ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜೆ ಧಾರಣೆ ಕುಸಿತ; ಬೆಳೆಗಾರ ಕಂಗಾಲು

Last Updated 3 ಜನವರಿ 2018, 7:21 IST
ಅಕ್ಷರ ಗಾತ್ರ

ವಿಜಯಪುರ: ಸಿರಿಧಾನ್ಯಗಳಲ್ಲೊಂದಾದ ಸಜ್ಜೆಯ ಧಾರಣೆ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಉತ್ತಮ ಬೆಲೆ ದೊರಕಬಹುದು ಎಂಬ ನಿರೀಕ್ಷೆಯಿಂದ ಇದುವರೆಗೂ ಉತ್ಪನ್ನ ಕಾಪಿಟ್ಟು ಕಾದಿದ್ದ ರೈತರು, ವಿಧಿಯಿಲ್ಲದೆ ಸಿಕ್ಕಷ್ಟು ರೊಕ್ಕಕ್ಕೆ ಮಾರುತ್ತಿದ್ದಾರೆ.

‘ಧಾರಣೆ ಹೆಚ್ಚಬಹುದು ಎಂದು ಎರಡು ತಿಂಗಳಿಂದ ಕಾದಿದ್ದೇನೆ. ಒಂದು ಸಾವಿರ ರೂಪಾಯಿ ಗಡಿ ದಾಟಿದರೆ ಪುಣ್ಯ ಎನ್ನುವಂಥ ಪರಿಸ್ಥಿತಿಯಿದೆ. ವ್ಯಾಪಾರಿಗಳನ್ನು ಕೇಳಿದರೆ ಬೇಡಿಕೆಯೇ ಇಲ್ಲ. ಕೊಂಡು ನಾವೇನು ಮಾಡೋಣ ಎನ್ನುತ್ತಿದ್ದಾರೆ. ಇಷ್ಟು ದಿನವೇ ಕಾದಿದ್ದೇನಂತೆ; ಇನ್ನೊಂದಿಷ್ಟು ದಿನ ಕಾಯುತ್ತೇನೆ. ಧಾರಣೆ ಸಿಗದಿದ್ದರೆ ಮನೆಯಲ್ಲಿರುವ 15 ಕ್ವಿಂಟಲ್ ಸಜ್ಜೆಯನ್ನು ಸಿಕ್ಕಷ್ಟು ರೊಕ್ಕಕ್ಕೆ ಮಾರಾಟ ಮಾಡಬೇಕಾಗುತ್ತದೆ’ ಎಂದು ತಾಂಬಾದ ಶ್ರೀಶೈಲ ಬರಡೋಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಸ್‌ ಸಜ್ಜಿ ಬೆಳೆದೋರ್ದು ಭಾಳ ತ್ರಾಸ ಐತ್ರಿ. ಖರ್ಚಿನ ರೊಕ್ಕಾನ... ಹುಟ್ಟವಲ್ದು. ಅರ್ಧಕರ್ಧ ಬೆಳೀನ ₹925ರ ಹಂಗ ಮಾರೇನಿ. ಇನ್ನರ್ಧ... ನೋಡ್ಬೇಕು. ಧಾರಣಿ ಬಂದೀತಂತ ಕಾಯಾಕತ್ತೇನಿ. ಏನಾಕ್ಕೈತೋ ತಿಳೀವಲ್ದು’ ಎಂದು ಇಂಚಗೇರಿಯ ಪ್ರಗತಿಪರ ರೈತ ಶೆಟ್ಟೆಪ್ಪ ದುಂಡಪ್ಪ ನಾವಿಅಳಲು ತೋಡಿಕೊಂಡರು.

ಸಜ್ಜೆಯನ್ನು ಖರೀದಿಸುವವರೇ ಇಲ್ಲ. ಹೊರಗಿನಿಂದಲೂ ಬೇಡಿಕೆ ಬಂದಿಲ್ಲ. ಹೀಗಾಗಿ ಧಾರಣೆ ಕುಸಿದಿದೆ. ಇತ್ತೀಚೆಗೆ ಮಾರುಕಟ್ಟೆಗೆ ಆವಕವೂ ಕಡಿಮೆಯಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ ವ್ಯಾಪಾರಿ ಎಸ್‌.ವಿ.ಮಠ ತಿಳಿಸಿದರು.

ಬದಲಾದ ಆಹಾರ ಪದ್ಧತಿ

ಈಚೆಗಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆ, ಬಳಕೆಯ ಪ್ರಮಾಣ ಕಡಿಮೆಯಾದಂತೆ, ಧಾರಣೆಯೂ ಇಳಿಮುಖವಾಗಿದೆ. ಹೀಗಾಗಿ ಬಿತ್ತನೆ ಪ್ರದೇಶವೂ ಕುಂಠಿತಗೊಳ್ಳುತ್ತಿದೆ. ಎರಡ್ಮೂರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 45,000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುತ್ತಿತ್ತು. ಈ ಬಾರಿ 27,000 ಹೆಕ್ಟೇರ್‌ ಬಿತ್ತನೆಯಾಗಿತ್ತು ಎಂದು ವಿಜಯಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್‌ ಹೇಳಿದರು.

ರಾಜ್ಯದಲ್ಲಿ ವಾರ್ಷಿಕ 1.25 ಲಕ್ಷದಿಂದ 1.50 ಲಕ್ಷ ಹೆಕ್ಟೇರ್‌ನಲ್ಲಿ ಸಜ್ಜೆ ಬಿತ್ತನೆಯಾಗುತ್ತದೆ. ಕೊಪ್ಪಳ, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗದ ಮಳೆಯಾಶ್ರಿತ ತಾಲ್ಲೂಕಿನ ಕೆಲವೆಡೆ ಸಜ್ಜೆ ಬೆಳೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

‘ಸಜ್ಜೆ ಔಷಧೀಯ ಗುಣ ಹೊಂದಿರುವ ಆಹಾರ ಧಾನ್ಯ. ಹೃದಯ ಸಂಬಂಧಿ ರೋಗಗಳು, ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮಹತ್ವವನ್ನು ಬಿಂಬಿಸಲು ಇಲಾಖೆಯು ಮೇಳಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಿದೆ’ ಎಂದು ಹೇಳಿದರು.

* * 

ಸಜ್ಜೆ ಕಡುಬು, ಸಜ್ಜೆ ರೊಟ್ಟಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ದೇಹದ ಉಷ್ಣತೆ ಹೆಚ್ಚಿಸುವ ಆಹಾರ. ಆದರೆ ಬಳಸುವವರ ಸಂಖ್ಯೆ ಕಡಿಮೆಯಾದಂತೆ ಧಾರಣೆಯೂ ಇಳಿಮುಖವಾಗಿದೆ
ಆರ್‌.ಎಸ್‌.ಲೋಣಿ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT