೆಸ್‌ನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಆಗಲಿದ್ದು, ಜನರನ್ನು ಕರೆತರಲು ಕಾರ್ಯಕರ್ತರು ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ಹಳ್ಳಿಗೊಂದರಂತೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೂ ಮುಖಂಡರಿಂದ ವಿಶೇಷ ಆಹ್ವಾನ ತಲುಪಿದೆ. ಹೀಗಾಗಿ ಎರಡೂ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT