ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಠಿತ

Last Updated 3 ಜನವರಿ 2018, 7:08 IST
ಅಕ್ಷರ ಗಾತ್ರ

ಭದ್ರಾವತಿ: ‘ರಾಜ್ಯದ ಕಾಂಗ್ರೆಸ್ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೂರಿದರು.

ನಗರದ ಕನಕಮಂಟಪ ಮೈದಾನದಲ್ಲಿ ಮಂಗಳವಾರ ನಡೆದ ಪರಿವರ್ತನಾ ಯಾತ್ರೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಅಭಿವೃದ್ಧಿಗೆ ಪೂರಕ ವಾತಾವರಣ ರಾಜ್ಯದಲ್ಲಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ’ ಎಂದು ಕಿಡಿಕಾರಿದರು.

‘ರಾಜ್ಯದ ಪ್ರವಾಸೋದ್ಯಮ, ಕೈಗಾರಿಕಾ ಅಭಿವೃದ್ಧಿ ಮೂಲಕ ಸಾಕಷ್ಟು ಹೊಸ ಉದ್ಯೋಗ ಸೃಷ್ಟಿಸುವ ಅವಕಾಶ ಇದ್ದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದೆ. ಇದರ ಪರಿಣಾಮ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಬೇಕಿದ್ದ ರಾಜ್ಯ ಹಿಂದಕ್ಕೆ ಉಳಿದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪರಿವರ್ತನೆ ಇಡೀ ರಾಜ್ಯದಲ್ಲಿ ಕಂಡುಬರುತ್ತಿದೆ. ಈಗ ನಿಮ್ಮ ಮುಂದೆ ಬರುತ್ತಿರುವ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದಕ್ಕೆ ಬದಲಾಗಿ ವಾಸ್ತವ ಚಿತ್ರಣ ಅರಿತು ಮುಂದಿನ ನಾಲ್ಕು ತಿಂಗಳು ನಮ್ಮೊಂದಿಗೆ ಕೈಜೋಡಿಸಿ. ಆನಂತರ ಐದು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಯನ್ನು ಮಾಡಿ ನಾವು ಮಾಡಿ ತೋರಿಸುತ್ತೇವೆ’ ಎಂದು ಹೇಳಿದರು.

‘ರಾಷ್ಟ್ರದ ಜನ ಪ್ರಧಾನಿ ಮೋದಿಗೆ ಬೆಂಬಲ ನೀಡಿದ್ದಾರೆ. ಇದೇ ರೀತಿಯ ಸಹಕಾರವನ್ನು ಈ ಕ್ಷೇತ್ರದ ಜನರು ನಮ್ಮ ಪಕ್ಷಕ್ಕೆ ನೀಡಬೇಕು. ಚುನಾವಣೆ ಬಂದಾಗ ಯಾರದೋ ಬೆನ್ನುಹತ್ತದೆ, ಅಭಿವೃದ್ಧಿಯ ಆಡಳಿತ ನೀಡುವ ಬಿಜೆಪಿ ಜತೆಗೆ ನಿಂತು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಜಿಲ್ಲಾ ಅಧ್ಯಕ್ಷ ರುದ್ರೇಗೌಡ, ವಿ. ಕದಿರೇಶ್, ಮಂಗೋಟೆ ರುದ್ರೇಶ, ಜಿ.ಆನಂದಕುಮಾರ್, ಮರಿಸ್ವಾಮಿ, ಆರ್.ಕೆ. ಸಿದ್ದರಾಮಣ್ಣ, ಮಾ.ನಾಗರಾಜ್, ಆಯನೂರು ಮಂಜುನಾಥ್, ಕುಮಾರ ಬಂಗಾರಪ್ಪ ಮಾತನಾಡಿದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಮಾಡಾಳ್ ವಿರೂಪಾಕ್ಷಪ್ಪ, ಪ್ರೇಮಚಂದ್ರಸಾಗರ್, ಸಿ. ಮಂಜುಳಾ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಾಸಕ ಬಿ.ವೈ. ರಾಘವೇಂದ್ರ, ಚನ್ನಬಸಪ್ಪ, ದತ್ತಾತ್ರಿ, ಅರುಣ್, ಮೇಘರಾಜ್, ಪವಿತ್ರರಾಮಯ್ಯ, ವಿಶ್ವನಾಥರಾವ್, ವಿಶ್ವನಾಥಕೋಠಿ, ನವನೀತ, ಎಸ್.ಎನ್. ಬಾಲಕೃಷ್ಣ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಮಿಲಿಟರಿ ಕ್ಯಾಂಪ್‌ ಬೈಪಾಸ್ ರಸ್ತೆಯಿಂದ ಸಾವಿರಾರು ಯುವಕರು ಬೈಕ್ ರ‍್ಯಾಲಿ ಮೂಲಕ ಪರಿವರ್ತನಾ ಯಾತ್ರೆ ಸ್ವಾಗತಿಸಿದರು. ಮಾಧವಾಚಾರ್ ವೃತ್ತದ ಬಳಿ ಸಾವಿರಾರು ಮಹಿಳೆಯರು ಪೂರ್ಣಕುಂಭ ಗಳೊಂದಿಗೆ ಯಡಿಯೂರಪ್ಪ ಅವರನ್ನು ಸ್ವಾಗತಿಸಿದರು.

‘ವಿಐಎಸ್‌ಎಲ್‌ ಸಮಸ್ಯೆ: ಶೀಘ್ರವೇ ಜೇಟ್ಲಿ ಭೇಟಿ’

ಭದ್ರಾವತಿ: ‘ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸುವ ಸಂಬಂಧ ನಾಲ್ಕೈದು ದಿನಗಳಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡುತ್ತೇನೆ’ ಎಂದು ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಬಂದಿದ್ದ ವಿಐಎಸ್‌ಎಲ್‌ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಖಾಸಗೀಕರಣ ಪ್ರಕ್ರಿಯೆಯಿಂದ ಕಾರ್ಖಾನೆಯನ್ನು ಹೊರತರಲು ಪ್ರಯತ್ನ ನಡೆಸಿದ್ದೇನೆ. ಕಾರ್ಮಿಕ ಸಂಘದ ಪದಾಧಿಕಾರಿಗಳು ನಾನು ತಿಳಿಸಿದ ಸಮಯದಲ್ಲಿ ದೆಹಲಿಗೆ ತೆರಳಿ ಹಣಕಾಸು ಸಚಿವರನ್ನು ಭೇಟಿ ಮಾಡಿ ಚರ್ಚಿಸಲು ಅವಕಾಶ ಮಾಡಿಕೊಡಲಾಗುವುದು. ನಂತರ ಈ ಬಗ್ಗೆ ಪ್ರಧಾನಿ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

‘ಕಾರ್ಮಿಕರು ಆತಂಕಪಡುವ ಅಗತ್ಯವಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಮಾಡಬೇಕಾದ ಎಲ್ಲಾ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸರ್‌ಎಂವಿ ಕನಸಿನ ಕಾರ್ಖಾನೆ ಉಳಿಸುವ ಮೂಲಕ ರಾಜ್ಯದ ಕೊಡುಗೆಯನ್ನು ಶಾಶ್ವತವಾಗಿ ರಾಷ್ಟ್ರಮಟ್ಟದಲ್ಲಿ ಉಳಿಯುವಂತೆ ಮಾಡುತ್ತೇವೆ’ ಎಂದು ಹೇಳಿದರು.

‘ಇಲ್ಲಿನ ಎಂಪಿಎಂ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ. ಇನ್ನು ನಾಲ್ಕು ತಿಂಗಳು ಕಳೆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಂತರ ಎಂಪಿಎಂ ಕಾರ್ಯಾರಂಭ ಕುರಿತು ಸಹ ಕ್ರಮ ಕೈಗೊಳ್ಳಲಾಗುವುದು’ ಎಂದು ಯಡಿಯೂರಪ್ಪ ಭರವಸೆ ನೀಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಎಂಪಿಎಂ ಕಾರ್ಖಾನೆಗೆ ₹ 100 ಕೋಟಿ ನೆರವು ನೀಡಿದ್ದೆ. ಸಂಸದನಾಗಿ ನನ್ನ ಅನುದಾನದಲ್ಲಿ ₹ 1.64 ಕೋಟಿ ಕಾಮಗಾರಿಯನ್ನು ಭದ್ರಾವತಿಯಲ್ಲಿ ಕೈಗೊಳ್ಳಲಾಗಿದೆ. ಜೊತೆಗೆ ಕೇಂದ್ರದ ಅಮೃತ್ ಯೋಜನೆಯಡಿ ₹ 164 ಕೋಟಿ ನೆರವು ನಗರಕ್ಕೆ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಭದ್ರಾವತಿಯನ್ನು ಅಭಿವೃದ್ಧಿ ನಗರವನ್ನಾಗಿ ಮಾಡಿ ತೋರಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT