ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರುವುದಿಲ್ಲ: ಶಾಸಕ ಭೂಸನೂರ

Last Updated 3 ಜನವರಿ 2018, 7:18 IST
ಅಕ್ಷರ ಗಾತ್ರ

ಸಿಂದಗಿ: ‘ನಾನು ಕಾಂಗ್ರೆಸ್ ಸೇರುವುದಿಲ್ಲ. ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಜೊತೆ ವೈಯಕ್ತಿಕವಾಗಿ ಉತ್ತಮ ಸಂಪರ್ಕ ಇದೆ. ಆದರೆ ರಾಜಕೀಯ ಅಕ್ರಮ ಸಂಬಂಧವಿಲ್ಲ. ಭೂಸನೂರ ಅವರನ್ನು ಕಾಂಗ್ರೆಸ್ ನಿಂದ ಬಿಜೆಪಿಗೆ ನಿಯೋಜನೆ ಮಾಡಲಾಗಿದೆ ಎಂಬುದಾಗಿ ಆಲಮೇಲ–ಸಿಂದಗಿ ಯಲ್ಲಿನ ಬಹಿರಂಗ ಸಭೆಯಲ್ಲಿ ಸಚಿವ ಪಾಟೀಲ ಹೇಳಿರುವುದು ನನ್ನ ಮೇಲಿನ ಪ್ರೀತಿಯಿಂದ ಅಷ್ಟೇ. ತಪ್ಪು ಕಲ್ಪನೆ ಮಾಡಿಕೊಳ್ಳಬಾರದು’ ಸಿಂದಗಿ ಮತಕ್ಷೇತ್ರದ ಬಿಜೆಪಿ ಶಾಸಕ ರಮೇಶ ಭೂಸನೂರ ಸ್ಪಷ್ಟನೆ ನೀಡಿದರು.

ನಗರದಲ್ಲಿ ಅವರು ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು. ‘ಸಿಂದಗಿ ಮತಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ. ಈ ಉಹಾಪೋಹಕ್ಕೆ ಕಾರ್ಯಕರ್ತರು, ಮತದಾರರು ಕಿವಿಗೊಡಬಾರದು. ರಾಜಕೀಯ ವಿರೋಧಿಗಳ ತಂತ್ರಗಾರಿಕೆಯಿಂದ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ನಾನು ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಈ ಹಿಂದೆ ಬಿಜೆಪಿ ಮುಖಂಡರು ಪಕ್ಷ ವಿರೋಧಿ ಕಾರ್ಯದಲ್ಲಿ ತೊಡಗಿ ಗೋವಾ, ಹೈದರಾಬಾದ್‌ಗೆ ಹೋದಂತೆ ನಾನು ಹೋಗಿಲ್ಲ. ಪಕ್ಷಕ್ಕೆ ಅತ್ಯಂತ ನಿಷ್ಠನಾಗಿ ಸಿಂದಗಿ ಮತಕ್ಷೇತ್ರದಲ್ಲಿ ಏಳು ಜಿಲ್ಲಾ ಪಂಚಾಯ್ತಿ, 14 ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಆರಿಸಿ ತಂದಿರುವೆ’ ಎಂದರು.

‘ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಅವರ ಒಪ್ಪಿಗೆಯ ಮೇರೆಗೆ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಜೆಪಿ ನನಗೆ ನೆಲೆ ಕೊಟ್ಟಿದೆ. ಅಂತೆಯೇ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ. ನೆಲೆಕೊಟ್ಟ ಪಕ್ಷಕ್ಕೆ ದ್ರೋಹ ಮಾಡಲಾರೆ. ಈಗ ನನ್ನ ಗೆಲುವಿನ ಜೊತೆಗೆ ನೆರೆಯ ಮತಕ್ಷೇತ್ರ ಜೇವರ್ಗಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಜವಾಬ್ದಾರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ನನ್ನ ಮೇಲೆ ಹೊರಿಸಿದ್ದಾರೆ’ ಎಂದು ಹೇಳಿದರು.
ಅಂಬೇಡ್ಕರ್ ಭವನ ಲೋಕಾರ್ಪಣೆ: ₹ 2 ಕೋಟಿ ವೆಚ್ಚದಲ್ಲಿ ಸಿಂದಗಿಯಲ್ಲಿ ನಿರ್ಮಿಸಲಾಗಿರುವ ಡಾ.ಅಂಬೇಡ್ಕರ್ ಭವನವನ್ನು ಜ. 8 ರಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಸಮ್ಮುಖದಲ್ಲಿ ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

ಸಿಂದಗಿ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನಕಾರ್ಯದರ್ಶಿ ಅಶೋಕ ಅಲ್ಲಾಪುರ, ಬಿಜೆಪಿ ಹಿರಿಯ ಮುಖಂಡ ಎಂ.ಎಸ್.ಮಠ ಅವರು ಭೂಸನೂರ ಪರ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ, ಸಂತೋಷ ಪಾಟೀಲ ಡಂಬಳ, ಎಂ.ಎನ್.ಕಿರಣರಾಜ್, ಶ್ರೀಕಾಂತ ಸೋಮಜಾಳ, ರಾಜಶೇಖರ ಪೂಜಾರಿ, ಪ್ರದೀಪ ದೇಶಪಾಂಡೆ, ಸಂದೀಪ ಚೌರ, ರವಿ ನಾಯ್ಕೋಡಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT